ಅಂತಾರಾಷ್ಟ್ರೀಯ ಸಾಕ್ಷರತೆಯ ದಿನ - ಸೆಪ್ಟೆಂಬರ್ 8

Upayuktha
0

ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಯುನೆಸ್ಕೋ ಶಿಕ್ಷಣದ ಬಗ್ಗೆ ಜಾಗೃತಿಯನ್ನುಂಟು ಮಾಡಲು ಮತ್ತು ಪ್ರಪಂಚದಾದ್ಯಂತ ಜನರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ ಎಂಟನೇ ತಾರೀಖನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವೆಂದು ಘೋಷಿಸಿತು. ವಿಶ್ವ ಸಾಕ್ಷರತಾ ದಿನವನ್ನು 1966ರಲ್ಲಿ ಮೊದಲ ಬಾರಿಗೆ ಆಯೋಜಿಸಲಾಯಿತು.


ಸಾಕ್ಷರತೆ ಎಂದರೆ ಬರೆಯುವ ಮತ್ತು ಓದುವ ಸಾಮರ್ಥ್ಯ. ಇದು ಯಾವುದೇ ವ್ಯಕ್ತಿಯ ಮತ್ತು ದೇಶದ ಅಭಿವೃದ್ಧಿಗೆ ತುಂಬ ಮಹತ್ವದ್ದಾಗಿದೆ. ಭಾರತದ ವಿಷಯದಲ್ಲಿ ಹೇಳುವುದಾದರೆ ಭಾರತೀಯ ಸಮಾಜದಲ್ಲಿ ಇಂದಿಗೂ ಬಡತನ, ಮೂಢನಂಬಿಕೆ, ನಿರುದ್ಯೋಗ, ಲಿಂಗಬೇಧ ಮೊದಲಾದ ಹಲವಾರು ಸಮಸ್ಯೆಗಳಿವೆ. ಜನರು ಶಿಕ್ಷಿತರಾದರೆ ಇವೆಲ್ಲವುಗಳಿಂದ ಮುಕ್ತಿ ಪಡೆಯಲು ಹಾಗೂ ಅಭಿವೃದ್ಧಿ ಸಾಧಿಸಲು ಸಾಧ್ಯ.


ಸಾಕ್ಷರತೆಯ ಮಹತ್ವ:

* ಸಾಕ್ಷರತೆಯು ಮಾನವನು ತನ್ನ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಯಲು ಅನುವು ಮಾಡಿಕೊಡುತ್ತದೆ.

* ಕಲಿಯುವ ಸಾಮರ್ಥ್ಯಕ್ಕೆ ಆಧಾರವಾಗಿದೆ.

* ಜನರ ಆರೋಗ್ಯ,ಚಿಂತನೆ, ಆರ್ಥಿಕ ಪರಿಸ್ಥಿತಿಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಿ ಜೀವನದ ಗುಣಮಟ್ಟವನ್ನು ಉತ್ತಮಪಡಿಸುತ್ತದೆ.

* ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅತ್ಯಗತ್ಯವಾಗಿದ್ದು ವೈಯುಕ್ತಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ

* ನಿರುದ್ಯೋಗ, ಬಡತನ, ಮೌಢ್ಯ ಮೊದಲಾದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

* ಸಾಕ್ಷರತೆಯು ಸಮಾಜದಲ್ಲಿ ಓದು ಮತ್ತು ಬರವಣಿಗೆಯ ಮೂಲಕ ಪರಿಣಾಮಕಾರಿ ಸಂವಹನಕ್ಕೆ ಎಡೆಮಾಡಿಕೊಟ್ಟು ವ್ಯಕ್ತಿಗತ ಮತ್ತು ಸಮಾಜದ ಜ್ಞಾನ ಮತ್ತು ತಿಳುವಳಿಕೆ ಮಟ್ಟವನ್ನು ವಿಸ್ತರಿಸುತ್ತದೆ.

* ಒಟ್ಟಾರೆಯಾಗಿ ಇಡಿ ಸಮಾಜದ, ದೇಶದ ಅಭಿವೃದ್ಧಿಗೆ  ಕೊಡುಗೆ ನೀಡುತ್ತದೆ.


ಭಾರತದಲ್ಲಿ ಸಾಕ್ಷರತೆಯ ಅಭಿಯಾನ:

ಭಾರತ ಸ್ವಾತಂತ್ರ್ಯಾ ನಂತರ ಶಿಕ್ಷಣದ ಪ್ರಗತಿಗೆ ಹಲವಾರು ಯೋಜನೆಗಳನ್ನು,ಅಭಿಯಾನಗಳನ್ನು ಜಾರಿಗೆ ತಂದಿದೆ.ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಸರ್ವಶಿಕ್ಷಾ ಅಭಿಯಾನ, ವಯಸ್ಕ ಶಿಕ್ಷಣ, ಶಾಲಾ ಮಕ್ಕಳಿಗೆ ಬಿಸಿ ಊಟ ಯೋಜನೆ, ಮಕ್ಕಳಿಗೆ ಕಡ್ಡಾಯ ಶಿಕ್ಷಣ ಮೊದಲಾದವು.ಇಷ್ಟೆಲ್ಲಾ ಯೋಜನೆಗಳನ್ನು ತಂದಿದ್ದರೂ ಭಾರತ ಇಂದಿಗೂ ಸಂಪೂರ್ಣ ಸಾಕ್ಷರತೆ ಸಾಧಿಸಿಲ್ಲ‌. ಭಾರತದಲ್ಲಿ ಇತ್ತೀಚೆಗಿನ ವರದಿಗಳ ಪ್ರಕಾರ ಸಾಕ್ಷರತೆಯ ಪ್ರಮಾಣ ಶೇ.74.04 ಇದ್ದು, ಪುರುಷರಲ್ಲಿ ಸಾಕ್ಷರತೆ ಶೇ‌.82.14 ಹಾಗೂ ಮಹಿಳೆಯರಲ್ಲಿ ಶೇ.65.46 ಪ್ರಮಾಣದಲ್ಲಿದೆ. ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಹಿಂದುಳಿದಿದೆ. ಅಲ್ಲದೆ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅನೇಕ ತಳ ಸಮುದಾಯಗಳಲ್ಲಿ ಶಿಕ್ಷಣ ಇನ್ನೂ ಮರೀಚಿಕೆಯಾಗಿದೆ. ಈ ಬಗ್ಗೆ ಪ್ರಗತಿ ಸಾಧಿಸಲು ಪ್ರಬಲ ರಾಜಕೀಯ ಇಚ್ಛಾಶಕ್ತಿಯ ಅಗತ್ಯವೂ ಇದೆ.


ಒಟ್ಟರೆಯಾಗಿ ಸಾಕ್ಷರತಾ ದಿನವು ಜನರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅಗತ್ಯ ಶಿಕ್ಷಣ ಪಡೆಯಲು ಹಾಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು  ಪ್ರೇರಕವಾಗಿ ಕೆಲಸಮಾಡುತ್ತಿದೆ ಎಂಬುದು ಆಶಾದಾಯಕ ವಿಚಾರವಾಗಿದೆ‌. ಈ ನಿಟ್ಟಿನಲ್ಲಿ ಕರಣೆ ಹಿಡಿದು ದುಡಿಯುವ ಪುಟ್ಟ ಕೈಗಳು ಬಳಪ ಹಿಡಿಯಲೆಂಬುದೇ ಈ ವಿಶ್ವ ಸಾಕ್ಷರತೆಯ ದಿನದಂದು ಹಾರೈಕೆ.

- ಎಸ್.ಎಲ್. ವರಲಕ್ಷ್ಮೀಮಂಜುನಾಥ್.

ನಂಜನಗೂಡು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top