ಸಂಸ್ಕೃತ ಕವಿಗಳ ಕಣ್ಣಲ್ಲಿ- 'ಮಹಾತ್ಮಾ ಗಾಂಧೀಜಿ'

Upayuktha
0

“ಸಂಸ್ಕೃತ ಭಾಷೆಯನ್ನು ಕಲಿಯದ ಹೊರತಾಗಿ ಭಾರತದ ಪ್ರಜೆ ನಿಜವಾದ ಭಾರತೀಯನಾಗಲಾರ“- ಮಹಾತ್ಮಾ ಗಾಂಧೀಜಿ.


ಸಂಸ್ಕೃತ ಭಾಷೆಯ ಮೇಲಿನ ಗಾಂಧೀಜಿಯವರ ಅಭಿಮಾನದ ಈ ಮಾತನ್ನು ಯಾರೂ ಅಲ್ಲಗೆಳೆಯರಾರರು. ಸಂಸ್ಕೃತ ಭಾಷೆಯ ಬಗ್ಗೆ ಗಾಂಧೀಜಿಯವರ ಪ್ರೀತಿ ಹಾಗೂ ಕಾಳಜಿ ಅಪೂರ್ವವಾದದ್ದು. ಅವರ ಪ್ರಕಾರ   'ಸಂಸ್ಕೃತ ಓದದಿದ್ದರೆ  ಶಿಕ್ಷಣವೇ ಅಪೂರ್ಣ'. ಭಾರತದ ಭವ್ಯ ಸಂಪತ್ತುಗಳೆಂದರೆ ಒಂದು ಸಂಸ್ಕೃತ ಭಾಷೆ ಮತ್ತೊಂದು ಸಂಸ್ಕೃತಿಯೇ ಆಗಿದೆ. ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತದಲ್ಲಿ ವಿಪುಲವಾದ ಸಾಹಿತ್ಯದ  ರಾಶಿಯೇ ಇದೆ. ಇಂತಹ ಸಾಹಿತ್ಯ ರಾಶಿಯಲ್ಲಿ ಅನೇಕ ಕವಿಗಳು ಸಂಸ್ಕೃತ ಭಾಷಾ ಪ್ರಿಯರಾದ ಗಾಂಧಿಜೀಯವರ ಜೀವನ, ಸಾಮಾಜಿಕ ಹೋರಾಟ ಹಾಗೂ ಇತರ ಅವರ ಸಾಧನೆಗಳ ಬಗ್ಗೆ ಅನೇಕ ಕಾವ್ಯಗಳನ್ನು, ನಾಟಕಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವೊಂದನ್ನು ತಿಳಿಯುವ ಪ್ರಯತ್ನ ಮಾಡೋಣ. 


ಗದ್ಯ ಕಾವ್ಯಗಳು:  

ಪುಣೆಯ ಶ್ರೀನಿವಾಸ ತಾಡಪತ್ರಿಕರ್ ಅವರು ಗಾಂಧೀ ಗೀತಾದಲ್ಲಿ  18 ಅಧ್ಯಾಯಗಳಲ್ಲಿ ಗಾಂಧೀ ಜೀವನವನ್ನು ಚಿತ್ರಿಸಿದ್ದಾರೆ. ಚಾರುದೇವಶಾಸ್ತ್ರಿಗಳು ಶ್ರೀ ಗಾಂಧೀ ಚರಿತಮ್ ಕೃತಿಯಲ್ಲಿ ಗಾಂಧೀಜಿಯವರ ಜೀವನ ವೃತ್ತಾಂತವನ್ನು ಬರೆದಿದ್ದಾರೆ. 1930 ರಲ್ಲಿ ಪ್ರಕಟವಾದ ಈ ಕೃತಿಯನ್ನು ಗಾಂಧೀಜಿಯವರ ಬಗ್ಗೆ ಬಂದ ಪ್ರಥಮ ಕೃತಿಯೆಂದು ಹೇಳಲಾಗುತ್ತಿದೆ. ದ್ವಾರಕಾ ಪ್ರಸಾದ್ ತ್ರಿಪಾಠಿಯವರು 'ಗಾಂಧಿನ: ತ್ರಯೋ ಗುರವಃ ಶಿಷ್ಯಶ್ಚ' ಎಂಬ ಗದ್ಯ ಬರೆದಿದ್ದಾರೆ. ರಮೇಶ್ ಚಂದ್ರಶುಕ್ಲಾ ಅವರು 'ಚಾರುಚರಿತಚರ್ಯ', ಪಂಡರಿನಾಥ್ ಪಾಠಕ್ ಅವರು 'ಶ್ರೀ ಮಹಾತ್ಮಾನು ಜೀವನಚರಿತಮ್', ಕೆ. ಎಸ್ ನಾಗರಾಜನ್ ಅವರು 'ಭಾರತೀಯ ದೇಶಭಕ್ತಿ ಚರಿತಂ'  ಗದ್ಯ ಗ್ರಂಥಗಳನ್ನು ಬರೆದಿದ್ದಾರೆ.


ಮಹಾಕಾವ್ಯಗಳು: 

ಪಂಡಿತ ಕ್ಷಮಾರಾವ್ ಅವರು 'ಸತ್ಯಾಗ್ರಹ ಗೀತಾ' ಎಂಬ ಮಹಾಕಾವ್ಯದಲ್ಲಿ ಗಾಂಧೀಜಿಯವರ ಸತ್ಯಾಗ್ರಹ ಚಳುವಳಿಯ ಬಗ್ಗೆ ವರ್ಣಿಸಿದ್ದಾರೆ. ಹಾಗೆಯೇ ಇವರು 'ಉತ್ತರ ಸತ್ಯಾಗ್ರಹ ಗೀತಾ' ಹಾಗೂ 'ಸ್ವಾರಾಜ್ಯ ವಿಜಯ' ಎಂಬ ಮಹಾಕಾವ್ಯಗಳನ್ನು ಬರೆದು ಪ್ರಕಟಿಸಿದ್ದಾರೆ. ಪುಣೆಯ ಜಿ. ವಿ. ತೇಕೇದಾರ್ ಅವರು 'ಮಹತ್ಮಾಯನಮ್' ಎಂಬ 14 ಸರ್ಗದ ಮಹಾಕಾವ್ಯ ಬರೆದಿದ್ದಾರೆ. ಬೊಮ್ಮಲಾಪುರದ ವೆಂಕಟರಾಮ  ಭಟ್ಟರು 'ಮೋಹನಾಯನಮ್' ಮಹಾಕಾವ್ಯ ಬರೆದಿದ್ದಾರೆ. ಮುತ್ತುಕುಲಂ ಶ್ರೀಧರ ಅವರು 'ನವ ಭಾರತಮ್' ಕಾವ್ಯ ಬರೆದು ಪ್ರಕಟಿಸಿದ್ದಾರೆ. ರೇವಾ ಪ್ರಸಾದ್ ದ್ವಿವೇದಿ ಅವರು ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದ ಚಿತ್ರಣ, ಅಹಿಂಸೆ, ಅಸ್ಪೃಶ್ಯತೆ ನಿವಾರಣೆ ಇತ್ಯಾದಿ ವಿಷಯಗಳನ್ನು 'ಸ್ವಾತಂತ್ರ್ಯ ಸಂಭವಮ್' ಎಂಬ ಮಹಾಕಾವ್ಯದಲ್ಲಿ ಚಿತ್ರಿಸಿದ್ದಾರೆ. 


ಸುಧಾಕರ ಶುಕ್ಲಾ ಅವರು 'ಗಾಂಧೀ ಸೌಗಂಧಿಕಮ್', ಶ್ರೀನಿವಾಸ್ ತಾಡ ಪತ್ರಿಕರ್ ಅವರು 'ಗಾಂಧೀ ಗಾಥಾ', ಶಿವಗೋವಿಂದ ತ್ರಿಪಾಠಿ ಅವರು 'ಶ್ರೀ ಗಾಂಧೀ ಗೌರವಮ್ , ವೀರೆಂದ್ರಕುಮಾರ ಗೋವಿಂದರಾಜ್ಯವಿದ್ಯಾ ಅವರು 'ಮಹಾತ್ಮಾಗಾಂಧಿ ಚರಿತಮ್', ಲೋಕನಾಥ ಶಾಸ್ತ್ರೀ ಅವರು 'ಗಾಂಧೀ ವಿಜಯ ಮಹಾಕಾವ್ಯಮ್', ಸಾಧುಶರಣ ಮಿಶ್ರಾ ಅವರು 'ಗಾಂಧೀ ಚರಿತ ಮಹಾಕಾವ್ಯಮ್ 'ಬರೆದು ಪ್ರಕಟಿಸಿದ್ದಾರೆ.  


ಖಂಡಕಾವ್ಯಗಳು: 

ಬ್ರಹ್ಮಾನಂದ ಶುಕ್ಲಾ ಅವರು 'ಶ್ರೀ ಗಾಂಧೀ ಚರಿತಂ', ಮೇಲುಕೋಟೆಯ ಅರೆಯರ್ ನಿವಾಸಯ್ಯಂಗಾರ್ಯರು 'ಸ್ವಾನುಭೂತಿ ತ್ರಿವೇಣಿ', ಗಲಗಲಿ ರಾಮಾಚಾರ್ಯರ 'ಚರಖಾಲಹರಿ' ಹಾಗೂ' ಗಾಂಧಿಟೋಪಿ ಲಹರಿ' ಬರೆದು ಪ್ರಕಟಿಸಿದ್ದಾರೆ. ಶ್ರೀಧರ್ ಭಾಸ್ಕರ್ ವರ್ಣೇಕರ್ ಇವರು 'ಶ್ರಮಗೀತಾ' ದಲ್ಲಿ ಗಾಂಧಿಯವರ ಸ್ವಾತಂತ್ರ್ಯ ಸಂಗ್ರಾಮದ ಕಥೆಯನ್ನು ಹೇಳಿದ್ದಾರೆ. ರತಿನಾಥ ಝಾ ಅವರು 'ಗಾಂಧೀ ಶತಕಮ್' ನಲ್ಲಿ ಹಾಗೂ ಅಭಿರಾಜ ರಾಜೇಂದ್ರ ಮಿಶ್ರಾ ಅವರು 'ಗಾಂಧೀ ಗೀತಮ್'ನಲ್ಲಿ ಗಾಂಧೀಜಿಯವರ ವ್ಯಕ್ತಿತ್ವವನ್ನು ನಿರೂಪಿಸಿದ್ದಾರೆ. ರಮೇಶ್ಚಂದ್ರ ಶುಕ್ಲಾ ಅವರಿಂದ 'ಗಾಂಧೀ ಗೌರವಮ್' ಬರೆಯಲ್ಪಟ್ಟಿದೆ.


ನಾಟಕಗಳು: 

ಗಾಂಧೀಜಿಯವರ ಜೀವನದ ಬಗ್ಗೆ ಅನೇಕ ಸಂಸ್ಕೃತ ನಾಟಕಗಳು ಪ್ರಕಟಗೊಂಡಿವೆ. ಮಥುರಾ ಪ್ರಸಾದ್ ದೀಕ್ಷಿತ್ ಅವರು 'ಶ್ರೀ ಗಾಂಧೀ ವಿಜಯ ನಾಟಕಮ್', ಪಲ್ಲೇಲ ಶ್ರೀರಾಮಚಂದ್ರಡು ಅವರು 'ಸುಸಂಹತ ಭಾರತಂ', ಮೇಲುಕೋಟೆಯ ಜಗ್ಗು ವಕುಲ ಭೂಷಣರು ' ಮೈರೆಯಪಾರಮ್ಯಂ', ಬೆಂಗಳೂರಿನ ಕೆ. ಎಸ್. ನಾಗರಾಜನ್ ಅವರು 'ಗಾಂಧೀ ವಿಜಯಮ್' , ರೋಮಾ ಚೌಧರಿಯವರು 'ಭಾರತಾತಮ್ ', ಬೊಮ್ಮಕಂಟಿ ರಾಮಲಿಂಗ ಶಾಸ್ತ್ರಿಯವರು 'ಸತ್ಯಾಗ್ರಹೋದಯಃ', ಯತಿಂದ್ರ ವಿಮಲ ಚೌಧರಿ ಅವರು 'ಭಾರತ ಜನಕಮ್' ನಾಟಕ ಬರೆದು ಪ್ರಕಟಿಸಿದ್ದಾರೆ. 


ಇತರ ಕಾವ್ಯಗಳು : 

ಚೆನ್ನೈ ಕಸ್ತೂರಿ ರಂಗಾಚಾರ್ಯರಿಂದ 'ಭಾರತ ರಾಷ್ಟ್ರೀಯ ಪುರಾಣಮ್' ಎಂಬ ಚಾರಿತ್ರಿಕ ಕಾವ್ಯ, ವಲ್ಲಭದಾಸ ಭಗವಾನ್ ಅವರು 'ರಾಷ್ಟ್ರೀಯ ಮೇಘದೂತ ಕಾವ್ಯಂ' ಎಂಬ ದೂತ ಕಾವ್ಯವನ್ನು ಬರೆದಿದ್ದಾರೆ. ಅಹಮದಾಬಾದಿನ ಹರ್ಷದೇವ ಮಾಧವ್ ಹಾಗೂ ದೆಹಲಿಯ ರಮಾಕಾಂತ್ ಶುಕ್ಲಾ ಅವರು 'ಭಾತಿ ಮೇ ಭಾರತಮ್' ಎಂಬ ಗೀತಿ ಕಾವ್ಯಗಳನ್ನು ಪ್ರಕಟಿಸಿದ್ದಾರೆ. 


ಇತರ ಪದ್ಯಗಳು: 

ಗಾಂಧೀಜಿಯವರ ಜೀವನದ ವಿವಿಧ ಘಟ್ಟಗಳನ್ನು ತಿಳಿಸುವ ಪ್ರಯತ್ನವನ್ನು ಈ ಬಿಡಿ ಬರಹಗಳು ಮಾಡಿವೆ. ಅವುಗಳಲ್ಲಿ ಕೆಲವು ಮುಖ್ಯ ಬರಹಗಳು ಇಂತಿವೆ. ವಿಧುಶೇಖರ ಭಟ್ಟಾಚಾರ್ಯರ 'ಮಹಾತ್ಮಾ', ಭಗವತೀ ಪ್ರಸಾದ್ ಅವರ 'ಗಾಂಧೀ ವೈಭವಮ್', ಬಚ್ಚುಲಾಲ್ ಅವಸ್ಥಿಯವರ 'ರಾಷ್ಟ್ರಪಿತಾ ಗಾಂಧಿ:', ಶಂಕರ್ ಅವರ 'ಸಮರ್ಪಣಮ್', ಓಂ ಪ್ರಕಾಶ್ ಪಾಂಡೆಯರ 'ಮಹಾತ್ಮಾ ಗಾಂಧಿ:', ಹರ್ಷದೇವ ಮಾಧವ್ ಅವರ 'ಗಾಂಧೀ', ಹರಿದತ್ತ ಶರ್ಮಾರ 'ಶ್ರೀ ಗಾಂಧೀ ಸ್ತವಃ', ಶ್ರೀಧರ ಭಾಸ್ಕರ ವರ್ಣೆಕರ್ ಅವರ 'ಭಾರತ ರಾಷ್ಟ್ರಪಿತಾ', ಜಗ್ಗೂ ವಕೀಲ ಭೂಷಣ ಅವರ 'ಗಾಂಧಿಸ್ತುತಿ', ಕೆ. ಎಸ್. ನಾಗರಾಜನ್ ಅವರ 'ಗಾಂಧೀ ಮಹಿಮಾ', ಶ್ರೀರಾಮ ಶರ್ಮಾ ಅವರ 'ಗಾಂಧೀ ಟೋಪಿ', ರಾಘವೇಂದ್ರ ಶರ್ಮಾರವರ 'ಮಹಾತ್ಮಾಗಾಂಧಿ ಅಭಿನಂದನಮ್' ಇಂತಹ ಬಿಡಿ ಪದ್ಯಗಳು ನೂರಾರು ಇವೆ. ಎಲ್ಲಾ ಪದ್ಯಗಳಲ್ಲಿ ಗಾಂಧಿಯವರ ಜೀವನ ಗಾಥೆಗಳ ಚಿತ್ರಣ ನೋಡಬಹುದು.


ಇನ್ನು ಗಾಂಧೀ ಬರಹಗಳನ್ನು ಸಂಸ್ಕೃತಕ್ಕೆ ಹಲವು ಕವಿಗಳು ಅನುವಾದ ಮಾಡಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಗಾಂಧಿಯವರ ಆತ್ಮಕಥೆಯನ್ನು  ಹೊಸಕೆರೆ ನಾಗಪ್ಪ ಶಾಸ್ತ್ರಿಗಳು 'ಸತ್ಯ ಶೋಧನಮ್' ಹೆಸರಿನಲ್ಲಿ ಹಾಗೂ ಕ್ಷಿರೋದ ಚಂದ್ರಹಾಸ್ ಅವರು 'ಮಮ ಸತ್ಯ ಪ್ರಯೋಗ ಕಥಾ' ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಸಿ. ಡಿ ದೇಶಮುಖ್ ಅವರು ಗಾಂಧೀಜಿಯವರ ಜನಪ್ರಿಯ ಹೇಳಿಕೆಗಳನ್ನು 'ಗಾಂಧೀ ಸೂಕ್ತಿ ಮುಕ್ತಾವಳಿ' ಹೆಸರಿನಲ್ಲಿ ಹಾಗೂ ಶಿವಕುಮಾರ್ ಮಿಶ್ರಾ ಅವರು 'ಗಾಂಧೀ ಸೂಕ್ತಿ ಸಪ್ತಶತಿ' ಎಂಬ ಹೆಸರಿನಲ್ಲಿ ಬರೆದಿದ್ದಾರೆ. 


ಹೀಗೆ ಹಲವು ಕಾಲಘಟ್ಟಗಳಲ್ಲಿ ಮಹಾತ್ಮಾ ಗಾಂಧೀಜಿಯವರ ಜೀವನ, ಅವರ ಸರಳತೆ ಹಾಗೂ ಅವರ ಸಾಮಾಜಿಕ, ಸ್ವಾತಂತ್ರ್ಯ ಹೋರಾಟಗಳ ಚರಿತ್ರೆಗಳನ್ನು ಸಂಸ್ಕೃತ ಕವಿಗಳು ಸೆರೆಹಿಡಿದಿರುವುದನ್ನು ಕಾಣಬಹುದು.ಗಾಂಧಿಯವರ ಬಗ್ಗೆ ಇನ್ನೂ ಹೆಚ್ಚಿನ ಸಂಸ್ಕೃತ ಕೃತಿಗಳು ಇರುವುದು ಸತ್ಯ. 

ಒಟ್ಟಾರೆ  ಸಾಹಿತ್ಯ ಇತಿಹಾಸದಲ್ಲಿ ಗಾಂಧೀ ಕುರಿತು ಬರೆದಿರುವ ಸಾಹಿತ್ಯಗಳು ಸಂಸ್ಕೃತ ಭಾಷಾ ಸಾಹಿತ್ಯದ ಮೈಲಿಗಲ್ಲುಗಳು ಎಂದೇ ಹೇಳಬಹುದು. 


-ಡಾ. ಪ್ರಸನ್ನಕುಮಾರ್ ಐತಾಳ್

ಸಂಸ್ಕೃತ ಪ್ರಾಧ್ಯಾಪಕರು

ಎಸ್.ಡಿ.ಎಂ ಕಾಲೇಜು, ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top