ದೀಪಾವಳಿಯೊಂದಿಗೆ ವರ್ಷದ 2ನೇ ಸೂರ್ಯ ಗ್ರಹಣ

Upayuktha
0

ಆಶ್ವಯುಜ ಮಾಸದ ಅಂತ್ಯದಲ್ಲಿ ಬರುವ ಅಮಾವಾಸೆಯ ಚಂದ್ರ, ಈ ವರ್ಷ ದೀಪಾವಳಿಯೊಂದಿಗೆ, ಅಕ್ಟೋಬರ್ 25 ರಂದು ವರ್ಷದ 2 ನೇ ಸೂರ್ಯ ಗ್ರಹಣವನ್ನು ತರುತ್ತಿದೆ.


ಸೂರ್ಯಗ್ರಹಣವೆಂದರೆ ಏನು ?


ಚಂದ್ರನು, ಸೂರ್ಯ ಮತ್ತು ಭೂಮಿಯ ನಡುವಿನಲ್ಲಿ ಬರುವ ಕಾಲವನ್ನು ಸೂರ್ಯ ಗ್ರಹಣ ಎಂದು ಕರೆಯುತ್ತೇವೆ. ಪ್ರತಿ ಅಮಾವಾಸ್ಯೆಯ ದಿನ ಚಂದ್ರನು ಭೂಮಿ ಮತ್ತು ಸೂರ್ಯನ ಮಧ್ಯ ಹಾದುಹೋಗುವಾಗ, ಈ ಮೂರು ಆಕಾಶಕಾಯಗಳು ಒಂದು ಸರಳರೇಖೆಯಲ್ಲಿರುವುದಿಲ್ಲ. ಚಂದ್ರನ ಭೂಮಿಯ ಸುತ್ತ ಚಲನೆಯ ಸಮತಲ ಹಾಗೂ, ಸೂರ್ಯನ ಸಮತಲ (ಭೂಮಿಯ ದ್ರಿಷ್ಟಿಯಿಂದ) ಗಳ ನಡುವಿನಲ್ಲಿ 5 ಡಿಗ್ರಿ ಗಳ ಅಂತರವಿರುವುದರಿಂದ ಪ್ರತಿ ಅಮಾವಾಸ್ಯೆಗೆ ಗ್ರಹಣ ಸಂಭವಿಸುವುದಿಲ್ಲ. ಚಂದ್ರನು ರಾಹು ಅಥವಾ ಕೇತು ಬಿಂದುವಿನಲ್ಲಿ ಬಂದಾಗ ಮಾತ್ರ, ಸೂರ್ಯ ಗ್ರಹಣ ಸಂಭವಿಸುವುದು.


ಚಂದ್ರನು ಸೂರ್ಯನಿಗೆ ಅಡ್ಡ ಬಂದು, ಸೂರ್ಯನ ಒಂದು ಭಾಗವು ಮಾತ್ರ ಗೋಚರಿಸಿದರೆ, ಇದು ಪಾರ್ಶ್ವ ಸೂರ್ಯಗ್ರಹಣ ಆಗಿರುತ್ತದೆ. ಅದೇ ರೀತಿ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದರೆ, ಅದು ಖಗ್ರಾಸ ಸೂರ್ಯಗ್ರಹಣ ಎಂದು ಕರೆಯುತ್ತೇವೆ. ಅಕ್ಟೋಬರ್ 25ರ ಸೂರ್ಯಗ್ರಹಣವು ಗೋಚರಿಸುವ ಎಲ್ಲ ಪ್ರದೇಶಗಳಲ್ಲಿ ಪಾರ್ಶ್ವ ಸೂರ್ಯಗ್ರಹಣವಾಗಿರುತ್ತದೆ. ಸಾಮಾನ್ಯವಾಗಿ ಪ್ರತಿ ಸೂರ್ಯಗ್ರಹಣದ ಮೊದಲು ಅಥವಾ ನಂತರ ಬರುವ ಹುಣ್ಣಿಮೆಯ ದಿನ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಬಾರಿ ಕೂಡ ನವೆಂಬರ್ 8 ರಂದು ಚಂದ್ರ ಗ್ರಹಣ (ಚಂದ್ರ ಮತ್ತು ಸೂರ್ಯನ ಮಧ್ಯ ಭೂಮಿ ಬರುವ ಸಂದರ್ಭ) ನೋಡಬಹುದು.


ಯಾವ ಪ್ರದೇಶಗಳಲ್ಲಿ ಗೋಚರ?


ಈ ಗ್ರಹಣವು ಭಾರತದ ಎಲ್ಲಾ ಪ್ರದೇಶಗಳಲ್ಲಿ ಹಾಗೂ, ಯುರೋಪ್ ಮತ್ತು ಏಷಿಯಾದ ಮಧ್ಯ ಭಾಗದ ವಿವಿಧ ದೇಶಗಳಲ್ಲಿ ಗೋಚರಿಸುತ್ತದೆ. ರಶ್ಯಾದಲ್ಲಿ ಈ ಗ್ರಹಣವು ಗೋಚರಿಸುವಾಗ ಚಂದ್ರನು ಸೂರ್ಯನನ್ನು 82 % ರಷ್ಟು ಆವರಿಸುತ್ತಾನೆ. ಭಾರತದಲ್ಲಿ ಈ ಗ್ರಹಣವು ಲೇಹ್ ಇಂದ ಕಂಡಾಗ ಸೂರ್ಯನು 54%ರಷ್ಟು ಹಾಗೂ ದೆಹಲಿಯಿಂದ 44%ರಷ್ಟು ಆವರಿಸಿರುತ್ತಾನೆ.


ಕರ್ನಾಟಕದಲ್ಲಿ ಗೋಚರ?


ಕರ್ನಾಟಕದ ಎಲ್ಲ ಭಾಗಗಳಿಂದ ಈ ಗ್ರಹಣವನ್ನು ನೋಡಬಹುದು. ರಾಜ್ಯದ ನಾನಾ ಸ್ಥಳಗಳಲ್ಲಿ ಈ ಗ್ರಹಣವು ಸಂಜೆ 5 ರಿಂದ ಸುಮಾರು 6 ಗಂಟೆಗೆ ನಡೆಯಲಿರುವ ಸೂರ್ಯಾಸ್ತದವರೆಗೆ ಗೋಚರಿಸುತ್ತದೆ. ಪಶ್ಚಿಮ ಮತ್ತು ನೈಋತ್ಯದ ಕಡೆ ಕ್ಷಿತಿಜವು ಗ್ರಹಣ ವೀಕ್ಷಿಸಲು ಉತ್ತಮ ಸ್ಥಳವಾಗಿರುತ್ತದೆ. ಬೆಂಗಳೂರಿನಲ್ಲಿ ಈ ಗ್ರಹಣದಿಂದ ಸೂರ್ಯನ ಆವರಣೆ 10%ರಷ್ಟು ಗೋಚರಿಸುತ್ತದೆ. ಅದೇ ಸುಂದರ ಪ್ರಾಕೃತಿಕ ದೃಶ್ಯದೊಂದಿಗೆ ಕಡಲ ತೀರಕ್ಕೆ ಸಮೀಪವಾಗಿರುವ ಉಡುಪಿಯು ಈ ಗ್ರಹಣ ವೀಕ್ಷಿಸಲು ಉತ್ತಮ ಪ್ರದೇಶ. ಉಡುಪಿಯಲ್ಲಿ ಈ ಗ್ರಹಣವು ಸಂಜೆ 5:08ಗೆ ಪ್ರಾರಂಭಗೊAಡು ಸುಮಾರು 05:50ಗೆ ಗರಿಷ್ಠ ಗ್ರಹಣ ಗೋಚರಿಸುತ್ತದೆ.


ಈ ಗ್ರಹಣದ ವಿಶೇಷತೆ ಏನು ?


ಉಡುಪಿಯಲ್ಲಿ ಈ ಗ್ರಹಣವು ಮುಗಿಯುವ ಸಮಯ 06:28 ಆದರೆ, ಸೂರ್ಯಾಸ್ತವು 06:06ಕ್ಕೆ ಆಗುವುದು. ಹಾಗಾಗಿ, 25 ಅಕ್ಟೋಬರ್ ರಂದು ಅಸ್ತವಾಗುವ ಸೂರ್ಯನು ಗ್ರಹಣ ಹಿಡಿದ ಸೂರ್ಯನಾಗಿರುತ್ತಾನೆ. ಇದು ಒಂದು ಅಪರೂಪದ ದೃಶ್ಯ.


ನೋಡುವುದು ಹೇಗೆ?


ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು (PAAC) ಪ್ರತಿ ಗ್ರಹಣದಂತೆಯೇ ಈ ಗ್ರಹಣವನ್ನು ಕೂಡ ವೀಕ್ಷಿಸಲು ಶಾಲಾ ವಿದ್ಯಾರ್ಥಿಗಳಿಗೆ ಹಾಗು ಜನಸಾಮಾನ್ಯರಿಗೆ ಮಲ್ಪೆ ಅಭಿವೃದ್ಧಿ ಸಮಿತಿಯ ಸಹಯೋಗದೊಂದಿಗೆ ಅವಕಾಶ ಒದಗಿಸುತ್ತಿದೆ. ಆಸಕ್ತ ಶಾಲಾ ಕಾಲೇಜುಗಳು ಹಾಗು ಅನ್ಯರು, ಈ ಗ್ರಹಣವನ್ನು ನಮ್ಮೊಂದಿಗೆ ಮಲ್ಪೆ ಬೀಚ್ ನಲ್ಲಿ ಸಂಜೆ 5ರಿಂದ ಸೂರ್ಯಾಸ್ತದವರೆಗೆ ನೋಡಬಹುದು.


ಈ ಸುಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿಯ ಜಿಲ್ಲಾಧಿಕಾರಿಗಳಾದ ಶ್ರೀಯುತ ಕೂರ್ಮರಾವ್, ಜಿಲ್ಲಾ ಶಾಸಕರಾದ ಶ್ರೀಯುತ ರಘಪತಿ ಭಟ್ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನ ಅಧ್ಯಕ್ಷರಾದ ಶ್ರೀಯುತ ಯಶ್ಪಾಲ್ ಸುವರ್ಣರವರು ಉಪಸ್ಥಿತರಿರುತ್ತಾರೆ. ಗೌರವಾನ್ವಿತ ಅತಿಥಿಗಳಾಗಿ ಡಾ. ಪಿ. ಶ್ರೀ ರಮಣ ಐತಾಳ್, ಮಾನ್ಯ ಉಪಕುಲಪತಿಗಳು, ಶ್ರೀನಿವಾಸ್ ವಿಶ್ವವಿದ್ಯಾನಿಲಯ ಮತ್ತು ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತರು, ಡಾ . ಎ . ಪಿ . ಭಟ್ , ಖಗೋಳ ತಜ್ಞರು ಹಾಗೂ ನಿವೃತ್ತ ಪ್ರಾಂಶುಪಾಲರು, ಪೂರ್ಣಪ್ರಜ್ಞ ಕಾಲೇಜು ಹಾಗೂ ಶ್ರೀಯುತ ಸುದೇಶ್ ಶೆಟ್ಟಿ, ಅಧ್ಯಕ್ಷರು, ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ ಇವರು ಉಪಸ್ಥಿತರಿರುತ್ತಾರೆ.


ಎಚ್ಚ್ಚರಿಕೆ!

ಯಾವುದೇ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಟೆಲಿಸ್ಕೋಪ್, ದುರ್ಬೀನ್, ಕ್ಯಾಮೆರಾಗಳಿಂದ ಕೂಡ ಸೂರ್ಯ ಗ್ರಹಣ ವನ್ನು ನೋಡುವುದು ಹಾನಿಕಾರಕ. ಸೂರ್ಯಗ್ರಹಣವನ್ನು ಯಾವಾಗಲೂ ವಿಶೇಷವಾದ ಗ್ರಹಣ-ವೀಕ್ಷಣಾ ಕನ್ನಡಕಗಳಿಂದ ಮಾತ್ರ ನೋಡಬೇಕು. ಪಿನ್-ಹೋಲ್ ಗಳ ಮೂಲಕ ಸೂರ್ಯನ ಪ್ರಕ್ಷೇಪಣವನ್ನು ಯಾವುದೇ ಹಾನಿಯಿಲ್ಲದೆ ನೋಡಬಹುದು. ಎಕ್ಸ್-ರೇ ಹಾಳೆ ಗಳಿಂದ ಕೂಡ ಗ್ರಹಣವನ್ನು ನೋಡಬಾರದು. ನಮ್ಮೊಂದಿಗೆ ಉಸಸ್ಥಿತರಿರಲು ಆಗದಿದ್ದಲ್ಲಿ ಸಂಘದ ಯೂ-ಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರದಲ್ಲಿ ವೀಕ್ಷಿಸಬಹುದು.


ಆದರೆ, ಅನನ್ಯವಾದ ಅಪರೂಪದ ಈ ಗ್ರಹಣವನ್ನು ವೀಕ್ಷಿಸಲು ಪೂರ್ಣಪ್ರಜ್ಞ ಹಳೆ ವಿದ್ಯಾರ್ಥಿ ಸಂಘದ ಸಹಾಯದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಉಪಸ್ಥಿತರಿರುವವರಿಗೆ ಅವಕಾಶ ಒದಗಿಸುತ್ತಿದೆ, ಆಸಕ್ತರು ಬಂದು ಗ್ರಹಣವನ್ನು ನಮ್ಮೊಂದಿಗೆ ಸುರಕ್ಷಿತವಾಗಿ ವೀಕ್ಷಿಸಬೇಕು ಎಂದು ಬಯಸುತ್ತೇವೆ.

- ಅತುಲ್‌ ಭಟ್‌

ಪೂರ್ಣಪ್ರಜ್ಞ ಕಾಲೇಜು ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top