ಬೆಂಗಳೂರು: ನಗರದ ಜೆಪಿ ನಗರದ ವಿಇಟಿ ಕಾಲೇಜು ಸಭಾಂಗಣದಲ್ಲಿ ಲೇಖಕಿ ಡಾ.ರತ್ನಾ ನಾಗರಾಜುರವರ “ಭವ ಪ್ರೇಮ” ಕಥಾ ಸಂಕಲನದ ಲೋಕಾರ್ಪಣೆ ನಡೆಯಿತು. ವೃತ್ತಿಯಿಂದ ಶಿಕ್ಷಣ ಸಂಸ್ಥೆಯೊಂದರಲ್ಲಿ ಅಧಿಕಾರಿಣಿಯಾಗಿ ಸೇವೆಸಲ್ಲಿಸುತ್ತಿರುವ ಲೇಖಕಿ ರತ್ನಾ ನಾಗರಾಜು ಪ್ರವೃತ್ತಿಯಿಂದ ಸಾಹಿತ್ಯಸೇವೆಯಲ್ಲಿ ತೊಡಗಿಸಿಕೊಂಡು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ.
ಉತ್ತಮ ಗೃಹಿಣಿಯಾಗಿ, ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುಮುಖ ಪ್ರತಿಭಾವಂತ ಬರಹಗಾರ್ತಿ ಅನೇಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ ಎಂದು ಪ್ರಾಧ್ಯಾಪಕ ಡಾ.ಆರ್ ವಾದಿರಾಜು ಅಭಿಪ್ರಾಯ ಪಟ್ಟರು. ನೇತಾಜಿ ಸುಭಾಷ್ ಚಂದ್ರ ಬೋಸ್ ಸಾಂಸ್ಕೃತಿಕ ಸಂಘದಿಂದ ಕೊಡಮಾಡುವ ‘ಉಕ್ಕಿನ ಮಹಿಳೆ’ (ಉಮ) ಪ್ರಶಸ್ತಿಯನ್ನು ಲೇಖಕಿ ಡಾ.ರತ್ನಾ ನಾಗರಾಜುರವರಿಗೆ ನೀಡಿ ಮಾತನಾಡುತ್ತಿದ್ದರು.
ಆಧ್ಯಾತ್ಮ ಚಿಂತಕ ಪ್ರೊ.ಶ್ರೀಕಂಠ ಎ.ಎಸ್.ಕೃತಿ ಬಿಡುಗಡೆಗೊಳಿಸಿದರು. ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡುತ್ತ ಕನ್ನಡ ಪತ್ರಿಕೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಹಾಗೂ ಸಾಹಿತ್ಯೇತರ ಕ್ಷೇತ್ರಗಳ ಹೊರತಾದ ಲೇಖಕಕರು ಸಾಹಿತ್ಯಾಸಕ್ತರಾಗಿ ಬರೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಆರ್. ಪಾರ್ವತಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ವ್ಯಕ್ತಿತ್ವ ವಿಕಸನಕ್ಕೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳ ಬೇಕು ಎಂದು ನುಡಿದರು. ಉಪ ಪ್ರಾಂಶುಪಾಲ ಪ್ರೊ. ನಾರಾಯಣಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಗದೀಶ್ ಎನ್, ರಂಗಸ್ವಾಮಿ ಹೆಚ್.ಟಿ ವೇದಿಕೆಯಲ್ಲಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ