ಉಡುಪಿ: ನವದೆಹಲಿ ಪ್ರವಾಸದಲ್ಲಿರುವ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೋಮವಾರ ಸಂಜೆ ಕೇಂದ್ರದ ಮಾಜಿ ಸಚಿವ ಹಾಗೂ ರಾಮಜನ್ಮಭೂಮಿ ಆಂದೋಲನ, ಕಾಶ್ಮೀರದ ಲಾಲ್ ಚೌಕದಲ್ಲಿ ತಿರಂಗ ಧ್ವಜಾರೋಹಣ ಮೊದಲಾದ ಆಂದೋಲನಗಳ ಪ್ರಮುಖರೂ ಆಗಿದ್ದ ಡಾ. ಮುರಳಿ ಮನೋಹರ ಜೋಶಿಯವರನ್ನು ಅವರ ನಿವಾಸದಲ್ಲಿ ಭೇಟಿಯಾದರು.
ಡಾ. ಜೋಶಿಯವರೊಂದಿಗೆ ಸುಮಾರು ಅರ್ಧ ಘಂಟೆಗೂ ಅಧಿಕ ಹೊತ್ತು ಉಭಯಕುಶಲೋಪರಿ ನಡೆಸಿದ ಶ್ರೀಗಳು ಅಯೋಧ್ಯಾ ಆಂದೋಲನದಲ್ಲಿ ಜೋಶಿಯವರ ಭೂಮಿಕೆಯನ್ನು ಪ್ರಶಂಸಿಸಿದರು. ಶ್ರೀ ವಿಶ್ವೇಶತೀರ್ಥ ಶ್ರೀಪಾದರೊಂದಿಗಿನ ಆತ್ಮೀಯ ಒಡನಾಟವನ್ನು ಜೋಶಿಯವರೂ ಸ್ಮರಿಸಿಕೊಂಡರು. ಉಡುಪಿ ಶ್ರೀಕೃಷ್ಣನ ಪಂಚಲೋಹದ ಸುಂದರ ವಿಗ್ರಹ ಶಾಲು ಸಹಿತ ಫಲ ಮಂತ್ರಾಕ್ಷತೆಯನ್ನಿತ್ತು ಶ್ರೀಗಳವರು ಡಾ ಜೋಶಿ ಯವರನ್ನು ಅಭಿನಂದಿಸಿ ಆಶೀರ್ವದಿಸಿದರು.
ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಬಗ್ಗೆ ಉಡುಪಿಯ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಪ್ರಕಟಿಸಿದ್ದ ಪೋಟೋ ಆಲ್ಬಮ್ ನ್ನು ಶ್ರೀಗಳು ನೀಡಿದ್ದನ್ನು ಸ್ವೀಕರಿಸಿ, ಕಣ್ತುಂಬ ಕಂಡು ಭಾವುಕರಾಗಿ ಉಡುಪಿಗೆ ಪರ್ಯಾಯದ ಸಂದರ್ಭ ಭೇಟಿ ನೀಡಿದ ಕ್ಷಣಗಳನ್ನೂ ನೆನಪಿಸಿಕೊಂಡರು. ದೆಹಲಿ ಪೇಜಾವರ ಮಠದ ವ್ಯವಸ್ಥಾಪಕ ವಿದ್ವಾನ್ ದೇವಿಪ್ರಸಾದ ಭಟ್, ಶ್ರೀಗಳ ಆಪ್ತರಾದ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ