ಕಾರ್ಕಳ: "ತಾಂತ್ರಿಕ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ಸಂಘಟನಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಅಂಕಗಳೊಂದಿಗೆ ಉತ್ಸಾಹದಾಯಕ ನಡವಳಿಕೆ, ಸಂಘಟನಾಶಕ್ತಿ ನಿಮಗೆ ವಿವಿಧ ಅವಕಾಶಗಳನ್ನು ತಂದುಕೊಡುತ್ತದೆ" ಎಂದು ಎಂ.ಆರ್.ಪಿ.ಎಲ್ ಲಿಮಿಟೆಡ್ ನ ಕಾರ್ಪೋರೇಟ್ ಕಮ್ಯೂನಿಕೇಶನ್ಸ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಡಾ.ರುಡಾಲ್ಫ್ ವಿ.ಜೆ ನೊರೊನ್ಹಾ ಅಭಿಪ್ರಾಯಪಟ್ಟರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನವೆಂಬರ್ 19 ರಂದು ನಡೆದ 2022-23ನೇ ಸಾಲಿನ ವಿಭಾಗ ಸಂಘಗಳ ಹಾಗೂ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. "ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಯು ಪ್ರತಿಯೊಂದು ಉನ್ನತ ಶಿಕ್ಷಣದ ಪ್ರಮುಖ ಉದ್ದೇಶವಾಗಿರುತ್ತದೆ. ಪ್ರತಿಯೋರ್ವ ಮಾನವನೂ ತನ್ನ ಚಿಂತನೆ ಹಾಗೂ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಂಡು ಮುಂದುವರೆದರೆ ಯಶಸ್ವಿಯಾಗಲು ಸಾಧ್ಯ" ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ "ಪ್ರಸ್ತುತ ಸಮಾಜದಲ್ಲಿ ನಿರಂತರ ಕಲಿಕೆಗೆ ಅತ್ಯಂತ ಮಹತ್ವ ಕಾಣಬಹುದಾಗಿದೆ. ಸ್ಮಾರ್ಟ್ ವರ್ಕ್, ಸಾರ್ವಜನಿಕ ಸಂಪರ್ಕ ಹಾಗೂ ಉತ್ತಮ ಸಂವಹನಶೀಲತೆ ನಾಯಕತ್ವ ಗುಣದ ಪ್ರಮುಖ ಭಾಗವೆನ್ನಬಹುದು. ನಂಬಿಕೆ ಹಾಗೂ ಚಿಂತಿಸಿ ತೆಗೆದುಕೊಂಡ ದೃಢನಿರ್ಧಾರಗಳು ನಿಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ" ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ 11 ವಿದ್ಯಾರ್ಥಿ ಸಂಘಗಳ ವಿವಿಧ ವಿಷಯಗಳ ಪದಾಧಿಕಾರಿಗಳಿಗೆ ಬ್ಯಾಜ್ ವಿತರಿಸಲಾಯಿತು. ಇದೇ ವೇಳೆ ಎಲ್ಲಾ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ನಿಟ್ಟೆ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಉಪಕುಲಸಚಿವೆ ಡಾ.ರೇಖಾ ಭಂಡಾರ್ಕರ್ ಸ್ವಾಗತಿಸಿದರು. ವಿದ್ಯಾರ್ಥಿನಿ ಮನಿಷಾ ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು. ಸ್ಟೂಡೆಂಟ್ ವೆಲ್ಫೇರ್ ಡೀನ್ ಡಾ.ನರಸಿಂಹ ಬೈಲ್ಕೇರಿ ವಂದಿಸಿದರು. ವಿದ್ಯಾರ್ಥಿನಿ ಶರಣ್ಯ ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ತೇಜಸ್ ಬಾಳಿಗ ಮತ್ತು ಸಿದ್ಧಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ