ಬೆಂಗಳೂರು: ಮುಂದಿನ ವಾರವೇ ಸಂಭ್ರಮವನ್ನು ಹೊತ್ತು ತರಲಿರುವ ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿಯ ವ್ಯಾಪಾರ ವಹಿವಾಟನ್ನು ಮಾತ್ರ ನಡೆಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅವಕಾಶ ನೀಡಿದೆ. ಒಂದು ವೇಳೆ ಹಸಿರು ಪಟಾಕಿ ಹೊರತು ಪಡಿಸಿ ಅನ್ಯ ಪಟಾಕಿಗಳ ವ್ಯಾಪಾರವನ್ನು ಮಾಡುವುದು ತಿಳಿದು ಬಂದರೆ ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವುದು, ಸೇರಿದಂತೆ ಇನ್ನಿತರ ಹಲವು ಸೂಚನೆಗಳನ್ನು ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನೀಡಿದೆ.
ಜೊತೆಗೆ ದೀಪಾವಳಿ ಹಬ್ಬದ (ಅ.24ರಿಂದ ಅ.26) ಸಮಯದಲ್ಲಿ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅನುಮತಿ ನೀಡಲಾಗಿದೆ. ಪರಿಸರ ಸ್ನೇಹಿಯಾಗಿರುವ ಹಸಿರು ಪಟಾಕಿಗಳನ್ನು ಹೊಡೆಯುವಂತೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು. ದೀಪಾವಳಿ ಹಬ್ಬಕ್ಕೂ ಮುಂಚೆ ಹಾಗೂ ಆ ಬಳಿಕ ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಎಷ್ಟು ಪ್ರಮಾಣದಲ್ಲಿ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ಆಗಿದೆ ಎನ್ನುವುದನ್ನು ಪತ್ತೆ ಮಾಡಲು ಮಾಪಕ ಅಳವಡಿಸುವಂತೆ ಸೂಚನೆ ನೀಡಲಾಗಿದೆ.
ಮುಖ್ಯವಾಗಿ ಮಕ್ಕಳಿಗೆ ಪಟಾಕಿ ಕುರಿತು ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಏರ್ಪಡಿಸಬೇಕು. ಪೊಲೀಸ್ ಇಲಾಖೆಯು ಪಟಾಕಿ ಸ್ಟಾಲ್‌ಗಳ ಮೇಲೆ ನಿಗಾ ವಹಿಸಬೇಕು. ಪಟಾಕಿ ತ್ಯಾಜ್ಯವನ್ನು ಹೊರಗೆ ಹಾಕಲು ಘನತ್ಯಾಜ್ಯ ವಾಹನಗಳನ್ನು ಸ್ಥಳೀಯ ಸಂಸ್ಥೆಗಳು ನಿಯೋಜನೆ ಮಾಡಬೇಕು. ಈ ಸಮಯದಲ್ಲಿ ಪಟಾಕಿಗಳಿಂದಾಗುವ ಸಂಭಾವ್ಯ ಹಾನಿಯನ್ನು ತಪ್ಪಿಸಲು ಅಗ್ನಿಶಾಮಕ ಇಲಾಖೆ ಸದಾ ಸಿದ್ಧವಾಗಿರಬೇಕು. ಹಬ್ಬದ ಕಾರಣದಿಂದ ವಾಯುಮಾಲಿನ್ಯವು ಅಧಿಕವಾಗದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ