ಕನ್ನಡ ಸಾಹಿತ್ಯಕ್ಕೆ ಸರ್.ಎಂ.ವಿಶ್ವೇಶ್ವರಯ್ಯನವರ ಅಮೂಲ್ಯ ಕೊಡುಗೆ : ಶ್ರೀ ಕೃಷ್ಣ ನೀರಮೂಲೆ

Upayuktha
0

 




ಮಂಗಳೂರು:  ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಮೂಲ ಕಾರಣರಾಗಿ ಕನ್ನಡ ನಾಡಲ್ಲಿ ಕನ್ನಡದ ಕಂಪನ್ನು ಪಸರಿಸುವಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾಗಿದೆ. ಅವರ ದೂರದರ್ಶಿತ್ವ ಮತ್ತು ಮುತ್ಸದ್ದಿತನದ ಪರಿಣಾಮವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಕಾರಣವಾಯಿತು. ಅಂತಹ ಮಹಾನ್ ಚೇತನ ಶ್ರೀ ಎಂ. ವಿಶ್ವೇಶ್ವರಯ್ಯ ಅವರನ್ನು ನಾವು ಪ್ರತಿ ನಿತ್ಯ ಸ್ಮರಿಸಿಕೊಳ್ಳಬೇಕು ಮತ್ತು ಅವರು ಹಾಕಿದ ದಾರಿಯಲ್ಲಿ ಅವರ ಆದರ್ಶಗಳನ್ನು ಮೇಳೈಸಿಕೊಂಡು ಬದುಕಿದಲ್ಲಿ ಕನ್ನಡ ಬಾವುಟ ಬಾನೆತ್ತರಕ್ಕೆ ಹಾರುವುದರಲ್ಲಿ ಸಂಶಯವೇ ಇಲ್ಲ ಎಂದು ಕಿಟ್ಟಲ್ ಪ್ರೌಢಶಾಲೆ ಗೋರಿಗುಡ್ಡೆ ಇದರ ಅಧ್ಯಾಪಕರಾದ ಶ್ರೀ ಕೃಷ್ಣ ನೀರಮೂಲೆ ಅಭಿಪ್ರಾಯಪಟ್ಟರು. 

ಕನ್ನಡ ಸಾಹಿತ್ಯ ಪರಿಷತ್, ಮಂಗಳೂರು ಘಟಕ ಇದರ ವತಿಯಿಂದ ನಗರದ ಹಂಪನಕಟ್ಟೆಯಲ್ಲಿರುವ ಮಾಂಡವಿ ಮೋಟರ್ಸ್ ಇದರ ಕಛೇರಿಯ ಸಭಾಂಗಣದಲ್ಲಿ ಸರ್. ಎಂ ವಿಶ್ವೇಶ್ವರಯ್ಯ ಜಯಂತಿಯ ಸಂದರ್ಭದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕ.ಸಾ.ಪ ದಕ್ಷಿಣ ಕನ್ನಡ ಜಿಲ್ಲೆ ಇದರ ಅಧ್ಯಕ್ಷರಾದ ಡಾ|| ಎಂ. ಪಿ ಶ್ರೀನಾಥ್ ಅವರು ಮಾತನಾಡಿ, ಕನ್ನಡಿಗರು ನಾವೆಲ್ಲಾ ಹೆಮ್ಮೆ ಪಡುವ ಹಾಗೆ ಮಾಡಿದ ಮೇರು ವ್ಯಕ್ತಿತ್ವ ಸರ್. ಎಂ ವಿಶ್ವೇಶ್ವರಯ್ಯನವರದ್ದು. ಅವರು ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರ ಆದರ್ಶಗಳನ್ನು ಇಂದು ಯುವ ಜನರು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರ ದೂರದರ್ಶಿತ್ವ, ಕಾರ್ಯ ತತ್ವರತೆ, ಸೇವಾ ಭಾವನೆ, ಸಮರ್ಪಣಾ ವ್ಯಕ್ತಿತ್ವ ಇಂದಿನ ಯುವಕರಿಗೆ ಆದರ್ಶಪ್ರಾಯ. ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಅವರ ಕೊಡುಗೆ ಅಮೋಘ. ಈ ನಿಟ್ಟಿನಲ್ಲಿ ಕ.ಸಾ.ಪ ದಕ್ಷಿಣ ಕನ್ನಡ ಜಿಲ್ಲೆ ಅವರ ಸೇವೆಯನ್ನು ನಿರಂತರವಾಗಿ ಸ್ಮರಿಸುತ್ತದೆ ಮತ್ತು ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ನಾವೆಲ್ಲಾ ಸೇರಿ ಮಾಡೋಣ ಎಂದು ಕರೆ ನೀಡಿದರು. 

ಕ.ಸಾ.ಪ ಮಂಗಳೂರು ಇದರ ಗೌರವ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಇನ್ನೋರ್ವ ಕಾರ್ಯದರ್ಶಿ ಶ್ರೀ ಗಣೇಶ್ ಪ್ರಸಾದ್‍ಜೀ ಅವರು ಸ್ವಾಗತ ಭಾಷಣ ಮಾಡಿದರು. ಕೋಶಾಧಿಕಾರಿ ಶ್ರೀ ಸುಬ್ರಾಯ ಭಟ್ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕಾರಿಣಿ ಸಮಿತಿ ಸದಸ್ಯ ಶ್ರೀಮತಿ ರತ್ನಾವತಿ ಜಿ. ಬೈಕಾಡಿ ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ.ಸಾ.ಪ ಮಂಗಳೂರು ಘಟಕದ ಹೆಚ್ಚಿನ ಸದಸ್ಯರು ಮತ್ತು ಕಾರ್ಯಕಾರಣಿ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಮುರಲೀಧರ ಅವರು ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top