ಮಂಗಳೂರು: "ಹವ್ಯಾಸಿ ಯಕ್ಷಗಾನ ವೇಷಧಾರಿ, ಅರ್ಥಧಾರಿ, ಚೆಂಡೆ ಮದ್ದಳೆ ವಾದಕ, ಯಕ್ಷಗುರು, ಸಂಘಟಕ, ಕಲಾ ಪೋಷಕ ಪಿ.ಸಂಜಯ ಕುಮಾರ್ ರಾವ್ ಅವರ ನಿಸ್ವಾರ್ಥ ಯಕ್ಷಗಾನ ಸೇವೆ ಅನನ್ಯ, ಅಪೂರ್ವ" ಎಂದು ಕನ್ನಡ ಸಾಹಿತ್ಯ ಪರಿಷತ್ ನ ನಿಕಟ ಪೂರ್ವ ಜಿಲ್ಲಾಧ್ಯಕ್ಷ, ವಾಗೀಶ್ವರೀ ಸಂಘದ ಗೌರವಾಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಅವರು ನುಡಿದರು.
ಮಂಗಳೂರು ಪುರಭವನದಲ್ಲಿ ಮಂಗಳೂರು ಶಾರದಾ ಮಹೋತ್ಸವ ಶತಮಾನೋತ್ಸವ ಸಾಂಸ್ಕೃತಿಕ ಸಪ್ತಾಹದ ಎರಡನೆಯ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
"ಶತಮಾನೋತ್ಸವವನ್ನು ಆಚರಿಸುತ್ತಿರುವ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದಲ್ಲಿ ಕಳೆದ ನಾಲ್ಕು ದಶಕಗಳಿಂದ ಭಕ್ತಿ ನಿಷ್ಟೆಯಿಂದ ಕುಡ್ತೇರಿ ಮಹಾಮಯಾ ಸನ್ನಿಧಿಯಲ್ಲಿ ವಾರದ ತಾಳಮದ್ದಳೆ ಹಾಗೂ ನವರಾತ್ರಿ ಬಯಲಾಟದ ಸಂಘಟನೆಯಲ್ಲಿ ತನು ಮನ ಧನದೊಂದಿಗೆ ತೊಡಗಿಸಿಕೊಂಡಿರುವ ತನ್ನ ಒಡನಾಡಿ ಕಲಾವಿದರು ಸಂಜಯರು" ಎಂದು ಸಂಘದ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಅಭಿನಂದಿಸಿದರು.
ಪತ್ನಿ ಭಾರತಿ ರಾವ್, ಪುತ್ರಿ ನಂದಿತಾ ಅವರೊಂದಿಗೆ ಸಂಜಯರಿಗೆ "ಶ್ರೀ ವಾಗೀಶ್ವರೀ ಶತಮಾನೋತ್ಸವ ಗೌರವ ಪ್ರಶಸ್ತಿ" ನೀಡಿ ಸಂಮಾನಿಸಲಾಯಿತು.
ಎನ್. ಮಾಧವ ಆಚಾರ್ಯರು ವಾಗೀಶ್ವರೀ ಸಂಘವನ್ನು ಮುನ್ನಡೆಸುತ್ತಿದ್ದ ಸಂದರ್ಭ ವನ್ನು ನೆನಪಿಸಿ ಕೊಂಡ ಆಚಾರ್ಯ ಮಠದ ಪಂಡಿತ್ ನರಸಿಂಹ ಆಚಾರ್ಯ ಅವರು ಮಹಾಮಾಯಾ ಸಾನಿಧ್ಯವು ತನ್ನ ಆಧ್ಯಾತ್ಮ ಸಾಧನೆಗೆ ನಾಂದಿಯಾದ ಸಂಧರ್ಭವನ್ನು ಸ್ಮರಿಸಿಕೊಂಡರು.
ಮಹಾಮಾಯಾ ದೇವಸ್ಥಾನದ ಆಡಳಿತ ಮೊಕ್ತೇಸರ ಸಿ.ಎ. ಎಸ್.ಎಸ್. ಕಾಮತ್ ಅವರು "ಸತ್ವ ಭರಿತ ಸಂಭಾಷಣೆಯ ನ್ನೊಳಗೊಂಡ ತಾಳಮದ್ದಳೆಗೆ ತಮ್ಮ ಕ್ಷೇತ್ರದಲ್ಲಿ ವಿಶೇಷ ಮಾನ್ಯತೆ ನೀಡಿ ಸಹಕರಿಸಲಾಗುತ್ತಿದೆ" ಎಂದು ಶುಭ ಹಾರೈಸಿದರು.
ಟ್ರಸ್ಟಿ ಕೆ. ಪ್ರಕಾಶ್ ಕಾಮತ್, ವಿದ್ವಾಂಸ ವಾಸುದೇವ ಭಟ್, ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ, ವಾಗೀಶ್ವರೀ ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಶತಮಾನೋತ್ಸವ ಗೌರವಾಧ್ಯಕ್ಷ ಹಾಗೂ ಕಾರ್ಯಕ್ರಮ ಪ್ರಾಯೋಜಕ ಸಿ.ಎಸ್ ಭಂಢಾರಿ, ಜಿ.ಕೆ ಭಟ್ ಸೇರಾಜೆ ಉಪಸ್ಥಿತಿಯಲ್ಲಿ ಸಂಘದ ಎಲ್ಲಾ ಕಲಾವಿದರಿಗೆ ಶಾರದಾ ಶತಮಾನೋತ್ಸವ ಕಲಾ ಸರಸ್ವತಿ ಪುರಸ್ಕಾರ ನೀಡಲಾಯಿತು. ಶಿವಪ್ರಸಾದ ಪ್ರಭು ಸಂಮಾನ ಪತ್ರ ವಾಚಿಸಿದರು.
ಕನ್ನಡ- ತುಳು ತಾಳಮದ್ದಳೆ ಪಟ್ಲ ಸತೀಶ ಶೆಟ್ಟಿಯವರ ಭಾಗವತಿಕೆಯಲ್ಲಿ "ಶರ ಸೇತು ಬಂಧನ" ಹಾಗೂ ಸತೀಶ್ ಶೆಟ್ಟಿ ಬೋಂದೆಲ್ ಭಾಗವತಿಕೆಯಲ್ಲಿ "ತುಳುನಾಡ ಬಲಿಯೇಂದ್ರೆ" ಯಕ್ಷಗಾನ ತಾಳಮದ್ದಳೆಯಲ್ಲಿ ಡಾ.ಎಂ.ಪ್ರಭಾಕರ ಜೋಷಿ, ಜಿ.ಕೆ.ಭಟ್ ಸೇರಾಜೆ, ಭಾಸ್ಕರ ರೈ ಕುಕ್ಕುವಳ್ಳಿ, ದಯಾನಂದ ಕತ್ತಲ್ ಸಾರ್ ಹಾಗೂ ಸಂಘದ ಕಲಾವಿದರು ಪಾಲ್ಗೊಂಡರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ