ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಕೆ ಶಿವರಾಮ ಕಾರಂತ ಅಧ್ಯಯನ ಪೀಠ ಮತ್ತು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ “ಡಾ.ಶಿವರಾಮ ಕಾರಂತ-ನುಡಿ ನಮನ”ಎಂಬ ಹೆಸರಿನಲ್ಲಿ ಕಾರಂತರ ಜನ್ಮದಿನಾಚರಣೆಯನ್ನು ಸೋಮವಾರ ಶಿವರಾಮ ಕಾರಂತ ಭವನದಲ್ಲಿ ಆಯೋಜಿಸಲಾಗಿತ್ತು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ನರಸಿಂಹ ಮೂರ್ತಿ ಆರ್, “ಶತಮಾನದ ಮೇರು ವ್ಯಕ್ತಿ ಡಾ. ಶಿವರಾಮ ಕಾರಂತ” ಎಂಬ ವಿಶೇಷ ಉಪನ್ಯಾಸ ನೀಡಿದರು. ಕಾರಂತರ ಬದುಕಿನ ಕುರಿತು ಮಾತನಾಡುತ್ತಾ ಸಮರ್ಪಣೆ, ನಿಷ್ಠೆ, ಹೃದಯ ವೈಶಾಲ್ಯತೆಯ ಮೂಲಕ ಅಸಾಧ್ಯವಾದುದನ್ನು ಸಾಧಿಸುವಲ್ಲಿ ಡಾ. ಕಾರಂತರ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕು, ಎಂದು ಕರೆಯಿತ್ತರು.
ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಕೆ ಶಿವರಾಮ ಕಾರಂತ ಅಧ್ಯಯನ ಪೀಠದ ಸಂಯೋಜನಾಧಿಕಾರಿ ಡಾ.ಸುಭಾಷಿಣಿ ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ಡಾ.ಶಿವರಾಮ ಕಾರಂತರ ಜೀವನ ಪರ್ಯಂತದ ಚೈತನ್ಯ ಮತ್ತು ಸ್ಪೂರ್ತಿ ನಮ್ಮ ನಡುವೆ ಚಿರಕಾಲ ಚಿಮ್ಮುತಿರಲಿ, ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ “ಡಾ. ಕೆ ಶಿವರಾಮ ಕಾರಂತರ ಬರಹಗಳಲ್ಲಿ ಪ್ರಾದೇಶಿಕ ಸಂಸ್ಕೃತಿ” ಎಂಬ ವಿಷಯದ ಕುರಿತು ಅಂತರ ಕಾಲೇಜು ಭಾಷಣ ಸ್ಪರ್ಧೆ ನಡೆಯಿತು. 14 ವಿವಿಧ ಕಾಲೇಜುಗಳ 26 ಸ್ಪರ್ಧಿಗಳ ಪೈಕಿ ಪ್ರಥಮ ಬಹುಮಾನವನ್ನು ಸುರತ್ಕಲ್‌ನ ಗೋವಿಂದಾಸ ಕಾಲೇಜಿನ ಸ್ಮಿತಾ ಸಿ, ದ್ವಿತೀಯ ಬಹುಮಾನವನ್ನು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಲತೇಶ್ ಸಾಂತ ಮತ್ತು ತೃತೀಯ ಬಹುಮಾನವನ್ನು ಸುರತ್ಕಲ್‌ನ ಗೋವಿಂದಾಸ ಕಾಲೇಜಿನ ಧನುಶ್ರೀ ಪಡೆದರು.
ಕನ್ನಡ ಉಪನ್ಯಾಸಕಿ ಆಶಾಲತಾ ಸ್ವಾಗತಿಸಿದರು. ಪವಿತ್ರಾ ಪ್ರಾರ್ಥನೆ ಹಾಗೂ ದುರ್ಗಾ ಮೆನನ್ ಕಾರ್ಯಕ್ರಮ ಸಂಯೋಜಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಸಂತೋಷ್ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಲವು ಕಾಲೇಜುಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ