ವಿಶಾಲ ಕಡಲಿನಲ್ಲಿ ದೊರೆತ ಅಪರೂಪದ ಮುತ್ತುಗಳೇ ನನ್ನ ಸ್ನೇಹಿತರು...

Upayuktha
0



ಪುಟ್ಟ ಮುಗುಳು ನಗು, ಒಂದು ಮಾತು, ತಿರುಗಿ ಪದೇ ಪದೆ ನೋಡುವ ನೋಟ. ಪ್ರಾರಂಭದಲ್ಲಿ ಹಾಯ್ ಎಂದು ಪ್ರಾರಂಬಿಸುವ ಮಾತುಗಳು, ಕೊನೆಗೆ ಮಾತಾಡಿದರು ಮುಗಿಯದಿರುವಷ್ಟು ಗಾಢವಾಗಿ ಮಾರ್ಪಡುತ್ತವೆ.


ಎಲ್ಲೋ ಹುಟ್ಟಿ, ಎಲ್ಲೋ ಬೆಳೆದವರನ್ನು ಎಲ್ಲೋ ಒಂದು ಕಡೆ ಬೆಸೆಯುವ ಅನುಬಂಧವೆ ಸ್ನೇಹ ಎಂಬ ಬಂಧ. ಗೆಳೆತನ ಎಂಬುವುದು ಒಂದು ಸುಂದರವಾದ ಬೆಸುಗೆ. ಸಣ್ಣ ಪುಟ್ಟ ಕೋಪ, ಚಿಕ್ಕ -ಪುಟ್ಟ ತರಲೆ-ತುಂಟಾಟಗಳು  ಕೊನೆಯೇ ಇರದಷ್ಟು ಮಾತುಗಳು. ಇದೆಲ್ಲಾ ಸೇರಿಯೇ ಅಲ್ಲವೆ ಸ್ನೇಹದ ಸುಂದರ ಜಗತ್ತು ಸೃಷ್ಟಿಯಗುವದು. ನಮ್ಮ ಜೊತೆ ಯಾರಿರಲಿ ಇರದಿರಲಿ ಎಂತಹದೇ ಕಠಿಣ ಸಂದರ್ಭ ಬಂದರು ಕೂಡ ಸ್ನೇಹಿತರೆಂಬ ಆಪತ್ತ್ಭಾಂಧವರು ನಮ್ಮ ಪಾಲಿನ ಆಪ್ತ ರಕ್ಷಕರಗಿರುತ್ತಾರೆ. ಕಾಸಿದ್ದಾಗ ಮೋಜುಮಾಡಲು ಬರುವ ನೂರು ಮಂದಿ ಸಂಬಂಧಿಕರಿಗಿಂತ ಕಷ್ಟವಿದ್ದಾಗ ಕರೆಯದೆ ಬರುವ ಸ್ನೇಹಿತರಿದ್ದರೆ ನಮಗಷ್ಟೇ ಸಾಕಲ್ಲವೇ.


ಪ್ರತಿಯೊಬ್ಬರಿಗೂ ಕೂಡ ಅವರ ಮನೋಭಾವ, ವ್ಯಕ್ತಿತ್ವಕ್ಕೆ ತಕ್ಕದಾದಂತಹ ಸ್ನೇಹಿತರಿರುತ್ತಾರೆ. ಒಂದು ಒಳ್ಳೆಯ ಸ್ನೇಹಿತರಿದ್ದರೆ ಎಂತಹ ಸಂದರ್ಭ ಬಂದರೂ ಕೂಡ ಆನೆ ಬಲದಂತಿರುತ್ತದೆ.


ಸ್ನೇಹದ ಹೆಸರಿನಲ್ಲಿ ಮೋಸ ಮಾಡುವ ಹಾಗೂ ಮೋಸ ಹೋಗುವ ಅದೆಷ್ಟೋ ಮಂದಿ ಇದ್ದಾರೆ. ಸಂದರ್ಭ ಬಂದಾಗ ಬದಲಾಗುವವರಿಗಿಂತ ಎಂತಹದೇ ಸಂದರ್ಭದಲ್ಲಿ ಕೂಡ ಬದಲಾಗದೆ ಇರುವವರು ಸಿಗುವುದು ಬಹು ವಿರಳ.


ಹೈಸ್ಕೂಲಿನಿಂದ ಕಾಲೇಜಿಗೆ ಕಾಲಿಡುವಾಗ ತೆಗೆದುಕೊಳ್ಳುವ ಆಯ್ಕೆಗಳು ಬದಲಾಗಬಹುದು, ಆದರೆ ಸ್ನೇಹ ಬದಲಾಗಬೇಕೆಂದೇನಿಲ್ಲ, ನನಗೂ ಈ ಅನುಭವವಾಗಿದೆ. ಹತ್ತನೇ ತರಗತಿ ಮುಗಿಸಿ ಪ್ರಥಮ ಪಿಯುಸಿಗೆ ಕಾಲಿಡುವ ಹೊತ್ತು, ನನ್ನಲ್ಲಿ ಮೊದಲಿದ್ದ ಸ್ನೇಹದ ಭಾವನೆಯೇ ಹಸನಾಗಿತ್ತು. ಆದರೆ ನಾನು ಅಂದುಕೊಂಡಂತೆ ಇರಲಿಲ್ಲ. ರಜೆ ಮುಗಿದು ಕಾಲೇಜು ಪ್ರಾರಂಭವಾದ ಹೊತ್ತಿಗೆ ಅದೆಷ್ಟೋ ಕಾತುರತೆಯಿಂದ ತೆರಳಿದೆ ಕೇವಲ ನನ್ನ ಅಚ್ಚು-ಮೆಚ್ಚಿನ ಗೆಳತಿಯ ಕಾಣುವ ತವಕ. ಆದರೆ ನಾನಂದುಕೊಂಡದ್ದೆ ಬೇರೆ, ನನಗೆದುರಾಗಿದ್ದ ಸಂದರ್ಭವೇ ಬೇರೆ. ಅದಾಗಲೇ ಅವಳ ಅಂತಸ್ತಿಗೆ ತಕ್ಕಂತಹ ಹೊಸ ಸ್ನೇಹಿತರು ಸಿಕ್ಕಾಗಿತ್ತು. ಪರಸ್ಪರ ಎದುರಾದ ಸಂದರ್ಭದಲ್ಲಿ ಒಂದು ಸಣ್ಣ ಮುಗುಳುನಗೆ ನೀಡಲು ಹಣ ನೀಡಬೇಕೋ ಎಂಬಂತೆ ವರ್ತಿಸುತ್ತಿದ್ದದನ್ನು ಕಂಡು ನಾನು ಒಳಗೊಳಗೆ ಅದೆಷ್ಟೋ ನೋವನುಭವಿಸಿದ್ದೆ. ನೋಡುಗರಿಗೆ ಇದು ಸಾಮಾನ್ಯ ಏನಿಸಬಹುದು, ಆದರೆ ನನ್ನ ನಿಷ್ಕಲ್ಮಶ ಸ್ನೇಹಕ್ಕಾದ ಪೆಟ್ಟು ನನ್ನ ಮನಸ್ಸಿಗೆ ಅತೀವ ಆಘಾತ ಉಂಟುಮಾಡಿತು. ಅದೆಷ್ಟೇ ಯೋಚಿಸಿದರು ನನ್ನ ಏಕೆ ನಿರ್ಲಕ್ಷ ಮಾಡಿದರು ಎಂದು ನನಗೆ ಇಂದಿಗೂ ತಿಳಿಯುತ್ತಿಲ್ಲ.


ಜೇವನವೆಂದರೆ ಹಾಗೆ ಅಲ್ಲವೇ, ನಮಗೆ ಏನೋ ಇಷ್ಟವಾಯಿತು ಇನ್ನೇನು ನಮ್ಮ ಕೈಗೆ ಸಿಕ್ಕಿಬಿಟ್ಟಿತು ಎಂದುಕೊಂಡಾಗಲೇ ನಾವದನ್ನು ಕಳೆದುಕೊಳ್ಳುತ್ತೇವೆ. ಆದರೆ ನಾವೇನು ಕಳೆದುಕೊಳ್ಳುತ್ತೇವೋ ಅದಕ್ಕಿಂತಲೂ ಶ್ರೇಷ್ಠವಾದದ್ದೇ ನಮಗೆ ದೊರಕುತ್ತದೆ ಎಂಬುವುದಂತೂ ಸತ್ಯ. ನನಗೂ ಅಷ್ಟೇ ನಂತರದ ದಿನಗಳಲ್ಲಿ ನನ್ನ ಮನಸ್ಸಿಗಾದ ನೋವಿಗೆ ಮುಲಾಮಿನಂತೆ ಉತ್ತಮವಾದ ನಿಷ್ಕಲ್ಮಶ ಮನಸ್ಸಿನ ಸ್ನೇಹಿತರು ಸಿಕ್ಕರು. ನಮ್ಮ ಸ್ನೇಹದ ಈ ಮೂರು ವರ್ಷಗಳಲ್ಲಿ ಒಂದು ದಿನವೂ ಮಾತು ಬಿಟ್ಟದ್ದು, ಜಗಳ ಆಡಿದ್ದು ಒಂದೂ ಕೂಡ ನೆನಪಿಲ್ಲ. ಎಲ್ಲವೂ ಸಿಹಿ ನೆನಪುಗಳೇ. ಮೊಗೆ ಮೊಗೆದಷ್ಟು ಬತ್ತದ ಈಗಲೂ ತುಟಿಯಂಚಿನಲ್ಲಿ ನಗು ತರಿಸುವ ಅದೆಷ್ಟೋ ಸಿಹಿನೆನಪುಗಳಿವೆ.


ಎಷ್ಟೋ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯಹಸ್ತ ಚಾಚಿದವರು ಗೆಳೆಯರು. ಇಂತಹ ಅಮೂಲ್ಯ ಸ್ನೇಹಿತರನ್ನು ಪಡೆದ ನಾನು ಧನ್ಯೆ. ಅಂತಹ ಸ್ನೇಹಿತರು ನನಗೆ ಹಿಂದೆ ಸಿಕ್ಕಿರಲಿಲ್ಲ ಮುಂದೆ ಸಿಗಲೂ ಸಾಧ್ಯವಿಲ್ಲ. ನನ್ನ ಎಷ್ಟೋ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದವರು ಸ್ನೇಹಿತರು. ಅವರು ನನಗೆ ಸ್ವಂತ ಅಕ್ಕ-ತಂಗಿಗಿಂತಲೂ ಹೆಚ್ಚು ಎಂದರೆ ತಪ್ಪೇನಿಲ್ಲ. ಯಾಕೆಂದರೆ ಎಷ್ಟೋ ಸಂದರ್ಭಗಳಲ್ಲಿ ಅಮ್ಮನ ವಾತ್ಸಲ್ಯ, ಅಕ್ಕನ ಪ್ರೀತಿ ನೀಡಿ ಅಣ್ಣನಂತೆ ಸದಾ ಬೆಂಗಾವಲಾಗಿ ಜೊತೆ ನಿಂತವರು ಗೆಳೆಯರು. ನನ್ನಲ್ಲಿನ ಅದೆಷ್ಟೋ ಸಮಸ್ಯೆಗಳಿಗೆ ಸಾಂತ್ವನ ನೀಡಿದವರು.


ಸಹೋದರರಿಲ್ಲ, ಕೂಡು ಕುಟುಂಬವಿಲ್ಲ ಎಂಬ ಕೊರಗನ್ನು ನೀಗಿಸಿದವರು ನನ್ನ ಸ್ನೇಹಿತರು. ಅದೆಷ್ಟೋ ಸಂದರ್ಭಗಳಲ್ಲಿ ಒಂಟಿತನದ ಭಾವನೆ ಮೂಡುವಾಗಲೇ ಜೊತೆಗೆ ನಾನಿಲ್ಲವೇ ಎಂದು ಆಸರೆಯಾದವರು ಸ್ನೇಹಿತರು.


ಒಂದು ಸುಂದರವಾದ ಗೆಳೆತನಕ್ಕೆ ಹೆಣ್ಣು-ಗಂಡು, ಬಡವ-ಶ್ರೀಮಂತನೆಂಬ ತಾರತಮ್ಯವಿಲ್ಲ. ಹೃದಯ ಶ್ರೀಮಂತಿಕೆಯಿದ್ದರೆ ಸಾಕು. ನೋವಿನಿಂದ ಮನ ಮುದುಡಿ ಕಣ್ಣೀರು ಜಾರುವ ಮುನ್ನವೇ ಸಿಹಿಗದರುವಿಕೆಯಿಂದ ಕಣ್ಣೀರು ಇಳಿಯದಂತೆ ತಡೆಯುವವರು ಸ್ನೇಹಿತರು. ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ಕೂಡಿ ಆಡಿದ ಸವಿನೆನಪುಗಳನ್ನು ಮೆಲುಕು ಹಾಕುವಾಗ ಈಗಲೂ ಕೂಡ ಒಟ್ಟಿಗೆ ಇರಬೇಕು ಎನಿಸುತ್ತದೆ. ಈ ಸುಂದರ ಸ್ನೇಹದ ಅನುಭವ ಬದುಕಿನ ಕೊನೆಯುದ್ದಕ್ಕೂ ಜೊತೆಯಾಗಿರಬೇಕೆಂಬುದೇ ನನ್ನ ಆಕಾಂಕ್ಷೆ. ಮರೆಯಲೆತ್ನಿಸಿದರು ಮರೆಯಲಾಗದಷ್ಟು ಹಚ್ಚಿಕೊಂಡಿರುವೆ ನಾ ಅವರನ್ನು, ನಮ್ಮ ಈ ಗೆಳೆತನದ ನಂಟು ಎಂದಿಗೂ ಬಿಡಿಸಲಾಗದ ಗಂಟಾಗಲಿ.


- ಪ್ರಸಾದಿನಿ ತಿಂಗಳಾಡಿ

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top