ಮೂಡುಬಿದಿರೆ: ಮಾದಕ ವಸ್ತುಗಳ ಅತಿಯಾದ ಸೇವನೆಯಿಂದ ನಿಯಂತ್ರಣ ಕಳೆದುಕೊಂಡ ವ್ಯಕ್ತಿ ಸುವ್ಯವಸ್ಥಿತ ಸಮಾಜದಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡುಗಿ, ಸಮಾಜಕ್ಕೆ ಹೊರೆಯಾಗಿ ಪರಿಣಮಿಸುತ್ತಾನೆ ಎಂದು ಮೂಡುಬಿದಿರೆ ಪಿಎಸ್‍ಐ ಸಿದ್ದಪ್ಪ ನರನೂರ್ ತಿಳಿಸಿದರು.
ಅವರು ಗುರುವಾರ ಶಿವರಾಮ ಕಾರಂತ ವೇದಿಕೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಾದಕ ವ್ಯಸನ ಜಾಗೃತಿ ಸಂಘದಿಂದ ಆಯೋಜಿಸಲಾಗಿದ್ದ ಮಾದಕ ವ್ಯಸನ ಕಾಯ್ದೆ- ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅಮಲು ಪದಾರ್ಥಗಳ ಸೇವನೆಯು ಕೆಲವು ನಿಮಿಷಗಳ ಕಾಲ ಆನಂದವನ್ನು ನೀಡಿದರೂ ಇದು ದೂರಗಾಮಿ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಮಾದಕ ವಸ್ತುಗಳ ಸೇವನೆಯಿಂದ ನರಮಂಡಲ ನಿಷ್ಕ್ರಿಯಾವಾಗುತ್ತಾ ಸಾಗಿ, ಯಕೃತ್ತಿನ ತೀವ್ರ ಕಾಯಿಲೆ, ಜಠರ ಹಾನಿ, ಮೂರ್ಛೆ ರೋಗ, ನರ ರೋಗ, ಸ್ಮತಿ ಭ್ರಮಣೆ, ಬುದ್ಧಿಮಾಂದ್ಯತೆಯಂತ ಹ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಸಾಮಾನ್ಯವಾಗಿ ಉಪಯೋಗಿಸುವ ಮಾದಕ ವಸ್ತುಗಳಾದ ಮದ್ಯ, ತಂಬಾಕು, ಗಾಂಜಾ, ಕೋಕೇನ್, ಓಪಿಯಮ್, ಹೆರಾಯಿನ್, ನಿದ್ದೆ ಮಾತ್ರೆಗಳು, ವೈಟನರ್, ಪೆಟ್ರೋಲಿಯಮ್ ಉತ್ಪನ್ನಗಳ ದುಷ್ಪಾರಿಣಾಮವನ್ನು ವಿವರಿಸಿದರು. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಟೆನ್ಸ್ (ಎನ್‍ಡಿಪಿಎಸ್) ಕಾಯ್ದೆಯ ಕುರಿತು ವಿವರಿಸಿದರು.
ಮರವೊಂದು ಸದೃಢವಾಗಿ ಬೆಳೆಯಲು ಹೇಗೆ ಟೊಂಗೆಗಳನ್ನು ಕತ್ತರಿಸುತ್ತಾ ಸಾಗಬೇಕೋ, ಹಾಗೆಯೇ ವಿದ್ಯಾರ್ಥಿಗಳನ್ನು ಮುಂದೆ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬೆಳಸಲು ಇಂತಹ ಪಿಡುಗುಗಳಿಂದ ಇಂದಿನಿಂದಲೇ ದೂರವಿರಿಸಬೇಕು. ಮನುಷ್ಯನ ಯಾವುದೇ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಪ್ರಕೃತಿಯಲ್ಲಯೇ ಪರಿಹಾರವಿದೆ, ಅದನ್ನೂ ಬಿಟ್ಟು ಇಂತಹ ಚಟಗಳಿಗೆ ದಾಸರಾದರೆ, ಬದುಕೇ ಬಲಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೋ ಮಹಮ್ಮದ್ ಸದಾಕತ್, ಇಂದು ಇತರರ ಪ್ರೇರಣೆ, ಒತ್ತಡ ಹಾಗೂ ದುಷ್ಚಟಗಳ ಪ್ರಯೋಗಕ್ಕೆ ಬಲಿಯಾಗಿ ಯುವಕ – ಯುವತಿಯರು ಮಾದಕ ಚಟಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಅಂತಹ ವ್ಯಕ್ತಿಗಳಿಂದ ದೂರವಿರಬೇಕು ಎಂದರು.
ಕಾರ್ಯಮದಲ್ಲಿ ಮಾದಕ ವ್ಯಸನ ಜಾಗೃತಿ ಸಂಘದ ಸಂಚಾಲಕರಾದ ಟಿ ಎ ಎನ್ ಖಂಡಿಗೆ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಲೋಕೇಶ್ ಪೂಜಾರಿ ನಿರೂಪಿಸಿ, ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ