ನಿನ್ನೆ (ನ.7) ಸಂಜೆ ಮೈಸೂರಿನಲ್ಲಿ ಡಾ. ಎಸ್.ಎಲ್. ಭೈರಪ್ಪರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದೆನು. ತಿಳಿರುತೋರಣ ಪರ್ಣಮಾಲೆ 6,7,8 ಹೊಸ ಸಂಪುಟಗಳು ಮತ್ತು 'ಸ್ವಚ್ಛ ಭಾಷೆ ಅಭಿಯಾನ: ಕಸವಿಲ್ಲದ ಕನ್ನಡಕ್ಕೊಂದು ಕೈಪಿಡಿ' ಪುಸ್ತಕದ ಗೌರವಪ್ರತಿಗಳನ್ನು ಅವರಿಗೆ ನೀಡಿದೆನು.
ಭೈರಪ್ಪರು ತಿಳಿರುತೋರಣ ಅಂಕಣವನ್ನಾದರೂ ವಿಶ್ವವಾಣಿ ಮುದ್ರಿತ ಪತ್ರಿಕೆಯಲ್ಲೇ ನಿಯತವಾಗಿ ಓದುತ್ತಾರೆ (ದಿನಕರ ದೇಸಾಯಿ ಮಾದರಿಯ ಚುಟುಕಗಳ ಮೂಲಕ ರಾಜಕೀಯ ಸಾಮಾಜಿಕ ಸ್ಥಿತಿಗತಿಗಳ ವಿಡಂಬನೆ ಮಾಡಿದ್ದ ಅಂಕಣಬರಹವನ್ನಂತೂ ಅವರು ತುಂಬ ಮೆಚ್ಚಿ ವಿಶ್ವೇಶ್ವರ ಭಟ್ಟರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು). ಹಾಗಾಗಿ ಪರ್ಣಮಾಲೆ ಪುಸ್ತಕಗಳು ಅವರನ್ನು ವಿಶೇಷವಾಗೇನೂ ಆಕರ್ಷಿಸಲಿಲ್ಲ; ಆದರೆ "ಕಸವಿಲ್ಲದ ಕನ್ನಡಕ್ಕೊಂದು ಕೈಪಿಡಿ" ಪುಸ್ತಕದ ಕಲ್ಪನೆ ಅವರಿಗೆ ತುಂಬ ಇಷ್ಟವಾಯ್ತು. ಖಂಡಿತ ಪೂರ್ತಿ ಓದಿ ಪ್ರತಿಕ್ರಿಯೆ ತಿಳಿಸುವೆ ಎಂದರು. ಸುದ್ದಿವಾಹಿನಿಗಳು, ಪತ್ರಿಕೆಗಳು ಕನ್ನಡ ಭಾಷೆಯನ್ನು ಕೊಲ್ಲುತ್ತಿರುವ ಬಗ್ಗೆ ತಮಗೂ ಖೇದವಿದೆ ಎಂದು ಪುಸ್ತಕದ ಅಗತ್ಯವನ್ನು ಅನುಮೋದಿಸಿದರು.
ಆಮೇಲೆ ಉಭಯಕುಶಲೋಪರಿ ಮಾತುಕತೆಯಲ್ಲಿ 'ನಿಮಗೆ ಸಂಸ್ಕೃತ ಜ್ಞಾನ ಎಲ್ಲಿಂದ?' ಎಂದು ಕೇಳಿದರು. "ನನ್ನ ಸಂಸ್ಕೃತ ಜ್ಞಾನ ಅತ್ಯಲ್ಪ. ಏನಿದೆಯೋ ಅದರ ಹಿಂದೆ 'ನನಗೆ ಹೆಣ್ಣು ಕೊಟ್ಟ ಮಾವ'ನವರ ಅನುಗ್ರಹವಿದೆ, ಅವರು ಸಂಸ್ಕೃತ ಅಧ್ಯಾಪಕರು (ಈಗ ನಿವೃತ್ತ), ಹಾಗೆಯೇ ನಾನು 8ರಿಂದ 2nd PUC ವರೆಗೆ ಸಂಸ್ಕೃತ ಪ್ರಥಮ ಭಾಷೆಯಾಗಿ ಕಲಿತದ್ದರ ಫಲವೂ ಇದೆ" ಎಂದು ವಿನಮ್ರತೆಯಿಂದಲೇ ಹೇಳಿದೆನು.
ಅಮೆರಿಕದಲ್ಲಿ ಪ್ರಸಕ್ತ ಆರ್ಥಿಕ ಸಾಮಾಜಿಕ ರಾಜಕೀಯ ವಿದ್ಯಮಾನಗಳು, ಟ್ರಂಪ್ ಮತ್ತೊಮ್ಮೆ ಚುನಾವಣೆಗೆ ನಿಲ್ಲುವ/ಗೆಲ್ಲುವ ಸಾಧ್ಯತೆಗಳಿವೆಯೇ, ಬೈಡನನ ಖದರು ಏಕೆ ಇಷ್ಟು ಸಪ್ಪೆಯಾಗಿದೆ,... ಮುಂತಾದ ವಿಚಾರಗಳು ನಮ್ಮ ಮಾತುಕತೆಯಲ್ಲಿ ಬಂದವು.
92 ವರ್ಷ ಪ್ರಾಯದ ಭೈರಪ್ಪ ಈಗ ಬರವಣಿಗೆ ಪೂರ್ತಿ ನಿಲ್ಲಿಸಿದ್ದಾರಂತೆ. ಓದು, ಅಧ್ಯಯನ ನಿರಂತರ ಸಾಗಿದೆ. ಹಿತಮಿತ ಆಹಾರ ಮತ್ತು ಸ್ಥಿತಪ್ರಜ್ಞ ಮನಸ್ಸಿನಿಂದ ಆರೋಗ್ಯ ಕಾಪಾಡಿಕೊಂಡು ಬಂದಿದ್ದಾರೆ ಎಂದು ಅವರ ಸೆಕ್ರೆಟರಿ ಲಕ್ಷ್ಮಿ ತಿಳಿಸಿದರು.
ಚಹ, ಮದ್ದೂರುವಡೆ, ಮತ್ತು ಹಣ್ಣುಗಳ ಸತ್ಕಾರ ನೀಡಿ, ನಮ್ಮನ್ನು (ನನ್ನ ಜೊತೆ ಸ್ನೇಹಿತ ಅನಂತ ತಾಮ್ಹನಕರ್ ದಂಪತಿ ಇದ್ದರು) ಗೇಟಿನವರೆಗೆ ಬಂದು ಪ್ರೀತಿಯಿಂದ ಬೀಳ್ಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ