ಶಿಕ್ಷಕರ ದಿನಾಚರಣೆ- ಸೆಪ್ಟೆಂಬರ್ 5: ಅಕ್ಷರ ಕಲಿಸಿದ ಶಿಕ್ಷಕರಿಗೆ ನಮನ

Upayuktha
0

ನಮ್ಮ ಭಾರತ ದೇಶ ಕಂಡಂತಹ ಅತ್ಯಂತ ಸರಳ, ಸಜ್ಜನ ಸಂಭಾವಿತ ಮತ್ತು ಸುಶಿಕ್ಷಿತ ಶಿಕ್ಷಕರೂ ಹಾಗೂ ನಮ್ಮ ದೇಶದ ಎರಡನೇ ರಾಷ್ಟ್ರಪತಿಯಾಗಿದ್ದ ಶ್ರೀ ಸರ್ವಪಳ್ಳಿ ರಾಧಾಕೃಷ್ಣ ಅವರ ಜನ್ಮದಿನ ಸೆಪ್ಟೆಂಬರ್ 5 ರಂದು ಭಾರತದಾದ್ಯಂತ 1962 ರಿಂದ ಶಿಕ್ಷಕರ ದಿನಾಚರಣೆ ಎಂದು ಆಚರಿಸಿ ಅವರ ತತ್ವ, ಆದರ್ಶ ಮತ್ತು ಸಿದ್ಧಾಂತಗಳನ್ನು ಸ್ಮರಿಸುತ್ತಾ, ಎಲ್ಲಾ ಶಿಕ್ಷಕ ಬಂದುಗಳಿಗೆ ಶುಭಾಶಯ ಕೋರುವ ವಿಶೇಷ ದಿನ ಎಂದರೂ ತಪ್ಪಾಗಲಾರದು. ಈ ಆಚರಣೆ ಕೇವಲ ಒಂದು ದಿನದ ತೋರಿಕೆಯ ಕಾಟಾಚಾರದ ಡಾಂಭಿಕತೆ ಮತ್ತು ಧಾರಾಳತನದ ಪ್ರದರ್ಶನದ ವೇದಿಕೆ ಆಗಬಾರದು. ನಮ್ಮನ್ನು ತಿದ್ದಿ ತೀಡಿ, ಶಿಕ್ಷಿಸಿ, ಸುಶಿಕ್ಷಿತರನ್ನಾಗಿ ಮಾಡಿದ ಗುರುವರೇಣ್ಯರನ್ನು ಸ್ಮರಿಸಿ, ಅವರನ್ನು ಮನಪೂರ್ವಕ ಗೌರವಿಸುವ ಒಂದು ಶಿಷ್ಯ ಪರಂಪರೆಯನ್ನು ನಾವು ಮಗದೊಮ್ಮೆ ಸೃಷ್ಟಿಸಬೇಕಾಗಿದೆ. ಬದಲಾದ ಶಿಕ್ಷಣ ವ್ಯವಸ್ಥೆ, ಬದಲಾದ ಕಲಿಕೆಯ ವಾತಾವರಣ ಮತ್ತು ಸದಾಕಾಲ ಬದಲಾಗುತ್ತಿರುವ ಜನರ ಮನೋ ಧರ್ಮಕ್ಕೆ ಅನುಗುಣವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಯ ಗಾಳಿ ಬೀಸುತ್ತಿದೆ. ಪವಿತ್ರವಾಗಿದ್ದ ಗುರು ಶಿಷ್ಯರ ಸಂಬಂಧ ಇದೀಗ ಕೇವಲ ವ್ಯಾವಹಾರಿಕ ಮತ್ತು ಮೌಲ್ಯ  ಆಧಾರಿತ ಸಂಬಂಧವಾಗಿ ಬದಲಾಗಿರುವುದು ಬಹಳ ಖೇದಕರ ಮತ್ತು ದುರದೃಷ್ಟಕರ ವಿಚಾರವಾಗಿದೆ.


ಭಾರತ ಬೆಳಗುತ್ತಿದೆ:

 “ಎಲ್ಲರೂ ನಡೆಯುವ ದಾರಿಯಲ್ಲಿ ನೀನು ಕುರಿಯಂತೆ ಹಿಂಬಾಲಿಸಬೇಡ. ನಿನ್ನದೇ ದಾರಿಯನ್ನು ನೀನು ನಿರ್ಮಿಸಿಕೊಂಡು, ನೀನು ನಡೆದ ದಾರಿಯಲ್ಲಿ ಶಾಶ್ವತ ಹೆಜ್ಜೆ ಗುರುತನ್ನು ಹುಟ್ಟು ಹಾಕು” ಇದು ಖ್ಯಾತ ಚಿಂತಕ ರಾಲ್ಪ್ ವಾಡ್ಲೊ ಎಮರ್‍ಸನ್ ಹೇಳಿದ ಮಾತು. ಈ ಮಾತಿನ ಅರ್ಥ ಏನೆಂದರೆ ಸಾಂಪ್ರದಾಯಿಕವಾಗಿ ಹತ್ತರಲ್ಲಿ ಒಬ್ಬನಾಗಿ, ಎಲ್ಲರೂ ಸವೆದ ದಾರಿಯನ್ನೇ ನಡೆದು ಹಿಂಬಾಲಿಸಿದಲ್ಲಿ, ನೀವು ಜೀವನದಲ್ಲಿ ಒಂದು ಹಂತವನ್ನು ದಾಟಿ ಮುಂದೆ ಹೋಗಲು ಸಾದ್ಯವಿಲ್ಲ,. ಹೋಗಲು ಆತ್ಮವಿಶ್ವಾಸ ಮತ್ತು ಸಾಮಥ್ರ್ಯ ಬರುವುದಿಲ್ಲ. ಆದರೆ ತಮ್ಮ ಸಾಮಥ್ರ್ಯದಿಂದ, ತಮ್ಮ್ನದೇ ದಾರಿಯನ್ನು ಹುಡುಕಿಕೊಂಡು, ಆತ್ಮವಿಶ್ವಾಸದಿಂದ ಮುನ್ನುಗ್ಗಿದಲ್ಲಿ ಯಾರೂ ತಲುಪದ ಗುರಿಯನ್ನು ತಲುಪಬಹುದು ಎಂದರ್ಥ. ನಮ್ಮ  ಪ್ರಸಕ್ತ ಶಿಕ್ಷಣದ ದಾರಿಯನ್ನು ಕಂಡಾಗ ಈ ಮಾತು ನಿಜವಾಗುವ ಲಕ್ಷಣಗಳು ಗೋಚರಿಸುತ್ತದೆ.


ಹಿಂದಿನ ಪುರಾತನ ಕಾಲದಲ್ಲಿ ಮಕ್ಕಳು ತಂದೆಯ ವೃತ್ತಿಯನ್ನು ವಂಶಪಾರಂಪರ್ಯವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ತಂದೆಯ ವೃತ್ತಿಯ ಹೊರತಾದ ಯೋಚನೆಯೂ ಬರುತ್ತಿರಲಿಲ್ಲ ಅಕ್ಕಸಾಲಿಗನ ಮಗ ಅಕ್ಕಸಾಲಿಗ, ಚಮ್ಮಾರನ ಮಗ ಚಮ್ಮಾರ, ವ್ಯಾಪಾರಿಯ ಮಗ ವ್ಯಾಪಾರ ಹೀಗೆ ಪಟ್ಟಿ ಬೆಳೆಯುತ್ತದೆ. 80 ರಿಂದ 90 ರ ದಶಕದಲ್ಲಿ ಬದಲಾವಣೆಯ ಗಾಳಿ ಬಲವಾಗಿ ಬೀಸಿದಾಗ ಒಂದಷ್ಟು ಕ್ರಾಂತಿಕಾರಕ ಬದಲಾವಣೆಗಳು ಕಂಡು ಬಂದವು, ಹೆತ್ತವರು ತಮ್ಮ ಮಕ್ಕಳು ತಮ್ಮ ವೃತ್ತಿಗಿಂತ ಹೊರತಾದ ವೃತ್ತಿಯ ಬಗ್ಗೆ ಚಿಂತಿಸಲಾರಂಭಿಸಿದರು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದರು. ತಮ್ಮ ವೃತ್ತಿಯ ಸಾಂಪ್ರದಾಯಿಕ ಕಷ್ಟಗಳಿಂದ ಹೊರ ಬರಲು ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ ಎಂಬ ಸತ್ಯದ ಅರಿವು ಉಂಟಾಗಿ ತಮ್ಮ ಮಕ್ಕಳಾದರೂ ಸುಖವಾಗಿರಲಿ ಎಂಬ ಚಿಂತನೆಯಿಂದ ತಮ್ಮ ವೃತ್ತಿಗೆ ಹೊರತಾದ ಸರಕಾರಿ ಕೆಲಸ ಮತ್ತು ಇತರ ಕೆಲಸಗಳಿಗೆ ಒಗ್ಗಿಕೊಂಡರು. ಕ್ರಮೇಣ ವಿದ್ಯಾಭ್ಯಾಸ ಎಲ್ಲರಿಗೂ ದೊರೆತು ನಿರುದ್ಯೋಗಿಗಳ ಸಂಖ್ಯೆ ಜಾಸ್ತಿಯಾದಾಗ, ಸ್ವಯಂ ವೃತ್ತಿ ಮಾಡಿಕೊಳ್ಳುವ ವೈದ್ಯರು ಮತ್ತು ಇಂಜಿನಿಯರ್ ಆಗಬೇಕೆಂದು ಕನಸು ಹೆಚ್ಚಿನ ಹೆತ್ತವರು ಮತ್ತು ಮಕ್ಕಳಲ್ಲಿ ಚಿಗುರೊಡೆಯಿತು. ಈ ವ್ಯಾಧಿ ಎಷ್ಟು ವ್ಯಾಪಕವಾಗಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹರಡಿತೆಂದರೆ, ಪ್ರತಿಯೊಬ್ಬ ಹೆತ್ತÀ್ತವರೂ ತನ್ನ ಮಕ್ಕಳು ವೈದ್ಯ, ವಕೀಲ ಅಥವಾ ಇಂಜಿನಿಯರ್ ಆಗಲಿ ಎಂದು ಹಂಬಲಿಸತೊಡಗಿದರು. ವಿದ್ಯಾರ್ಥಿಗಳ, ಮಕ್ಕಳ ಆಸೆ ಆಕಾಂಕ್ಷೆ, ಪ್ರತಿಭೆಗೆ ಬೆಲೆಕೊಡದೆ ಬಲವಂತವಾಗಿ ಅವರನ್ನು ಹೆತ್ತವರು ತಮ್ಮ ಆಸೆಗನುಗುಣವಾಗಿ ವೈದ್ಯರಾಗಲು ಅಥವಾ ಇಂಜಿನಿಯರ್ ಆಗಲು ಹೆಚ್ಚಿನ ಒತ್ತಡ ಹಾಕತೊಡಗಿದ್ದು ನಮ್ಮ ಸಮಾಜದ ದುರಂತವೇ ಸರಿ.


ವೈದ್ಯ ವೃತ್ತಿ ಮತ್ತು ಇಂಜಿನಿಯರ್ ವೃತ್ತಿಗೆ ಹೊರತಾದ ವೃತ್ತಿಯೇ ಇಲ್ಲ ಎಂಬಂತೆ ಹೆತ್ತವರು ಮತ್ತು ಮಕ್ಕಳು ವರ್ತಿಸಲಾರಂಭಿಸಿದರು. ಈಗ ನಮ್ಮ ದೇಶದಲ್ಲಿ ಸಾಕಷ್ಟು ವೈದ್ಯರು, ಇಂಜಿನಿಯರ್‍ಗಳು, ವಕೀಲರು ತುಂಬಿಹೋಗಿದ್ದಾರೆ. ಎಲ್ಲರೂ ಹೇಗಾದರೂ ಮಾಡಿ, ಶತಾಯಗತಾಯ ಈ ವೃತ್ತಿಗೆ ಜೋತು ಬಿದ್ದ ಕಾರಣ, ಈ ವೃತ್ತಿಯನ್ನು ಆರಿಸಿದ ಯೋಗ್ಯರಲ್ಲದ ವ್ಯಕ್ತಿಗಳಿಂದ ತುಂಬಿ ಹೋಗಿ, ಇಲ್ಲಿಯೂ ನಿರುದ್ಯೋಗ, ಅಸಹನೆ, ಹತಾಶೆ ಮತ್ತು ಆರ್ಥಿಕ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದು ನಿಂತಿದೆ. ಇವೆಲ್ಲದರ ನಡುವೆ ಒಂದು ಆಶಾದಾಯಕ ಬದಲಾವಣೆ ಎಂದರೆ ನಮ್ಮ ನವ ಭಾರತದ ಹೆತ್ತವರು ಮತ್ತು ಮಕ್ಕಳು ಧನಾತ್ಮಕವಾಗಿ ಬದಲಾಗುತ್ತಿದ್ದಾರೆ. ಇಂದಿನ ಮಕ್ಕಳ್ಯಾರು ವೈದ್ಯರಾಗಲೇಬೇಕೆಂದು ಹಠ ಮಾಡುತ್ತಿಲ್ಲ. ಹೆತ್ತವರೂ ಕೂಡಾ ತಮ್ಮ ಮಕ್ಕಳು ತಮ್ಮಂತೆಯೇ ವೈದ್ಯರಾಗಲೇಬೇಕೆಂಬ ಸಿದ್ದ ಸೂತ್ರಕ್ಕೆ ಜೋತು ಬಿದ್ದಿಲ್ಲ. ತಮ್ಮ ಮಕ್ಕಳ ಹವ್ಯಾಸ, ಪ್ರತಿಭೆ, ಆಸಕ್ತಿ ಮತ್ತು ಆಯ್ಕೆಯನ್ನು ಗಮನಿಸುತ್ತಾ ಪ್ರೋತ್ಸಾಹ ನೀಡುತ್ತಿರುವುದು ಬಹಳ ಸಂತಸದ ವಿಚಾರ, ಸಾಂಪ್ರದಾಯಿಕ ವೈದ್ಯ, ವಕೀಲ, ಇಂಜಿನಿಯರ್ ವೃತ್ತಿಯನ್ನು ಬದಿಗಿರಿಸಿ ಡಿಜೆ, ಆರ್ಟ್ ಡೈರೆಕ್ಟರ್, ಬಾಣಸಿಗ, ಆಹಾರ ತಜ್ಞ, ಪ್ಯಾಶನ್ ತಜ್ಞ, ದೈಹಿಕ ತರಬೇತುದಾರ, ರೇಡಿಯೋ ಜಾಕಿ, ಸಮಾಜ ಸೇವಕ, ಬರಹಗಾರ ಹೀಗೆ ಮತ್ತು ಹಲವು ವೃತ್ತಿಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿರುವುದು ಬಹಳ ಸಂತಸದ ವಿಚಾರ, ಇನ್ನೊಂದು ಬಹಳ ಆಸಕ್ತಿದಾಯಕ ಮತ್ತು ಚೇತೋಹಾರಿ ಬದಲಾವಣೆ ಎಂದರೆ ಇಂದಿನ ಮಕ್ಕಳು ಬಹಳ ಪ್ರತಿಭಾವಂತರಾಗಿರುವುದು ಜೊತೆಗೆ ಸಾಮಾನ್ಯ ಜ್ಞಾನವನ್ನು ಹೆಚ್ಚು ಹೊಂದಿದ್ದಾರೆ ಎಂದರೂ ತಪ್ಪಾಗಲಾರದು.


ಅವರ ಕಲಿಕೆಗೆ ಬೆಕಾದ ಎಲ್ಲ ಮೂಲ ವಸ್ತುಗಳು, ಸೌಲಭ್ಯಗಳನ್ನು ಅಂತರ್ಜಾಲದ ಮುಖಾಂತರ ಅಥವಾ ಇನ್ನಾವುದೇ ಮೂಲದಿಂದ ಪಡೆದ ತಮ್ಮ ಮುಂದಿನ ದಾರಿಯ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದಾರೆ. ತಾವು ಏನು ಮಾಡಬೇಕು, ಏನು ಕಲಿಯಬೇಕು, ಎಲ್ಲಿ ಕಲಿಯಬೇಕು ಎಂಬವರ ಬಗ್ಗೆ ಅವರೇ ನಿರ್ಣಯ ಮಾಡುವಷ್ಟು ಪ್ರತಿಭಾಶಾಲಿಗಳು ಮತ್ತು ಸಾಮಥ್ರ್ಯ ಹೊಂದಿರುವುದು ಬಹಳ ಸಂತಸದ ಬೆಳವಣಿಗೆ ಎಂದರೂ ತಪ್ಪಾಗಲಾರದು. ಮೊನ್ನೆ ಒಬ್ಬ ಪ್ರಸಿದ್ದ ವೈದ್ಯನ ಮಗ ಮಾತಿಗೆ ಸಿಕ್ಕಾಗ ನೀನ್ಯಾಕೆ ವೈದ್ಯನಾಗಲಿಲ್ಲ ಎಂದು ಕೇಳಿದಾಗ ಸ್ಪಷ್ಟವಾಗಿ ನನಗದರಲ್ಲಿ ಆಸಕ್ತಿ ಇಲ್ಲ. ನನಗೆ ಆಸಕ್ತಿ ಇಲ್ಲದ ವಿಚಾರದ ಬಗ್ಗೆ ನಾನ್ಯಾಕೆ ಓದಲಿ ಎಂದು ಮರು ಪ್ರಶ್ನೆ ಮಾಡಿದ್ದ. ವೈದ್ಯನಾದರೆ ಸಾಕಷ್ಟು ಸಂಪಾದನೆ, ಹೆಸರು ಖ್ಯಾತಿ ಗಳಿಸಬಹುದಲ್ಲ ಎಂದು ಕೇಳಿದಾಗ ನನಗೆ ಅತಿಯಾದ ಹಣದ ಅಗತ್ಯವಿಲ್ಲ ನನ್ನ ಖರ್ಚಿಗೆ, ಓದಿಗೆ ನಾನು ಮೆರಿಟ್ ಮುಖಾಂತರ ವಿದ್ಯಾರ್ಥಿ ವೇತನ ಪಡೆದೇ ಓದುತ್ತೇನೆ ಎಂದು ಹೇಳುವಾಗ ಆತನ ಕಣ್ಣಿನಲ್ಲಿ ಆತ್ಮ ವಿಶ್ವಾಸ ತುಂಬಿ ತುಳುಕುತ್ತಿತ್ತು ನಾನು ಮೂಲ ವಿಜ್ಞಾನವನ್ನು ಇಷ್ಟಪಟ್ಟಿದ್ದೇನೆ. ನಾನು ವಿಜ್ಞಾನ ಶಾಸ್ತ್ರದಲ್ಲಿ ಸಂಶೋಧನೆ ಮಾಡಿ ಜೀವಜಗತ್ತಿಗೆ ಹೊಸ ವ್ಯಾಖ್ಯಾನ ಮಾಡುವ ಆಸೆ ಹೊಂದಿದ್ದೇನೆ ಎಂದು ಆತ ಹೇಳುವಾಗ ನಾನು ಗರಬಡದವನಂತೆ ನಿಂತಿದ್ದೆ. ಇನ್ನೋರ್ವ ವಿದ್ಯಾರ್ಥಿ ನಿವ್ಯಾಕೆ ಗಣಿತ ಶಾಸ್ತ್ರವನ್ನು ಆಯ್ಕೆ ಮಾಡಿದೆ, ನಿನ್ನ ಹೆತ್ತವರಂತೆ ವೈದ್ಯರಾಗಬಹುದಲ್ಲ ಎಂದಾಗ, ನಾನ್ಯಾಕೆ ತನಿಗಿಷ್ಟವಲ್ಲದ ಜೀವಶಾಸ್ತ್ರ ಓದಲಿ ನನ್ನ ಜೀವನದಲ್ಲಿ ನಾನಿಷ್ಟ ಪಟ್ಟ ವಿಷಯ ಗಣಿತ ಶಾಸ್ತ್ರ. ನಾನು ಅದರಲ್ಲಿ ಸಂಶೋಧನೆ ಮಾಡಿ ದೇಶಕ್ಕೆ ಕೀರ್ತಿ ತರುತ್ತೇನೆ ಎಂದಾಗ ನಾನು ತೆರೆದ ಬಾಯಿಯನ್ನು ಮುಚ್ಚಲು ಮರತೇ ಹೋಗಿದ್ದೆ. ಅಪ್ಪ ನೆಟ್ಟ ಆಲದ ಮರವೆಂದು, ಪ್ರೀತಿಯಿಂದ ನಾವ್ಯಾಕೆ ನೇಣು ಹಾಕಿಕೊಳ್ಳಲಿ. ನಮ್ಮ ಪ್ರತಿಭೆ, ಆಸಕ್ತಿ ಮತ್ತು ನಮ್ಮ ವಿಚಾರಧಾರೆಗೆ ಪೂರಕವಾದ ವಿದ್ಯಾಭ್ಯಾಸ ನಾವು ಪಡೆದೇ ತೀರುತ್ತೇವೆ ಎಂಬ ಆತ್ಮವಿಶ್ವಾಸದ ಆತನ ಮಾತಿಗೆ ನಾನು ತಲೆದೂಗÀಲೇಬೇಕಾಯಿತು. ಇದು ಇವತ್ತಿನ ಭಾರತದ ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳ ಮನೋಸ್ಥಿತಿ. ಇದು ಬಹಳ ಆರೋಗ್ಯಕರ ಬೆಳವಣಿಗೆ ಮತ್ತು ಭಾರತ ಬೆಳಗುತ್ತಿದೆ ಎಂಬ ಮಾತನ್ನು ಪುಷ್ಟೀಕರಿಸುತ್ತದೆ.


ಸಂಶೋಧನೆ ಯಾಕೆ ನಡೆಯುತ್ತಿಲ್ಲ?

ಇಷ್ಟು ದಿನ ನಮ್ಮ ಭಾರತದ ಪ್ರತೀಬಾಶಾಲಿ ವಿದ್ಯಾರ್ಥಿಗಳು ಒಂದು ಹಂತದ ಕಲಿಕೆ ಬಳಿಕ, ಹೆಚ್ಚಿನ ಸಾಧನೆಗಾಗಿ ಅಥವಾ ಕಲಿಕೆಗಾಗಿ ಹೊರ ದೇಶಕ್ಕೆ ಪ್ರತಿಭಾ ಪಲಾಯನ ಮಾಡುತ್ತಿದ್ದರು ಅವರ ಸಂಖ್ಯೆ ಬಹಳ ಜಾಸ್ತಿ ಇರುತ್ತಿರಲಿಲ್ಲ ಇದೀಗ ವೈದ್ಯವೃತ್ತಿ ಮತ್ತು ಇಂಜಿನಿಯರಿಂಗ್ ವೃತ್ತಿಯ ಬಗೆಗಿನ ಒಲವು ಕಡಿಮೆಯಾಗಿ ಮೂಲ ವಿಜ್ಞಾನದ ಬಗ್ಗೆ, ಸಂಶೋದನೆ ಬಗ್ಗೆ ಮಕ್ಕಳ ಒಲವು ಮಾಡಿರುವುದು ಭವ್ಯ ಭಾರತದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಸಂಶೋಧನಾ ಕ್ಷೇತ್ರದಲ್ಲಿ ನಮ್ಮ ದೇಶದ ಕೊಡುಗೆ ಇವರ ದೇಶಗಳಿಗೆ ಹೋಲಿಸಿದಲ್ಲಿ ಬಹಳ ಕಡಿಮೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ಸಂಶೋದನಾ ಕ್ಷೇತ್ರದತ್ತ ಮುಖ ಮಾಡಿರುವುದು ಅತ್ಯಂತ ಗಮನಾರ್ಹವಾದ ಬದಲಾವಣೆ. ನಮ್ಮ ದೇಶದ ಜನಸಂಖ್ಯೆಯ 50ರಷ್ಟು ಮಂದಿ 21 ವರ್ಷಕ್ಕಿಂತ ಕಡಿಮೆ ಇರುವುದು ಬಹುದೊಡ್ಡ ಧನಾತ್ಮಕ ಅಂಶ. ನಮ್ಮ ದೇಶದ ಭವಿಷ್ಯದ ಹಿತದೃಷ್ಠಿಯನ್ನು ಗಮನದಲ್ಲಿರಿಸಿಕೊಂಡು ಹೆತ್ತವರು ತಮ್ಮ ಮಕ್ಕಳ ಮೇಲೆ ಒತ್ತಡ ಹೇರದೆ, ಮಕ್ಕಳ ಆಸಕ್ತಿ, ಕೌಶಲ್ಯ ಮತ್ತು ಪ್ರತಿಬೆಗೆ ನೀರೆರೆದು ಪೋಷಿಸಬೇಕಾದ ಅನಿವಾರ್ಯತೆ ಇದೆ. ಹೆಚ್ಚು ಹೆಚ್ಚು ಪೋಷಕರು ನಿಧಾನವಾಗಿ ಈ ಸತ್ಯವನ್ನ ಅರಿತುಕೊಳ್ಳುತ್ತಿರುವುದು ಅತ್ಯಂತ ಸಂತಸದ ವಿಚಾರ ಯಾಕೆಂದರೆ ತಮ್ಮ ಭಾರತಕ್ಕೆ ಈಗ ಬೇಕಾಗಿರುವುದು ವೈದ್ಯರಲ್ಲ ವಕೀಲರಲ್ಲ್ಲ, ಇಂಜಿನಿಯರ್‌ಗಳಲ್ಲ. ನಮಗೆ ಬೇಕಾಗಿರುವುದು ಸಂಶೋಧನೆ ಮಾಡಿ ಹೊಸತನ್ನ ಕಂಡು ಹಿಡಿದು ಜಗತ್ತಿನ ಭೂಪಟದ ಭಾರತವನ್ನು ಬೆಳಗುವ ವಿಜ್ಞಾನಿಗಳು ಮತ್ತು ಸಂಶೋಧನಾ ಶೀಲ ವಿದ್ಯಾರ್ಥಿಗಳು. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕಾದ ಕಾಲ ಘಟ್ಟದಲ್ಲಿ ನಾವಿಂದು ನಿಂತಿದ್ದೇವೆ.


ನಮ್ಮ ಶಿಕ್ಷಣ ವ್ಯವಸ್ಥೆಯು ಅದಕ್ಕೆ ಪೂರಕವಾಗಿ ಬದಲಾಗಬೇಕಾಗಿದೆ. ಬದಲಾವಣೆಗೆ ಪೂರಕವಾದ ವಾತಾವರಣವನ್ನು ಹೆತ್ತವರು, ಶಿಕ್ಷಕರು, ಸಮಾಜ ಮತ್ತು ಸರಕಾರ ಮತ್ತಷ್ಟು ನೀಡಬೇಕಾಗಿದೆ. ದಿನದ 24 ಘಂಟೆಗಳ ಕಾಲ ರೂಮಿನಲ್ಲಿ ಕೂಡಿ ಹಾಕಿ ನೂರಕ್ಕೆ ನೂರು ಅಂಕ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಂದ ಸಮಾಜಕ್ಕೆ ಏನೂ ಲಾಭವಾಗದು. ವಿದ್ಯಾರ್ಥಿಗಳ ವಿಶೇಷ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ, ಪ್ರೋೀತ್ಸಾಹಿಸಿ, ಆತನಿಂದ ಸಮಾಜಕ್ಕೆ ಪೂರಕವಾದ ಸಂಶೋದನೆ ನಡೆಯುವಂತಹಾ ವಾತಾವರಣ ಕಲ್ಪಿಸುವ ಕೆಲಸ ಆಗಬೇಕಾಗಿದೆ ಈ ನಿಟ್ಟಿನಲ್ಲಿ ಹೆತ್ತವರು, ಮಕ್ಕಳು ಮತ್ತು ಶಿಕ್ಷಕರು ಬದಲಾಗುತ್ತಿರುವುದು ಬಹಳ ಸಂತಸದ ವಿಚಾರ, ಶಿಕ್ಷಣ ಸಂಸ್ಥೆಗಳು ಕೂಡಾ ಬರೀ ಆರ್ಥಿಕ ವ್ಯವಹಾರದ ನಿಟ್ಟಿನಲ್ಲಿ ಯೋಚಿಸಿ ವೈದ್ಯರನ್ನು, ಇಂಜಿನಿಯರ್‍ಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗಬಾರದು. ಸಮಾಜಕ್ಕೆ ಆಸ್ತಿಯಾಗುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪ್ರತಿಭೆಯನ್ನು ಪೋಷಿಸಿ, ಅವರಿಂದ ಸಮಾಜಕ್ಕೆ ಸೂಕ್ತ ಕೊಡುಗೆ ಬರುವಂತಹ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು. ಅದು ಬಿಟ್ಟು ಸಾಂಪ್ರದಾಯಿಕ ಶಿಕ್ಷಣಕ್ಕೆ ಜೋತು ಬಿದ್ದು ವೈದ್ಯರನ್ನು, ವಕೀಲರನ್ನು ಮತ್ತು ಇಂಜಿನಿಯರುಗಳನ್ನು ಸೃಷ್ಟಿಸುವ ಕೆಲಸ ಮಾಡಿದರೆ ಅದು ಬಹುದೊಡ್ಡ ಸಾಮಾಜಿಕ ದುರಂತವಾಗುವುದರಲ್ಲಿ ಸಂದೇಹವೇ ಇಲ್ಲ. ಒಂದು ಸಂತಸದ ವಿಚಾರವೆಂದರೆ ಇಂದಿನ ಯುವ ಜನಾಂಗ ಮಾತ್ರ ಹೆಚ್ಚಿನ ವಿದ್ಯಾರ್ಥಿಗಳು ಬಹಳ ಜಾಣರಾಗಿದ್ದು ತಾನೇನು ಮಾಡಬೇಕು, ತಮ್ಮ ನಿಲುವು ಏನು, ತಮ್ಮ ಆಯ್ಕೆ ಏನು ಎಂಬುದರ ಬಗ್ಗೆ ಬಹಳ ನೇರವಾದ ಮತ್ತು ಸರಳವಾದ ನಿಲುವು ಹೊಂದಿದ್ದಾರೆ.


ತಮಗಿಷ್ಟವಾದದನ್ನೇ ಆಯ್ಕೆ ಮಾಡಿ  ಅದರಲ್ಲಿಯೇ ಸಾಧಿಸಿ ತೋರಿಸುವ ಛಲ ಹೊಂದಿರುವುದು ಬಹಳ ಧನಾತ್ಮಕ ಬೆಳವಣಿಗೆ. ಹಿಂದಿನ ಕಾಲದಲ್ಲಿದಂತಹಾ ಲಾಳsÀ ಕಟ್ಟಿದ ಕುದುರೆಯಂತೆ ಅತ್ತಿತ್ತ ನೋಡದೆ, ನೇರವಾಗಿ ಸಾಗುವ ಕುದುರೆಯಾಗದೇ ತನ್ನ ಆಸಕ್ತಿ, ಅಭಿರುಚಿ ಮತ್ತು ಸಾಮಥ್ರ್ಯಕ್ಕೆ ಓರೆ ಹಚ್ಚುವÀ ವಿದ್ಯಾಭ್ಯಾಸವನ್ನು ಆಯ್ಕೆ ಮಾಡಿ ತನ್ನನ್ನು ತಾನೇ ಸ್ಪರ್ದಾತ್ಮಕ ಜಗತ್ತಿಗೆ ತೆರೆದುಕೊಳ್ಳುವ ಮನೋಸ್ಥಿತಿ ಹೊಂದಿರುವ ನವ ಭಾರತದ ಯುವ ವಿದ್ಯಾರ್ಥಿಗಳನ್ನು ನಮ್ಮ ದೇಶದ ಆಸ್ತಿ ಎಂದರೆ ಅತಿಶಯೋಕ್ತಿ ಯಾಗಲಾರದು. ನಮ್ಮ ಮಾಜಿ ರಾಷ್ಟ್ರಪತಿ ದಿ|| ಎ.ಪಿ.ಜೆ ಅಬ್ದುಲ್ ಕಲಾಂ ಹೇಳಿದಂತೆ “ಕನಸು ಎನ್ನುವುದು ನಾವು ನಿದ್ದೆಯಲ್ಲಿರುವಾಗ ಬರುವ ಕ್ಷಣಿಕ  ಕ್ಷಣಗಳಲ್ಲ. ಅದು ನಮ್ಮನ್ನು ನಿದ್ದೆ ಮಾಡಲು ಬಿಡದ ನಮ್ಮ ಮನೋಸ್ಥಿತಿಯಾಗಿರಬೇಕು”. ಇಂದಿನ ವಿದ್ಯಾರ್ಥಿಗಳು ಈ ರೀತಿ ತಮ್ಮ ಕನಸುಗಳನ್ನು ಕಟ್ಟುತ್ತಾ, ರೆಕ್ಕೆÀ ಬಿಚ್ಚಿ ಆಗಸದಲ್ಲಿ ಹಾರುತ್ತಾ, ನಮ್ಮ ದೇಶದ ಕೀರ್ತಿ ಪತಾಕೆ ಹಾರಿಸುವ ದಿನಗಳು ದೂರವಿಲ್ಲ ಯಾಕೆಂದರೆ ಭಾರತ ಬದಲಾಗುತ್ತಿದೆ. ಭಾರತ ಬೆಳಗುತ್ತಿದೆ.


ಕೊನೆಮಾತು:

ಹಿಂದಿನ ಕಾಲದಲ್ಲಿ ಗುರುವಿನಿಂದಲೇ ಎಲ್ಲವೂ ಕಲಿಸಲ್ಪಡುತ್ತಿತ್ತು. ಎಲ್ಲಾ ವಿಚಾರಗಳನ್ನು ಗುರುಗಳೇ ಶಿಷ್ಯಂದಿರಿಗೆ ಧಾರೆ ಎರೆಯುತ್ತಿದ್ದರು. ಆದರೆ ಈಗ ಗುರು ‘ಶಿಕ್ಷಕನ’ ಸ್ಥಾನದಿಂದ ಸ್ಥಾನಪಲ್ಲಟಗೊಂಡಿದ್ದಾನೆ. ಗುರುವಿನಿಂದ ಶಿಕ್ಷಿಸುವ ಅಧಿಕಾರವನ್ನು ಯಾವತ್ತೋ ಕಿತ್ತುಕೊಳ್ಳಲಾಗಿದೆ. ಗುರುಗಳು ಅಂದರೆ ಕೇವಲ ಮಾರ್ಗದರ್ಶಕರು ಅಥವಾ ಕಲಿಕೆಯನ್ನು ಸರಳೀಕರಿಸುವ ಮದ್ಯವರ್ತಿಗಳು ಎಂದು ತಿದ್ದಲಾಗಿದೆ. ಗುರುವಿನ ಎಲ್ಲಾ ಸ್ವಾತಂತ್ರಗಳಿಗೆ ಕಡಿವಾಣ ಹಾಕಲಾಗಿದೆ. ಮಕ್ಕಳನ್ನು ಬಡಿಯುವುದು ಬಿಡಿ, ಜೋರಾಗಿ ಗದರಿಸಲೂ ಸಾಧ್ಯವಿಲ್ಲದಂತಹಾ ಪರಿಸ್ಥಿತಿಗೆ ನಾವು ಬಂದು ನಿಂತಿದ್ದೇವೆ. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಪುರಂದರದಾಸರ ಹಾಡನ್ನು “ಗುರುವೇ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಪುಂಗಿದಾಸನ ಹಾಡನ್ನಾಗಿ ಜಾಣತನದಿಂದ ಪರಿವರ್ತಿಸಿದ್ದೇವೆ. ಎಲ್ಲಾ ಶಿಕ್ಷಕರು ಅನಿವಾರ್ಯವಾಗಿ ಮಕ್ಕಳ, ಹೆತ್ತವರ ಮತ್ತು ಶಾಲಾ ಮಾಲಿಕರ ಅಡಿಯಾಳಾಗಿ ಮಕ್ಕಳಿಗೆ ಹೆದರಿ ಬದುಕುವಂತ ಸನ್ನಿವೇಶವನ್ನು ಸೃಷ್ಟಿಮಾಡಿದ್ದೇವೆ. ಮಕ್ಕಳಿಗೆ ಕೈ ಬೆರಳಿನ ತುದಿಯಲ್ಲಿಯೇ ಎಲ್ಲಾ ವಿಚಾರಗಳು ಅಂದರೆ, ಬೇಕಿದ್ದದ್ದು ಮತ್ತು ಬೇಡದಿದ್ದದ್ದು ಎಲ್ಲವೂ ಸಿಗುವಂತಹ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ. ಶಿಕ್ಷಕರು ಏನಿದ್ದರೂ ಶಾಲೆಗೆ ಬಂದು ಮಕ್ಕಳ ಮೇಲುಸ್ತುವಾರಿ ನೋಡಿಕೊಂಡು, ಬೇಡದ ಮೀಟಿಂಗ್‍ನಲ್ಲಿ ಹರಟೆ ಹೊಡೆದು, ಮಕ್ಕಳಿಗೆ ಹಾಲು ಮಜ್ಜಿಗೆ ಮೊಟ್ಟೆ ಹಣ್ಣು ನೀಡುವ ವ್ಯಾಪಾರಿಗಳನ್ನಾಗಿ ಮಾಡಿ, ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾವಹಾರಿಕವಾಗಿಸಿದ್ದೇವೆ.


ಈಗಿನ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಒಂದು ಬಿಟ್ಟು ಬೇರೆಲ್ಲವೂ ಸಿಗುತ್ತಿದೆ. ಎಲ್ಲವೂ ವ್ಯಾಪಾರೀಕರಣವಾಗಿರುವುದರಿಂದ ಶಾಲೆ ದೇವಾಲಯವಾಗಿ ಉಳಿದಿಲ್ಲ. ಅದೊಂದು ವ್ಯಾಪಾರಿ ಸಂಕೀರ್ಣವಾಗಿ ಬದಲಾಗಿದೆ. ಶಾಲೆಯ ಮಕ್ಕಳಿಗೆ ಶೂ, ಸಾಕ್ಸ್, ಅಂಗಿ ಚಡ್ಡಿ ಕರ್ಚೀಪ್ ನಿಂದ ಹಿಡಿದು ಊಟ ತಿಂಡಿ ಪುಸ್ತಕ ಬಟ್ಟೆ ಬರೆ ಪೆನ್ನು ಪೆನ್ಸಿಲ್ ಎಲ್ಲವೂ ಸಿಗುತ್ತದೆ. ಆದರೆ ವಿಪರ್ಯಾಸವೆಂದರೆ ಸಿಗದಿರುವುದು ಸಂಸ್ಕಾರ ಮತ್ತು ಶಿಕ್ಷಣ ಮಾತ್ರ. ಎಲ್ಲಾ ಶಾಲೆಗಳು ಬುದ್ಧಿವಂತ 95 ಶೇಕಡಾ ಮಾರ್ಕ್ ಪಡೆಯುವ ಮಕ್ಕಳನ್ನು ಉತ್ಪಾದಿಸುವ ಕಾರ್ಖಾನೆಗಳು ಬೆಳೆದು ನಿಂತಿದೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾಲಯಗಳು ಉತ್ತೀರ್ಣರಾಗಲೇ ಬೇಕು. ಇಲ್ಲವಾದಲ್ಲಿ ಬಡತಾಯಿ ಮೇಸ್ಟ್ರು ಮನೆಗೆ ಹೋಗಬೇಕು ಎಂಬ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಮಾಡಿದಾಗ ಶಿಕ್ಷಕರ ದಿನಾಚರಣೆಯ ಅರ್ಥ ಯಾವತ್ತೂ ಕಳೆದು ಹೋಗಿದೆ. ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಮರಳಿ ಪಡೆಯಬೇಕಾದರೆ, ನಾವು ಶಿಕ್ಷಕರಿಗೆ ನೀಡುವ ಅಧಿಕಾರ, ಸ್ವಾಯತ್ತೆ ಮತ್ತು ಸ್ವಾತಂತ್ರ್ಯವನ್ನು ಮಗದೊಮ್ಮೆ ಅವರಿಗೆ ನೀಡಲೇ ಬೇಕಾಗಿದೆ. ಮಕ್ಕಳ ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣಕ್ಕೆ ಪೂರಕವಾದ ಶಿಕ್ಷಣ ವ್ಯವಸ್ಥೆ ನಿರ್ಮಾಣ ಮಾಡಿ, ಶಿಕ್ಷಕರಿಗೆ ಪರಿಪೂರ್ಣ ಸ್ವಾತಂತ್ರ್ಯ ನೀಡಬೇಕಾಗಿದೆ.


ಹಾಗಾದಲ್ಲಿ ಮಾತ್ರ ಗುರು ಶಿಷ್ಯರ ಸಂಬಂಧ ಮೊದಲಿನಂತಾಗಿ ಶಿಕ್ಷಣದ ನಿಜವಾದ ಉದ್ದೇಶ ಈಡೇರಬಹುದು. ಹಾಗಾದರೆ ಮಾತ್ರ ಶಿಕ್ಷಕರ ದಿನಾಚರಣೆಗೆ ಹೆಚ್ಚು ಅರ್ಥಪೂರ್ಣವಾಗಬಹುದು ಮತ್ತು ಅದುವೇ ನಾವು ಸರ್ವಪಳ್ಳಿ ರಾಧಾಕೃಷ್ಣ ಅವರ ಆತ್ಮಕ್ಕೆ ನೀಡುವ ಬಹುದೊಡ್ಡ ಗೌರವ ಎಂದರೂ ತಪ್ಪಾಗಲಾರದು. ಕಾಲ ಇನ್ನೂ ಮಿಂಚಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲ ಸರಕಾರ, ಜನರು ಮತ್ತು ಹೆತ್ತವರು ಒಟ್ಟು ಸೇರಿ ಶಿಕ್ಷಕರ ಪಾವಿತ್ರತೆಯನ್ನು ಕಾಪಾಡಲು ಕಟಿ ಬದ್ಧರಾಗೋಣ ಮತ್ತು ಭಾರತೀಯ ಪರಂಪರೆಯಲ್ಲಿ ಗುರು ಪರಂಪರೆಗೆ ಬಹಳ ಮಹತ್ವದ ಸ್ಥಾನವಿದೆ. ಅದನ್ನು ಮಗದೊಮ್ಮೆ ಮರುಸೃಷ್ಟಿಸೋಣ. ಗುರು ಶಿಷ್ಯ ಪರಂಪರೆಯ ಪಾವಿತ್ರತೆಯನ್ನು ಮತ್ತೊಮ್ಮೆ ಸ್ಥಾಪಿಸೋಣ. ಅದರಲ್ಲಿಯೇ ನಮ್ಮೆಲ್ಲರ ಮತ್ತು ಸಮಾಜದ ಹಿತ ಅಡಗಿದೆ.


-ಡಾ. ಮುರಲೀ ಮೋಹನ್ ಚೂಂತಾರು

ಸುರಕ್ಷಾ ದಂತ ಚಿಕಿತ್ದಾಲಯ 

ಮೊ.ನಂ: 9845135787

E-mail: drmuraleemohan@gmail.com


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top