ಮೂಡುಬಿದಿರೆ: ಬದುಕಿನಲ್ಲಿ ಎಂದೂ ಸೋಲನ್ನು ಒಪ್ಪಿಕೊಳ್ಳದೆ, ಧೈರ್ಯದಿಂದ ಮುನ್ನಡೆಯಬೇಕು. ಆಗ ಮಾತ್ರ ಕೈಗೊಂಡ ಕೆಲಸದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಅಮೇರಿಕಾದಲ್ಲಿ ಮಾನವ ಕಳ್ಳಸಾಗಾಣೆಯಿಂದ ಪಾರಾದ ಸಂತ್ರಸ್ತ ಹಾಗೂ ಐಸ್ ಓಪನ್ ಇಂಟರ್‌ನ್ಯಾಶನಲ್‌ನ ಸಂಸ್ಥೆಯ ಸಂಸ್ಥಾಪಕ ಹೆರಾಲ್ಡ್ ಡಿಸೋಜಾ ಹೇಳಿದರು.
ಆಳ್ವಾಸ್ ಕಾಲೇಜಿನ ಮಾನವ ಹಕ್ಕುಗಳ ಘಟಕದ ವತಿಯಿಂದ ವಿವಿಧ ವಿಭಾಗಳ ಸಹಯೋಗದೊಂದಿಗೆ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯಾವುದೇ ಯಶಸ್ಸು ಪ್ರಾರಂಭದಲ್ಲಿ ಒಂದು ಸಣ್ಣ ಹಾಗೂ ದೃಢ ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ನಂತರ ಗುರಿಯೆಡೆಗಿನ ಶ್ರಮ ನಮ್ಮನ್ನು ಸಫಲರಾಗುವಂತೆ ಮಾಡುತ್ತದೆ ಎಂದರು. ಅಮೇರಿಕಾದಲ್ಲಿ ಕಾರ್ಮಿಕ ಕಳ್ಳಸಾಗಣೆ ಮತ್ತು ಸಾಲದ ಬಂಧನಕ್ಕೆ ಸಿಲುಕಿ, ಬದುಕುಳಿದು ಬಂದ ತಮ್ಮ ಹೋರಾಟದ ರೋಚಕ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ವಿದೇಶ ಪ್ರವಾಸಕ್ಕೆ ಹೋಗುವ ಸಂದರ್ಭ ಪ್ರತಿಯೊಬ್ಬರೂ ಎಚ್ಚರದಿಂದ ಇರಬೇಕು. ಮಾನವ ಕಳ್ಳಸಾಗಣಿಕೆಗೆ ಯಾರೂ ಬಲಿಯಾಗಬಾರದು. ಕಳ್ಳಸಾಗಣೆಯ ವ್ಯಾಪಕತೆ ಕುರಿತು ವಿದ್ಯಾರ್ಥಿಗಳು ಅರಿತು, ಗುಲಾಮಗಿರಿಗೆ ಒಳಗಾಗದೆ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಅಂತರಾಷ್ಟ್ರೀಯ ಸಾಧಕರ ಜೊತೆಗೆ ಸ್ಥಳೀಯ ಸಾಧಕರನ್ನು ಗುರುತಿಸಿ, ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಕಾಲೇಜಿನ ಮಾನವ ಹಕ್ಕು ಘಟಕದ ಸಂಯೋಜಕಿ ಶಾಜಿಯಾ ಕಾನುಮ್, ಹೆರಾಲ್ಡ್ ಡಿಸೋಜಾ ಅವರ ಪತ್ನಿ ಡ್ಯಾನ್ಸಿ ಡಿಸೋಜಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಹನಾನ್ ಫಾತಿಮಾ ಸ್ವಾಗತಿಸಿ, ಶ್ರೀಲಕ್ಷ್ಮೀ ವಂದಿಸಿ, ಪ್ರಿಯಂಕಾ ಕಾರ್ಯಕ್ರಮವನ್ನು ನಿರೂಪಿಸಿದರು.
ಮೂಲತಃ ಬಜ್ಪೆಯ ಕೈಕಂಬದವರಾಗಿರುವ ಹೆರಾಲ್ಡ್ ಡಿಸೋಜಾ ಅವರು ಮಾನವ ಕಳ್ಳಸಾಗಾಣೆಯಿಂದ ಬದುಕುಳಿದವರ ಪರ ಕೆಲಸ ನಿರ್ವಹಿಸಿದರ ಪರಿಣಾಮ, 2015ರಲ್ಲಿ ಅವರನ್ನು ಅಮೇರಿಕಾದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ, ಯುಎಸ್ ಮಾನವ ಕಳ್ಳಸಾಗಣೆಯ ಸಲಹಾ ಮಂಡಳಿಗೆ ನೇಮಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ