ತೆರೆಮರೆಯಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಅರಿವು ಮೂಡಿಸಿ: ಶಾಸಕ ಕೆ.ರಘುಪತಿ ಭಟ್

Upayuktha
0

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಹೊರತುಪಡಿಸಿ, ಬೆಳಕಿಗೆ ಬಾರದ ಇನ್ನೂ ಅನೇಕ ಅತ್ಯುತ್ತಮ ಪ್ರವಾಸಿ ತಾಣಗಳಿದ್ದು, ಇವುಗಳ ಬಗ್ಗೆ ಪ್ರವಾಸಿಗರಿಗೆ ಅರಿವು ಮೂಡಿಸುವ ಮೂಲಕ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬೇಕಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.


ಅವರು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕರಾವಳಿ ಪ್ರವಾಸೋದ್ಯಮ ಸಂಘಟನೆಗಳು ಉಡುಪಿ ಅವರ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಿಂದ ಮಲ್ಪೆಯ ವರೆಗೆ ನಡೆಯುವ ಬೈಕ್ ರ‍್ಯಾಲಿಗೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. 


ಜಿಲ್ಲೆಯಲ್ಲಿ ಶ್ರೀಕೃಷ್ಣ ಮಠ, ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪದಂತಹ ಪ್ರಮುಖ  ಪ್ರಸಿದ್ಧ ಪ್ರವಾಸಿ ತಾಣಗಳ ಹೊರತಾಗಿಯೂ ಸೂರಾಲು ಮಣ್ಣಿನ ಅರಮನೆ ಸೇರಿದಂತೆ ಇನ್ನೂ ಅನೇಕ ಪ್ರವಾಸಿ ಸ್ಥಳಗಳಿದ್ದು, ಅವುಗಳ ಅಭಿವೃದ್ಧಿಯ ಬಗ್ಗೆಯೂ ಸಹ ಹೆಚ್ಚಿನ ಗಮನಹರಿಸಿ ಪ್ರವಾಸಿಗರಿಗೆ ಅವುಗಳನ್ನು ಪರಿಚಯಿಸಬೇಕಿದೆ. ಮಣಿಪಾಲದ ಮಣ್ಣಪಳ್ಳ ಕೆರೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಸಿ.ಆರ್.ಝಡ್ ನಿಯಮಗಳಲ್ಲೂ ಸಹ ರಿಯಾಯತಿ ದೊರೆತಿದ್ದು, ಇದು ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿದೆ ಎಂದರು.


ಕೋವಿಡ್ ನಂತರ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳುವವರ ಸಂಖ್ಯೆ ಕಡಿಮೆಯಾಗಿದ್ದು, ರಾಷ್ಟ್ರದ ಒಳಗಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ರವಾಸಿಗರ ಹೆಚ್ಚಿನ ಒಲವು ವ್ಯಕ್ತವಾಗುತ್ತಿದ್ದು, ಸೋಷಿಯಲ್ ಮೀಡಿಯಾಗಳ ಮೂಲಕ ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ, ಇದರ ಪ್ರಯೋಜನವನ್ನು ಪಡೆಯಬೇಕಿದೆ ಎಂದರು.


ಉಡುಪಿ ಜಿಲ್ಲೆಯ ರಜತ ಮಹೋತ್ಸದ ಈ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ, ಪ್ರವಾಸಿ ತಾಣಗಳ ಬಗ್ಗೆ ರಾಜ್ಯಾದ್ಯಂತ ಪ್ರಚಾರಪಡಿಸಲು ಎಲ್.ಇ.ಡಿ ಯ ವಿಶೇಷ ರಥವನ್ನು ಸಿದ್ಧಪಡಿಸಲಾಗುತ್ತಿದ್ದು ಇದು ರಾಜ್ಯಾದ್ಯಂತ ಸಂಚರಿಸಲಿದೆ ಎಂದರು.


ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಗೆ ನಿಯಮಗಳಲ್ಲಿ ಸರಳೀಕರಣ ಮಾಡುವುದು ಅಗತ್ಯವಾಗಿದ್ದು, ಜಿಲ್ಲೆಗೆ ಸಿ.ಆರ್.ಝಡ್ ನಿಯಮಗಳಲ್ಲಿ ಈಗಾಗಲೇ ವಿನಾಯತಿ ದೊರೆತಿದ್ದು, ಹೋಂ ಸ್ಟೇಗಳಿಗೆ ಅನುಮತಿ ನೀಡುವ ವಿಧಾನವನ್ನು ಆನ್ಲೈನ್ ಮೂಲಕ ಸರಳೀಕರಣಗೊಳಿಸಲಾಗುತ್ತಿದೆ. ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಲು ಎಲ್ಲಾ ವಿಧಧ ಮಾಧ್ಯಮಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಪ್ರವಾಸೋದ್ಯಮ ಇಲಾಖೆಯ ಇನ್ಸ್ಟಾಗ್ರಾಂ ಗೆ ಸಹ ಚಾಲನೆ ನೀಡಲಾಗಿದ್ದು, ಜಿಲ್ಲೆಯ ಎಲ್ಲರ ಸಹಕಾರದಿಂದ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು. 


ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ, ಕರಾವಳಿ ಪ್ರವಾಸೋದ್ಯಮ ಸಂಘಟನೆಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.


60ಕ್ಕೂ ಅಧಿಕ ಮಂದಿ ಬೈಕ್ ರೈಡರ್ಗಳಿಂದ ಬೈಕ್ ರ‍್ಯಾಲಿ ಮತ್ತು ವಿಂಟೇಜ್ ಕಾರುಗಳ ರ‍್ಯಾಲಿ ನಡೆಯಿತು. ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಮಾಡಲು 15 ಕ್ಕೂ ಹೆಚ್ಚು ಬ್ಲಾಗರ್ಗಳು ಆಗಮಿಸಿದ್ದರು.

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top