ಕರ್ಣಾಟಕ ಬ್ಯಾಂಕ್‍ನ ಆಡಳಿತ ನಿರ್ದೇಶಕರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. "ಯಕ್ಷಮಾರ್ಗಮುಕುರ" ಗ್ರಂಥವನ್ನು ಲೋಕಾರ್ಪಣೆ ಮಾಡಿದರು. ಯಕ್ಷಗಾನವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವವರಿಗೆ "ಯಕ್ಷಮಾರ್ಗಮುಕುರ" ಆಕರ ಗ್ರಂಥವಾಗಿದ್ದು ದಾರಿದೀಪವಾಗಿದೆ.
ಉಜಿರೆ: ಹಲವು ವರ್ಷಗಳ ನಿರಂತರ ಅಧ್ಯಯನ ಮತ್ತು ಸಂಶೋಧನೆಯೊಂದಿಗೆ ಖ್ಯಾತ ಕಲಾವಿದೆ ಹಾಗೂ ಲೇಖಕಿ ಡಾ. ಮನೋರಮಾ ಬಿ.ಎನ್. ಬರೆದ "ಯಕ್ಷಮಾರ್ಗಮುಕುರ"ವು ಯಕ್ಷಗಾನವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವವರಿಗೆ ದಾರಿದೀಪ ಹಾಗೂ ಅಧಿಕೃತ ಆಕರ ಗ್ರಂಥವಾಗಿದೆ ಎಂದು ಕರ್ಣಾಟಕ ಬ್ಯಾಂಕ್‍ನ ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಡಾ. ಮನೋರಮಾ ಬಿ.ಎನ್. ಬರೆದ "ಯಕ್ಷಮಾರ್ಗಮುಕುರ" ಗ್ರಂಥವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಈ ಗ್ರಂಥಕ್ಕೆ ಮುಕರ ಹಿಡಿದು ಸಹಕರಿಸಿದವರು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಉಜಿರೆ ಅಶೋಕ ಭಟ್, ಡಾ. ಮನೋರಮಾ ಬಿ.ಎನ್. ಮತ್ತು ಚಿತ್ರಕಲಾವಿದ ನೀರ್ನಳ್ಳಿ ಗಣಪತಿ ಅವರು. ಗ್ರಂಥವು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ. ಗಂಡುಕಲೆಯಾದ ಯಕ್ಷಗಾನ ಕ್ಷೇತ್ರದಲ್ಲಿ ಇಂದು ಮಹಿಳೆಯರು ಕೂಡಾ ಭಾಗವತರಾಗಿ ಕಲಾವಿದರಾಗಿ, ಚೆಂಡೆ ಹಾಗೂ ಮದ್ದಳೆ ವಾದಕರಾಗಿ ಮಿಂಚುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಯಕ್ಷಗಾನದ ಸಮಗ್ರ ಲಕ್ಷಣ ಗ್ರಂಥ ಇದಾಗಿದ್ದು ಅಧ್ಯಯನಾಸಕ್ತರಿಗೆ ಮತ್ತು ಸಂಶೋಧಕರಿಗೆ ಅಧಿಕೃತ ಆಕರ ಗ್ರಂಥವಾಗಿ ಮಾನ್ಯತೆ ಪಡೆಯಲಿ ಎಂದು ಅವರು ಹಾರೈಸಿದರು.
ಕರ್ಣಾಟಕ ಬ್ಯಾಂಕ್ ವತಿಯಿಂದ ಗ್ರಂಥ ಪ್ರಕಾಶನಕ್ಕೆ ಐದು ಲಕ್ಷ ರೂ. ನೆರವನ್ನು ಅವರು ಉಜಿರೆ ಅಶೋಕ ಭಟ್‍ರಿಗೆ ನೀಡಿದ್ದರು.
ಕೋಲಾರದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಮಾತನಾಡಿ ಈ ಗ್ರಂಥ ಅದ್ವಿತೀಯ ಶಾಸ್ತ್ರೀಯ ದಾಖಲೆಯಾಗಿದೆ. ವಿಶ್ವವಿದ್ಯಾಲಯಗಳು ಮಾಡಬೇಕಾದ ಕಾರ್ಯವನ್ನು ಡಾ. ಮನೋರಮ ಮಾಡಿದ್ದಾರೆ. ತಪಸ್ಸಿನಂತೆ ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ಲೇಖಕಿಯನ್ನು ಅವರು ಅಭಿನಂದಿಸಿದರು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿದರು.
ಗ್ರಂಥದ ಬಗ್ಗೆ ಮಾಹಿತಿ ನೀಡಿದ ಲೇಖಕಿ ಡಾ. ಮನೋರಮಾ ಬಿ.ಎನ್. ಸತ್ಯದ ಅನ್ವೇಷಣೆಯೇ ಸಂಶೋಧನೆಯ ಗುರಿಯಾಗಿದೆ. ಆರಾಧನಾ ಸ್ವರೂಪದ ಕಲೆಯಾದ ಯಕ್ಷಗಾನದಲ್ಲಿ ನಾಟ್ಯದ ರೂಪವಾದ ಆಂಗಿಕ ಅಭಿನಯದ ಬಗ್ಗೆ ತೌಲನಿಕ ಅಧ್ಯಯನದೊಂದಿಗೆ ಗ್ರಂಥದಲ್ಲಿ ಸಮಗ್ರ ಮಾಹಿತಿ ನೀಡಲಾಗಿದೆ ಎಂದರು. ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆ ದಂಪತಿಯ ವಿವಾಹದ ಸುವರ್ಣಮಹೋತ್ಸವ ವರ್ಷ ಆಚರಣೆಯ ಸಂದರ್ಭದಲ್ಲಿ ಗ್ರಂಥವನ್ನು ಅವರಿಗೆ ಸಮರ್ಪಣೆ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಯಕ್ಷಗಾನದ ಎಲ್ಲಾ ವಿಚಾರಗಳನ್ನು ವೈಜ್ಞಾನಿಕವಾಗಿ ಮತ್ತು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಬರೆದ ಗ್ರಂಥವನ್ನು ಆಸಕ್ತರು ಕೊಂಡು ಓದಬೇಕು. ಕಲಾಕ್ಷೇತ್ರಕ್ಕೆ ಇದೊಂದು ಅಮೂಲ್ಯ ಹಾಗೂ ಶಾಶ್ವತ ಕೊಡುಗೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಧರ್ಮಸ್ಥಳ ಮೇಳದ ಎಲ್ಲಾ ಕಲಾವಿದರಿಗೆ ಈ ಗ್ರಂಥವನ್ನು ಉಚಿತ ಕೊಡುಗೆಯಾಗಿ ನೀಡುವುದಾಗಿ ಹೆಗ್ಗಡೆಯವರು ಪ್ರಕಟಿಸಿದರು. ಇಂಗ್ಲೀಷ್ ಭಾಷೆಗೆ ಈ ಗ್ರಂಥ ಭಾಷಾಂತರವಾದಲ್ಲಿ ವಿದೇಶದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಧರ್ಮಸ್ಥಳದ ವತಿಯಿಂದ ಉಚಿತ ಕೊಡುಗೆಯಾಗಿ ವಿತರಿಸುವುದಾಗಿ ಅವರು ಹೇಳಿದರು.
ಕುರಿಯವಿಠಲ ಶಾಸ್ತ್ರಿಯವರು ಧರ್ಮಸ್ಥಳ ಮೇಳದಲ್ಲಿ ಸಂಚಾಲಕರಾಗಿ ಮುಖ್ಯ ಕಲಾವಿದರಾಗಿ ಮಾಡಿದ ಸೇವೆಯನ್ನು ಅವರು ಸ್ಮರಿಸಿದರು. ನೃತ್ಯಪಟುವಾಗಿದ್ದ ಅವರು ಗೆಜ್ಜೆಯ ನಾದದಲ್ಲಿ ಸುಪ್ತಭಾವವನ್ನು ವ್ಯಕ್ತಪಡಿಸುವ ಪರಿಣತರಾಗಿದ್ದರು ಎಂದು ಹೇಳಿದರು. ಉಜಿರೆ ಅಶೋಕ ಭಟ್ ಸ್ವಾಗತಿಸಿದರು. ಕೃಷ್ಣಪ್ರಸಾದ್ ಧನ್ಯವಾದವಿತ್ತರು. ಪತ್ರಕರ್ತ ಲಕ್ಷ್ಮೀಮಚ್ಚಿನ ಕಾರ್ಯಕ್ರಮ ನಿರ್ವಹಿಸಿದರು. ಕರ್ಣಾಟಕ ಬ್ಯಾಂಕ್‍ನಿಂದ ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆಗೆ ವಾಹನ ಕೊಡುಗೆ
ಉಜಿರೆ: ಉಡುಪಿಯಲ್ಲಿರುವ ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆಗೆ ಕರ್ಣಾಟಕ ಬ್ಯಾಂಕ್ ವತಿಯಿಂದ 20 ಲಕ್ಷ ರೂ. ಮೌಲ್ಯದ ವಾಹನವನ್ನು ಧರ್ಮಸ್ಥಳದಲ್ಲಿ ಶನಿವಾರಕರ್ಣಾಟಕ ಬ್ಯಾಂಕ್‍ನ ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಕೊಡುಗೆಯಾಗಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಹಸ್ತಾಂತರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ