ಅರೇ..! ಏನು ಇದು ಬೊಂಬಿ ಅನ್ಕೊಂಡ್ರಾ. ಅದು ನಮ್ಮ ಮನೆಯಲ್ಲಿದ್ದ ಮುದ್ದಾದ ಬೆಕ್ಕು. ಬಿಳಿ ಬಣ್ಣವನ್ನು ಹೊಂದಿದ್ದು ಈ ಬೆಕ್ಕು ಯಾವಾಗಲೂ ತುಂಟಾಟದಲ್ಲಿಯೇ ತೊಡಗಿರುತ್ತಿತ್ತು. ಅಟ್ಟದ ಮೇಲೆ ಹೋಗಿ ಅಲ್ಲಿಂದ ಕೆಳಗಿಳಿದು ಒಂದೊಂದು ಇಲಿಯ ಪ್ರದರ್ಶನ ಮಾಡುತ್ತಿತ್ತು. ಮನೆಗೆ ಮೀನು ತಂದ್ರೆ ಸಾಕು ಹುಚ್ಚು ಹಿಡಿದ ಹಾಗೆ ಕೂಗುತ್ತಿತ್ತು. ದೂರದಿಂದಲೇ ಅಪ್ಪ ಬರುತ್ತಿದ್ದ ಸದ್ದನ್ನು ಕೇಳಿ ಅವರ ಹತ್ರ ಓಡಿಹೋಗುತ್ತಿತ್ತು. ಬೇರೆ ಬೆಕ್ಕು ಅಥವಾ ನಾಯಿ ಬಂದಾಗ ಅದನ್ನು ಜೋರುಮಾಡಿ ಓಡಿಸುತ್ತಿತ್ತು. ತುಂಬಾನೇ ನಾನು ಮೆಚ್ಚಿಕೊಂಡ ಜೀವ ಅದು. ಎಲ್ಲಿಗಾದರೂ ಹೋದರೆ ಬೊಂಬಿಯ ಚಿಂತೆ ನನಗೆ ಎಲ್ಲಿರಬಹುದು ಏನು ಮಾಡುತ್ತಿರಬಹುದೆಂದು. ಮನೆಯವರು ಸಹ ಅದನ್ನು ತುಂಬಾನೇ ಮುದ್ದು ಮಾಡುತ್ತಿದ್ದರು. ಊಟ ಮಾಡುವಾಗ ನನ್ನ ಹತ್ತಿರವೇ ಕುಳಿತು ನನಗೂ ಬೇಕು ಎನ್ನುವ ರೀತಿಯಲ್ಲಿ ಮುಖ ಭಾವನೆಯನ್ನು ಮಾಡುತ್ತಿತ್ತು. ಒಂದು ದಿನ ಬೊಂಬಿ.. ಬೊಂಬಿ.. ಎಂದು ಕರೆದೆ ಎಲ್ಲಿಯೂ ಕಾಣಿಸಲಿಲ್ಲ. ಭಯವು ನನ್ನನ್ನು ಕಾಡುತ್ತಿತ್ತು. ಮತ್ತೆ ಆಚೆ ಮನೆಯಿಂದ ತಮ್ಮ ಹಿಡಿದುಕೊಂಡು ಸಮಾಧಾನ ಹಿಡಿದುಕೊಂಡು ಬರುವುದನ್ನು ನೋಡಿ ಸಮಾಧಾನವಾಯಿತು. ಎರಡುವರೆ ವರ್ಷಗಳ ಕಾಲ ನಮ್ಮ ಮನೆಯಲ್ಲಿಯೇ ಮನೆಯ ಸದಸ್ಯನಾಗಿ ಇತ್ತು.
ಅದು ಯಾರ ಮನೆಯಲ್ಲಿದರೂ ಮೀನು ಇದ್ದರೆ ಅಲ್ಲಿಗೆ ಹೋಗುತಿತ್ತು. ಹಾಗೆಯೇ ಹೋಗಿ ಅಲ್ಲಿ ಯಾವುದೋ ಒಂದು ಮನೆಯಲ್ಲಿ ಅದಕ್ಕೆ ವಿಷವನ್ನು ಬೆರೆಸಿದರು.ಮನೆಗೆ ಬಂದ ಬೊಂಬಿ ಊಟವನ್ನು ಕೂಡ ಸೇವಿಸಲಿಲ್ಲ. ಅಲ್ಲಿ ಅಲ್ಲಿ ಬಿದ್ದುಕೊಳ್ಳುತ್ತ ಇತ್ತು. ನಡೆಯಲು ಅಸಾಧ್ಯವಾಗುವಂತೆ ವರ್ತಿಸುತ್ತಿತ್ತು. ಅದರ ಪರಿಸ್ಥಿತಿ ನೋಡಿ ನನಗೆ ಅಂತೂ ತುಂಬಾನೇ ಬೇಸರವಾಗುತ್ತಿತ್ತು. ಮನೆಯವರಿಗೂ ಸಹ. ಬೆಳಗ್ಗೆ ಎದ್ದು ನೋಡಿದಾಗ ಅದರ ಪ್ರಾಣಪಕ್ಷಿ ಹಾರಿತ್ತು. ದುಃಖವೇ ನನ್ನನ್ನು ಆವರಿಸಿತ್ತು. ಆಚೆ ಮನೆಯಲ್ಲಿ ಬೆಕ್ಕಿನ ಸ್ವರ ಕೇಳಿದರು ಕಣ್ಣಲ್ಲಿ ಬೊಂಬಿಯ ನೆನಪಾಗಿ ನೀರು ಬರುತ್ತಿತ್ತು. ಈಗಲು ಅದರ ನೆನಪು ನನ್ನನ್ನು ಕಾಡುತ್ತಿದೆ. ಅದನ್ನು ಮರೆಯುವುದು ಅಸಾಧ್ಯ. ಅದರ ಜೊತೆ ಕ್ಲಿಕ್ಕಿಸಿಕೊಂಡ ಚಿತ್ರಗಳನ್ನು ನೋಡಿದಾಗ ಬೇಸರವಾಗುತ್ತಿತ್ತು. ಅದರ ಸ್ಥಾನವನ್ನು ಯಾವುದೇ ಇನ್ನೊಂದು ಪ್ರಾಣಿಗೆ ತುಂಬಲು ಸಾಧ್ಯವಿಲ್ಲ. ಬೊಂಬಿ ಯಾವಾಗಲೂ ನನ್ನ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ.
- ಕೃತಿ ಬಲ್ಯಾಯ ನೆಕ್ಕಿಲು
ತೃತಿಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು, ಪುತ್ತೂರು