ಮಂಗಳೂರು: ಕ್ರೀಡೆಯು ತನು-ಮನವನ್ನು ಗಟ್ಟಿಗೊಳಿಸುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲಿ ಕ್ರೀಡೆ ಪ್ರಧಾನ ಪಾತ್ರವನ್ನು ವಹಿಸುವುದಲ್ಲದೆ, ಶಿಕ್ಷಣಕ್ಕೆ ಪೂರಕವಾಗಿಯೂ ಸಹಕರಿಸುತ್ತದೆ, ಎಂದು ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ವಿಜೇತೆ ಕುಮಾರಿ ವೆನಿಜಿಯ ಎ ಕಾರ್ಲೊ ಅಭಿಪ್ರಾಯಪಟ್ಟರು.
ಅವರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ವತಿಯಿಂದ ಭಾನುವಾರ ಕಾಲೇಜಿನ ಮೈದಾನದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ, ಧ್ವಜಾರೋಹಣ ನೆರವೇರಿಸಿ ಪಥಸಂಚಲನದ ಗೌರವ ಸ್ವೀಕರಿಸಿ ಮಾತನಾಡುತ್ತಾ, ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳೆರಡೂ ಮುಖ್ಯ, ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ಜೀವನದಲ್ಲಿ ಶಿಸ್ತು ಮತ್ತು ದೈಹಿಕ ಕ್ಷಮತೆಗೆ ಕ್ರೀಡೆಯೇ ಮೂಲಮಂತ್ರ. ಚೆಂಡಿನ ಮೂಲಕ ಪುಟಿಯುವ ಶಕ್ತಿಯನ್ನು, ಎತ್ತರಕ್ಕೆ ಜಿಗಿಯುವುದನ್ನು, ದೂರದೃಷ್ಟಿಯನ್ನು, ಗುಂಪಿನಲ್ಲಿ ಸಾಧಿಸುವುದನ್ನು, ರಿಲೇಯ ಮೂಲಕ ಸಹಕರಿಸುವುದನ್ನು ಕಲಿತಿದ್ದೇವೆ. ಕ್ರೀಡೆ ಮನಸ್ಸಿಗೆ ಉಲ್ಲಾಸ ನೀಡುವುದು ಮಾತ್ರವಲ್ಲ, ಜೀವನದ ಕಲೆಯನ್ನು ಅರುಹುತ್ತದೆ, ಎಂದರು.
ಸ್ನಾತಕೋತ್ತರ ವಾಣಿಜ್ಯ ಮತ್ತು ಎಂ.ಬಿ.ಎ (ಐಬಿ) ವಿಭಾಗದ ಸಂಯೋಜಕ ಡಾ. ಜಗದೀಶ ಬಿ, ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ, ಕೊಂಕಣಿ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಬಿ ದೇವದಾಸ ಪೈ, ದೈಹಿಕ ಶಿಕ್ಷಕರಾದ ಅಶ್ವಥ್ ಸಾಲಿಯಾನ್ ಉಪಸ್ಥಿತರಿದ್ದರು.
ವಾಣಿಜ್ಯ, ತುಳು, ಕೊಂಕಣಿ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ