ಈಡಿಯಟ್ ಸಿಂಡ್ರೋಮ್ ಬಗ್ಗೆ ಇಲ್ಲಿದೆ ಮಾಹಿತಿ

Upayuktha
0

ವಿಜ್ಞಾನ ತಂತ್ರಜ್ಞಾನ ಬೆಳೆದಂತೆಲ್ಲಾ, ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಅಂತರ್ಜಾಲದಲ್ಲಿ ಸಿಗುತ್ತದೆ. ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚುಮಾಹಿತಿಗಳು ಇಲ್ಲಿ ದೊರಕುತ್ತದೆ. ಇದೊಂದು ರೀತಿಯ ಇನ್ಪೊಡೆಮಿಕ್ ಅಥವಾ ‘ವಿಷಯದ ಅತಿಸಾರ’ ಎಂದರೂ ತಪ್ಪಾಗಲಾರದು. ಯಾಕೆಂದರೆ ಆರೋಗ್ಯ ವಿಚಾರದಲ್ಲಿ, ರೋಗಗಳ ಬಗ್ಗೆ ಅನಗತ್ಯವಾದ ಮಾಹಿತಿ ರೋಗಿಗಳಿಗೆ ದೊರೆತಲ್ಲಿ ಉಪಯೋಗಕ್ಕಿಂತ ಹೆಚ್ಚು ಅಪಾಯಕ್ಕೆ ನಾಂದಿಯಾಗಲೂಬಹುದು. ತಮಗೆ ತಿಳಿದ ಅರೆ ಬರೆ ಜ್ಞಾನದಿಂದ ರೋಗದ ಬಗ್ಗೆ ಅನಗತ್ಯ ಮಾಹಿತಿಗಳನ್ನು ಎಲ್ಲಿಂದ ಪಡೆಯಲು ಸಾಧ್ಯವೋ ಅಲ್ಲೆಲ್ಲಾ ಅಲೆದಾಡಿ, ಹುಡುಕಾಡಿ ಅಗತ್ಯಕ್ಕಿಂತ ಹೆಚ್ಚು ಮಾಹಿತಿ ಪಡೆದು ಮಾನಸಿಕ ಖಿನ್ನತೆಗೆ ಹೋಗುವ ಸಾಧ್ಯತೆಯೂ ಇರುತ್ತದೆ.


ಇನ್ನು ಕೆಲವೊಮ್ಮೆ ತಮಗೆ ದೊರಕಿದ ಮಾಹಿತಿ ಸತ್ಯವೇ ಎಂಬುದನ್ನು ಪರಿಶೀಲಿಸುವ ಗೋಜಿಗೆ ರೋಗಿಗಳು ಹೋಗುವುದಿಲ್ಲ. ಅಂತರ್ಜಾಲದಲ್ಲಿ ಸಿಗುವ ಎಲ್ಲಾ ಮಾಹಿತಿಗಳು ನಿಜವಾಗಬೇಕಿಲ್ಲ. ಕೆಲವೊಮ್ಮೆ ತಪ್ಪು ಮಾಹಿತಿ ಕೂಡಾ ಇರಲು ಸಾಧ್ಯವಿದೆ. ಹೀಗೆ ತಮಗೆ ದೊರಕಿದ ವಿಚಾರಗಳನ್ನು ನಂಬಿ, ಅದರ ಸಹಾಯದಿಂದ ರೋಗ ನಿರ್ಣಯ ಮಾಡಿಕೊಳ್ಳುವುದು ಅಪಾಯಕಾರಿ. ಕೆಲವೊಮ್ಮೆ ಕೆಲವು ಅತಿ ಬುದ್ಧಿವಂತರು ಈ ಜ್ಞಾನವನ್ನೇ ಬಳಸಿಕೊಂಡು ರೋಗದ ಚಿಕಿತ್ಸೆಗೂ ಮುಂದಾಗುತ್ತಾರೆ. ಈ ರೀತಿ ಸ್ವಯಂ ರೋಗ ಗುರುತಿಸುವಿಕೆ ಮತ್ತು ಸ್ವಯಂ ಔಷಧಿಗಾರಿಕೆ ಅತೀ ಅಪಾಯಕಾರಿ.


ಈಗಿನ ಡಿಜಿಟಲ್ ಯುಗದಲ್ಲಿ ಎಲ್ಲಾ ವೈದ್ಯಕೀಯ ವಿಚಾರಗಳು ಎಲ್ಲೆಡೆ ದೊರಕುವುದು ರೋಗವನ್ನು ಬೇಗನೆ ಗುರುತಿಸಲು ಸಹಾಯವಾಗಲೂಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ವೈದ್ಯರ ಚಿಕಿತ್ಸೆಗೆ ಇದು ತೊಡಕಾಗಬಹುದು. ಈಗಿನ ಯುವ ಜನರಲ್ಲಿ ಈ ಪ್ರವೃತ್ತಿ ಹೆಚ್ಚಾಗುತ್ತಿದೆ. 21ನೇ ಶತಮಾನದ ಈ ಅಂತರ್ಜಾಲದ ಮೂಲಕ ಜನರೇ ರೋಗ ನಿರ್ಧರಿಸುವ ಹೊಸ ರೋಗಕ್ಕೆ “ಈಡಿಯಟ್ ಸಿಂಡ್ರೋಮ್” ಎಂದು ಕರೆಯುತ್ತಾರೆ.


ಏನಿದು ಈಡಿಯಟ್ ಸಿಂಡ್ರೋಮ್?

ಇಂಟರ್‌ನೆಟ್ ಡಿರೈವ್ಡ್ ಇನ್‌ಫಾರ್ಮೇಷನ್ ಅಬ್‌ಸ್ಟçಕ್ಷನ್ ಟ್ರೀಟ್‌ಮೆಂಟ್ ( IDIOT ) ಸಿಂಡ್ರೋಮ್ ಅಥವಾ ಈಡಿಯಟ್ ಸಿಂಡ್ರೋಮ್ ಎನ್ನುವುದು ಈ ಶತಮಾನದ ಹೊಸ ರೋಗ. ಹೆಚ್ಚಾಗಿ ಯುವ ಜನರು ಮತ್ತು ವಿದ್ಯಾವಂತರನ್ನೇ ಕಾಡುವ ಈ ರೋಗ, ತಂತ್ರಜ್ಞಾನವನ್ನು ಅಗತ್ಯಕ್ಕಿಂತ ಜಾಸ್ತಿ ಬಳಸುವ ಜನರಲ್ಲಿ ಹೆಚ್ಚು ಕಂಡುಬರುತ್ತದೆ. ಈ ರೋಗದಲ್ಲಿ ಜನರು ಅಂತರ್ಜಾಲದಲ್ಲಿ ಸಿಗುವ ಎಲ್ಲಾ ವಿಚಾರಗಳು ಮತ್ತು ವೈದ್ಯಕೀಯ ಮಾಹಿತಿಯನ್ನು ಸಂಪೂರ್ಣವಾಗಿ ಕಣ್ಣು ಮುಚ್ಚಿ ನಂಬುತ್ತಾರೆ. ಅದರಲ್ಲಿ ದೊರೆತ ಮಾಹಿತಿಗಳನ್ನು ತಾವೇ ವಿಮರ್ಷಿಸಿ, ಪರಾಮರ್ಷಿಸಿ ತಮ್ಮ ರೋಗವನ್ನು ತಾವೇ ನಿರ್ಧರಿಸಿ ಚಿಕಿತ್ಸೆಯನ್ನು ತಾವೇ ಮಾಡಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಸುಲಭವಾಗಿ ದಿನದ 24 ಗಂಟೆಗಳಲ್ಲಿಯೂ ಲಭ್ಯವಿರುವ ಡಾ. ಗೂಗಲ್ ಬಹಳ ಪ್ರಖ್ಯಾತಿ ಪಡೆದಿರುತ್ತಾರೆ.


ಪ್ರತಿಯೊಂದು ರೋಗಕ್ಕೂ ಈ ಡಾ. ಗೂಗಲ್ ವೈದ್ಯರ ಬಳಿ ಸುಲಭವಾದ ಚಿಕಿತ್ಸೆ ಇದೆ ಮತ್ತು ಪರಿಹಾರ ಇದೆ. ಜ್ವರ, ಶೀತ, ಕೆಮ್ಮು, ದಮ್ಮು, ತುರಿಕೆ ಕಜ್ಜಿ, ಕೆರೆತ ಯಾವುದೇ ಇರಲಿ ಈ ಡಾ. ಗೂಗಲ್ ಸವ್ಯಸಾಚಿ ವೈದ್ಯರಾಗಿ ತಕ್ಷಣವೇ ರೋಗ ನಿರ್ಣಯಕ್ಕೆ ಸಹಾಯ ಮಾಡುತ್ತಾರೆ. ತಮ್ಮ ಮನೆಯ ಪಕ್ಕದ ಕಾಂಪೌಂಡ್‌ನಲ್ಲಿ ನಿಜವಾದ ವೈದ್ಯರು ಇದ್ದರೂ, ಅವರ ಬಳಿ ಹೋಗದೆ ನೇರವಾಗಿ ಯಾವುದೇ ಅಪಾಯಿಂಟ್ಮೆಂಟ್ ಇಲ್ಲದೆ ಸುಲಭವಾಗಿ ಸಿಗುವ ಡಾ ಗೂಗಲ್ ಯುವಜನರಿಗೆ ಹೆಚ್ಚು ಇಷ್ಟವಾಗುತ್ತಾರೆ. ಒಂದೇ ಲಕ್ಷಣ ಹಲವು ರೋಗಗಳಲ್ಲಿ ಕಂಡು ಬರುವ ಕಾರಣ, ಅಂತರ್ಜಾಲದ ಎಲ್ಲಾ ಮಾಹಿತಿಗಳನ್ನು ಪರಿಪೂರ್ಣವಾಗಿ ನಂಬಲು ಸಾಧ್ಯವಿಲ್ಲ.


ಉದಾಹರಣಗೆ ಜ್ವರ, ಶೀತ, ಮೈಕೈ ನೋವು ಸುಸ್ತು ಹತ್ತು ಹಲವು ರೀತಿಯ ವೈರಲ್ ಜ್ವರಗಳಲ್ಲಿ ಕಂಡುಬರುತ್ತದೆ. ಅದು H1 N1 ಇರಬಹುದು, ಸಾಮಾನ್ಯ ವೈರಲ್ ಶೀತ ಜ್ವರ ಇರಬಹುದು, ಕೋವಿಡ್ ಜ್ವರವೂ ಇರಬಹುದು. ನಿಮ್ಮ ರೋಗದ ಚರಿತ್ರೆ, ಲಕ್ಷಣ, ಹಿನ್ನಲೆ ,ಕಾಲಾವರಿ ಮತ್ತು ದೇಹ ಪ್ರಕೃತಿ ಎಲ್ಲವನ್ನೂ ತಾಳೆ ಹಾಕಿ ವೈದ್ಯರು ರೋಗ ನಿರ್ಣಯ ಮಾಡಬೇಕೇ ಹೊರತು ಗಣಕಯಂತ್ರದೊಳಗಿರುವ ಡಾ. ಗೂಗಲ್ ಈ ರೀತಿಯ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಕಾರಣದಿಂದ ಡಾ|| ಗೂಗಲ್ ಉಪದೇಶವನ್ನು ಎಲ್ಲಾ ಸಂದರ್ಭಗಳಲ್ಲಿ ಬಳಸುವುದು ಅತ್ಯಂತ ಅಪಾಯಕಾರಿ.


ತೊಂದರೆಗಳು ಏನು?


1. ತಪ್ಪು ಮಾಹಿತಿ ಇರುವ ಸಾಧ್ಯತೆ ಇರುತ್ತದೆ. ಇಂಟರ್‌ನೆಟನಲ್ಲಿ ಇರುವ ಎಲ್ಲಾ ಮಾಹಿತಿಗಳು ಸತ್ಯವಾಗಿರಲೇಬೇಕಿಲ್ಲ


2. ಅಗತ್ಯಕ್ಕಿಂತ ಜಾಸ್ತಿ ಮಾಹಿತಿ ಮತ್ತು ಪರಿಹಾರ ದೊರಕುವ ಸಾಧ್ಯತೆ ಇದೆ. ಇದು ರೋಗಿಯ ಹಾದಿ ತಪ್ಪಿಸಲು ಸಾಕಾಗುತ್ತದೆ.


3. ಅಂತರ್ಜಾಲದಲ್ಲಿ ಸಿಗುವ ಮಾಹಿತಿಗಳು ಕೇವಲ ಮಾಹಿತಿ ಅಷ್ಟೆ. ಅದನ್ನು ಸರಿಯಾಗಿ ವಿಮರ್ಷಿಸದೆ, ಪರಮಾರ್ಷಿಸದೆ ಹಾಕಿರುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ.


4. ಹೆಚ್ಚಿನ ಸಂದರ್ಭದಲ್ಲಿ ಅಂತರ್ಜಾಲದಲ್ಲಿ ದೊರಕಿದ ಮಾಹಿತಿಗಳು ರೋಗಿಯಲ್ಲಿ ಭಯ ಸೃಷ್ಟಿಸುತ್ತದೆ ಮತ್ತು ಮಾನಸಿಕ ಖಿನ್ನತೆಗೆ ಕಾರಣವಾಗಲೂಬಹುದು. ತಮಗೆ ಇಲ್ಲದ ರೋಗದ ಬಗ್ಗೆ ಅಂತರ್ಜಾಲದಲ್ಲಿ ದೊರಕಿದ ಮಾಹಿತಿಯಿಂದ ತಾವೇ ನಿರ್ಧರಿಸಿಕೊಂಡು, ಆತ್ಮಹತ್ಯೆಗೆ ಮುಂದಾದ ಸಂದರ್ಭಗಳು ನಮ್ಮ ಮುಂದೆ ಎಷ್ಟೋ ಇದೆ.


5. ಅರೆ ಬರೆ ಜ್ಞಾನ ಮತ್ತು ತಪ್ಪು ಮಾಹಿತಿಯಿಂದ ರೋಗಿಗಳು ವೈದ್ಯರನ್ನು ಗಲಿಬಿಲಿಗೊಳಿಸಿ ಚಿಕಿತ್ಸೆಗೆ ತೊಂದರೆ ಉಂಟುಮಾಡುತ್ತಾರೆ.


6. ಸ್ವಯಂ ಔಷಧಿಗಾರಿಕೆಗೆ ದಾರಿ ಮಾಡಿಕೊಡುತ್ತಾ ಇದು ಬಹಳ ಅಪಾಯಕಾರಿ. ಕೆಲವೊಮ್ಮೆ ಈ ಸ್ವಯಂ ಮದ್ದುಗಾರಿಕೆ ರೋಗವನ್ನು ಉಲ್ಬಣಗೊಳಿಸಲು ಕಾರಣವಾಗುತ್ತದೆ. ಇನ್ನು ಕೆಲವೊಮ್ಮೆ ಅಡ್ಡ ಪರಿಣಾಮದಿಂದಾಗಿ ರೋಗಿಯ ಜೀವಕ್ಕೂ ಕುತ್ತು ಬರಲು ಸಾಧ್ಯವಿದೆ.


7. ಹೆಚ್ಚಿನ ಎಲ್ಲ ರೋಗಗಳ ಚಿಕಿತ್ಸೆಯಲ್ಲಿ ರೋಗಿ ಮತ್ತು ವೈದ್ಯರ ನಡುವಿನ ನಂಬಿಕೆಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಆದರೆ ಈ ಈಡಿಯಟ್ ಸಿಂಡ್ರೋಮ್‌ನಿಂದಾಗಿ ರೋಗಿ ಪೂರ್ತಿಯಾಗಿ ವೈದ್ಯರನ್ನು ನಂಬಲು ಸಿದ್ಧನಿಲ್ಲ. ವೈದ್ಯ ರೋಗಿಯ ನಡುವೆ ಅನಗತ್ಯ ಕಂದಕ ಸೃಷ್ಟಿ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.


ಯಾರಿಗೆ ಈ ರೋಗ ಹೆಚ್ಚು ಕಾಡುತ್ತದೆ?


1. ಯುವ ಜನರಿಗೆ ಹೆಚ್ಚು ಕಾಡುತ್ತದೆ. ಮಕ್ಕಳು ಮತ್ತು ಮುದುಕರಿಗೆ ಈ ರೋಗ ಬರುವ ಸಾಧ್ಯತೆ ಬಹಳ ವಿರಳ


2. ನಗರ ಪ್ರದೇಶಗಳಲ್ಲಿ ವಾಸಿಸುವವರಿಗೆ ಹೆಚ್ಚು ಕಾಡುತ್ತದೆ. ಹಳ್ಳಿ ಪ್ರದೇಶದ ಜನರಿಗೆ ಈ ರೋಗ ಹೆಚ್ಚು ಕಾಡುವುದಿಲ್ಲ.


3. ಸುಶಿಕ್ಷಿತ ಯುವಕರಿಗೆ ಹೆಚ್ಚು ಕಾಡುತ್ತದೆ. ಅನಕ್ಷರಸ್ಥರಿಗೆ ಈ ರೋಗ ಬರುವ ಸಾಧ್ಯತೆ ಕಡಿಮೆ


4. ತಂತ್ರಜ್ಞಾನ ಬಳಸುವ, ಅಂತರ್ಜಾಲಕ್ಕೆ ಹೆಚ್ಚು ಮಾರುಹೋದ ಕಂಪ್ಯೂಟರ್‌ನ್ನು ದೈನಂದಿನ ಜೀವನದಲ್ಲಿ ಬಳಕೆ ಮಾಡುವ ಜನರಿಗೆ ಈ ರೋಗ ಬಹಳ ಬೇಗ ಬರುವ ಸಾಧ್ಯತೆ ಇರುತ್ತದೆ.


5. ಬಡವರಿಗೆ ಈ ರೋಗ ಬರುವ ಸಾಧ್ಯತೆ ತೀರಾ ಕಡಿಮೆ. ಶ್ರೀಮಂತರಿಗೆ ಹೆಚ್ಚು ಮೊಬೈಲ್ ಕಂಪ್ಯೂಟರ್‌ಗಳಿಗೆ ಆದ್ಯತೆ ನೀಡುವ ವ್ಯಕ್ತಿಗಳಿಗೆ ಈ ರೋಗ ಜಾಸ್ತಿ ಬರುತ್ತದೆ.


ಸೈಬರ್ ಕಾಂಡ್ರಿಯಾ ಎಂಬ ಮನೋವ್ಯಾಧಿ


ನಿಮಗೇನಾದರೂ ನಿಮ್ಮ ವೈದ್ಯರು ನಿಮಗೆ ನೀಡಿದ ಔಷಧಿಯ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅಡ್ಡಪರಿಣಾಮದ ಬಗ್ಗೆ ಅಂತರ್ಜಾಲದ ಮುಖಾಂತರ ಪದೇ ಪದೇ ಹುಡುಕಾಡುವ ಕೆಟ್ಟ ಕೂತೂಹಲ ಇದೆಯಾದರೆ ನೀವು ಮಗದೊಮ್ಮೆ ನಿಮ್ಮ ಈ ಹವ್ಯಾಸವನ್ನು ಪುನಾರಮರ್ಷಿಸುವುದು ಒಳಿತು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯ ಮತ್ತು ರೋಗಿಯ ಸಂಬಂಧವು ಮೊದಲಿನಂತಿಲ್ಲ. ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ಈಗಿನ ಕಾಲದಲ್ಲಿ ಭಾಗಶಃ ತನ್ನ ಅರ್ಥವನ್ನೇ ಕಳೆದುಕೊಂಡಿದೆ.


ಯಾಕೆಂದರೆ ಒಂದೆಡೆ ವ್ಯಾಪಾರೀ ಮನೋಭಾವ ಹೊಂದಿರುವ ಕೆಲವೊಂದು ವೈದ್ಯರು, ಇನ್ನೊಂದೆಡೆ ಯಾರನ್ನು ನಂಬಿದರೂ ವೈದ್ಯರನ್ನು ನಂಬಬೇಡಿ ಎಂಬ ಮನೋಭಾವ ಹೊಂದಿರುವ ಹಲವೊಂದು ರೋಗಿಗಳಿಂದಾಗಿ ವೈದ್ಯ ರೋಗಿಯ ಸಂಬಧವೂ ಹಳಸಿದೆ. ಎಂದರೂ ತಪ್ಪಗಾಲಿಕ್ಕಿಲ್ಲ. ಇಂತಹ ಕಾಲಘಟ್ಟದಲ್ಲಿ ಕೆಲವೊಂದು ರೋಗಿಗಳು ತಮಗೆ ವೈದ್ಯರು ನೀಡಿದ ಔಷಧಿಯಿಂದಾಗಿ ಏನಾದರೂ ಅಡ್ಡಪರಿಣಾಮ ಬಂದರೆ ಅಥವಾ ಕೊಟ್ಟಂತಹ ಔಷಧಿ ರೋಗವನ್ನು ಗುಣಪಡಿಸಬಹುದಕ್ಕಿಂತ ಜಾಸ್ತಿ ತೊಂದರೆ ಉಂಟುಮಾಡಿರೆ ಎಂಬ ಭಾವನೆಯಿಂದ, ಅಂತರ್ಜಾಲ ಮಾಹಿತಿ ಪಡೆದು, ಔಷದಿಗಳನ್ನ ನಿಲ್ಲಿಸುದನ್ನ ಚಾಳಿಯಾಗಿ ಮಾಡಿಕೊಂಡ ಪರಿಣಾಮವಾಗಿ, ಈಗ ಹೊಸದಾಗಿ ಹುಟ್ಟಿಕೊಂಡ ಮನೋವ್ಯಾದಿಯೇ ‘ಸೈಬರ್‌ಕಾಂಡ್ರಿಯ’ ಎಂಬ ಹೊಚ್ಚ ಹೊಸ ರೋಗ ಎಂದರೂ ಅತಿಶಯವಾಗಲಾರದು.


ಏನಿದು ಸೈಬರ್ ಕಾಂಡ್ರಿಯ?


ಸೈಬರ್‌ ಕಾಂಡ್ರಿಯಾ ಎಂಬುದೊಂದು ಮಾನಸಿಕ ಸ್ಥಿತಿಯಾಗಿದ್ದು, ಇಲ್ಲಿ ರೋಗಿಗಳು ವೈದ್ಯರನ್ನು ನಂಬದೇ, ಸರ್ವ ಸಮಸ್ಯೆಗಳನ್ನೂ ಅಂತರ್ಜಾಲದ ಮಾಹಿತಿಯನ್ನೇ ನಂಬಿ, ವೈದ್ಯರ ಸಲಹೆಗಳನ್ನು ಧಿಕ್ಕರಿಸಿ, ತಮಗಿಷ್ಟ ಬಂದಂತೆ ಔಷದಿಗಳನ್ನು ಬಳಸುವುದು ಮತ್ತು ನಿಲ್ಲಿಸುವುದು. ಕೆಲವೊಂದು ಋಣತ್ಮಾಕ ಮನೋಸ್ಥಿತಿ ಹೊಂದಿರುವವರು ಅಂತರ್ಜಾಲದಲ್ಲಿ ನೀಡಿರುವ ಮಾಹಿತಿಯನ್ನು ಅತಿಯಾಗಿ ನಂಬಿ, ಔಷದಿಗಳ ಸಣ್ಣಪುಟ್ಟ ಅಡ್ಡಪರಿಣಾಮಗಳ್ನು ವೈಭವೀಕರಿಸಿ, ಔಷಧಿಯನ್ನೇ ನಿಲ್ಲಿಸುವ ಹಂತಕ್ಕೆ ಬರುತ್ತಾರೆ. ಇಂತಹ ಮನೋಸ್ಥಿತಿಯನ್ನೇ ‘ಸೈಬರ್‌ಕಾಂಡ್ರಿಯ’’ ಎನ್ನುತ್ತಾರೆ.


ಈಗಿನ ಕಾಲಘಟ್ಟದಲ್ಲಿ ಸಕಲ ಮಾಹಿತಿಯೂ ಅಂತರ್ಜಾಲದಲ್ಲಿ ಬೆರಳ ತುದಿಯಲ್ಲಿಯೇ ಸಿಗುತ್ತದೆ. ಯಾವುದೇ ರೋಗದ ಬಗ್ಗೆ, ಔಷದಿಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ. ಆದರೆ ಆ ಎಲ್ಲಾ ಮಾಹಿತಿಗಳು ಎಲ್ಲರಿಗೂ ಎಲ್ಲಾ ಕಾಲದಲ್ಲಿಯೂ ಅನ್ವಯಿಸಬೇಕಿಲ್ಲ ಅಂತರ್ಜಾಲದಲ್ಲಿ ಮಾಹಿತಿಯನ್ನು ತಿಳಿದುಕೊಳ್ಳವುದು ತಪ್ಪಲ್ಲ. ಇದೊಂದು ಎರಡು ಅಲುಗಿನ ಕತ್ತಿಯಂತೆ. ಧನಾತ್ಮಕವಾಗಿ ರೋಗಿಗಳು ಈ ವಿಷಯವನ್ನು ಚಿಂತಿಸಿ ರೋಗಗಳ ಬಗ್ಗೆ, ಔಷಧಿಗಳ ಅಡ್ಡಪರಿಣಾಮಗಳ ಬಗ್ಗೆ ವೈದ್ಯರ ಬಳಿ ಮುಕ್ತವಾಗಿ ಚರ್ಚಿಸಿದರೆ ಖಂಡಿತವಾಗಿಯೂ ವೈದ್ಯರರಿಗೆ ರೋಗಿಯನ್ನು ಚಿಕಿತ್ಸೆ ನೀಡುವಲ್ಲಿ ಮತ್ತು ಗುಣಪಡಿಸುವಲ್ಲಿ ಸಹಕಾರಿಯಾದೀತು.


ಆದರೆ ರೋಗಿಗಳು ಅಂತರ್ಜಾಲದಲ್ಲಿ ಸಿಗುವ ಮಾಹಿತಿಯನ್ನು ಋಣತ್ಮಾಕವಾಗಿ ಚಿಂತಿಸಿ, ವೈದ್ಯರ ಬಳಿ ಏನನ್ನು ಹೇಳದೆ, ಚರ್ಚಿಸದೆ ತಮ್ಮೊಳಗೇ ಈ ವಿಚಾರಗಳನ್ನು ಅಡಗಿಸಿಟ್ಟುಕೊಂಡು, ತಮ್ಮ ಅರೆ ಬರೆ ಜ್ಞಾನದಿಂದ ರೋಗದ ಚಿಕಿತ್ಸೆಯಲ್ಲಿ ತಮ್ಮದೇ ಆದ ನಿರ್ಣಯಗಳನ್ನು ಮಾಡಿಕೊಂಡು, ಔಷಧಿಯನ್ನು ಸರಿಯಾಗಿ ಸೇವಿಸದೇ ಇರಬಹುದು ಮತ್ತು ಹತ್ತು ಹಲವು ಸಮಸ್ಯೆಗಳನ್ನು ವೈದ್ಯರಲ್ಲಿ ಹೇಳಿ ವೈದ್ಯರಲ್ಲೂ ಗೊಂದಲಮೂಡಿಸಿ ಚಿಕಿತ್ಸೆಯ ಹಾದಿ ತಪ್ಪುವಂತೆ ಮಾಡುತ್ತಾರೆ. ಸೈಬರ್‌ಕಾಂಡ್ರಿಯಾ ರೋಗವನ್ನು ಕಂಪ್ಯೂಕಾಂಡ್ರಿಯಾ ಎಂದು ಸಂಭೋಧಿಸಲಾಗುತ್ತದೆ.


ಈ ಸೈಬರ್‌ ಕಾಂಡ್ರಿಯಾ ಎನ್ನುವುದು ವೈದ್ಯ ಸಮೂಹಕ್ಕೆ ಬಂದೊದಗಿದ ದೊಡ್ಡದಾದ ಸವಾಲು ಎಂದರೂ ತಪ್ಪಾಗಲಿಕ್ಕಿಲ್ಲ ಯಾಕೆಂದರೆ ಸಣ್ಣ ಪುಟ್ಟ ಕಾಯಿಲೆಗಳಿಗೂ ರೋಗಿಗಳು x-ray ಅಥವಾ C.T scan ಮಾಡಿಸುವಂತೆ ದಂಬಾಲು ಬೀಳುತ್ತಾರೆ. ಯಾಕೆಂದರೆ ಅಂತರ್ಜಾಲದಲ್ಲಿ ಯಾವುದಾದರೂ ವಿರಳ ರೋಗ ಬಂದಾಗ ಮೆದುಳಿನ ಸ್ಕ್ಯಾನ್ ಮಾಡಿಸಬೇಕು ಎಂದು ಬರೆದಿರುವುದನ್ನೇ ಬಲವಾಗಿ ನಂಬುತ್ತಾರೆ. ಈ ಕಾರಣದಿಂದ ಹೆಚ್ಚಿನ ಸಂದರ್ಭಗಳಲ್ಲಿ ರೋಗಿಯನ್ನು ಸಂತಸಪಡಿಸಲು ಮತ್ತು ರೋಗಿಯನ್ನು ಕಳೆದುಕೊಳ್ಳಬಾರದೆಂಬ ಉದ್ದೇಶದಿಂದ ವೈದ್ಯರು ಅನಿವಾರ್ಯವಾಗಿ ಅನಗತ್ಯ ಪರೀಕ್ಷೆ ಮಾಡಿಸಬೇಕಾಗುತ್ತದೆ.


ರೋಗಿಗಳು ವೈದ್ಯರಿಗಿಂತಲೂ ಜಾಸ್ತಿ ಅಂತರ್ಜಾಲದ ಮಾಹಿತಿಯನ್ನೇ ಹೆಚ್ಚು ನಂಬುವುದು ಅರಗಿಸಿಕೊಳ್ಳಲಾಗದ ಸತ್ಯ ಎಂದರೂ ತಪ್ಪಾಗಲಾರದು. ಪ್ರತಿಯೊಂದು ರೋಗ ಮತ್ತು ಪ್ರತಿಯೊಂದು ಔಷಧಿಯೂ ಭಿನ್ನವಾಗಿದ್ದು ಬೇರೆ ಬೇರೆ ಕಾರಣಗಳಿಗಾಗಿ ಬೇರೆ ಬೇರೆ ರೋಗಿಗಳಲ್ಲಿ ಬಳಸುತ್ತಾರೆ. ಉದಾಹರಣೆಗೆ ವಯಾಗ್ರ ಎಂಬ ಔಷಧಿಯನ್ನು ವಯಸ್ಕರಲ್ಲಿ ಲೈಂಗಿಕ ದೌರ್ಬಲ್ಯವಿದ್ದವರಲ್ಲಿ ಬಳಸುತ್ತಾರೆ ಮತ್ತು ಚಿಕ್ಕ ಮಕ್ಕಳಲ್ಲಿ ಅದೇ ವಯಾಗ್ರ ಔಷಧಿಯನ್ನು ಹೃದಯದ ತೊಂದರೆಗಳಿಗೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಬಳಸಲಾಗುವುದು.


ಏನಿದು ಡಾ|| ಗೂಗಲ್ ?


ಈ ಶತಮಾನದ ಬಹುದೊಡ್ಡ ವೈದ್ಯ ಎಂದರೆ ಡಾ. ಗೂಗಲ್ ಎಂದರೂ ತಪ್ಪಲ್ಲ. ಯಾಕೆಂದರೆ ನಿಮಗೆ ಯಾವುದೇ ವೈದ್ಯಕೀಯ ಮಾಹಿತಿ ಬೇಕೆಂದಲ್ಲಿ ನೀವು ಮೊದಲು ಡಾ|| ಗೂಗಲ್ ಬಳಿ ಹೋಗುವುದು ತಪ್ಪಲ್ಲ, ಅದರೆ ಸಂಪೂರ್ಣವಾಗಿ ಅದನ್ನೇ ನಂಬುವುದು ಸರ್ವತಾ ಸಹ್ಯವಲ್ಲ ಹಿಂದಿನ ಕಾಲದಲ್ಲಿ ಫ್ಯಾಮಿಲಿ ಫಿಸಿಷಿಯನ್ ಅಥವಾ ಕುಟುಂಬ ವೈದ್ಯ ಎಂಬ ವ್ಯವಸ್ಥೆ ಇತ್ತು. ಯಾವುದೇ ರೋಗ ಬಂದಾಗ ನಿಮ್ಮ ಕುಟುಂಬ ವೈದ್ಯರ ಬಳಿ ಹೋಗಿ, ಅವರು ನಾಡಿಮಿಡಿತ. ಎದೆ ಬಡಿತ ಮತ್ತು ದೇಹದ ಪರೀಕ್ಷೆ ಮಾಡಿ ರೋಗ ನಿರ್ಣಯ ಮಾಡುತ್ತಿದ್ದರು. ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ಸೂಕ್ತ ತಜ್ಞ ವೈದ್ಯರ ಬಳಿ ಕಳುಹಿಸುವಂತಹಾ ವ್ಯವಸ್ಥೆ ಇತ್ತು.


ಆದರೆ ಈಗ ಕುಟುಂಬ ವೈದ್ಯರ ಸಂಖ್ಯೆ ಕಡಿಮೆ, ಇದ್ದರೂ ಹಳ್ಳಿಗಳಲ್ಲಿ ಮಾತ್ರ, ನಗರ ಪ್ರದೇಶಗಳಲ್ಲಿ ಎಲ್ಲರಿಗೂ ಡಾ|| ಗೂಗಲ್ ಅವರೇ ಕುಟುಂಬ ವೈದ್ಯರು. ಡಾ|| ಗೂಗಲ್ ಸಹಾಯದಿಂದ ರೋಗಿಗಳು ರೋಗ ನಿರ್ಣಯ ಮಾಡುತ್ತಾರೆ ಮತ್ತು ಚಿಕಿತ್ಸೆಯನ್ನು ಮಾಡುತ್ತಾರೆ. ಯಾವಾಗ ರೋಗ ಚಿಕಿತ್ಸೆಗೆ ಸ್ಪಂದಿಸುದಿಲ್ಲವೆಂದಾಗ ತಕ್ಷಣವೇ ವೈದ್ಯರ ಬಳಿ ಓಡುತ್ತಾರೆ. ಇದು ಬಹಳ ಅಪಾಯಕಾರಿ ಯಾಕೆಂದರೆ ಅಷ್ಟರಲ್ಲಿ ರೋಗ ಹದಗೆಟ್ಟು ಪರಿಸ್ಥಿತಿ ಬಿಗಡಾಯಿಸಿರುತ್ತದೆ. ಇದರ ಜೊತೆಗೆ ಸಾಕಷ್ಟು ಅಮೂಲ್ಯವಾದ ಸಮಯ ವ್ಯರ್ಥವಾಗಿ ರೋಗ ಎಲ್ಲೆಡೆ ಹರಡಿ, ಸಾಕಷ್ಟು ಹಣ ಖರ್ಚು ಮಾಡುವಂತ ಸ್ಥಿತಿಗೆ ತಲುಪಿರುತ್ತಾರೆ.


ಅಂತರ್ಜಾಲದಲ್ಲಿ ಔಷಧಿಗಳ ಅಡ್ಡ ಪರಿಣಾಮಗಳನ್ನೇಲ್ಲಾ ನಮೂದಿಸಿರುತ್ತಾರೆ. ಅತಿ ಸಾಮಾನ್ಯ ಅಡ್ಡ ಪರಿಣಾಮದ ಜೊತೆಗೆ ಅತಿ ವಿರಳ ಅಡ್ಡ ಪರಿಣಾಮವನ್ನೂ ಅಲ್ಲಿ ವಿವರಣೆ ನೀಡಿರುತ್ತಾರೆ. ಆದರೆ ಋಣಾತ್ಮಕ ಚಿಂತನೆಯುಳ್ಳ ವ್ಯಕ್ತಿ ಅತಿ ವಿರಳ ಅಡ್ಡ ಪರಿಣಾಮದ ಬಗ್ಗೆ ಹೆಚ್ಚು ಚಿಂತಿಸುತ್ತಾನೆ, ರೋಗದ ಬಗ್ಗೆ ಸಂಪೂರ್ಣ ಮಾಹಿತಿ, ಮಾರ್ಗ ದರ್ಶನ ಮತ್ತು ಔಷಧಿಗಳ ಬಗ್ಗೆ ತಿಳಿ ಹೇಳುವುದು ವೈದ್ಯರ ಕರ್ತವ್ಯ. ಅಂತರ್ಜಾಲದಲ್ಲಿ ಬರೀ ಮಾಹಿತಿ ಮಾತ್ರ ಲಬ್ಯವಿದೆ. ಆದರೆ ವೈದ್ಯರು ರೋಗಿಯನ್ನು ಸಂತೈಸಿ, ತಿಳಿಹೇಳಿ, ಮಾರ್ಗದರ್ಶನ ನೀಡಿ ಚಿಕಿತ್ಸೆ ಆರಂಭಿಸುವ ಮೊದಲೇ ಅರ್ಧ ರೋಗವನ್ನು ಗುಣಪಡಿಸುತ್ತಾರೆ. ಅಂತರ್ಜಾಲದ ಮಾಹಿತಿ ಪಡೆದು ವೈದ್ಯರಾಗುವುದಾದಲ್ಲಿ ಪ್ರತಿಯೊಬ್ಬರು ವೈದ್ಯರೆ. ಅಂತರ್ಜಾಲದಲ್ಲಿ ಸಿಗುವುದು ಬರೀ ಮಾಹಿತಿ ಮಾತ್ರ ಎಂಬ ಕಟು ಸತ್ಯವನ್ನು ರೋಗಿಗಳು ಅರ್ಥ ಮಾಡಿಕೊಂಡಲ್ಲಿ ವೈದ್ಯರ ಕೆಲಸ ಸುಲಭವಾಗುವುದರಲ್ಲಿ ಎರಡು ಮಾತೇ ಇಲ್ಲ.


ಕೊನೆ ಮಾತು


ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮತ್ತು ತನ್ನವರ ಆರೋಗ್ಯದ ಬಗ್ಗೆ ಕಾಳಜಿವಹಿಸಲೇ ಬೇಕು ಇದು ಪ್ರಕೃತಿ ನಿಯಮ. ಆದರೆ ಅತಿಯಾದ ಕಾಳಜಿ ವಹಿಸುವುದು ತಪ್ಪು. ಪ್ರತಿಯೊಂದು ರೋಗದ ಬಗ್ಗೆ ಮತ್ತು ಔಷದದ ಬಗ್ಗೆ ಅಂತರ್ಜಾಲದಲ್ಲಿ ಈಗ ಎಲ್ಲರಿಗೂ ಉಚಿತ ಮಾಹಿತಿ ಲಭ್ಯವಿದೆ. ಆದರೆ ಲಭ್ಯವಿರುವ ವಿಷಯವೆಲ್ಲಾ ನಿಜವೆಂದಲ್ಲ. ಅವೆಲ್ಲವೂ ಬರೀ ಮಾಹಿತಿಗಳು ಅಷ್ಟೇ. ಇದರ ಜೊತೆಗೆ ಔಷದಿಗಳ ಬಗ್ಗೆ ಮತ್ತು ರೋಗದ ವ್ಯಕ್ತಿಗಳ ಅಭಿಪ್ರಾಯ ಇರುತ್ತದೆ. ವೈದ್ಯಲೋಕಕ್ಕೆ ಬೇಕಾಗಿರುವುದು ಬರೀ ಮಾಹಿತಿ ಮತ್ತು ಅಭಿಪ್ರಾಯಗಳಲ್ಲ, ಸ್ಯಾಕ್ಷವಿರುವ ನಿಜವಾದ ಸಂಶೋಧನೆಗಳು ಮತ್ತು ಅವುಗಳ ಫಲಿತಾಂಶದ ಬಗೆಗಿನ ವಿಚಾರಗಳು ವೈದ್ಯಕೀಯ ಲೋಕಕ್ಕೆ ಬೇಕಾಗಿರುತ್ತದೆ. ವೈದ್ಯರು ಅದರ ಆಧಾರದ ಮೇಲೆ ರೋಗನಿರ್ಣಯ ಮಾಡುತ್ತಾರೆ. ಡಾ|| ಗೂಗಲ್‌ನಲ್ಲಿ ಬರೀ ಮಾಹಿತಿ ಮತ್ತು ಅಭಿಪ್ರಾಯ ಮಾತ್ರ ಲಭ್ಯವಿದೆ.


ಆದರೆ ನಿಜವಾದ ವೈದ್ಯರು ರೋಗದ ಚರಿತ್ರೆ, ಲಕ್ಷಣ, ರೋಗಿಯ ದೇಹ ಪ್ರಕೃತಿ, ಲಿಂಗ, ವಯಸ್ಸು, ಮಾನಸಿಕ ಸ್ಥಿತಿ ಮತ್ತು ಲಭ್ಯವಿರುವ ಪರೀಕ್ಷೆಗಳ ಫಲಿತಾಂಶವೆಲ್ಲವನ್ನೂ ಅಭ್ಯಸಿಸಿ ತನ್ನ ತಿಳುವಳಿಕೆ, ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯವನ್ನು ಬಳಸಿ, ರೋಗದ ಬಗ್ಗೆ ಮತ್ತು ಔಷದಗಳ ಬಗ್ಗೆ ಸೂಕ್ತ ನಿರ್ಣಯ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ನೀವು ನಿಮ್ಮ ಡಾ||ಗೂಗಲ್ ಸಹವಾಸ ಬಿಟ್ಟು, ನಿಜವಾದ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಅಗತ್ಯ ಮಾಹಿತಿ ಮತ್ತು ಅಭಿಪ್ರಾಯಗಳಿಗೆ ಅಂತರ್ಜಾಲವನ್ನು ಅವಲಂಬಿಸುವುದು ತಪ್ಪಲ್ಲ. ಆದರೆ ಅದನ್ನೆ ಸರ್ವಸ್ವ ಎಂದು ನಂಬಿ ವೈದ್ಯರ ಮಾತನ್ನು ದಿಕ್ಕರಿಸುವುದು ಮೂರ್ಖತನದ ಪರಮಾವಧಿಯಾದೀತು. ಇನ್ನೂ ಕಾಲ ಮಿಂಚಿಲ್ಲ, ನೀವು ನಂಬಿದ ನಿಮ್ಮ ವೈದ್ಯರ ಮೇಲೆ ಸಂಪೂರ್ಣ ಭರವಸೆ ಇಡಿ. ನಿಮ್ಮೆಲ್ಲ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ನಿಮ್ಮ ನಂಬಿಕೆ ಯಾವತ್ತೂ ಸುಳ್ಳಾಗಲಿಕ್ಕಿಲ್ಲ. ಅದರಲ್ಲಿಯೆ ನಿಮ್ಮ, ವೈದ್ಯರ ಮತ್ತು ಸಮಾಜದ ಆರೋಗ್ಯ ಅಡಗಿದೆ.


- ಡಾ|| ಮುರಲೀ ಮೋಹನ್‌ ಚೂಂತಾರು

ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು

BDS, MDS,DNB,MOSRCSEd(U.K), FPFA, M.B.A

ಮೊ : 9845135787

drmuraleechoontharu@gmail.com


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top