ಯಕ್ಷಗಾನ - ಇದೊಂದು ಗಂಡು ಕಲೆ. ಕರ್ನಾಟಕದ ಅತ್ಯಂತ ವಿಶಿಷ್ಠ ಕಲೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲಿ ಯಕ್ಷಗಾನ ಅತೀ ಪ್ರಮುಖವಾದದ್ದು. ನಮ್ಮ ಸಂಸ್ಕೃತಿ, ಆಚರಣೆ ಮತ್ತು ಸಂಪ್ರದಾಯವನ್ನು ಮೈವೆತ್ತಿರುವ ಯಕ್ಷಗಾನ ಕಲೆಯಲ್ಲಿ ಪ್ರಜ್ವಲಿಸುವ ಪ್ರತಿಭೆ ಅನ್ವಿತ ಕೆರೆಕಾಡು.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ ಕೆರೇಕಾಡಿನ ಜಯಂತ್ ಅಮೀನ್ ಹಾಗೂ ಪ್ರೇಮಲತಾ ಇವರ ಮಗಳಾಗಿ 19-05-2000 ರಂದು ಜನನ. ಬಿಕಾಂ, CS (COMPANY SECRETARY) ಇವರ ವಿದ್ಯಾಭ್ಯಾಸ. ಅಣ್ಣ, ತಂದೆ, ತಾಯಿ ಹಾಗೂ ಯಕ್ಷಗಾನ ಕಲೆಯ ಮೇಲೆ ಇದ್ದ ಒಲವು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಪ್ರಸಾದ್ ಚೆ, ಅಜಿತ್ ಕೆರೆಕಾಡು ಇವರ ಯಕ್ಷಗಾನ ಗುರುಗಳು.
ಪ್ರಸಂಗದ ಪೂರ್ತಿ ಮಾಹಿತಿ ಹಾಗೂ ಕೊಟ್ಟ ಪಾತ್ರದ ಕುರಿತು ಸಂಪೂರ್ಣವಾಗಿ ತಿಳಿದು ಆ ಪಾತ್ರದ ವ್ಯಕ್ತಿತ್ವವನ್ನು ಅರಿತು ವ್ಯವಹರಿಸಿ ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಅನ್ವಿತ. ಅಭಿಮನ್ಯು ಕಾಳಗ, ದೇವಿ ಮಹಾತ್ಮೆ ಇವರ ನೆಚ್ಚಿನ ಪ್ರಸಂಗಗಳು. ಸುಭದ್ರೆ, ಬ್ರಹ್ಮ, ಸೀತೆ ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯುವಜನರು ಇತ್ತೀಚೆಗೆ ಹೆಚ್ಚು ಯಕ್ಷಗಾನದ ಕುರಿತು ಒಲವು ತೋರಿಸುತ್ತಿರುವುದು ಖುಶಿಯ ವಿಷಯ,. ಯಕ್ಷಗಾನ ಆರಾಧನಾ ಕಲೆ ಆಗಬೇಕೇ ಹೊರತು ಆಡಂಬರವಾಗಬಾರದು ಎಂದು ಹೇಳುತ್ತಾರೆ ಅನ್ವಿತ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಹೆಚ್ಚಿನ ಪ್ರೇಕ್ಷಕರು ಕಾಲಮಿತಿ ಯಕ್ಷಗಾನ ಪ್ರದರ್ಶನವನ್ನೂ ಹೆಚ್ಚು ಇಷ್ಟ ಪಡುತ್ತಿದ್ದಾರೆ, ಪ್ರೇಕ್ಷಕರು ಕಲೆಯ ಅಭಿಮಾನಿಗಳಾಗಬೇಕೆ ಹೊರತು ಕಲಾವಿದನ ಅಭಿಮಾನಿಯಲ್ಲ ಎಂದು ಹೇಳುತ್ತಾರೆ ಅನ್ವಿತ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ :-
ಯಕ್ಷಗಾನ ರಂಗದಲ್ಲಿ ಇನ್ನೂ ಹೆಚ್ಚಿನ ವಿಭಿನ್ನ ಪಾತ್ರವನ್ನು ವಹಿಸಬೇಕು , ಭಾಗವತಿಕೆಯಲ್ಲಿ ತೊಡಗಿಸಿಕೊಳ್ಳುವುದು.
ತೆಂಕು ಬಡಗು ಜೋಡಾಟದಲ್ಲಿ ಭಾಗವಹಿಸಿದ ಅನುಭವ, ಪ್ರಸಿದ್ಧ ಕಲಾವಿದರಾದ ಶಶಿಕಾಂತ ಶೆಟ್ಟಿ ಕಾರ್ಕಳ, ತೀರ್ಥಹಳ್ಳಿ ಗೋಪಾಲ್ ಆಚಾರ್ಯ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಅವರೊಂದಿಗೆ ರಂಗ ಹಂಚಿಕೊಂಡ ಅನುಭವ ಯಾವತ್ತಿಗೂ ಒಂದು ಮರೆಯಲಾಗದ ಅನುಭವ ಎಂದು ಅನ್ವಿತ ಅವರು ಹೇಳುತ್ತಾರೆ.
2015 ರಲ್ಲಿ ಯಕ್ಷಸಿಂದು ಬಿರುದು , 2016 ರಲ್ಲಿ ಉತ್ತಮ ಯಕ್ಷಗಾನ ಪಟು ಬಿರುದು , ೨೦೨೨ ರಲ್ಲಿ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಲ್ಪಟ್ಟ ಯುವಸಾಧಕಿ ಪ್ರಶಸ್ತಿ ಹೀಗೆ ಹಲವು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿದೆ.
ನೃತ್ಯ, ಕಾರ್ಯಕ್ರಮ ನಿರೂಪಣೆ, ಭಾಗವತಿಕೆ, ಸಂಗೀತ ಇವರ ಹವ್ಯಾಸಗಳು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
-ಶ್ರವಣ್ ಕಾರಂತ್ ಕೆ
ಸುಪ್ರಭಾತ, ಶಕ್ತಿನಗರ ಮಂಗಳೂರು.
+91 8971275651
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ