ಪ್ರಯತ್ನಶೀಲರು ಸಮಾಜ ಸಂಘಟನೆಯಲ್ಲಿರಬೇಕು.
ಎಲ್ಲ ಸಮುದಾಯದ ಜೊತೆ ಹೊಂದಿಕೊಂಡ ಸಮಾಜ ಹವ್ಯಕ ಸಮಾಜ
ಗೋಕರ್ಣ: ಸರ್ವಸಮಾಜದ ಒಳಿತಿಗಾಗಿ ಹುಟ್ಟಿಕೊಂಡ ಸಮಾಜ ಹವ್ಯಕ ಸಮುದಾಯವಾಗಿದ್ದು, ಎಲ್ಲ ಸಮುದಾಯಗಳ ಜೊತೆ ಹೊಂದಿಕೊಂಡು, ಬೆಳೆದುಬಂದ ಸಮಾಜ ಹವ್ಯಕ ಸಮಾಜ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀ ರಾಮಚಂದ್ರಾಪುರಮಠದ ಶ್ರೀಗಳಿಗೆ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಸಮರ್ಪಿತವಾದ ಗುರುಭಿಕ್ಷಾಸೇವೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಪ್ರಯತ್ನಶೀಲರು, ಸಮಾಜದ ಹಿತಚಿಂತನೆಯ ಒತ್ತಾಸೆಯಿರುವವರು ಸಂಘಟನೆಯಲ್ಲಿ ತೊಡಗಿಕೊಂಡರೆ ಸಮಾಜಕ್ಕೆ ಒಳಿತಾಗುತ್ತದೆ. ಹವ್ಯಕ ಮಹಾಸಭೆಯ ಪದಾಧಿಕಾರಿಗಳೆಲ್ಲರೂ ಸಮಾಜಕ್ಕಾಗಿ ಬದುಕಿನ ಒಂದು ಭಾಗವನ್ನು ಮೀಸಲಿಟ್ಟು, ಸಮಾಜೋದ್ಧಾರದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಮಹಾಸಭೆಯ ಜೊತೆ ನಾವೆಲ್ಲ ಕೈಜೋಡಿಸಬೇಕಿದ್ದು, ಮಹಾಸಭೆಯ ಕಾರ್ಯಗಳಿಗೆ ಸಮಾಜದ ಸಹಕಾರ ಸದಾ ಇರಲಿ ಎಂದು ಹವ್ಯಕ ಸಮಾಜಕ್ಕೆ ಕರೆನೀಡಿದರು.
ನಿತ್ಯ ಪ್ರವಚನ ಮಾಲಿಕೆಯಲ್ಲಿ 'ಕ್ರೋಧ'ದ ವಿಚಾರವಾಗಿ ಪ್ರವಚನವನ್ನು ಅನುಗ್ರಸಿದ ಪೂಜ್ಯ ಶ್ರೀಗಳು, ಕ್ರೋಧದ ನಿಯಂತ್ರಣದಲ್ಲಿ ನೀವಿದ್ದಾಗ ಕ್ರೋಧ ದೋಷ. ನಿಮ್ಮ ನಿಯಂತ್ರಣದಲ್ಲಿ ಕೋಪ ಇದ್ದಾಗ ಅದು ಗುಣ. ಕೋಪ ಇರುವುದು ಆತ್ಮರಕ್ಷಣೆಗೆ; ಆದರೆ ಅದು ಇನ್ನೊಬ್ಬರಿಗೆ ಹಾನಿಯನ್ನು ಉಂಟು ಮಾಡಬಾರದು. ನಮ್ಮ ನಿಯಂತ್ರಣದಲ್ಲಿರುವ ಕೋಪ ಪ್ರತಿಯೊಬ್ಬರಿಗೂ ಬೇಕು ಎಂದು ಮಾರ್ಮಿಕವಾಗಿ ನುಡಿದರು.
ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ ಉಪಸ್ಥಿತರಿದ್ದು, ಮಹಾಸಭೆಯ ಪರವಾಗಿ ಫಲಕಾಣಿಕೆ ಸಮರ್ಪಿಸಿ; ಶ್ರೀಗಳ ಮಾರ್ಗದರ್ಶನ ಕೋರಿದರು.
ಕಾರ್ಯದರ್ಶಿ ಪ್ರಶಾಂತ್ ಭಟ್ ಮಲವಳ್ಳಿ ದಂಪತಿಗಳು ಮಹಾಸಭೆಯ ಪರವಾಗಿ ಶ್ರೀಗುರುಭಿಕ್ಷಾಸೇವೆ, ಶ್ರೀಗುರುಪಾದ ಪೂಜೆ ನೆರವೇರಿಸಿದರು. ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ, ನವಚಂಡಿ ಹವನ, ಗಣಪತಿ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ್ ಸಂಪ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ, ನಿರ್ದೇಶಕರಾದ ಆರ್ ಜಿ ಹೆಗಡೆ ಹೊಸಾಕುಳಿ, ಹಂಡ್ರಮನೆ ಗೋಪಾಲಕೃಷ್ಣ ಭಟ್ ಸೇರಿದಂತೆ ಬೆಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಎಲ್ಲಾ ಭಾಗಗಳ ನಿರ್ದೇಶಕರು, ಸಂಚಾಲಕರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ