ನಮ್ಮ ಶಾಸ್ತ್ರೀಯ ನೃತ್ಯ ಕ್ಷೇತ್ರ ಬಹಳ ಸದೃಢವಾಗಿ ಬೆಳೆಯುತ್ತಿದೆ. ನಿರಂತರ ಪ್ರತಿಭಾವಂತರ ಪ್ರದರ್ಶನಗಳೂ ನಡೆಯುತ್ತಿರುತ್ತವೆ. ರಂಗಪ್ರವೇಶಗಳಂತೂ ಸಲಿಲ ಧಾರೆಯ ಹಾಗೆ ಹರಿದು ಬರುತ್ತಲೇ ಇರುತ್ತವೆ. ಅವುಗಳಲ್ಲಿ ಗುಣಾತ್ಮಕ ಮತ್ತು ಋಣಾತ್ಮಕ ಎಂಬ ಭೇದವನ್ನು ಮಾಡದೆ ಉತ್ಸಾಹಿಗಳನ್ನು ಪ್ರೋತ್ಸಾಹಿಸುವ ಸಹೃದಯಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಹಿನ್ನೆಲೆಯಲ್ಲಿ ಅಕ್ಟೋಬರ್ 14 ರಂದು ಎಡಿಎ ರಂಗಮಂದಿರದಲ್ಲಿ ನಡೆದ ರಂಗಪ್ರವೇಶ ನೋಡುಗರಲ್ಲಿ ಹೆಮ್ಮೆ, ಬೆರಗು, ಸಂತೋಷ ಎಲ್ಲವನ್ನೂ ಮೂಡಿಸಿದ್ದಂತೂ ಸುಳ್ಳಲ್ಲ.
ಕಲಾವಿದೆ 10 ರ ವಯೋಮಾನದ ಬಾಲೆ ಕುಮಾರಿ ಶ್ರೀಚರಿತ. ನಮ್ಮ ನಡುವಿನ ಹೆಮ್ಮೆಯ ನೃತ್ಯ ದಂಪತಿ ಚೇತನ್ ಗಂಗಟ್ಕರ್ - ಚಂದ್ರಪ್ರಭಾರ ಮುದ್ದಿನ ಮಗಳು. ಅಪ್ಪ ಅಮ್ಮನಿಂದಲೇ ಕ್ರಮಬದ್ಧವಾದ ಪಾಠವಾಗಿದೆ. ಜೊತೆಗೆ ಸಂಸ್ಕಾರವೂ ಮಗುವಿನಲ್ಲಿದೆ. ಅವೆಲ್ಲವೂ ಅಂದಿನ ಪ್ರದರ್ಶನದಲ್ಲಿ ಎದ್ದು ಕಾಣುತ್ತಿದ್ದವು. ಮಗಳೆಂಬ ಮಮತೆಯ ರಿಯಾಯಿತಿಯನ್ನು ತೋರದೆ ಚೇತನ್ ದಂಪತಿ ಮಗಳಿಗೆ ಕಲಿಸಿದ್ದಾರೆ. ಸಹಜವಾಗೇ ಯಶಸ್ವೀ ಪ್ರದರ್ಶನ ಸಾಕಾರವಾಯಿತು.
ಸಾಂಪ್ರದಾಯಿಕ ಮೈಸೂರು ಜತಿಯೊಂದಿಗೆ ಅಂದಿನ ಪ್ರದರ್ಶನ ಆರಂಭವಾಯಿತು. ಆಸ್ಥಾನ ವಿದುಷಿ ಡಾ. ಕೆ.ವೆಂಕಟಲಕ್ಷಮ್ಮನವರು ಪುಟ್ಟ ಕೂಸಾಗಿ ನರ್ತಿಸದರೇನೋ ಎನ್ನುವಷ್ಟು, ಆ ಜತಿಯ ಸಾಂಪ್ರದಾಯಿಕತೆ ಮಾಸದ ಹಾಗೆ ಶ್ರೀಚರಿತ ನರ್ತಿಸಿದಳು. ಮುಂದಿನದು ಅಣ್ಣಮಾಚಾರ್ಯರ ಬಹುಶೃತ ಭೌಳಿರಾಗದ ಶ್ರೀಮನ್ನಾರಾಯಣ. ಸಮತೋಲನದ ನೃತ್ಯ ಸಂಯೋಜನೆ.
ಭಕ್ತಿಯೇ ಭಾವವಾಗಿ ಶ್ರೀಚರಿತ ಆ ಕೃತಿಯನ್ನು ನಿರ್ವಹಿಸಿದ ರೀತಿ ಬೆರಗು ಮೂಡಿಸಿತು. ಅಂದಿನ ಪ್ರದರ್ಶನದ ಕೇಂದ್ರ ಭಾಗ ಮುತ್ತಯ್ಯ ಭಾಗವತರ್ ಅವರ, ಕಮಾಚ್ ರಾಗದ ದರು ಮಾತೇ ಮಲಯಧ್ವಜ ಪಾಂಡ್ಯ ಸಂಜಾತೆ. ಗುರುದಂಪತಿ ತಮ್ಮ ಸಂಯೋಜನೆಯಲ್ಲಿ, ಭಕ್ತಿಗೆ ಪ್ರಾಮುಖ್ಯತೆಯನ್ನು ನೀಡಿ, ಜತಿಗಳ ಸಂಯೋಜನೆಗೆ ಒತ್ತು ನೀಡಿದ್ದರು. ಮೊದಲ ಎರಡು ಕೃತಿಗಳಲ್ಲಿ ಶ್ರೀಚರಿತಾಳ ಅಂಗಶುದ್ಧತೆ ಮತ್ತು ಸಮತೋಲನದ ಅಭಿನಯವನ್ನು ಕಂಡಿದ್ದ ರಸಿಕರು, ಇಲ್ಲಿ ಅವುಗಳ ಜೊತೆಗೆ ಲಯದಲ್ಲೂ ಹಿಡಿತ ಇರುವ ಅಂಶವನ್ನು ಗಮನಿಸಲು ಸಾಧ್ಯವಾಯಿತು. ಪಾರ್ವತಿಯ ಸೌಮ್ಯಭಾವ, ಚಾಮುಂಡಿಯ ರೌದ್ರಭಾವ ಶ್ರೀಚರಿತಾಳ ಅಭಿನಯದಲ್ಲಿ ಉತ್ಕೃಷ್ಟವಾಗಿ ಬೆಳಗಿದವು.
ಹಾಗೆಯೇ ಜತಿಗಳು ಮತ್ತು ಸ್ವರಗಳ ಓಘವನ್ನು ಶ್ರೀಚರಿತ ನಿರ್ವಹಿಸಿದ ರೀತಿ ಮೆಚ್ಚೆನಿಸಿತು. ದ್ವಿತೀಯಾರ್ಧದಲ್ಲಿ ಶ್ರೀಚರಿತ ಜಾನಪದ ಶೈಲಿಯ ಕೊರವಂಜಿ ಸಾದರಪಡಿಸಿದಳು. ಈ ಭಾಗದಲ್ಲಿ ಸೂಕ್ತ ಆಹಾರ್ಯ ಆಕರ್ಷಣೀಯವಾಗಿತ್ತು. ಅಂಗಚಲನೆ ಸುಭಗವಾಗಿತ್ತು. ಇಂತಹ ಸುಲಲಿತ ಬಂಧಗಳನ್ನೂ ತಾನು ನಿರ್ವಹಿಸಬಲ್ಲೆ ಎಂದು ಶ್ರೀಚರಿತ ಸಾಬೀತುಪಡಿಸಿದಳು. ಆರಿಸಿಕೊಂಡಿದ್ದ ಡಿ.ವಿ.ಪ್ರಸನ್ನಕುಮಾರ್ ಅವರ ಜಾವಳಿಯ ಸಾಹಿತ್ಯವನ್ನು ಗಮನಿಸಿದರೆ, ಶ್ರೀಚರಿತಾಳಂಥ ಪುಟ್ಟ ಹುಡುಗಿಗೆ ಸೂಕ್ತವಲ್ಲ ಅನಿಸಿದರೂ, ಜಾವಳಿಯ ನಾಯಕ ಕೃಷ್ಣನಾದ್ದರಿಂದ, ದೈವೀಕ ಸಾಂಗತ್ಯದ ಪರಿಧಿಯಲ್ಲಿ ಅಭಿನಯವನ್ನು ಕೂರಿಸಿ ನೃತ್ಯ ಸಂಯೋಜನೆ ಆಗಿತ್ತಾದ್ದರಿಂದ, ಶ್ರೀಚರಿತಾಳ ಅಭಿನಯ ಅಪ್ಯಾಯಮಾನ ಎನಿಸಿತು.
ಅಂದಿನ ಪ್ರದರ್ಶನದ ಕೊನೆಯಲ್ಲಿ ತಿಲ್ಲಾನಾದ ಬದಲಿಗೆ ಪೇರಿಣಿಯನ್ನು ಅಳವಡಿಸಿಕೊಳ್ಳಲಾಗಿತ್ತು. ಬೋರಲಾಗಿರಿಸಿರುವ ಕುಂಭದ ಮೇಲೆ ನರ್ತಿಸುವ ವಿಶೇಷ ಬಂಧ ಇದು. ಬ್ರಹ್ಮಾಂಡ ನಾಯಕ ಶಿವ. ಬ್ರಹ್ಮಾಂಡ ಗೋಳಾಕಾರದಲ್ಲಿದೆ. ಕುಂಭವೂ ಗೋಳಾಕಾರದಲ್ಲಿದೆ. ಹಾಗಾಗಿ ಕುಂಭದ ಮೇಲಿನ ನರ್ತನವನ್ನು ಶಿವನ ನರ್ತನ ಎಂದು ನಂಬಲಾಗಿದೆ. ಹಾಗಾಗಿ ಶಿವನ ವರ್ಣನೆಯ ಜಿ.ಗುರುಮೂರ್ತಿಯವರ ಸಾಹಿತ್ಯ ಇಲ್ಲಿನದು. ತಾಂಡವ ಭಂಗಿಗಳು ಸಹಜವಾಗೇ ಸಂಯೋಜನೆಯನ್ನು ಆವರಿಸಿಕೊಂಡಿದ್ದವು. ಕುಂಭದ ನಿಗಧಿತ ಜಾಗದ ಮೇಲೇ ನರ್ತಿಸಬೇಕಾದ ಸವಾಲಾನ್ನು ಶ್ರೀಚರಿತ ಆತ್ಮವಿಶ್ವಾಸದಿಂದಲೇ ನಿರ್ವಹಿಸಿ ಮೆಚ್ಚುಗೆಯನ್ನು ಪಡೆದಳು. ಜತಿ, ನಟುವಾಂಗ, ಮೃದಂಗ ಇವುಗಳೊಡನೆ ಜುಗಲ್ಬಂಧಿ ವಿನ್ಯಾಸದ ಕ್ಲಿಷ್ಟ ಸಂಯೋಜನೆಗಳನ್ನು ಶ್ರೀಚರಿತ ಅದ್ಭುತವಾಗಿ ನರ್ತಿಸಿದಳು.ಮೇಳದಲ್ಲಿ ಅಪ್ಪ-ಅಮ್ಮನ ಜೋಡಿ ನಟುವಾಂಗ ಶ್ರೀಚರಿತಾಳ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುವಂತಿತ್ತು .
ಉಳಿದಂತೆ ವಿದ್ವಾನ್ ರೋಹಿತ್ ಭಟ್ ಉಪ್ಪೂರ್ ಗಾಯನದಲ್ಲಿ, ವಿದ್ವಾನ್ ಜಿ.ಎಸ್. ನಾಗರಾಜ್ ಮೃದಂಗವಾದನದಲ್ಲಿ, ವಿದ್ವಾನ್ ಹೇಮಂತ್ ಕುಮಾರ್ ಪಿಟೀಲಿನಲ್ಲಿ, ವಿದ್ವಾನ್ ಗಣೇಶ್ ಕೊಳಲಿನಲ್ಲಿ ಹಾಗೂ ವಿದ್ವಾನ್ ಲಕ್ಷ್ಮೀನಾರಾಯಣ ರಿದಂಪ್ಯಾಡ್ ನಲ್ಲಿ ಸಮರ್ಥ ಸಹಕಾರ ನೀಡಿ ಬಾಲಕಿಗೆ ಉತ್ಸಾಹ ತುಂಬಿದರು. ಒಂದು ಅದ್ಭುತ ಅನುಭವವನ್ನು ಕಟ್ಟಿಕೊಟ್ಟ, ನಾಟ್ಯ ನಿನಾದ ನೃತ್ಯಾಲಯದಿಂದ ನಡೆದ ಈ ರಂಗಪ್ರವೇಶ ಬಹಳ ದಿನಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ.
- ಸುಗ್ಗನಹಳ್ಳಿ ಷಡಕ್ಷರಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


