ಮಹಾಕುಂಭ ಮೇಳ: ಸಚಿವ ಅಶ್ವತ್ಥನಾರಾಯಣ ಭಾಗಿ, ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಣೆ

Upayuktha
0

ಕೆ.ಆರ್.ಪೇಟೆ: ತಾಲ್ಲೂಕಿನ ಅಂಬಿಗರಹಳ್ಳಿ ಬಳಿ ಇರುವ ತ್ರಿವೇಣಿ ಸಂಗಮದಲ್ಲಿ ಶುಕ್ರವಾರ ಆರಂಭವಾದ 2ನೇ ಮಹಾಕುಂಭ ಮೇಳದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಪಾಲ್ಗೊಂಡು, ಕಾವೇರಿ - ಹೇಮಾವತಿ - ಲಕ್ಷ್ಮಣತೀರ್ಥ ನದಿಗಳಿಗೆ ಭಕ್ತಿಭಾವದಿಂದ ಬಾಗಿನ ಅರ್ಪಿಸಿದರು.


ಸ್ಥಳೀಯ ಶಾಸಕ ಮತ್ತು ಸಚಿವ ನಾರಾಯಣಗೌಡರ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಮಹಾಕುಂಭ ಮೇಳದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಸೋಮೇಶ್ವರಾನಂದ ಸ್ವಾಮೀಜಿ, ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೇಬಿ ಬೆಟ್ಟದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮುಂತಾದವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 'ಮನುಷ್ಯನಿಗೆ ತನ್ನ ಪಾಪಕಾರ್ಯಗಳನ್ನು ಕಳೆದುಕೊಂಡು, ಆತ್ಮಶುದ್ಧಿಗೆ ಪ್ರೇರೇಪಿಸುವ ತತ್ತ್ವವು ಕುಂಭಮೇಳಗಳ ಹಿಂದಿದೆ. ಈ ಕುಂಭಮೇಳವು ರಾಷ್ಟ್ರೀಯತೆ ಮತ್ತು ಭಾವೈಕ್ಯತೆಯ ಭಾವನೆಗಳನ್ನು ಸಮಾಜದಲ್ಲಿ ಪಸರಿಸಲಿ' ಎಂದು ಆಶಿಸಿದರು.


ಸನಾತನ ಹಿಂದೂ ಧರ್ಮದಲ್ಲಿ ನದಿ, ಪ್ರಕೃತಿ ಮತ್ತು ಪರಿಸರಕ್ಕೆ ಸಾಕಷ್ಟು ಉನ್ನತ ಸ್ಥಾನವನ್ನು ಕೊಡಲಾಗಿದೆ. ಪ್ರತಿಯೊಂದರಲ್ಲೂ ಪರಮಾತ್ಮನನ್ನು ಕಾಣುವಂತಹ ಮಹೋನ್ನತ ಪರಂಪರೆಗೆ ನಾವೆಲ್ಲರೂ ಸೇರಿದವರಾಗಿದ್ದೇವೆ. ಇಂತಹ ಪರಂಪರೆಯನ್ನು ನಾವೆಲ್ಲರೂ ಎತ್ತಿ ಹಿಡಿಯಬೇಕು ಎಂದು ಅವರು ನುಡಿದರು.


ಇಲ್ಲಿನ ಕುಂಭಮೇಳಕ್ಕೆ ಜನಪದ ಸ್ಪರ್ಶವೂ ಇರುವುದು ಒಳ್ಳೆಯ ಸಂಗತಿಯಾಗಿದೆ. ಈ ಕಾರ್‍ಯಕ್ರಮವು ಸಮಾಜದ ಪ್ರತಿಯೊಬ್ಬರನ್ನೂ ಒಳಗೊಳ್ಳುವುದಕ್ಕೆ ಅಗತ್ಯವಾದ ಪ್ರೇರಣೆ ಮತ್ತು ಶಕ್ತಿಗಳನ್ನು ನೀಡಲಿ. ಹಾಗೆಯೇ ರಾಜ್ಯ ಮತ್ತು ರಾಷ್ಟ್ರದ ಅಭ್ಯುದಯಕ್ಕೆ ಮಂಗಳಕರವಾದ ಸ್ರೋತವಾಗಿ ಒದಗಲಿ ಎಂದು ಅವರು ಆಶಿಸಿದರು.


2013ರಲ್ಲಿ ಮೊದಲ ಬಾರಿಗೆ ಇಲ್ಲಿ ಪ್ರಪ್ರಥಮ ಕುಂಭಮೇಳ ನಡೆದಿತ್ತು.ತಾಲ್ಲೂಕಿನ ಅಂಬಿಗರಹಳ್ಳಿ, ಸಂಗಾಪುರ ಮತ್ತು ಪುರ ಗ್ರಾಮಗಳ ಬಳಿ ಮೂರೂ ನದಿಗಳು ಸಂಗಮಿಸುವ ಜಾಗದಲ್ಲಿ ಈ ಕುಂಭಮೇಳವನ್ನು ಆಯೋಜಿಸಲಾಗಿದೆ.


ಮೊದಲ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಉಮೇಶ್, ಪಕ್ಷದ ಮುಖಂಡರಾದ ಮಾದೇಗೌಡ, ರುದ್ರೇಶ್ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top