ಕಾಸರಗೋಡು: ಕಳೆದ ಆರು ದಶಕಗಳಿಂದ ಹರಿದಾಸ ಸಂಕೀರ್ತನಗಾರರಾಗಿ, ನಾಟಕ ರಚನೆ, ನಿರ್ದೇಶಕ, ನಟರಾಗಿ, ಭಜನಾ ಗುರು ಹಾಗೂ ಬರಹಗಾರರಾಗಿ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿರುವ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಗೆ ದಾಸವರೇಣ್ಯ,ದಾರ್ಶನಿಕ ಕವಿ, ಸಂತ ಶ್ರೇಷ್ಠ ಕನಕದಾಸ ಜಯಂತ್ಯೋತ್ಸವದ ಅಂಗವಾಗಿ ಪ್ರತಿಷ್ಠಿತ ಕನಕದಾಸ ಪ್ರಶಸ್ತಿ ಪದಾನ ಕಾರ್ಯಕ್ರಮ ನ.13ರಂದು ಮಂಗಳೂರು ಕದ್ರಿ ಕಂಬಳದ ವಾದಿರಾಜ ಮಂಟಪದ ವಿಶ್ವೇಶ ತೀರ್ಥ ವೇದಿಕೆಯಲ್ಲಿ ನಡೆಯಲಿದೆ. ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ ಕನಕದಾಸ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠಾಧೀಶ ಶ್ರೀಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಕನಕದಾಸ ಪ್ರಶಸ್ತಿ ಪ್ರದಾನ ಜರಗಲಿದೆ.
ಪ್ರಶಸ್ತಿ ಪುರಸ್ಕೃತರ ಪರಿಚಯ:
ಹರಿದಾಸ ಭವಾನಿ ಶಂಕರ ರಾವ್ ಅವರ ಬಳಿ ಹರಿಕಥೆ ಅಭ್ಯಾಸ, ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯರವರಿಂದ ಶಾಸ್ತ್ರೀಯ ಸಂಗೀತಾಭ್ಯಾಸ ಹಾಗೂ ರಾಮಕೃಷ್ಣ ಮಾಸ್ತರ್ ಅವರಿಂದ ತಬಲ, ಗೋವಿಂದ ಮಾಸ್ತರ್ ಬಳಿ ಹಾರ್ಮೋನಿಯಂ ಅಭ್ಯಸಿಸಿರುವ ಜಯಾನಂದ ಕುಮಾರ್ ಅವರು ಬಾಲ್ಯ ಕಾಲದಿಂದಲೇ ಸಾಂಸ್ಕೃತಿಕ ಹಾಗೂ ಸಂಗೀತ ವಲಯದಲ್ಲಿ ಸಕ್ರಿಯರು. ಸುಮಾರು 15ರಷ್ಟು ನಾಟಕಗಳನ್ನು ಬರೆದಿರುವ ಇವರು ಹಲವಾರು ನಾಟಕಗಳಲ್ಲಿ ತಾವೇ ಸ್ವತಃ ಅಭಿನಯಿಸಿರುವುದಲ್ಲದೆ ನಿರ್ದೇಶನವನ್ನು ಮಾಡಿದ್ದಾರೆ. ಹಲವಾರು ಉದಯೋನ್ಮುಖರಿಗೆ ಮಾರ್ಗದರ್ಶನ ನೀಡಿ ಪ್ರತಿಭಾ ಸಂಪನ್ನರಾಗಿಸಿದ್ದಾರೆ. 80ರ ದಶಕದಲ್ಲಿ "ಭಿಕ್ಷಂ ಕಲಾ ನಿಲಯಂ" ಎಂಬ ನಾಟಕ ತಂಡವನ್ನು ಕಟ್ಟಿಕೊಂಡು ರಂಗಭೂಮಿಯಲ್ಲಿ ತೊಡಗಿಸುವ ಮೂಲಕ ಅಂತರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲೂ ಬಾಗವಹಿಸಿ ಬಹುಮಾನ ಗಳಿಸಿರುವುದು ಇವರ ಕಲಾ ರಂಗದ ಸಾಧನೆಗೆ ಸಾಕ್ಷಿಯಾಗಿದೆ. ನಿರಂತರ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುವ ಹರಿದಾಸ ಜಯಾನಂದ ಕುಮಾರ್ ಅವರು ಕಾಸರಗೋಡು ಸಹಿತ ಹಲವಾರು ಕಡೆಯ ಗ್ರಾಮೀಣ ಪ್ರದೇಶಗಳಲ್ಲಿ ಭಜನೆ ಸಂಕೀರ್ತನೆ ಕಲಿಸುವುದಲ್ಲದೆ ಹಲವು ಭಜನಾ ತಂಡಗಳನ್ನು ಸೃಷ್ಠಿಸಿ ಸಮರ್ಥ ಮಾರ್ಗದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ.
2007ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಒಂದು ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ಕುಳಿತಲ್ಲಿಂದ ಕದಲದೆ ಅನ್ನಾಹಾರ ತೊರೆದು ನಿರಂತರ 26 ತಾಸುಗಳ ಕಾಲ ಹರಿದಾಸ ಸಂಕೀರ್ತನೆ ಮಾಡಿರುವುದಲ್ಲದೆ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದಲ್ಲೂ ಸುಮಾರು 17 ಗಂಟೆಗಳ ಕಾಲ ನಿರಂತರ ದಾಸ ಸಂಕೀರ್ತನೆಗೈದ ಸಾಧಕರಾಗಿದ್ದಾರೆ. ಆಕಾಶವಾಣಿ, ದೂರದರ್ಶನ ಹಾಗೂ ಸ್ಥಳೀಯ ಟಿವಿ ಚಾನೆಲ್ ಗಳ ಮೂಲಕ ಸಂಕೀರ್ತನೆ, ಸುಗಮ ಸಂಗೀತ, ಭಾವಗೀತೆ ಹಾಡುವ ಮೂಲಕವೂ ಗುರುತಿಸಿಕೊಂಡಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಕಾಸರಗೋಡು ಜಿಲ್ಲಾ ಗೌರವಾಧ್ಯಕ್ಷರಾದ ಜಯಾನಂದ ಕುಮಾರ್ ಅವರು ಮನೆ ಮನೆ ಭಜನಾ ಅಭಿಯಾನ, ಕ್ಷೇತ್ರ ಭಜನೆ ಮೊದಲಾದ ಕಾರ್ಯಗಳಿಗೆ ಮುಂಚೂಣಿವಹಿಸಿದ್ದಾರೆ. ಅಬಾಲ ವೃದ್ಧರಾದಿಗಳಿಗೆ ಆಸಕ್ತಿ ಇದ್ದರೆ ಭಜನೆ ಕಲಿಸುವ ಪರಿಪಾಠ ಬೆಳೆಸಿಕೊಂಡಿರುವ ಇವರು ಸರಳ ಸಜ್ಜನಿಕೆಯಿಂದ ದಾರ್ಮಿಕ ಸಾಂಸ್ಕೃತಿಕ ರಂಗಕ್ಕೆ ಕೊಟ್ಟಿರುವ ಕೊಡುಗೆಗಳು ಅವಿಸ್ಮರಣೀಯ. ಹಲವು ಕಡೆಗಳಲ್ಲಿ ತಮ್ಮ ಈ ಜೀವಮಾನದ ಸಾಧನೆಗಾಗಿ ಸನ್ಮಾನಿತರಾಗಿದ್ದು ಪೇಜಾವರ ವಿಶ್ವಶತೀರ್ಥ ಶ್ರೀಪಾದರಿಂದ ಗಾನ ಪ್ರವೀಣ ಬಿರುದು ಸಹಿತ ಪ್ರಶಸ್ತಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರಿಂದ ಬೆಳ್ಳಿಪದಕ ಹೀಗೆ ಹಲವು ಗೌರವ ಪುರಸ್ಕೃತರಾಗಿದ್ದಾರೆ. ಹರಿದಾಸ ಜಯಾನಂದ ಕುಮಾರ್ ಜೀವನ ಚಿತ್ರಣದ ಬಗ್ಗೆ ಗಾನ ಗಂಗೆ ಎಂಬ ಪುಸ್ತಕ ಪ್ರಕಟಗೊಂಡಿದ್ದು ಕಾಸರಗೋಡಿನ ಗಾಯಕರೋರ್ವರ ಸತತ ಪರಿಶ್ರಮ ಹಾಗೂ ಸಾಧನೆಗೆ ನೀಡುವ ಕನಕದಾಸ ಪ್ರಶಸ್ತಿ ಅತ್ಯಂತ ಅಭಿಮಾನಾರ್ಹ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ