ವಿವೇಕಾನಂದ ಪದವಿಪೂರ್ವ ಕಾಲೇಜು: ನ.11 ಮತ್ತು 12ರಂದು 'ಕನಸುಗಳು' ಕಾರ್ಯಕ್ರಮ

Upayuktha
0


ಪುತ್ತೂರು: ಗ್ರಾಮೀಣ ಪ್ರದೇಶದ ಜನತೆಯ ಶೈಕ್ಷಣಿಕ ಕನಸುಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ 1965 ರಲ್ಲಿ ಪುತ್ತೂರಿನ ಜನತೆಯ ಪ್ರೋತ್ಸಾಹದಿಂದ ರೂಪುಗೊಂಡ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು (ರಿ) ಇದರ ಸಂಸ್ಥೆ ವಿವೇಕಾನಂದ ಪದವಿ ಪೂರ್ವ ಕಾಲೇಜು.


ಪುತ್ತೂರು ತಾಲೂಕಿನ ಮತ್ತು ಆಸುಪಾಸಿನ ಹೈಸ್ಕೂಲ್‌ನ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ನವಂಬರ್ 11 ಹಾಗೂ 12ರಂದು ಕನಸುಗಳು ಕಾರ್ಯಕ್ರಮ ನಡೆಯಲಿದೆ. ಪ್ರಸ್ತುತ ವೇಗವಾಗಿ ಬೆಳೆಯುತ್ತಿರುವ ಈ ಜಗತ್ತನ್ನು ಎದುರಿಸಲು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಿದ್ಧಗೊಳಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ನವೆಂಬರ್ 11ರಂದು ನಡೆಯುವ ಕನಸುಗಳು ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಇವರು ವಹಿಸಲಿದ್ದು ವಿಟ್ಲದ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಯರಾಮ ರೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿಕ್ಷಕ - ರಕ್ಷಕ ಸಂಘದ ಉಪಾಧ್ಯಕ್ಷ ಜಯಾನಂದ ಪೆರಾಜೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ. ಗೋಪಾಲಕೃಷ್ಣ ಭಟ್, ಸದಸ್ಯೆ ವತ್ಸಲಾರಾಜ್ಞಿ ಎಂ ಉಪಸ್ಥಿತರಿರುತ್ತಾರೆ.


ಎರಡು ದಿವಸದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಸಾಮಾನ್ಯ ರಸಪ್ರಶ್ನೆ, ವಿಜ್ಞಾನ ಮಾದರಿ, ಜಾಹೀರಾತು, ಚರ್ಚಾ ಸ್ಪರ್ಧೆ, ಚಿತ್ರಕಲೆ, ಪ್ರಾಕೃತಿಕ ರಂಗೋಲಿ, ಗ್ರಾಮ ಸಂದರ್ಶನ ಮತ್ತು ವರದಿ ತಯಾರಿ, ಯುವ ಪತ್ರಕರ್ತ, ದೃಶ್ಯ- ಕಾವ್ಯ, ಯುವಉದ್ಯಮಿ, ಯಕ್ಷಗಾನ ಭಾಗವತಿಕೆ, ಕಲರವ- ಸಾಂಸ್ಕೃತಿಕ ವೈವಿಧ್ಯ, ಮುಖವರ್ಣಿಕೆ, ನಿಧಿ ಶೋಧ ಮತ್ತು ಕನ್ನಡ ಕವನ ರಚನೆ ಹಾಗೂ ವಾಚನ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.


ನವೆಂಬರ್ 12 ರಂದು ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಥಟ್ ಅಂತ ಹೇಳಿ ಇದರ ಖ್ಯಾತ ನಿರೂಪಕ ಡಾ. ನಾ. ಸೋಮೇಶ್ವರ ಜೊತೆ ವಿದ್ಯಾರ್ಥಿಗಳಿಗಾಗಿ ವಿಶೇಷ ಸಂವಾದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ರೈ ಭಾಗವಹಿಸಲಿದ್ದಾರೆ.


ಬಳಿಕ ನಡೆಯಲಿರುವ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಕೃಷ್ಣಕುಮಾರ್ ಶೆಟ್ಟಿ ಕಡಬ ಅಧ್ಯಕ್ಷತೆಯನ್ನು ವಹಿಸಲಿದ್ದು, ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಥಟ್ ಅಂತ ಹೇಳಿ ಇದರ ಖ್ಯಾತ ನಿರೂಪಕ ಡಾ. ನಾ. ಸೋಮೇಶ್ವರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸದಸ್ಯ ಡಾ. ಕೆ. ಎನ್. ಸುಬ್ರಹ್ಮಣ್ಯ ಮತ್ತು ಶಿಕ್ಷಕ- ರಕ್ಷಕ ಸಂಘದ ಉಪಾಧ್ಯಕ್ಷೆ ಅಶ್ವಿನಿ ಎಂ ಜಿ ಉಪಸ್ಥಿತರಿರುತ್ತಾರೆ. ಸುಮಾರು 800 ವಿದ್ಯಾರ್ಥಿಗಳಿಗೆ ಈ ಶಿಬಿರದ ಸದುಪಯೋಗವನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

Post a Comment

0 Comments
Post a Comment (0)
To Top