ಅನಂತಪುರದ ಅನಂತಸ್ವಾಮೀ ಕ್ಷೇತ್ರದ‌ ಬಬಿಯ ಮತ್ತು ನಾನು ಭಾಗ-5

Upayuktha
0



ಹಿಂದಿನ ಕಂತುಗಳಲ್ಲಿ ಅನಂತಪುರದ ಒಂದನೇ ಬಬಿಯನ ಬಗ್ಗೆ ಹಾಗೆಯೇ ಕುಂಬಳೆ ಸೀಮೆಯಲ್ಲಾದ ಮಿಲಿಟರಿ ಬ್ಲಾಕ್ ನ ಬಗ್ಗೆ ನನ್ನ ತಂದೆಯವರ ಹಾಗೂ ಅರಮನೆಯ ಸಂಬಂಧಗಳ ಬಗ್ಗೆ ತಿಳಿಸಿದ್ದೇನೆ. ಇನ್ನು ಬಬಿಯನ ಅಂತ್ಯ ಹಾಗೂ ಅವನ ಅಂತ್ಯಕ್ಕೆ ಕಾರಣನಾದವನಿಗೆ ಪದ್ಮನಾಭಸ್ವಾಮಿ ಕೊಟ್ಟ ಶಿಕ್ಷೆಯ ಬಗ್ಗೆಯೂ ವಿವರ ಕೊಟ್ಟಿದ್ದೇನೆ. ಅನಂತಪುರ ದೇವಸ್ಥಾನದ ಸರೋವರದಲ್ಲಿ ಎರಡನೇ ಬಬಿಯನ ಆಗಮನವಾದ ಬಗೆಯನ್ನೂ ತಿಳಿಸಿದ್ದೇನೆ.


ಇಂದಿನ ಬರಹ ಎರಡನೇ ಬಬಿಯನ ಹಾಗೂ ಈ ಲೇಖಕನ ಒಡನಾಟಕ್ಕಾಗಿ ತಯಾರಾದ ಪಂಚಾಂಗದ ಬಗ್ಗೆ ಅದನ್ನು ತಿಳಿಯಲು ಓದನ್ನು ಮುಂದುವರಿಸಿ


ಅನಂತಪುರದ ಸರೋವರ ಒಂದನೇ ಬಬಿಯನ ರಕ್ತದಿಂದ ಕೆಂಪಾಗುವುದರೊಂದಿಗೆ ಅನಂತಪುರ ಕ್ಷೇತ್ರಕ್ಕೇ ರಾಹು ಬಡಿದಂತಾಗಿತ್ತು. ನಿತ್ಯಪೂಜೆಗಳಾದರೂ ನಡೆಯುತ್ತಿತ್ತೇ ಇಲ್ಲವೇ ಒಂದೂ‌ ಹೊರ ಲೋಕಕ್ಕೆ ಗೊತ್ತಾಗುತ್ತಿರಲಿಲ್ಲ. ಹೊರಲೋಕಕ್ಕೆ ತಿಳಿಯುವ ಆಸಕ್ತಿಯೂ ಹೊರಟು ಹೋಗಿತ್ತು ಅನ್ನಿಸುತ್ತದೆ. ನಿತ್ಯ ಪೂಜೆ ನಡೆದರೂ ಭಕ್ತರ ಆಗಮನ ಮಾತ್ರ ಕಡಮೆಯಾಗುತ್ತಾ ಬಂದು ಅರ್ಚಕರು ಮಾತ್ರ ಎಂಬ ಸ್ಥಿತಿಗೆ ತಲಪಿತ್ತು. 


ಸಾವಿರದ ಒಂಬೈನ್ನೂರ ಅರುವತ್ತೆರಡರಲ್ಲಿ ಮಧೂರು ದೇವಸ್ಥಾನದಲ್ಲಿ ಜೀರ್ಣೋದ್ಧಾರ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆ ನಡೆಯುವುದರೊಂದಿಗೆ ಕುಂಬಳೆ ಸೀಮೆಯಲ್ಲಿ ಹೊಸ ಶಕೆಯೊಂದು ಸುರುವಾಗಿತ್ತು. (ಈ ಮೂಡಪ್ಪ ಸೇವೆ ಕುಂಬಳೆ ಸೀಮೆಯಲ್ಲಿ ಬಂದ ಮಿಲಿಟರೀ ಬ್ಲೋಕ್ ಶಾಶ್ವತವಾಗಿ ತೊಲಗಿದರೆ ಮೂಡಪ್ಪ ಸೇವೆ ಮಾಡಿಸುತ್ತೇವೆಂದು ಜನರು ಪ್ರಾರ್ಥಿಸಿದ ಫಲವಾಗಿಯೇ ಬ್ಲೋಕ್ಡ್ ಏರಿಯಗಳು ಶಾಶ್ವತವಾಗಿ ತೊಲಗಿದವೆಂಬ ನಂಬಿಕೆಯಿಂದ ನಡೆಸಿದ ಸೇವೆಯಾಗಿತ್ತು.) ಸೇವಾ ಸಮಿತಿಗಳು ಎಂಬ ಹೊಸದೊಂದು ರೂಪದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶಗಳ ವ್ಯವಸ್ಥೆಗಳು ನಡೆಯತೊಡಗಿತ್ತು. ಹಲವೂ ಕಡೆ ಹಲವೂ ಮಹನೀಯರು ಈ ವ್ಯವಸ್ಥೆಗಾಗಿ ತುಂಬಾ ದುಡಿದಿದ್ದರು ಕೂಡಾ. ಇವರಲ್ಲಿ ಬದಿಯಡ್ಕದ ಆಗಿನ ಪ್ರಸಿದ್ಧ ಡಾಕ್ಟರ್ ಆಗಿದ್ದ ಡಾ| ಪಿ.ಯಸ್. ಶಾಸ್ತ್ರಿಗಳೂ ಒಬ್ಬ ಪ್ರಮುಖರು.


ಯಾವುದೋ ಕಾರ್ಯನಿಮಿತ್ತ ಅನಂತಪುರಕ್ಕೆ ಬಂದ ಶಾಸ್ತ್ರಿಗಳಿಗೆ ಬಿಲ್ವಮಂಗಲ ಸ್ವಾಮಿಗಳಿಂದ ಪ್ರತಿಷ್ಟೆಗೊಂಡು ಬಬಿಯನೆಂಬ ಮೊಸಳೆಯ ಮುಖಾಂತರ ಭಕ್ತ ಜನರಿಗೆ ಹೊಸಲೋಕವನ್ನೇ ತೆರೆದಿರಿಸಿದ ನಯನ ಮನೋಹರವಾದ ಈ ಕ್ಷೇತ್ರ ದಿಕ್ಕಿಲ್ಲದಂತೆ ಪಾಳು ಬಿದ್ಧುದನ್ನು ಕಂಡು ಅವರ ಮನ ಸಂಕಟಕ್ಕೊಳಗಾಗುತ್ತದೆ. ಅಂದೇ ಈ ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಪ್ರಯತ್ನ ಪಡುತ್ತೇನೆಂದು ನಿಶ್ಚಯಿಸುತ್ತಾರೆ. ಊರ ಪರ ಊರ ಮಹನೀಯರುಗಳನ್ನು ಸೇರಿಸಿ ಸಭೆ ನಡೆಸುತ್ತಾರೆ. ಅನಂತಪದ್ಮನಾಭ ಸ್ವಾಮಿಯ ಕ್ಷೇತ್ರದ ಜೀರ್ಣೋದ್ಧಾರ ಆಗಲೇ ಬೇಕು ಎಂದು ಪ್ರತಿಪಾದಿಸುತ್ತಾರೆ. ಆಗೆಲ್ಲಾ ಊರಲ್ಲಿ ನಿತ್ಯದ ಜೀವನವೇ ಕಷ್ಟ ಎಂಬ ಪರಿಸ್ಥಿತಿ ಇಂತಹಾ ಪರಿಸ್ಥಿತಿಯಲ್ಲಿ ಜೀರ್ಣೋದ್ಧಾರಕ್ಕೆ ಬೇಕಾದ ಬೃಹತ್ ಮೊತ್ತವನ್ನು ಹೊಂದಿಸುವುದು ಹೇಗೆಂಬ ಚಿಂತೆ ಸಭೆ ಸೇರಿದ ಜನರಿಗೆ. ಆದರೆ ಶಾಸ್ತ್ರಿಗಳು ಒಮ್ಮೆ ತಲೆಗೆ ಒಂದು ವಿಷಯ ಹೊಕ್ಕರೆ ಬಡ ಪೆಟ್ಟಿಗೆ ಬಿಡುವವರಲ್ಲ. ಊರು ಪರ ಊರುಗಳಲ್ಲಿ ದೇವಸ್ಥಾನದ ಬಗ್ಗೆ ಅದರ ವಿಶೇಷತೆಯ ಬಗ್ಗೆ ಪ್ರಚಾರ ಮಾಡೋಣ. ಪ್ರಚಾರ ತಾರಕದಲ್ಲಿ‌ ಇರುವಾಗ ಹಣ ಸಂಗ್ರಹಕ್ಕೆ ಹೊರಡೋಣ ಎನ್ನುತ್ತಾರೆ. ಸಭೆ ಅಸ್ತು ಎನ್ನುತ್ತದೆ. 


ಸಭೆಯಿಂದ ಪ್ರಚಾರಕ್ಕಾಗಿಯೇ ಒಂದು ಸಮಿತಿಯನ್ನು ರಚಿಸುತ್ತಾರೆ. (ಇಲ್ಲಿ ಜೀರ್ಣೋದ್ಧಾರ ಸಮಿತಿಯಾಗಲಿ ಅದರಲ್ಲಿ ದುಡಿದ ಹಿಂದಿನ ಹಿರಿ ತಲೆಗಳ ಬಗ್ಗೆ ಆಗಲಿ ಬರೆಯೋದಿಲ್ಲ. ಕೇವಲಾ ಬಬಿಯನಿಗೂ ನನಗೂ ಭೇಟಿ ಕಲ್ಪಿಸಿದ ಘಟನೆಗಳಿಗೆ ಪೂರಕವಾದ ಅಂಶಗಳನ್ನಷ್ಟೇ ಬರೆಯುತ್ತೇನೆ. ಯಾರೂ ತಪ್ಪು ತಿಳಿಯ ಬಾರದಾಗಿ ಅಪೇಕ್ಷೆ.) ಪ್ರಚಾರ ಸಮಿತಿ ದೈನಿಕಗಳಲ್ಲಿ ವಾರ ಪತ್ರಿಕೆಗಳಲ್ಲಿ ಲೇಖನಗಳ ಮೂಲಕ ಅನಂತಪುರ ಕ್ಷೇತ್ರದ ಕತೆಯನ್ನು ಪಸರಿಸುತ್ತದೆ.

ಪ್ರಚಾರ ಸಮಿತಿಯ ಅಂಗವಾಗಿದ್ದ ಶ್ರೀ ಐ.ಆರ್.ಕೆ. ಭಟ್ಟರು (ಇವರು ಶಾಸ್ತ್ರಿ ಡಾಕ್ಟರ್ ಮಗಳ ಗಂಡ ಹಾಗೂ ಕಾಸರಗೋಡಿನ ಪ್ರಸಿದ್ಧ ವಕೀಲರಾದ ಐ.ವಿ.ಭಟ್ಟರ ತಮ್ಮ ಕೂಡಾ) ದೇಶದ ಎಲ್ಲಾ ಇಂಗ್ಲೀಷ್ ದೈನಿಕಗಳು ಹಾಗೂ ಪ್ರಮುಖ ಮಾಸಿಕಗಳಲ್ಲಿ ರೀಡರ್ಸ್ ಡೈಜೆಸ್ಟ್ ನಂತಹಾ ಆ ಕಾಲದ ಪ್ರಮುಖ ಪತ್ರಿಕೆಗಳಲ್ಲೂ ದೇವಸ್ಥಾನದ ಚರಿತ್ರೆಯನ್ನು ಬರೆದು ಪ್ರಸಿದ್ಧಿ ಗೊಳಿಸುತ್ತಾರೆ. ಪ್ರಥಮ ಬಾರಿ ಲೇಕ್ ಟೆಂಪ್ಲ್ ಎಂಬ ಶಬ್ಧವನ್ನು ಉಪಯೋಗಿಸಿ ಹೊರಲೋಕಕ್ಕೆ ಅನಂತಪುರದ ಬಗ್ಗೆ ಹೊಸ ಚಿತ್ರವನ್ನೇ ಕೊಡುತ್ತಾರೆ. ಒಮ್ಮೆಲೇ ಅನಂತಪುರ ಎಂಬ ಹೆಸರು ಎಲ್ಲಾ ಕಡೆ ಮೊಳಗತೊಡಗುತ್ತದೆ. ಇದೇ ಸಂದರ್ಭವನ್ನು ಉಪಯೋಗಿಸಿ ಬೆಂಗಳೂರು, ಚೆನ್ನೈ, ಬೊಂಬಾಯಿಗಳಂತಹಾ ದೊಡ್ಡ ಪಟ್ಟಣಗಳಲ್ಲಿ ಅರ್ಹ ಮುಖಂಡರ ಮುಖಾಂತರ ಜೀರ್ಣೋದ್ಧಾರ ಸಮಿತಿಗಳನ್ನು ರಚಿಸಿ ಹಣ ಸಂಗ್ರಹಕ್ಕೆ ಹೊರಡುತ್ತಾರೆ. ಎಷ್ಟೆಷ್ಟೋ ಊರ ಪರ ಊರ ಮಹನೀಯರ ಸಹಾಯ ಸಹಕಾರಗಳೊಂದಿಗೆ ಅನಂತಪುರದ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಸುರುವಾಗುತ್ತದೆ.


1975 ರಲ್ಲಿ ಕೇಂದ್ರ ಸರ್ಕಾರ ರೂರಲ್ ಎಲೆಕ್ಟ್ರಿಫಿಕೇಶನ್ ಎಂಬ ಹೆಸರಲ್ಲಿ ಕೋರ್ಪರೇಷನ್ ಒಂದನ್ನು ಸುರು ಮಾಡಿ ಹಳ್ಳಿ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕೊಡುವ ವ್ಯವಸ್ಥೆ ಸುರುಮಾಡುತ್ತದೆ. ಈ ಪದ್ದತಿಯ ಪ್ರಕಾರ ಎಡನಾಡು ಕೊಯಪ್ಪಾಡಿ ಗ್ರಾಮಗಳನ್ನು ವಿದ್ಯುತ್ ಸಂಪರ್ಕ ಕೊಡಲು ಮೊದಲಾಗಿ ಆಯ್ಕೆ ಮಾಡುತ್ತಾರೆ. 


ಆಗ ತಾನೇ ಕಾರ್ಯಕ್ಷೇತ್ರಕ್ಕೆ ಇಳಿದಿದ್ದ ಈ ಬರಹಗಾರನಿಗೆ ಇದು ಸ್ವರ್ಣಾವಕಾಶವನ್ನೇ ಇತ್ತಿತ್ತು. ಇನ್ನೂ ಕೆಲಸದ ಸಂಪೂರ್ಣ ಅನುಭವ ಆಗುವುದಕ್ಕೆ ಮೊದಲೇ ಕೆಲಸಗಳ ಪ್ರವಾಹವೇ ಬಂದಿತ್ತು. ತಿರುವನಂತಪುರದ ಅನಂತಪದ್ಮನಾಭಸ್ವಾಮಿ ಅನಂತಪುರ ಕ್ಷೇತ್ರದ ಪರಿಧಿಯೊಳಗಿದ್ದ ಇನ್ನೂ ಎಳಸು ಮಾಸದ ಒಬ್ಬ ಯುವಕನನ್ನು ತನ್ನ ಕ್ಷೇತ್ರಕ್ಕೇ ಬರಿಸಿ ಅವನಿಗೆ ಕೆಲಸ ಮಾಡಲು ಬೇಕಾದ ಪರವಾನಿಗೆಯನ್ನು ಒದಗಿಸಿ ಕೊಟ್ಟಿದ್ದ. ಎಡನಾಡು ಕೊಯಪ್ಪಾಡಿ ಗ್ರಾಮಗಳ ಕೆಲಸ ಮುಗಿಯುತ್ತಿದ್ದಂತೆ ಆಗಿನ ಕಾಸರಗೋಡು ತಾಲೂಕಿನ  ಹಲವೂ ಗ್ರಾಮಗಳ ಮನೆಗಳಿಗೆ  ವಿದ್ಯುತ್ ಪೂರೈಕೆಗೆ ಬೇಕಾದ ಕೆಲಸಗಳು ಈ ಲೇಖಕನ ಮೂಲಕ ನಡೆಯ ತೊಡಗಿತ್ತು.


1975- 76 ಇರ ಬಹುದೆಂದು ನನ್ನ ನೆನಪು. ಅನಂತಪುರ ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳು ಭರದಿಂದ ನಡೆಯುತ್ತಿತ್ತು. ಡಾಕ್ಟರ್ ಪಿ.ಯಸ್. ಶಾಸ್ತ್ರಿಗಳು ನನ್ನನ್ನು ಬರ ಹೇಳಿ ಯಾವರೀತಿಯಿಂದಲಾದರೂ  ಅನಂತಪುರದ ಶ್ರೀ ಕ್ಷೇತ್ರಕ್ಕೆ ವಿದ್ಯುತ್ ಬರುವಂತೆ ಮಾಡ ಬೇಕಾಗಿ ತಿಳಿಸುತ್ತಾರೆ. 


ಅನಂತಪದ್ಮನಾಭ ಏನು ಇಚ್ಚಿಸಿದ್ದನೋ ತಿಳಿಯದು. ಆಗ ಇದ್ದ ಕಾನೂನುಗಳು ಪರಿಸ್ಥಿತಿ ಎಲ್ಲಾ ಲಾಟನುಕಂಬದ ಬಳಿ ಇದ್ದ ವಿದ್ಯುತ್ ಲೈನನ್ನು ಅಷ್ಟು ದೂರದ ಅನಂತಪುರಕ್ಕೆ ಸಾಗಿಸುವುದಕ್ಕೆ ವಿರುದ್ಧವಾಗಿಯೇ ಇದ್ಧುವು. ಅನುಭವದ ಕೊರತೆಯೋ ಪದ್ಮನಾಭ ಸ್ವಾಮಿಯ ಪ್ರೇರಣೆಯೋ ನಾನರಿಯೆ. ನಾನಂತೂ ಕ್ಷಣವೂ ಯೋಚಿಸದೆ ಕೆಲಸ ಮುಗಿಸಿ ಕೊಡುತ್ತೇನೆಂದು ಶಾಸ್ತ್ರಿ ಡಾಕ್ಟರ್ ರೊಡನೆ ಒಪ್ಪಿದ್ದೆ. 

ಇದರೊಂದಿಗೆ ಪದ್ಮನಾಭ ಈ ಲೇಖಕನಿಗೆ ಬಬಿಯನೊಂದಿಗಿನ ಒಡನಾಟಕ್ಕೊಂದು ಅವಕಾಶವೂ ಮಾಡಿ ಕೊಟ್ಟಿದ್ದ.

ಮುಂದಿನ ಕಂತಿನ ವಿಷಯ ಇದುವೇ "ಲೇಖಕ ಹಾಗೂ ಬಬಿಯನ ಒಡನಾಟ"

ಅನುಭವವನ್ನು ವಾಸ್ತವಕ್ಕೆ ದೂರವಾಗದಂತೆ ತಿಳಿಸಲು ಪ್ರಯತ್ನಿಸುತ್ತಿರುವವ ನಿಮ್ಮವನೇ ಆದ

-ಎಡನಾಡು ಕೃಷ್ಣ ಮೋಹನ ಭಟ್ಟ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top