ಮಂಗಳೂರು ವಿವಿ ಪ್ರಸಾರಾಂಗದ ಕೃತಿ ಅನಾವರಣ
ಮುಡಿಪು: ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯ ಅರಿವನ್ನು ವಿಸ್ತರಿಸುವ ತುಳು ಶಾಸನಗಳ ಸಂರಕ್ಷಣೆ ಅಗತ್ಯ. ಸಂರಕ್ಷಣೆಯ ಜೊತೆ ಜೊತೆಗೇ ಈ ಶಾಸನಗಳ ಕುರಿತ ಅಧ್ಯಯನ ಸಂಶೋಧನೆಗಳು ನಡೆಯುತ್ತಿರಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಸ್. ಯಡಪಡಿತ್ತಾಯ ಹೇಳಿದರು.
ಅವರು ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸಿದ ಉಡುಪಿಯ ಎಸ್.ಎ. ಕೃಷ್ಣಯ್ಯ ಪ್ರಧಾನ ಸಂಪಾದಕತ್ವದ ಕಾಸರಗೋಡಿನ ಡಾ. ರಾಧಾಕೃಷ್ಣ ಬೆಳ್ಳೂರು ಮತ್ತು ಸುಭಾಸ್ ಬಂಟಕಲ್ಲು ಬರೆದಿರುವ ‘ತುಳು ಶಾಸನಗಳು’ ಕೃತಿಯನ್ನು ಸಿಂಡಿಕೇಟ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಕೃತಿಯ ಪ್ರಧಾನ ಸಂಪಾದಕರಾದ ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ನಿರ್ದೇಶಕ ಎಸ್.ಎ.ಕೃಷ್ಣಯ್ಯ ಮಾತನಾಡಿ ಪ್ರಾಚೀನ ತುಳು ಶಾಸನಗಳ ಸಂರಕ್ಷಣೆಯಲ್ಲಿ ಮಠ ಮಂದಿರಗಳ ಕಾಳಜಿ ಸ್ಮರಣೀಯ. ಈ ಕೃತಿಯಲ್ಲಿ 60 ರಷ್ಟು ತುಳು ಶಾಸನಗಳ ಕುರಿತು ಅಧ್ಯಯನ ನಡೆದಿದ್ದು ತುಳುವಿನ 8ನೇ ಪರಿಚ್ಯೇದಕ್ಕೆ ಸೇರಿಸುವ ಚಳುವಳಿಗೆ ಇದು ಬಲ ತುಂಬಲಿದೆ ಎಂದರು.
ಸಂಶೋಧಕ ಡಾ. ರಾಧಾಕೃಷ್ಣ ಬೆಳ್ಳೂರು ಮಾತನಾಡಿ ಲಿಪಿಗೂ ಭಾಷೆಗೂ ಹೊಕ್ಕುಳ ಬಳ್ಳಿಯ ಸಂಬಂಧವಿರುವುದಿಲ್ಲ. ತುಳುಲಿಪಿ ಪಲ್ಲವ ಮೂಲದ ಲಿಪಿ ಸಂಪ್ರದಾಯವಾಗಿದ್ದು ತುಳುನಾಡಿನಲ್ಲಿ ಹೆಚ್ಚು ಪ್ರಚಲಿತವಿದ್ದುದರಿಂದ ತುಳುಲಿಪಿ ಎಂದೇ ಕರೆಸಿಕೊಂಡಿತು. ಈ ಲಿಪಿಯಲ್ಲಿ ತುಳು ಶಾಸನಗಳು 12-13ನೇ ಶತಮಾನದ ಕಾಲಘಟ್ಟದಲ್ಲೇ ಶಿಲಾಶಾಸನಗಳು ರಚನೆಯಾಗಿತ್ತು ಎಂಬುದು ಚಾರಿತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮಹತ್ವದ ವಿಚಾರ ಎಂದರು.
ಸಮಾರಂಭದಲ್ಲಿ ಸಂಶೋಧಕ ಸುಭಾಸ್ ಬಂಟಕಲ್ಲು, ಮಂಗಳೂರು ವಿಶ್ವವಿದ್ಯಾನಿಲಯ ಹಣಕಾಸು ಅಧಿಕಾರಿ ಪ್ರೊ. ಕೆ.ಎಸ್. ಜಯಪ್ಪ, ಪ್ರಸಾರಂಗದ ನಿರ್ದೇಶಕ ಡಾ. ಸೋಮಣ್ಣ ಹೊಂಗಳ್ಳಿ, ಸಹ ನಿರ್ದೇಶಕ ಡಾ. ಧನಂಜಯ ಕುಂಬ್ಳೆ, ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಟ್ರಷ್ಟಿಗಳಾದ ಶ್ರೀಧರ ಭಟ್ಟ, ರವಿ ಆಳ್ವ, ಪ್ರೊ. ಮ್ಯೂಸಿಕ ಸುಪ್ರಿಯ, ಪ್ರೊ. ಸುಜಯ ಕೆ.ಎಸ್. ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


