ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ವಿಶಿಷ್ಟ ಮಾಧ್ಯಮ ತಾಳಮದ್ದಳೆ: ಕೌಡೂರು

Upayuktha
0


ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದೊಂದಿಗೆ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 26 ನೆಯ ಸರಣಿ ಕಾರ್ಯಕ್ರಮ ಇತ್ತೀಚೆಗೆ ಶ್ರೀ ಮಹಾಮಾಯಿ ದೇವಸ್ಥಾನದ ವಠಾರದಲ್ಲಿ ಜರಗಿತು.


ಹರಿಶ್ಚಂದ್ರ ಶೆಟ್ಟಿ ಕೌಡೂರು ಅಧ್ಯಕ್ಷೀಯ ಭಾಷಣದಲ್ಲಿ "ತಾಳಮದ್ದಳೆಯು ಜನ ಜೀವನಕ್ಕೆ ಅಗತ್ಯವಾದ ಭದ್ರ ಬುನಾದಿಯನ್ನು ಹಾಕಿಕೊಡುವಂತದ್ದು, ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ನಮ್ಮ ಪುರಾಣ ಕಥನಗಳನ್ನು ದಾಟಿಸುವಂತದ್ದು. ಗಮಕ ವಾಚನ, ಪುರಾಣ ವಾಚನ, ಹರಿಕಥೆ ಕಮ್ಮಿ ಆಗಿರುವ ಈ ಕಾಲದಲ್ಲಿ  ತಾಳಮದ್ದಳೆ ಆ ಕೊರತೆಯನ್ನು ನಿವಾರಿಸುತ್ತಿದೆ. ಒಂದು ಸಂಘ ನೂರು ವರ್ಷಗಳನ್ನು ಪೂರೈಸಿರುವದು ಬಹಳ ಆಶ್ಚರ್ಯದ ಸಂಗತಿ. ಪ್ರತಿ ವಾರ ಅರ್ಹರನ್ನು ಆಯ್ದು ಸಂಮಾನ ಮಾಡುತ್ತಿರುವುದು ಅತ್ಯಂತ ಸಂತೋಷ" ಎಂದರು.


ಯತೀರಾಜ್ ಶೆಟ್ಟಿ ಮಾತನ್ನಾಡಿ ಸಂಘದ 100 ವರ್ಷಗಳ ಸಾಧನೆಯನ್ನು ಮೆಚ್ಚಿಕೊಂಡರು. ಇನ್ನೂ ಹೆಚ್ಚಿನ ಕಲಾವಿದರಿಗೆ ಸಂಮಾನ ಮಾಡುವ ಅವಕಾಶ ಈ ಸಂಘಕ್ಕೆ ಸಿಗಲೆಂದು ಹಾರೈಸಿದರು. ಜಯಂತ ಕಾರಂತರ ಅಭಿನಂದನೆಯನ್ನು ಶಿವಪ್ರಸಾದ್ ಪ್ರಭು ಗೈದರು.ಯಕ್ಷಗಾನ ಭಾಗವತರಾಗಿ, ವೇಷಧಾರಿಯಾಗಿ, ಯಕ್ಷ ಗುರುವಾಗಿ ಗುರುತಿಸಿಕೊಂಡವರು ಕಾರಂತರು. ಹಲವು ಸಂಘ ಸಂಸ್ಥೆಗಳಲ್ಲಿ ಕಲಾ ಸೇವೆಯನ್ನು ಮಾಡಿದವರು. ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಯಕ್ಷಗಾನ ಬಯಲಾಟಗಳನ್ನು ಸಂಯೋಜಿಸಿದವರು ಎಂದು ಜಯಂತ ಕಾರಂತರನ್ನು ಅಭಿನಂದಿಸಿದರು.


ಸಂಮಾನಕ್ಕೆ ಉತ್ತರಿಸಿದ ಜಯಂತ ಕಾರಂತರು ನಮ್ಮ ಸಂಘದ ಕೀರ್ತಿಶೇಷ ಎನ್. ಮಾಧವ ಆಚಾರ್ಯರನ್ನು ಸ್ಮರಿಸಿಕೊಂಡರು. ಭಾಗವತಿಕೆಯನ್ನು ಕಲಿಸಿದ ಹರಿ ನಾರಾಯಣ ಬೈಪಡಿತ್ತಾಯ ಮತ್ತು ಲೀಲಾವತಿ ಬೈಪಡಿತ್ತಾಯರೇ ತಾನು ಯಕ್ಷಗಾನ ರಂಗದಲ್ಲಿ ಗುರುತಿಸಿಕೊಳ್ಳಲು ಕಾರಣ ಎಂದು ಅಭಿಪ್ರಾಯಪಟ್ಟರು. 


ಕೀರ್ತಿಶೇಷ ಕದ್ರಿ ಶಂಕರನಾರಾಯಣ ಅಡಿಗರ ಸಂಸ್ಮರಣೆಯನ್ನು ಅಶೋಕ್ ಬೋಳೂರ್ ಗೈದರು. ಸಂಮಾನ ಪತ್ರವನ್ನು ಶೋಭಾ ಐತಾಳ್ ವಾಚಿಸಿದರು. ಸಂಜಯ ಕುಮಾರ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ. ಎಸ್. ಭಂಡಾರಿ, ಉಪಾಧ್ಯಕ್ಷೆ ಪ್ರಫುಲ್ಲಾ ನಾಯಕ್ ಉಪಸ್ಥಿತರಿದ್ದರು.


ಬಳಿಕ ಶ್ರೀರಾಮ ಚರಿತಾಮೃತ ಕಥಾವಾಹಿನಿಯ "ನಾಗಾಸ್ತ್ರ ಕುಂಭಕರ್ಣ ಕಾಳಗ "ಪ್ರಸಂಗದ ತಾಳಮದ್ದಳೆ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಜರಗಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top