ಮಂಗಳೂರು: "ನಾವು ಎಷ್ಟೇ ಶ್ರೀಮಂತಿಕೆ ಗಳಿಸಿದರೂ ಎಷ್ಟೇ ವಿದ್ಯೆ ಕಲಿತರೂ ಬದುಕಿ ಬಾಳಿದ ನೆಲದ ಪರಂಪರೆಯನ್ನು ಮರೆಯಬಾರದು. ಸಮಾಜದಲ್ಲಿ ಬಡವ ಬಲ್ಲಿದ ಎಂಬ ತಾರತಮ್ಯ, ಯೋಚನೆಗಳಲ್ಲಿ ನಕಾರಾತ್ಮಕತೆ ಅಳಿದಾಗ ವ್ಯಕ್ತಿತ್ವ ಬೆಳವಣಿಗೆ ಸಾಧ್ಯ. ನಮ್ಮನ್ನು ನಾವು ಅರಿತು ಕೊಳ್ಳಬೇಕಾದರೆ ಮತ್ತು ತಿದ್ದಿಕೊಳ್ಳಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ" ಎಂದು ಕರಾವಳಿ ಕಾಲೇಜುಗಳ ಸಮೂಹ ಹಾಗೂ ಜಿ ಆರ್ ಎಜುಕೇಷನ್ ಟ್ರಸ್ಟ್ ಇದರ ಸ್ಥಾಪಕಧ್ಯಕ್ಷರಾದ ಎಸ್ ಗಣೇಶ್ ರಾವ್ ಅವರು ಅಭಿಪ್ರಾಯ ಪಟ್ಟರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಮತ್ತು ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ ಸಂಯುಕ್ತವಾಗಿ ಭಾನುವಾರ ಊರ್ವಸ್ಟೋರ್ ತುಳುಭವನದ ಸಿರಿಚಾವಡಿಯಲ್ಲಿ ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ 9ನೇ ಜಿಲ್ಲಾ ಸಮ್ಮೇಳನೋತ್ತರ ಸಾಹಿತ್ಯ ಸಂಭ್ರಮ ಹಾಗೂ ಬೃಹತ್ ವಿದ್ಯಾರ್ಥಿ ಸನ್ಮಾನವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ನಾವು ಎಷ್ಟೇ ಭಾಷೆಗಳನ್ನೂ ಕಲಿತರೂ ಮಾತೃ ಭಾಷೆಯನ್ನು ಮರೆಯಬಾರದು ಎಂದರು.
ಹಿರಿಯ ನಾಟಕಕಾರ ಗಂಗಾಧರ ಕಿದಿಯೂರು ಅವರ 13 ನಾಟಕಗಳ ಸಂಪುಟ 'ಮೆನ್ಕುನ ಸಿರಿ ಸಿಂಗಾರ' ವನ್ನು ಬಿಡುಗಡೆಗೊಳಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ ಕತ್ತಲ್ಸಾರ್ ಅವರು 'ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವ ಕೊಟ್ಟು ಬದುಕಬೇಕು. ಸಾಧಕ ಬಾಧಕ ನೋಡಿ ಜೀವನದಲ್ಲಿ ಹೆಜ್ಜೆ ಇಡಬೇಕು ಎಂದರು.
ಸಂಪುಟದಲ್ಲಿ ವಿಜಯಲಕ್ಷ್ಮಿ, ಬದುಕೊಂಜಿ ಸರಿಗಮ,ದೇವೆರ್ ಮಲ್ಲೆ,ತೆಲಿಕೆ ನಲಿಕೆದ ಬದ್ಕ್, ಪಿಂಗಾರೆದ ಬಾಲೆ ಸಿರಿ ಮೊದಲಾದ 14 ನಾಟಕಗಲಿವೆ. ಕೆಲವು ನಾಟಕಗಳು ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡಿವೆ ಎಂದು ಕೃತಿ ಪರಿಚಯ ಮಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ತಾರಾ ಆಚಾರ್ಯ ಹೇಳಿದರು.
9ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ಶ್ರೀಕೃಷ್ಣಯ್ಯ ಅನಂತಪುರ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸಾಹಿತ್ಯ ಲೋಕದ ವೈವಿಧ್ಯತೆ ಮಾತು ಸಾಧ್ಯತೆಗಳ ಬಗ್ಗೆ ಸವಿವರವಾಗಿ ವಿವರಿಸಿದರು.
ಸಮಾರಂಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷ ಪತ್ರಿಕೆ ಸಂಪಾದಕ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಗಂಗಾಧರ್ ಕಿದಿಯೂರು, ದಕ್ಷಿಣ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು,ಮಂಗಳೂರು ತಾಲೂಕು ಮತ್ತು ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾ.ವೀ.ಕೃಷ್ಣದಾಸ್, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಗೌರಧ್ಯಕ್ಷ ಇರಾ ನೇಮು ಪೂಜಾರಿ, ಮೂಲ್ಕಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನರೇಂದ್ರ ಕೆರೆಕಾಡು, ವಿನಾಯಕ ಮಿತ್ರ ಮಂಡಳಿ ಅಧ್ಯಕ್ಷ ಚಂದ್ರಹಾಸ್ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಸಮಾರಂಭದಲ್ಲಿ ಹೊಸದಿಗಂತ ದಿನಪತ್ರಿಕೆಯ ಹಿರಿಯ ವರದಿಗಾರ ಗುರುವಪ್ಪ ಎನ್ ಟಿ ಬಾಳೆಪುಣಿ (ಪತ್ರಿಕೋದ್ಯಮ), ಪೊಲೀಸ್ ನಿರೀಕ್ಷಕಿ ಶ್ರೀಮತಿ ಭಾರತಿ (ಕಾನೂನು ಸುವ್ಯವಸ್ಥೆ),ಶಿವರಾಮ ಕಾಸರಗೋಡು (ಸಂಘಟನೆ), ನ್ಯಾಯವಾದಿ ದಯಾನಂದ ರೈ (ವಕಾಲತ್ತು), ಪತ್ರಕರ್ತ ರಂಗಭೂಮಿ ಕಲಾವಿದ ನರೇಂದ್ರ ಕೆರೆಕಾಡು (ರಂಗಭೂಮಿ), ಉಪನ್ಯಾಸಕ ಪ್ರಕಾಶ್ ಮೇಲಾಂಟ (ಶಿಕ್ಷಣ), ಬಾಲಕೃಷ್ಣ ಕಾರಂತ್ (ಪೌರೋಹಿತ್ಯ) ಅವರನ್ನು ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನಿಸಲಾಯಿತು.
ಮಂಗಳೂರು ಚುಸಾಪ ಆಯೋಜಿಸಿದ್ದ ಚುಟುಕು ಸಪ್ತಾಹದಲ್ಲಿ ವಿಜೇತರಾದ ಹಿರಿಯ ಲೇಖಕಿ ಸತ್ಯವತಿ ಭಟ್ ಕೊಳಚಪ್ಪು ಮತ್ತು ಸೌಮ್ಯ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು.
ನೃತ್ಯ ಸಂಗಮ ಕಾರ್ಯಕ್ರಮದಲ್ಲಿ ಲಾಲಿತ್ಯ ಬೇಲೂರು,ಸುದೀಷ್ಣ ಶೆಟ್ಟಿ, ನಿರೀಕ್ಷಾ ಶೆಟ್ಟಿ, ಪ್ರಾಪ್ತಿ ಶೆಟ್ಟಿ ಅಪೂರ್ವ ಸೋಮೇಶ್ವರ ಅವರಿಂದ ವಿಶಿಷ್ಟ ನೃತ್ಯ ಪ್ರದರ್ಶನ ನಡೆಯಿತು. ಬಳಿಕ ಸತ್ಯವತಿ ಭಟ್ ಮತ್ತು ಸೌಮ್ಯ ಗೋಪಾಲ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಚುಟುಕು ಕವಿಗೋಷ್ಠಿಯಲ್ಲಿ 30ಕ್ಕೂ ಅಧಿಕ ಕವಿಗಳು ತಮ್ಮ ಚುಟುಕುಗಳನ್ನು ಪ್ರಸ್ತುತ ಪಡಿಸಿದರು.
ಹರೀಶ ಸುಲಾಯ ಸ್ವಾಗತಿಸಿ ನರೇಂದ್ರ ಕೆರೆಕಾಡು ವಂದಿಸಿದರು. ರಾಜೇಶ್ವರಿ ಹೆಚ್ ಪ್ರಾರ್ಥಿಸಿದರು. ರಾಜೇಂದ್ರ ಎಕ್ಕಾರು, ರಶ್ಮಿ ಸನಿಲ್, ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿದರು. ಲತಾ ಕೆ, ಗೀತಾ ಲಕ್ಷ್ಮೀಶ್, ಎಸ್. ಕೆ ಕುಂಪಲ, ಎಡ್ವರ್ಡ್ ಲೋಬೋ ಮತ್ತಿತರರು ಸಂಯೋಜನೆಯಲ್ಲಿ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ