ಮಂಗಳೂರು: ಐನೂರು ವರ್ಷಗಳ ಹಿಂದೆಯೇ ಕನಕದಾಸರಿಗಿದ್ದ ಕನ್ನಡ ಭಾಷೆಯ ಮೇಲಿನ ಪ್ರೀತಿ ಅತ್ಯದ್ಭುತವಾದುದು. ಅವರು ತಮ್ಮ ಕಾವ್ಯಗಳಲ್ಲಿ ಉರ್ದು, ಪಾರ್ಸಿ ಹಿಂದಿ ಸೇರಿದಂತೆ ಅನೇಕ ಭಾಷೆಗಳ ಪದಗಳನ್ನು ಬಳಸಿದ್ದಾರೆ. ಸಂಸ್ಕೃತದ ಪದಗಳನ್ನೂ ಕನ್ನಡೀಕರಣಗೊಳಿಸುವ ಪ್ರಯತ್ನಗಳೂ ಅವರ ಕಾವ್ಯಗಳಲ್ಲಿ ಕಾಣಲು ಸಾಧ್ಯವಿದೆ. ಅನೇಕ ಕಡೆ ಹೊಸ ಪದಗಳ ಸೃಷ್ಟಿಸಿರುವುದು ಕಾವ್ಯ ಭಾಷೆಯ ಅದ್ಭುತಕ್ಕೆ ಸಾಕ್ಷಿಯಾಗಿದೆ, ಎಂದು ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಹೇಳಿದರು.
ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ವಿವಿಯ ಕನ್ನಡ, ಸಮಾಜ ಕಾರ್ಯ ವಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಸಹಯೋಗದಲ್ಲಿ 2022-23 ನೇ ಸಾಲಿನ ‘ಕನಕ ತತ್ತ್ವಚಿಂತನʼ ಪ್ರಚಾರೋಪನ್ಯಾಸ ಮಾಲಿಕೆಯ ಉದ್ಘಾಟನೆ ಹಾಗು ವಿಚಾರಸಂಕಿರಣ ಕಾರ್ಯಕ್ರಮದಲ್ಲಿ ಕನಕದಾಸರ ನೂತನ ಪದಪ್ರಯೋಗ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.
ಕನಕದಾಸರ ಪದಪ್ರಯೋಗಗಳು ಅನೇಕ ಚಿಂತನೆಗಳಿಗೆ ಅವಕಾಶ ಮಾಡಿಕೊಡುತ್ತವೆ. ಸಾಮಾನ್ಯ ಜನಜೀವನವನ್ನು ಅತ್ಯಂತ ಸಾಮಿಪ್ಯದ ನೋಡಿದ ಅವರಿಗೆ ಗ್ರಾಮೀಣ ಪದ ಬಳಕೆಯ ಜ್ಞಾನ ಅಪಾರವಾಗಿತ್ತು. ಅವರ ಶಬ್ದಮೀಮಾಂಸೆಯನ್ನೇ ಅಧ್ಯಯನ ರೂಪದಲ್ಲಿ ವಿಶ್ಲೇಷಿಸಿದರೆ ಅನೇಕ ಸಂಗತಿಗಳು ಮನವರಿಕೆಯಾಗುತ್ತದೆ ಎಂದರು.
ಸಮಾರಂಭದ ಉದ್ಘಾಟನೆಯನ್ನುನ್ನು ನೆರವೇರಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ಸೋಮಣ್ಣ ಹೊಂಗಳ್ಳಿ, 16 ನೇ ಶತಮಾನದ ಕಾಲಘಟ್ಟದಲ್ಲಿ ಅತ್ಯಂತ ಸರಳವಾಗಿ ಬದುಕಿದ, ಜಾತಿ ವರ್ಗಗಳನ್ನು ಮೀರಿ ಬೆಳೆದ ಕನಕದಾಸರ ವಿಚಾರಧಾರೆ, ಸಂದೇಶಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಜವಾಬ್ಧಾರಿ ಮಹತ್ವವಾದದ್ದು. ಅವರು ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಾದವಲ್ಲ. ಅವರ ವಿಚಾರಧಾರೆ ವಿಶ್ವವ್ಯಾಪಿಯಾದುದು. ಅವರ ಬಗ್ಗೆ ಹೆಚ್ಚೆಚ್ಚು ಅಧ್ಯಯನಗಳಾಗಲಿ ಎಂದು ಹೇಳಿದರು.
ಕನಕಶ್ರೀ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಪ್ರೊ. ಎ.ವಿ. ನಾವಡ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕನಕದಾಸರು ಜಾತಿ ಆವರಣವನ್ನು ಮೀರಿ ಬೆಳೆದ ವ್ಯಕ್ತಿತ್ವವನ್ನು ಹೊಂದಿದವರು. ಇಂದಿಗೂ ಉಡುಪಿಯಲ್ಲಿ ಕೃಷ್ಣನಿಗೆ ರಾಗಿ ಗಂಜಿ ನೈವೇದ್ಯ ಸಮರ್ಪಣೆ ನಡೆಯುತ್ತಿರುವುದು ಸಾಮರಸ್ಯದ ದ್ಯೋತಕ ಎಂದರು.
ಕನಕದಾಸರ ಕೀರ್ತನೆಗಳಲ್ಲಿ ವೈದ್ಯಕೀಯ ಅಂಶಗಳು’ ಎಂಬ ವಿಷಯದ ಕುರಿತು ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಡಾ. ಬಿ.ಎಸ್. ಅನಿಲ್ ಕುಮಾರ್ ಬೊಮ್ಮಾಘಟ್ಟ ಉಪನ್ಯಾಸ ನೀಡಿದರು. ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷರಾದ ಡಾ. ಪೌಲ್ ಜಿ. ಅಕ್ವಿನಸ್ ಉಪಸ್ಥಿತರಿದ್ದರು.
ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಆನಂದ ಕಿದೂರು ಕಾರ್ಯಕ್ರಮ ನಿರೂಪಿಸಿದರು. ಚಂದನಾ ಕೆ.ಎಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಇರಾದ ಕೊಳಲು ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕನಕ ಕೀರ್ತನ ಗಾಯನ ಕಾರ್ಯಕ್ರಮ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ