
ಈಗಾಗಲೇ ನನ್ನ ತಂದೆಯವರಿಗೆ ಮಾಯಿಪ್ಪಾಡಿ ಅರಮನೆಯ ಕಾರ್ಯದರ್ಶಿ ಎಂಬ ನೆಲೆಯಲ್ಲಿ ಮಿಲಿಟರಿ ಕೇಂಪಿನೊಳಗೆ ಸಂಚರಿಸಲು ಅನುಮತಿ ಕೊಡುವ ಹಕ್ಕು ಬಂದುದು ಹಾಗೂ ಅನಂತಪುರದ ಪದ್ಮನಾಭನ ಬಗ್ಗೆ ಚಿಕ್ಕ ಚರಿತ್ರೆ ಹಾಗೆಯೇ ಒಂದನೆ ಬಬಿಯನ ಬಗ್ಗೆ ವಿವರ ಕೊಟ್ಟಿರುತ್ತೇನೆ. ಒಂದನೇ ಭಾಗದಲ್ಲಿ ಬ್ಲೋಕ್ಡ್ ಏರಿಯಾದ ಕೇಂಪ್ ಆಫೀಸರ್ ಬಬಿಯನ ಬಗ್ಗೆ ವಿವರ ತಿಳಿಯಲು ಉತ್ಸಾಹ ತಾಳಿದುದನ್ನೂ ತಿಳಿಸಿರುತ್ತೇನೆ. ಇನ್ನು ಮುಂದೆ ಹೋಗೋಣ.
"ಮುಳುವಾಯಿತೇ ಈ ಜನಪ್ರಿಯತೆ ಅನಂತ ಪದ್ಮನಾಭನ ಬಬಿಯನಿಗೆ" ಎಂಬುದೇ ಇಂದಿನ ವಿಷಯ.
ನಾನು ಈಗಾಗಲೇ ತಿಳಿಸಿದಂತೆ ಸಿದ್ಧಿ ಬೈಲಲ್ಲಿ ನೆಲೆಸಿದ್ದ ಮಿಲಿಟರೀ ಕ್ಯಾಂಪ್ ಆಫೀಸರಿಗೆ ಬಬಿಯನ ಬಗ್ಗೆ ತಿಳಿಯುವ ಆಶೆ ಉಂಟಾಗಿ ಅಲ್ಲಿಗೆ ಕೂಲಿ ಕೆಲಸಕ್ಕಾಗಿ ಬರುತ್ತಿದ್ದ ಕೆಲಸದವರೊಡನೆ ದ್ವಿಭಾಷಿಗಳ ಮುಖಾಂತರ ವಿವರ ಸಂಗ್ರಹಿಸುತ್ತಿದ್ದ. ಒಬ್ಬ ಬ್ರಿಟಿಷ ತಮ್ಮ ಬಳಿ ಮಾತನಾಡಿಸಿದನೆಂಬ ಉತ್ಸಾಹ ಒಂದೆಡೆಯಾದರೆ ತಮ್ಮೂರಿನ ಹೆಮ್ಮೆಯ ಬಬಿಯನ ಬಗ್ಗೆ ಹೇಳಲು ಸಿಕ್ಕಿದ ಉತ್ಸಾಹದಿಂದ ಈ ಕೂಲಿಯಾಳುಗಳು ಅತಿ ರಂಜಿತ ಕತೆಯನ್ನು ಅವನ ಮುಂದಿಡುತ್ತಿದ್ದರು. ಇದರಿಂದ ಅವನ ಉತ್ಸಾಹ ಇಮ್ಮಡಿಯಾಗಿತ್ತು.
ಒಮ್ಮೆ ಪೂಜೆಗೆ ತೆರಳುತ್ತಿದ್ದ ಅರ್ಚಕರನ್ನು ನಿಲ್ಲಿಸಿ ಅಂತಹಾ ಕ್ರೂರ ಪ್ರಾಣಿ ಇರುವ ಕೆರೆಗೆ ಇಳಿದು ಸ್ನಾನ ಮಾಡುತ್ತೀರಲ್ಲಾ ಏನಾದರೂ ಅಪಾಯವಾದರೆ ಯಾರು ಹೊಣೆ ಎಂದು ಕೇಳಿದನಂತೆ. ಅರ್ಚಕರು ಶಾಂತವಾಗಿಯೇ ನನ್ನನ್ನು ನಿನ್ನನ್ನು ಎಲ್ಲಾ ಕಾಯುವ ಅನಂತಪದ್ಮನಾಭ ಸ್ವಾಮಿಯೇ ಅಲ್ಲಿರುವಾಗ ಯಾತರ ಭಯ ಅಂದರಂತೆ. ಆಗ ಆ ದೂರ್ತ ಅವರೊಡನೆ ನಿನ್ನ ಬಬಿಯ ನಾನು ಕರೆದರೂ ಬರಬಹುದೇ? ಎಂದು ಕೇಳಿದ್ದನಂತೆ. ಆಗ ಅರ್ಚಕರು ಸಾಮಾನ್ಯವಾಗಿ ಯಾರು ಬಬಿಯಾ ಎಂದು ಕರೆದರೂ ಅವ ಪ್ರತ್ಯಕ್ಷನಾಗುತ್ತಾನೆ ಎಂದರಂತೆ. ಆಗ ಏನೂ ಹೇಳದ ಕೇಂಪ್ ಆಫೀಸರ್ ಅವರನ್ನು ಕಳಿಸುತ್ತಾನೆ. ಅವನ ಮನದಲ್ಲಿ ಸುಳಿಯುತ್ತಿದ್ದ ದುರಾಲೋಚನೆಗಳ ಸುಳಿವು ಅರ್ಚಕರಿಗಾಗಲಿ ಅಲ್ಲಿ ಕೆಲಸಕ್ಕೆ ಬರುತ್ತಿದ್ದ ಸ್ಥಳೀಯರಿಗಾಗಿ ತಿಳಿಯಲಿಲ್ಲ.
ಅದೊಂದು ದಿನ ಮಧ್ಯಾಹ್ನ ಮೇಲೆ ಈ ಕೇಂಪ್ ಆಫೀಸರ್ ಯಾವುದೇ ಕೆಲಸದ ಒತ್ತಡ ಇಲ್ಲದೆ ಇದ್ದ. ತನ್ನೊಂದಿಗೆ ತನ್ನ ಕೆಳಗಿನ ಆಫೀಸರ್ ಗಳನ್ನು ಹಾಗೂ ಒಂದೆರಡು ಕೂಲಿಯಾಳುಗಳನ್ನೂ ಬರಹೇಳಿ ಅನಂತಪುರದೆಡೆಗೆ ಸಾಗಿದ.
ಹೋದವ ಸ್ಥಳೀಯ ಕೂಲಿಯಾಳುಗಳೊಡನೆ ಬಬಿಯನನ್ನು ಕರೆಯಲು ಹೇಳಿದ. ಇವನ ವಂಚನೆ ಅರಿಯದ ಕೂಲಿಯಾಳುಗಳು ಬಬಿಯನನ್ನು ಕೂಗಿ ಕರೆದರೆ ಅವ ಪ್ರತ್ಯಕ್ಷ ಆಗಿಯೇ ಬಿಟ್ಟ. ಆದರೆ ಕ್ಷಣದಲ್ಲೇ ಪುನ: ಮುಳುಗಿ ಕಾಣದೇ ಹೋದ. ಈಗ ಸ್ಥಳೀಯರಿಗೆ ಏನೋ ಅಪಾಯದ ಸುಳಿವು ಸಿಕ್ಕಿ ಸ್ವಾಮಿ ನಿಮ್ಮ ಕೈಯ್ಯಲ್ಲಿರುವ ಕೋವಿಯನ್ನು ಕೆಳಗಿಡಿ ಅದಿದ್ದರೆ ಬಬಿಯ ಭೀತಿಯಿಂದಾಗಿ ಹೊರಬರಲಾರ ಎಂದರಂತೆ. ಅಂದು ಯಾರು ಎಷ್ಟು ಕೂಗಿ ಕರೆದರೂ ಬಬಿಯ ತನ್ನ ದರ್ಶನ ಕೊಡಲೇ ಇಲ್ಲ. ಇದು ಆ ಕೇಂಪ್ ಆಫೀಸರ್ ಗೆ ತನ್ನ ಪ್ರತಿಷ್ಟೆಗೇ ಬಿದ್ದ ಪೆಟ್ಟು ಅನ್ನಿಸ ತೊಡಗಿತು. ಅಂದು ಬರಿಗೈಯ್ಯಲ್ಲಿ ಹಿಂದಿರುಗಿದ ಆ ಆಫೀಸರ್ ತನ್ನದೇ ಆದ ಯೋಜನೆ ರೂಪಿಸ ತೊಡಗಿದ. ದಿನಾ ಸಂಜೆ ಯಾರಾದರೂ ಒಬ್ಬರನ್ನು ಕರೆದು ಕೊಂಡು ಹೋಗಿ ಬಬಿಯನನ್ನು ತಾನೇ ಕರೆಯುತ್ತಿದ್ದ. ಕೆಲವೇ ದಿನಗಳಲ್ಲಿ ಇವನ ಸ್ವರ ಸಾಮಾನ್ಯವೆನಿಸಿಯೋ ಏನೊ ಬಬಿಯ ತಲೆ ತೋರಿಸ ತೊಡಗಿದ್ದ.
ಒಂದು ದಿನ ತನ್ನೊಂದಿಗೆ ಒಂದಿಬ್ಬರನ್ನು ಕರೆದು ಕೊಂಡು ಹೋದ ಆ ಆಫೀಸರ್ ಲೋಡ್ ಮಾಡಿದ ಗನ್ ನೊಂದಿಗೇ ಸರೋವರದ ಕಡೆ ಬಂದಿದ್ದ.
ಬಬಿಯನನ್ನು ಎಂದಿನಂತೆ ಕರೆದಾಗ ಅವ ಎಂದಿನಂತೆ ಮೇಲೆ ಬಂದು ತಲೆಯನ್ನು ತೋರಿಸುತ್ತಿದ್ದಂತೆ ಉಳಿದವರು ತಡೆದರೂ ಗಣನೆಗೆ ತಾರದೆ ಲೋಡ್ ಮಾಡಿದ ರೈಫಲ್ ನಿಂದ ಬಬಿಯನ ತಲೆಗೆ ಗುಂಡಿಕ್ಕುತ್ತಾನೆ. ತೀರ್ಥವಾಗಿದ್ದ ವಿಷ್ಣುವಿನ ಆವಾಸಸ್ಥಾನವಾಗಿದ್ದ ಅನಂತಪುರದ ಸರೋವರ ಬಬಿಯನ ರಕ್ತದಿಂದ ಕೆಂಪಾಗಿ ಹೋಯಿತು. ಬಬಿಯ ಶವವಾಗುತ್ತಿದ್ದಂತೆ ಸ್ಥಳೀಯರಿಗೆ ವಿಷಯ ತಿಳಿದರೆ ಗಲಾಟೆಯಾಗ ಬಹುದೆಂಬ ಹೆದರಿಕೆ ಆ ದುಷ್ಟನನ್ನು ಕಾಡ ತೊಡಗಿತಂತೆ. ಒಂದಿಗಿದ್ದವರ ಮೂಲಕ ಕೂಲಿಯಾಳುಗಳನ್ನು ತರಿಸಿ ಶವವನ್ನು ಕೇಂಪ್ ಪ್ರದೇಶದೊಳಗೆ ಸಾಗಿಸಿದನಂತೆ. ಮುಂದೆ ಆ ಶವ ಏನಾಯಿತು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಇಷ್ಟು ಕೆಲಸ ಮಾಡಿ ಮುಗಿಸಿದ ಆಫೀಸರ್ ಕೂಲಿಯಾಳುಗಳನ್ನು ಹೆದರಿಸಿ ಈ ಸುದ್ಧಿ ಹೊರಗೆ ಹೇಳಿದರೆ ಬಬಿಯನ ಗತಿಯೇ ನಿಮಗೂ ಆಗುತ್ತೆ ಅನ್ನುತ್ತಾನೆ.
ಎಷ್ಟೇ ಭೀತರಾದರೂ ತಮ್ಮ ಊರಿನ ಹೆಮ್ಮೆಯಾಗಿದ್ದ ಬಬಿಯನನ್ನು ಹೆಣವಾಗಿ ಕಂಡ ಅವರ ಮನ ಅಸಹಾಯಕತೆ ಸಿಟ್ಟುಗಳಿಂದ ಕೊತ ಕೊತ ಕುದಿಯುತ್ತಿತ್ತು. ಅಂದು ರಾತ್ರಿ ಪೂರ್ಣ ನಿದ್ರೆ ಇಲ್ಲದೆ ಕಳೆದ ಅವರು ಮುಂಜಾನೆಯೇ ಅರಮನೆಗೆ ಬಂದು ವಿಷಯ ತಿಳಿಸುತ್ತಾರೆ. ಇದರಿಂದ ಸಿಟ್ಟುಗೊಂಡ ಅರಸರು ಕೇಂಪ್ ಆಫೀಸರರಿಗೆ ಅರಮನೆಗೆ ಬರಲು ಹೇಳಿ ಕಳುಹಿಸುತ್ತಾರೆ. ಆದರೆ ಜನರ ಕೋಪಕ್ಕೆ ಹೆದರಿದ ಅವ ಕೇಂಪ್ ನಿಂದ ಹೊರ ಬರಲು ಒಪ್ಪುವುದೇ ಇಲ್ಲ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ಅರಸರು ನನ್ನ ತಂದೆಯವರನ್ನು ಕರೆದು ಕೂಡಲೇ ಮಂಗಳೂರಿಗೆ ಹೋಗಿ ಕಲೆಕ್ಟರ್ ಗೆ ವಿಷಯ ತಿಳಿಸಲು ಹೇಳುತ್ತಾರೆ. ಮಂಗಳೂರಿಗೆ ತಲಪಿದ ತಂದೆಯವರು ಕಲೆಕ್ಟರ್ ಗೆ ವಿಷಯ ತಿಳಿಸಿ ಜನಗಳು ದಂಗೆ ಏಳುವ ಸ್ಥಿತಿ ಇದೆ ಎನ್ನುತ್ತಾರೆ. ಕಲೆಕ್ಟರ್ ನಾನು ಅವನಿಗೆ ತಕ್ಕುದಾದ ಶಿಕ್ಷೆ ಕೊಡಿಸುತ್ತೇನೆ ಜನರನ್ನು ಶಾಂತಗೊಳಿಸಿ ಎಂದು ತಂದೆಯವರನ್ನು ವಾಪಾಸ್ ಕಳುಹಿಸುತ್ತಾರೆ. ಒಂದಿಗೆ ಕೇಂಪ್ ಆಫೀಸರ್ ನ ಸ್ಥಾನಕ್ಕೆ ಬೇರೊಬ್ಬನನ್ನೂ ಕಳುಹಿಸಿ ಕೊಡುತ್ತಾರೆ.
ತಂದೆಯವರು ಊರಿಗೆ ಬಂದು ಎಲ್ಲಾ ವಿಷಯವನ್ನೂ ರಾಜರಿಗೆ ತಿಳಿಸುತ್ತಾರೆ. ಸಮಧಾನಗೊಂಡ ರಾಜರು ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ಶೋಕಾಚರಣೆಯ ನಿಮಿತ್ತ ಪೂಜೆ ನಿಲ್ಲಿಸಲು ಆದೇಶಿಸುತ್ತಾರೆ. ಹಾಗೆಯೇ ಹೊಸ ಆಫೀಸರ್ ಗೆ ಈ ಹೀನಕೃತ್ಯ ಎಸಗಿದ ವ್ಯಕ್ತಿಗೆ ತಕ್ಕುದಾದ ಶಿಕ್ಷೆ ನೀಡಿ ಅದರ ವಿವರ ತನಗೆ ತಿಳಿಸ ಬೇಕು ಎಂದೂ ಹೇಳುತ್ತಾರೆ.
ಕುಶಾಗ್ರಮತಿಗಳಾದ ಬ್ರಿಟಿಷರು ಪರಿಸ್ಥಿತಿ ಕೈ ಮೀರಿ ಹೋಗಲೂ ಎಂದೂ ಬಿಡದವರು. ತಮ್ಮವನ ಕೈ ಬಿಡದೇ ಪರಿಸ್ಥಿತಿ ತಿಳಿಗೊಳಿಸುವವರು. ಈ ರೀತಿಯ ಭಾವನೆಯಿಂದ ತಾತ್ಕಾಲ ಅವನನ್ನು ಅಮಾನತು ಮಾಡಿದ್ದೇವೆ. ಮದ್ರಾಸಿನಿಂದ ಸರ್ಕಾರಿ ಆದೇಶ ಬಂದ ಕೂಡಲೇ ಅವನಿಗೆ ಸರಿಯಾದ ಶಿಕ್ಷೆ ವಿಧಿಸುತೇವೆ ಎಂದು ಅರಸರಿಗೆ ತಿಳಿಸುತ್ತಾರೆ. ಸರ್ಕಾರವನ್ನು ಎದುರಿಸಿ ಅದರಿಂದ ಹೆಚ್ಚು ಮಾಡುವ ಸ್ಥಿತಿಯಲ್ಲಿ ಅರಮನೆಯಾಗಲಿ ಜನಗಳಾಗಲಿ ಇಲ್ಲದ ಕಾಲ ಅದು. ಇಷ್ಟಾದರೂ ಆಯಿತಲ್ಲ ಎಂದು ನಿಟ್ಟುಸಿರು ಬಿಟ್ಟು ಕೂರಲೇ ಬೇಕಾಯಿತು.
ಆದರೆ ಪದ್ಮನಾಭ ಸ್ವಾಮಿಯ ಲೆಕ್ಕಾಚಾರ ಮಾತ್ರ ಬೇರೆಯೇ ಇತ್ತು.
ಅಮಾನತುಗೊಂಡ ಈ ಆಫೀಸರ್ ಗೆ ಕೇಂಪ್ ಏರಿಯದಿಂದ ಹೊರ ಬರುವ ಧೈರ್ಯವೇ ಬರಲಿಲ್ಲ. ಇದರಿಂದಲಾಗಿ ಹೊಸದಾಗಿ ನೇಮಕಗೊಂಡ ಆಫೀಸರ್ ಅವನನ್ನು ಸ್ಟೋರ್ ರೂಮಿನಿ ಜವಾಬ್ಧಾರಿ ಕೊಟ್ಟು ಸ್ಟೋರ್ ರೂಮಲ್ಲಿ ಕೂರಿಸಿದರು. ಆ ಸ್ಟೋರ್ ರೂಮಿನಲ್ಲಿ ಹಲವೂ ತರದ ಕೆಮಿಕಲ್ ಗಳು; ಪ್ರಯೋಗಕ್ಕಾಗಿ ತಂದ ವಿಷಗಳು ಇತ್ಯಾದಿಗಳು ಇತ್ತು. ಆದ್ದರಿಂದ ಆ ಸ್ಟೋರ್ ರೂಮ್ ವಿಶೇಷ ಕಳಾಜಿ ಇರುವ ಸ್ಥಳವಾಗಿತ್ತು. ಅಲ್ಲಿಯ ಜವಾಬ್ಧಾರಿ ಇರುವ ವ್ಯಕ್ತಿ ಇನ್ನೊಬ್ಬನಿಗೆ ಜವಾಬ್ಧಾರಿ ಕೊಟ್ಟರೂ ಅವನಿಗೆ ಆ ವೃತಿಯಿಂದ ಮುಕ್ತಿ ಸಿಗುವಲ್ಲಿಯ ವರೆಗೂ ಕೇಂಪ್ ಸ್ಥಳದಿಂದ ಹೊರ ಹೋಗುವಂತಿರಲಿಲ್ಲ.
ತುಂಬಾ ದಿನದಿಂದ (ಹೆಚ್ಚು ಕಡಮೆ ಬಬಿಯನ ಸಾವಿನ ಹತ್ತು ದಿನಗಳೊಳಗೆ) ಆ ಸ್ಟೋರ್ ರೂಮಿನೊಳಗೆ ಜೈಲಲ್ಲಿ ಇರುತ್ತಿದ್ದಂತೆ ಇರುತ್ತಿದ್ದ ಆ ಉತ್ಸಾಹಿ ವ್ಯಕ್ತಿಗೆ ಸುಮ್ಮನೆ ಇರುವುದು ಕಷ್ಟ ಎನಿಸ ತೊಡಗಿತು. ಅವನ ಕೆಡುಗಾಲದ ದಿನ ಸುಮ್ಮನೆ ಇರಲಾರದೆ ಹಲವೂ ಕೆಮಿಕಲ್ ಗಳನ್ನು ತೆಗೆದು ನೋಡುತ್ತಾ ಅದರ ಉಪಯೋಗಗಳೇನು ತಿಳಿಯಲು ಪ್ರಯತ್ನಿಸುತ್ತಿದ್ದ. ಅದೇನಾಯಿತೋ ಗೊತ್ತಿಲ್ಲ ಒಂದು ಕೆಮಿಕಲ್ ಬಾಟಲಿ ಒಡೆದು ಅವನ ಮೈ ಮುಖಗಳ ಮೇಲೆಲ್ಲಾ ಬಿತ್ತು. ಮುಖವಿಡೀ ಸುಟ್ಟೇ ಹೋಗಿತ್ತು. ಕೇಂಪಿನೊಳಗಿದ್ದ ಡಾಕ್ಟರ್ ಪ್ರಥಮ ಚಿಕಿತ್ಸೆಗಳನ್ನು ಒದಗಿಸಿ ಕೂಡಲೇ ಅವನನ್ನು ಮಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ಅರೆಜೀವವಾಗಿ ಮಂಗಳೂರಿಗೆ ತಲಪಿದ ಆ ಪಾಪಿ ತಿಂಗಳುಗಳ ಕಾಲ ನರಳಿ ನರಳಿ ನರಕವನ್ನು ಸೇರಿದ. ಅವನ ಹೆಂಡತಿ ಮಕ್ಕಳಿಗೆ ಅವನ ಹೆಣದ ದರ್ಶನ ಕೂಡಾ ಆಗದೆ ಅನಾಥ ಶವವಾಗಿ ಮಂಗಳೂರಿನ ಯಾವುದೋ ಸ್ಮಶಾನದಲ್ಲಿ ಹೂಳಲ್ಪಟ್ಟ.
ಇಲ್ಲಿ ಒಂದೆರಡು ವಿಷಯ ಹೇಳ ಬೇಕನ್ನಿಸುತ್ತಿದೆ. ಬಬಿಯನನ್ನು ಕೊಂದ ಆಫೀಸರ್ ಗೆ ಪದ್ಮನಾಭ ಕೊಟ್ಟ ನೈಜ್ ಶಿಕ್ಷೆ ಇದು. ಆದರೆ ಊರಲ್ಲಿ ಹಲವೂ ಕತೆಗಳು ಹರಿದಾಡುತ್ತಿದೆ. ಅವ ಗುಂಡಿಕ್ಕಿದ ಕೂಡಲೇ ಹತ್ತಿರದ ಮರದಿಂದ ವಿಷ ಜಂತುವೊಂದು ಬಂದು ಕಚ್ಚಿ ಅವ ಸ್ಥಳದಲ್ಲೇ ಮಡಿದ ಎಂಬ ಸುದ್ಧಿ ಹೆಚ್ಚು ಪ್ರಚಲಿತ ಸುದ್ಧಿ. ಇನ್ನು ಕೆಲವು ಕಡೆ ಒಂದಿಗಿದ್ದ ಕೆಲಸದವರು ಸಿಟ್ಟಿನಲ್ಲಿ ಅವನನ್ನು ಅಲ್ಲೇ ಹೊಡೆದು ಕೊಂದರು ಎಂಬ ಸುದ್ಧಿ ತಿರುಗಾಡುತ್ತಿದೆ. ಇದೂ ಅಲ್ಲದೆ ಅವನ ಕೆಳಗಿನ ಆಫೀಸರ್ ಇದೇ ಸಂದರ್ಭ ಉಪಯೋಗಿಸಿ ಭಡ್ತಿಗಾಗಿ ಅವನನ್ನು ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿ ಸಾಯಿಸಿದ ಎಂಬ ಸುದ್ಧಿಯೂ ಇತ್ತು. ವಾಸ್ತವಗಳು ಎಷ್ಟೋ ಸಲ ಹೇಗೆಲ್ಲವೋ ತಿರುಚಿ ಹೋಗುತ್ತದೆಯಲ್ಲವೇ?
ಇತ್ತ ಪದ್ಮನಾಭಸ್ವಾಮಿ ಕ್ಷೇತ್ರದಲ್ಲಿ ಮುಂದಿನ ಶುದ್ಧಿ ಕಾರ್ಯ ನಡೆಯುವಲ್ಲಿಯ ವರೆಗೆ ಆ ಸರೋವರದ ನೀರನ್ನು ದೇವಸ್ಥಾನದ ಯಾವುದೇ ಕಾರ್ಯಗಳಿಗೆ ಉಪಯೋಗಿಸ ಬಾರದು ಮಾತ್ರವಲ್ಲ ಅರ್ಚಕರು ಕೂಡಾ ಅಲ್ಲಿ ಸ್ನಾನ ಮಾಡ ಬಾರದೆಂದು ತಂತ್ರಿಗಳು ಆದೇಶಿಸುತ್ತಾರೆ. ಇದರಿಂದಲಾಗಿ ಬ್ಲೋಕ್ ತೆರೆಯಲ್ಪಟ್ಟು ಸರೋವರದ ಶುದ್ಧಿ ಕಾರ್ಯಗಳು ನಡೆಯುವಲ್ಲಿಯ ವರೆಗೂ ಆ ಸರೋವರದ ನೀರು ದೇವಸ್ಥಾನದಲ್ಲಿ ಉಪಯೋಗಿಸಲ್ಪಡಲಿಲ್ಲವಂತೆ. ಹಾಗೆಯೇ ಆ ಸಮಯದಲ್ಲಿ ಸಾಕಷ್ಟು ಪೂಜಾ ಕಾರ್ಯದಲ್ಲಿ ನ್ಯೂನ್ಯತೆಗಳು ಬಂದುವಂತೆ.
ಓ ಪದ್ಮನಾಭ ಸ್ವಾಮೀ ನಿನ್ನ ಮಹಿಮೆ ಅಪಾರ. ಬಂದೆಯಾ ಬಬಿಯಾ ಪುನ: ಅವತಾರ ತಾಳಿ?
"ಇದೇ ಮುಂದಿನ ಸಂಚಿಕೆಯ ವಿಷಯ."
ತನ್ನರಿವಿನೊಳಗೆ ಬಂದುದನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿರುವವ
- ಎಡನಾಡು ಕೃಷ್ಣ ಮೋಹನ ಭಟ್ಟ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ