ಪುತ್ತೂರು: ಇಂದು ಜಗತ್ತು ಭಾರತದ ಕಡೆಗೆ ನೋಡುತ್ತಿದೆ. ಈ ಸಂದರ್ಭದಲ್ಲಿ ನಾವು ಇನ್ನೂ ಆಳಕ್ಕೆ ಹೋಗಿ ಹೊಸ ಹೊಸ ಅನ್ವೇಷಣೆ ಮಾಡಬೇಕು. ನಾವು ಕಾಣುತ್ತಿರುವ ವೈವಿಧ್ಯತೆಯು ನಮ್ಮದೇ ಆಗಿದೆ. ಇದು ಇಡೀ ಜಗತ್ತಿಗೆ ಮಂಗಳನ್ನು ಉಂಟುಮಾಡುವಂತದ್ದು. ಮೂಢನಂಬಿಕೆಯಿಂದ ಪೂಜೆಯನ್ನು ಮಾಡುವುದು ಹೊರತುಪಡಿಸಿ, ತುಂಬು ಮನದಿಂದ ವೈವಿಧ್ಯತೆಯನ್ನು ಮುಂದುವರಿಸಲು ಪ್ರಯತ್ನಿಸ ಬೇಕು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಆಚರಿಸಲ್ಪಡುವ 41 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಆಗಮಿಸಿ ಗುರುವಾರ ಮಾತನಾಡಿದರು.
ಕಾರ್ಯಕ್ರಮದ ಅಭ್ಯಾಗತರಾಗಿ ಆಗಮಿಸಿದ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವರದರಾಜ ಚಂದ್ರಗಿರಿ ಮಾತನಾಡಿ, ಯಾವ ಉದ್ದೇಶಕ್ಕಾಗಿ ನಮ್ಮ ಊರಿನಲ್ಲಿ ಗಣೇಶೋತ್ಸವವನ್ನು ಆಚರಣೆ ಮಾಡಲು ಆರಂಭಿಸಿದರೋ ಅದನ್ನೇ ಅನುಸರಿಸಿ, ಇನ್ನಷ್ಟು ಆಯಾಮವನ್ನು ಜೋಡಿಸಿ ಈ ಕಾಲಕ್ಕೆ ತಕ್ಕಂತೆ ನವೀಕರಿಸಿ ಅದನ್ನು ಅನುಸರಿಸುವ ನಿಲುವುಗಳನ್ನು ವಿದ್ಯಾರ್ಥಿಗಳು ಮಾಡಬೇಕು. ಮುಂದಿನ ತಲೆಮಾರು ಹೊಸ ಹೊಸ ಆಲೋಚನೆಗಳಿಗೆ ತೆರೆದು ಕೊಂಡು,ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಧರ್ಮವನ್ನು ಉಳಿಸುವುದರೊಂದಿಗೆ ಇಡೀ ಸನಾತನ ಹಿಂದು ಧರ್ಮಕ್ಕೆ ಜಾಗೃತಿಯನ್ನು ಮೂಡಿಸಬೇಕು. ಆದುದರಿಂದ ಎಲ್ಲಾ ಸಾಧನೆಗಳು ಆರಂಭಗೊಳ್ಳುವುದು ನಮ್ಮಿಂದಲೇ ಆಗಿದೆ. ನಮ್ಮ ಯುವಜನತೆ ತಮಗೆ ಪ್ರಿಯವಾದ ವಿಷಯಗಳ ಬಗ್ಗೆ ಅಧ್ಯಯನ ಮಾಡುವುದರೊಂದಿಗೆ, ನಮ್ಮಲ್ಲಿ ಸುತ್ತಮುತ್ತ ಇರುವ ಅದ್ಭುತಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುವುದು ಉತ್ತಮ. ಜ್ಞಾನ ಸಂಪಾದಿಸುವ ಅವಕಾಶ ಸಿಗುವಾಗ ಸ್ವಾಗತಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಲಿ ಎಂದು ನುಡಿದರು.
ಗಣೇಶೋತ್ಸವ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಉಪನ್ಯಾಸಕಿ ಡಾ.ರೇಖಾ ಸ್ವಾಗತಿಸಿದರು. ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕಿ ನೀಮಾ ವಂದಿಸಿ, ವಿವೇಕಾನಂದ ಪದವಿಪೂರ್ವ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ದಯಾಮಣಿ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ