ಕಡಲ ತಡಿಯ ವಿಶಾಲ ಸಮುದ್ರ. ಸೂರ್ಯಾಸ್ತದ ಸಮಯ. ಶರದೃತುವಿನ ಸೂರ್ಯಾಸ್ತ ಬಲು ಚೆಂದ. ಸೂರ್ಯಾಸ್ತದ ಸಮಯ ಭೂ ವಾತಾವರಣ ಸೂರ್ಯನ ಎಲ್ಲಾ ಬಣ್ಣಗಳನ್ನೂ ಚದುರಿಸಿ ಬರೇ ಕೆಂಬಣ್ಣದ ರಂಗಿನಿಂದ ದಿನಕರ ನಿತ್ಯ ಕೆಲಸ ಮುಗಿಸಿ ನಾಳೆ ಮತ್ತೆ ಬರುವೆನೆಂದು ಸಾರುವ ಪರ್ವ ಕಾಲ. ದಿನವಿಡೀ ನನ್ನನ್ನ ನೋಡಿದರೆ ಸುಟ್ಟು ಬೂದಿಮಾಡುವೆನೆನ್ನುವ ಸೂರ್ಯ, ಸಂಧ್ಯಾ ಕಾಲದಲ್ಲಿಎಲ್ಲರಿಗೂ ಖುಷಿ ಕೊಡುವವ. ಹಾಗಾಗಿಯೇ ಆ ಕಾಲವೇ ಧ್ಯಾನದ ಕಾಲ.
ಈ ಸಮಯದಲ್ಲೊಂದು ವಿಶೇಷ, ಪಾರ್ಶ್ವಗ್ರಹಣ. ಏ ಸೂರ್ಯ, ನಾನೂ ನಿನ್ನ ನೇರ ಬರಬಲ್ಲೆ, ಕೆಲ ಕಾಲ ನಿನ್ನ ಬೆಳಕನ್ನ ತಡೆಯಬಲ್ಲೆ, ನೋಡು, ಎನ್ನುತ್ತಾ ಚಂದ್ರ ನೇರ ಬಂದು, ಮುಖ ಮಾತ್ರ ಮುಚ್ಚಿಕೊಂಡಂತೆ ಸೂರ್ಯ. ಆತನ ಕೆಂಬಣ್ಣದಲ್ಲೊಂದು ಸೊಗಸು, ಸೊಬಗು ಈ ಗ್ರಹಣ. ಹಾಗಾಗಿಯೇ ಈ ಗ್ರಹಣ ಬಲು ಅಪರೂಪ.
ಪ್ರತೀ ಆರು ತಿಂಗಳಿಗೊಮ್ಮೆ ಆಕಾಶದಲ್ಲಿ ನಡೆಯುವ ಬೆಳಕಿನ ಪ್ರಯೋಗ ಗ್ರಹಣ. ಸೂರ್ಯ ಸುತ್ತ ಭೂಮಿ, ಭೂಮಿಯ ಸುತ್ತಚಂದ್ರ ದೀರ್ಘ ವೃತ್ತಾಕಾರವಾಗಿ ಸುತ್ತುತ್ತಿರುತ್ತವೆ. ಇವುಗಳ ಸಮತಲಗಳು ಸಂಧಿಸುವ ಎರಡು ಬಿಂದುಗಳಲ್ಲಿ ಸೂರ್ಯ ಭೂಮಿ ಹಾಗೂ ಚಂದ್ರ ನೇರ ಬರುವ ಸಾಧ್ಯತೆ ಇರುತ್ತದೆ . ಆಗ ಸೂರ್ಯ ಚಂದ್ರರ ನಡುವೆ ಭೂಮಿ ಬಂದರೆ ಸೂರ್ಯನ ಬೆಳಕು ಚಂದ್ರ ಮೇಲೆ ಬೀಳದಂತೆ ಭೂಮಿ ತಡೆಯುತ್ತದೆ. ಚಂದ್ರನ ಮೇಲೆ ಭೂಮಿಯ ನೆರಳು ಬೀಳುವುದೇ ಚಂದ್ರಗ್ರಹಣ. ಅದೇ ಸೂರ್ಯ ಭೂಮಿಗಳ ನಡುವೆ ಚಂದ್ರ ಬಂದರೆ ಸೂರ್ಯನ ಬೆಳಕನ್ನು ಚಂದ್ರ ತಡೆಯುತ್ತದೆ. ಅದೇ ಸೂರ್ಯಗ್ರಹಣ.
ಕ್ರಿ ಶ 500 ರಲ್ಲೇ ಭಾರತದ ಪ್ರಖ್ಯಾತ ಖಗೋಳ ಶಾಸ್ರಜ್ಞ ಆರ್ಯಭಟ, ಈ ಗ್ರಹಣ ನೆರ ಬೆಳಕಿನ ಆಟವೆಂದು ಸ್ಪಷ್ಟ ವಿವರಣೆ ಕೊಟ್ಟಿದ್ದಾನೆ.
ನಮ್ಮ ವಲ್ಪೆ ಸಮುದ್ರ ಕಿನಾರೆಯಲ್ಲಿಇಂದು ( ಅಕ್ಟೋಬರ್ 25 ) ಗ್ರಹಣ ವೀಕ್ಷಣೆ . ನೂರಾರು ಗ್ರಹಣ ವೀಕ್ಷಣಾ ಕನ್ನಡಕಗಳೊಂದಿಗೆ ಹಲವು ಬಗೆಯ ದೃಶ್ಯ ಮಾಧ್ಯಮಗಳ ಮೂಲಕ ಪೂರ್ಣ ಪ್ರಜ್ಞ ಕಾಲೇಜಿನ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಅಣಿಯಾಗಿದೆ. ಬರೀ ಕಣ್ಣಿನಿಂದ ನೇರ ಸೂರ್ಯಗ್ರಹಣ ನೋಡಬರದು. ಆದರೂ ಸಾರ್ವಜನಿಕರು ಖುಷಿಪಡಬೇಕೆನ್ನುವ ಆಸೆಯಿಂದ ಪೂರ್ಣಪ್ರಜ್ಞದ ವಿದ್ಯಾರ್ಥಿಗಳು ಸಕಲ ಸಿಧ್ದತೆ ಮಾಡಿಕೊಂಡಿದ್ದಾರೆ. ಖಗೋಳಾಸಕ್ತರು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ ಈ ಅವಕಾಶ.
ಅನಂತ ಆಕಾಶದಲ್ಲಿ ನಡೆಯುವ ಖಗೋಲ ವಿಸ್ಮಯಗಳಲ್ಲಿ ಸೂರ್ಯಗ್ರಹಣವೂ ಒಂದು. ನಮ್ಮಿಂದ ಸುಮಾರು 15 ಕೋಟಿ ಕಿಮೀ ದೂರದಲ್ಲಿರುವ ಸೂರ್ಯ, ಬರೇ 3 ಕೋಟಿ 84 ಲಕ್ಷ ಕಿಮೀ ಯಲ್ಲಿರುವ ಚಂದ್ರ ನಮಗೆ ನೇರ ಬಂದು ಆಡುವ ಆಟವಿದು. ನೋಡಿ ಆನಂದಿಸಬೇಕಷ್ಟೆ.
ಆಶ್ಚರ್ಯವೆಂದರೆ ಇಂದು ಸೂರ್ಯಾಸ್ತವಾಗುವಾಗ ಸುಮಾರು 20 ಅಂಶ ಪಾರ್ಶ್ವಗ್ರಹಣದ ಸೂರ್ಯ ಮುಳುಗುವುದು. ಅದೇ ಬರುವ 8ರಂದು ಹುಣ್ಣಿಮೆ ದಿನ ಚಂದ್ರ ಅಷ್ಟೇ ಅಂಶ ಚಂದ್ರ ಗ್ರಹಣದೊಂದಿಗೆ ಉದಯಿಸುವುದು.ಇದೆಂತಹ ಕಾಕತಾಳೀಯ... ಪ್ರಕೃತಿಯ ಆಟಗಳಲ್ಲಿ ನಾವು ಬರೇ ವೀಕ್ಷಕರಷ್ಟೆ.
- ಅತುಲ್ ಭಟ್
ಪೂರ್ಣಪ್ರಜ್ಞ ಕಾಲೇಜು ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ