ಪ್ರಕೃತಿ ಸೌಂದರ್ಯದ ಮಡಿಲಿನ ಶ್ರೀ ಕೃಷ್ಣ ಧ್ಯಾನಕೇಂದ್ರ ಆವರಣದಲ್ಲಿ ಸಾಂಸ್ಕೃತಿಕ ಸಂಗಮ | ಧರ್ಮಾದಿಕಾರಿ ಡಾ.ವೀರೇಂದ್ರ ಹೆಗ್ಗಡೆ ಉದ್ಘಾಟನೆ
ಮುಡಿಪು: ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡಿಪು ಗೋವರ್ಧನಗಿರಿಯ ಶ್ರೀಕೃಷ್ಣ ಧ್ಯಾನ ಕೇಂದ್ರ ಆವರಣದಲ್ಲಿ ಅ.28ರಿಂದ 30ರ ತನಕ ಮೂರು ದಿನಗಳ ಕಾಲ ವಿಜೃಂಭಣೆಯ `ಗೋವರ್ಧನೋತ್ಸವ' ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಜಗದೀಶ ಆಳ್ವ ನಾರ್ಯಗುತ್ತು ತಿಳಿಸಿದ್ದಾರೆ.
ಮುಡಿಪು ಗೋವರ್ಧನಗಿರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವರ್ಧನಗಿರಿಯ ಶ್ರೀಕೃಷ್ಣ ಧ್ಯಾನಕೇಂದ್ರವನ್ನು ಪ್ರವಾಸಿ ತಾಣ ಹಾಗೂ ಆಧ್ಯಾತ್ಮಿಕ ಕ್ಷೇತ್ರವಾಗಿ ಪ್ರಚಾರಗೊಳಿಸುವ ಉದ್ದೇಶದಿಂದ ಉತ್ಸವ ಆಯೋಜಿಸಿರುವುದಾಗಿ ಮಾಹಿತಿ ನೀಡಿದರು.
ಶೋಭಾಯಾತ್ರೆ, ಉದ್ಘಾಟನೆ:
ಈ ಪ್ರಯುಕ್ತ ಅ.28ರಂದು ಶುಕ್ರವಾರ ಸಂಜೆ 4ಕ್ಕೆ ಮುಡಿಪಿನ ಶ್ರೀ ಮುಡಿಪಿನ್ನಾರ್ ಕ್ಷೇತ್ರದಿಂದ ಗೋವರ್ಧನಗಿರಿಯ ಶ್ರೀಕೃಷ್ಣ ಧ್ಯಾನ ಕೇಂದ್ರ ತನಕ ವಿವಿಧ ತಂಡಗಳ ಭಜನಾ ಸಂಕೀರ್ತನೆಯೊಂದಿಗೆ ಭವ್ಯ ಶೋಭಾಯಾತ್ರೆ ಹೊರಡಲಿದೆ. ಈ ಸಂದರ್ಭ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಕಲಾ ಪ್ರದರ್ಶನಗಳು ಪ್ರಧಾನ ಆಕರ್ಷಣೆಯಾಗಿರಲಿವೆ.
ಅಂದು ಸಂಜೆ 6 ಗಂಟೆಗೆ ಶ್ರೀ ಕೃಷ್ಣ ಧ್ಯಾನ ಕೇಂದ್ರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಉತ್ಸವವನ್ನು ಉದ್ಘಾಟಿಸುವರು.
ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ನಿಟ್ಟೆ ವಿದ್ಯಾಸಮೂಹ ಸಂಸ್ಥಗಳ ಅಧ್ಯಕ್ಷ ಡಾ.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸುವರು. ಗೋವರ್ಧನೋತ್ಸವ ಸಮಿತಿ ಅಧ್ಯಕ್ಷ ಡಾ.ಮದನ್ ಮೋಹನ್ ನಾಯಕ್ ಉಪಸ್ಥಿತರಿರುವರು. ಈ ಸಂದರ್ಭ ಕಂಬಳ ಕ್ಷೇತ್ರದ ಸಾಧಕ ವೆಂಕಪ್ಪ ಕಾಜವ ಮಿತ್ತಕೋಡಿ, ಸಮಾಜಸೇವಕ ಸೇಸಪ್ಪ ಟೈಲರ್ ಸುದರ್ಶನನಗರ, ವೈದ್ಯಕೀಯ ಕ್ಷೇತ್ರದ ಡಾ.ಮಮತಾ ಆರ್.ರೈ, ಡಾ.ರವಿರಾಜೇಶ್ ರೈ, ಶಾಸ್ತ್ರೀಯ ಸಂಗೀತ ಕ್ಷೇತ್ರದ ಮಂಜುಳಾ ಜಿ.ರಾವ್ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಅಂದು ರಾತ್ರಿ 7:30ಕ್ಕೆ ಆಕಾಶವಾಣಿ ಕಲಾವಿದೆ ಮಂಜುಳಾ ಜಿ. ರಾವ್ ಇರಾ ಅವರಿಂದ ನಾದ ಸೌರಭ ನಡೆಯಲಿದೆ. ಅ.29ರಂದು ಶನಿವಾರ ಬೆಳಗ್ಗೆ ಶ್ರೀ ಕೃಷ್ಣ ಧ್ಯಾನ ಕೇಂದ್ರದ ವೃಂದಾವನದಲ್ಲಿ ಭಜನಾ ಸಂಕೀರ್ತನೆ ಉದ್ಘಾಟನೆಗೊಳ್ಳಲಿದೆ. ಬೆಳಗ್ಗೆ 10ಕ್ಕೆ ಅಂತರ್ ಜಿಲ್ಲಾ ಮಟ್ಟದ ಮುಕ್ತ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದ್ದು, ಕುರ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ದೇವದಾಸ ಭಂಡಾರಿ ಹಾಗೂ ಪ್ರಗತಿಪರ ಕೃಷಿಕ ನಾರಾಯಣ ರೈ ಕಕ್ಕೆಮಜಲು ಉದ್ಘಾಟಿಸುವರು. ಅಪರಾಹ್ನ 1ರಿಂದ ಫಜೀರು ಸುದರ್ಶನನಗರದ ಶ್ರೀಕೃಷ್ಣ ಯಕ್ಷಗಾನ ಮಂಡಳಿಯವರಿಂದ `ಶ್ರೀ ಕೃಷ್ಣ ಲೀಲಾಮೃತ' ಯಕ್ಷಗಾನ ಬಯಲಾಟವಿದೆ.
ಸಂಜೆ ೫ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ವಹಿಸುವರು. ಈ ಸಂದರ್ಭ ಜಾನಪದ ಕ್ಷೇತ್ರದ ಸಾಧಕಿ ಶ್ರೀ ಮತಿ ಮುತ್ತಕ್ಕೆ, ಧಾರ್ಮಿಕ ಕ್ಷೇತ್ರದ ರಾಮ ನಾಯಕ್ ಪಿದಮಲೆ, ಶಿಕ್ಷಣ ಕ್ಷೇತ್ರದ ಗೋಪಾಲ ಗೌಡ, ಕ್ರೀಡಾ ಕ್ಷೇತ್ರದ ಕುಮಾರಿ ವೆನಿಲ್ಲಾ, ನಾಟಿ ವೈದ್ಯ ಕ್ಷೇತ್ರದ ಶ್ರೀಮತಿ ಚಂದ್ರಾವತಿ ಬಲ್ಯಾಯ ಅವರನ್ನು ಸನ್ಮಾನಿಸಲಾಗುವುದು.
ಸಂಜೆ 7:30ಕ್ಕೆ ವಿಜಯಕುಮಾರ್ ಕೊಡಿಯಾಲಬೈಲ್ ನಿರ್ದೇಶನದ `ಶಿವದೂತೆ ಗುಳಿಗೆ' ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಸಮಾರೋಪ ಸಮಾರಂಭ:
ಅ.30ರಂದು ಬೆಳಗ್ಗೆ 10ರಿಂದ ಸಂಜೆ ೫ರ ತನಕ ಸ್ಥಳೀಯ ಕಲಾವಿದರಿಂದ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಜಾನಪದ ನೃತ್ಯಗಳ ಕಾರ್ಯಕ್ರಮ ನಡೆಯಲಿದೆ. ಸಂಜೆ 5:30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಿತ ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಅಣ್ಣಯ್ಯ ಕುಲಾಲ್ ವಹಿಸುವರು. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಟ್ರಸ್ಟಿ ರವಿಶಂಕರ್ ಮಿಜಾರು ದೀಪ ಪ್ರಜ್ವಲನೆ ಮಾಡುವರು. ನಿವೃತ್ತ ಐಎಎಸ್ ಅಧಿಕಾರಿ ಟಿ.ಶ್ಯಾಮ್ ಭಟ್, ಗೋವರ್ಧನೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಮದನ್ ಮೋಹನ್ ನಾಯಕ್ ಗೌರವ ಉಪಸ್ಥಿತರಿರುವರು. ಪತ್ರಿಕೋದ್ಯಮ ಕ್ಷೇತ್ರದ ಗುರುವಪ್ಪ ಬಾಳೆಪುಣಿ, ಯಕ್ಷಗಾನ ಕ್ಷೇತ್ರದ ಕೃಷ್ಣ ಮೂಲ್ಯ ಕೈರಂಗಳ, ದೇಶಸೇವೆಗೆ ಪ್ರಭಾಕರ ಮುಡಿಪು ಹಾಗೂ ಪೂವಪ್ಪ ಕಡಂಬಾರು, ಕೃಷಿ ಕ್ಷೇತ್ರದ ನಿಶ್ಚಲ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ ೭.೩೦ಕ್ಕೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ್ಲಿ `ಶ್ರೀ ಕೃಷ್ಣ ಪಾರಿಜಾತ, ಕೃಷ್ಣಾರ್ಜುನ ಕಾಳಗ' ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.
ಕಾರ್ಯಕ್ರಮ ನಡೆಯುವ ಮೂರೂ ದಿನಗಳಲ್ಲಿ ಅತಿಥಿಗಳಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಸುಮಾರು 10-15 ಸಾವಿರ ಪ್ರೇಕ್ಷಕರ ಆಗಮನ ನಿರೀಕ್ಷಿಸಲಾಗಿದೆ. ಗೋವರ್ಧನಗಿರಿ ಬೆಟ್ಟದ ಮೇಲೆ ಸಾಕಷ್ಟು ವಾಹನ ನಿಲುಗಡೆಗೂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಚಂದ್ರಹಾಸ ಕಣಂತೂರು ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ ಶೆಟ್ಟಿ ಫಜೀರುಗುತ್ತು ವಂದಿಸಿದರು. ಸುದ್ದಿಗೋಷ್ಠಿಯಲ್ಲಿ ಗೋವರ್ಧನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉಳಿಪಾಡಿಗುತ್ತು ಮಹೇಶ್ ಚೌಟ ಚಕ್ರಕೋಡಿ, ಪ್ರಧಾನ ಕಾರ್ಯದರ್ಶಿ ವಿಕಾಸ್ ಎಂ.ಮುಡಿಪು, ಶ್ರೀನಿವಾಸ ಶೆಟ್ಟಿ ಪುಲ್ಲು ಅಸೈಗೋಳಿ, ವಿದ್ಯಾ ಶೆಟ್ಟಿ, ಡಾ.ಸುರೇಖಾ ಶೆಟ್ಟಿ, ವಿಜೇಶ್ ವಿ. ನಾಯ್ಕ್ ನಡಿಗುತ್ತು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಡಿಪು ವಲಯ ಮೇಲ್ವಿಚಾರಕ ಗಂಗಾಧರ್, ವಲಯಾಧ್ಯಕ್ಷ ನವೀನ್ ಜೋಗಿ ಮತ್ತಿತರರು ಹಾಜರಿದ್ದರು.
----
ಗೋವರ್ಧನಗಿರಿ ಕೃಷ್ಣ ಧ್ಯಾನಕೇಂದ್ರದ ವಿಶೇಷತೆ ಏನು?
ಸಮಿತಿ ಪ್ರಧಾನ ಸಂಚಾಲಕ ಶೈಲೇಂದ್ರ ಭರತ್ ನಾಯ್ಕ್ ನಚ್ಚಗುತ್ತು ಮಾತನಾಡಿ, ಮುಡಿಪು ಪರಿಸರ ಮೂಲದ ವೈದ್ಯ ಡಾ.ಮದನ್‌ಮೋಹನ ನಾಯ್ಕ್ ಅಡೇಕಳ ಅವರ ಕನಸಿನ ಕೂಸು ಶ್ರೀ ಕೃಷ್ಣ ಧ್ಯಾನ ಕೇಂದ್ರ. ಅವರು ಎಳವೆಯಲ್ಲೇ ಈ ಬೆಟ್ಟದ ಮೇಲೆ ಒಂದು ಭವನ ನಿರ್ಮಿಸುವ ಕನಸು ಕಂಡಿದ್ದರು. 2004ರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿ ಹಂತಹಂತಗಳಾಗಿ ನಡೆದು, 2020ರ ಆ.21ರಂದು ಮುಡಿಪು ಗೋವರ್ಧನಗಿರಿಯಲ್ಲಿ ಶ್ರೀಕೃಷ್ಣ ಧ್ಯಾನಕೇಂದ್ರ ಲೋಕಾರ್ಪಣೆಗೊಂಡಿದೆ. 1300 ಫೀಟ್ ಎತ್ತರದ ಬೆಟ್ಟದ ಮೇಲಿರುವ ಈ ಧ್ಯಾನಕೇಂದ್ರದಲ್ಲಿ ಶ್ರೀಕೃಷ್ಣನ ವಿಗ್ರಹ, 500-600 ಮಂದಿ ಪ್ರೇಕ್ಷಕರಿಗೆ ಅವಕಾಶ ಇರುವ ಗ್ಯಾಲರಿ, ಡಾ.ಮದನ್ ಮೋಹನ್ ನಾಯಕ್ ಅವರು 35 ವರ್ಷಗಳಿಂದ ಸಂಗ್ರಹಿಸಿದ ಅಪರೂಪದ ವಸ್ತುಗಳ ವಸ್ತು ಸಂಗ್ರಹಾಲಯ ಮತ್ತಿತರ ವ್ಯವಸ್ಥೆ ಇದೆ. ಕ್ಷೇತ್ರವನ್ನು ಸಮಾಜಮುಖಿ ಮಾಡುವ ಉದ್ದೇಶದಿಂದ ಉತ್ಸವ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಈ ಕ್ಷೇತ್ರ ಪ್ರಕೃತಿ ರಮಣೀಯವಾಗಿದ್ದು, ಆಧ್ಯಾತ್ಮಿಕ, ಸಾಂಸ್ಕೃತಿಕ ಆಚರಣೆಗಳಿಗೆ ಹೇಳಿ ಮಾಡಿಸಿದ ತಾಣ. ಕಡಲು, ಬೆಟ್ಟ, ಸುತ್ತಲ ಹಸಿರು ಕಣಿವೆಯ ದೃಶ್ಯಕಾವ್ಯ, ನೀರವ ಪ್ರಕೃತಿ, ಸೂರ್ಯೋದಯ, ಸೂರ್ಯಾಸ್ತದ ಸೊಬಗು ವೀಕ್ಷಣೆ ಸಾಧ್ಯತೆ ಇಲ್ಲಿನ ವಿಶೇಷತೆ. ಈ ಪ್ರದೇಶ ಮಂಗಳೂರಿನಿಂದ ಸುಮಾರು 21 ಕಿ.ಮೀ. ದೂರದಲ್ಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

