
ಅಪ್ಪ ಯಾವತ್ತೂ ನಿಷ್ಠುರವಾದಿ. ಎಲ್ಲ ನಿರ್ಣಯಗಳನ್ನು ಅಮ್ಮ ಅಪ್ಪನ ತಲೆಗೆ ಹಾಕಿ ಕೈ ತೊಳೆದುಕೊಳ್ಳುತ್ತಾಳೆ. ಎಲ್ಲವನ್ನು ಅಳೆದು ತೂಗಿ ಸರಿಯಾದ ಸ್ಪಷ್ಟವಾದ ನಿರ್ಧಾರ ಅಪ್ಪನೇ ತೆಗೆದುಕೊಳ್ಳಬೇಕು. ಅಮ್ಮನಾದರೂ ಭಾವನಾತ್ಮಕವಾಗಿ ಮಕ್ಕಳ ಪ್ರೀತಿಗೆ ಜೋತು ಬಿದ್ದು ಹೋಗಲಿ ಬಿಡಿ ಎಂದು ತಕ್ಷಣವೇ ಒಪ್ಪಿಕೊಂಡು ಮಕ್ಕಳ ಪಾಲಿಗೆ ದೇವತೆಯಾಗಿ ಬಿಡುತ್ತಾಳೆ. ಅಪ್ಪ ಎಲ್ಲ ಪ್ರಶ್ನೆಗಳಿಗೂ ಇಲ್ಲ ಅಥವಾ ಮುಂದೆ ನೋಡೋಣ ಎಂದಾಗ ಕುಟುಂಬದ ಎಲ್ಲರಿಗೂ ಸಾಮಾನ್ಯ ಶತ್ರು. (ಕಾಮನ್ ಎನಿಮಿ) ಆಗಿ ಬಿಡುತ್ತಾನೆ. ಅಪ್ಪನಾದರೂ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಮೊದಲು ಬೇಡ ಎಂದ ಅಪ್ಪ ಕೊನೆಗೆ ಅಮ್ಮನ ಮಧ್ಯಸ್ಥಿಕೆಯಿಂದ ಓಕೆ ಅನ್ನುವಲ್ಲಿಯ ವರೆಗೆ ಅಪ್ಪ ಅಮ್ಮನ ನಡುವೆ ಶೀತಲ ಸಮರ ಮುಂದುವರೆಯುತ್ತಲೇ ಇರುತ್ತದೆ. ಇದು ಸಾಮಾನ್ಯ ಮಧ್ಯಮ ವರ್ಗ ಮತ್ತು ಬಡ ವರ್ಗದ ಜನರ ಮನೆಗಳಲ್ಲಿನ ನಿತ್ಯದ ಸನ್ನಿವೇಶ. ನಮ್ಮ ಮನೆಯಲ್ಲಿಯೂ ಇದೇ ರಾಮಾಯಣ. ಅಮ್ಮ ಓಕೆ ಎಂದರೂ ಅಪ್ಪ ಬೇಡ ಎಂದು ‘ವಿಲನ್’ ಆಗಿ ಬಿಟ್ಟ ಸನ್ನಿವೇಶಗಳೇ ನೂರಾರು. ಹಲವಾರು ಬಾರಿ ಸುಖಾಂತ್ಯವಾಗಿ ಅಮ್ಮನೇ ಗೆದ್ದರೂ ಮಕ್ಕಳ ಮನಸ್ಸಿನಲ್ಲಿ ಅಪ್ಪ ಎಲ್ಲದಕ್ಕೂ ಬೇಡ ಅನ್ನುತ್ತಾರೆ ಎಂಬ ಭಾವನೆ ಶಾಶ್ವತವಾಗಿ ನೆಲೆಯೂರುತ್ತದೆ. ಅಮ್ಮ ಬಹಳ ಸುಲಭವಾಗಿ ಅಪ್ಪನನ್ನು ಕೇಳಿ ಎಂದು ಹೇಳಿ ಜಾರಿಕೊಂಡಾಗ ಅಪ್ಪ ಅನಿವಾರ್ಯವಾಗಿ ವಿಲನ್ ಅಥವಾ ಖಳನಾಯಕನಾಗಿ ಬಿಡುತ್ತಾನೆ.
ನಾನು ಚಿಕ್ಕವನಾಗಿದ್ದಾಗ ನನಗೂ ಹಲವಾರು ಬಾರಿ ಈ ರೀತಿ ಅನಿಸಿದ್ದುಂಟು, ಅಪ್ಪನೇ ಸರ್ವಾಧಿಕಾರಿ ಎಲ್ಲವೂ ಅಪ್ಪನ ಮೂಗಿನ ನೇರಕ್ಕೆ ನಡೆಯಬೇಕು. ಅಪ್ಪ ಹೇಳಿದಂತೆ ಆಗಬೇಕು. ಎಷ್ಟೋ ಬಾರಿ ನಾನು ಮನದಲ್ಲಿಯೇ ಅಪ್ಪನಿಗೆ ಹಿಡಿಶಾಪ ಹಾಕಿದ್ದುಂಟು. ಆದರೆ ನಿಜವಾಗಿಯೂ ಅಪ್ಪನ ಸ್ಥಾನ ಎನ್ನುವುದು ಒಂದು ಥ್ಯಾಂಕ್‍ಲೆಸ್ ಕೆಲಸ. ಮಕ್ಕಳಿಗೆ ಮಾತ್ರವಲ್ಲ ಇದೇ ಕುಟುಂಬಕ್ಕೆ ಕೂಳು ಕೊಟ್ಟರೂ ಕೊನೆಗೆ ಅಪರಾಧ ಸ್ಥಾನದಲ್ಲಿ ನಿಲುವುದು ಅಪ್ಪನೇ. ನನ್ನ ಅಪ್ಪನೂ ಇದಕ್ಕೆ ಹೊರತಲ್ಲ. ಒಳ್ಳೆದಾದಲ್ಲಿ ಅಮ್ಮನಿಗೆ ಸಿಂಹಪಾಲು. ಮಕ್ಕಳು ಹಾಳಾದರೆ, ಮಗಕೆಟ್ಟು ಹೋದದ್ದು ನಿಮ್ಮಿಂದಲೇ ಎಂಬ ಧೋರಣೆಯ ಮಾತು ಅಪ್ಪ ಅನಿವಾರ್ಯವಾಗಿ ಕೇಳಿಸಿಕೊಳ್ಳಲೇ ಬೇಕು. ಇದನ್ನೇ ಖ್ಯಾತ ಅಂಕಣಕಾರ ಚಾಲ್ರ್ಸ್‍ನ ವ್ಯಾಡ್‍ವರ್ತ್ ಹೀಗೆ ಹೇಳುತ್ತಾರೆ. “By the time a man realizes that may be his father was right, he usually has a son who thinks he is wrong” ಎಷ್ಟು ಅರ್ಥಗರ್ಭಿತವಾದ ವಿಚಾರ ಈ ವಾಕ್ಯದಲ್ಲಿ ಇದೆಯಲ್ಲವೇ?
ಅಪ್ಪ ಎಂಬ ಅನಾಮಿಕ!!
ಅಪ್ಪ ಎಂದರೆ ಹಿಟ್ಲರ್ ತರಾ ಸರ್ವಾಧಿಕಾರಿಯಲ್ಲ. ನಮ್ಮ ಬದುಕಿನ ರೂವಾರಿ. ಅಪ್ಪ ನಮಗಾಗಿ ಏನು ಮಾಡಿದ ಎನ್ನುವುದಕ್ಕಿಂತ ಎಂಥ ಮೌಲ್ಯಗಳನ್ನು ಬಿಟ್ಟಿದ್ದ ಎನ್ನುವುದು ಮುಖ್ಯ. ಇದೆಲ್ಲ ಅರ್ಥವಾಗಿ ಮಂಡೆಯೊಳಗೆ ಹೋಗಿ ನಾವು ನಮ್ಮ ಅಪ್ಪಂದಿರ ಬಗ್ಗೆ ದೃಷ್ಟಿಕೋನ ಬದಲಾವಣೆ ಮಾಡಿಕೊಳ್ಳುವ ಹೊತ್ತಿಗೆ, ಅಪ್ಪನ ಮೇಲಿನ ಗೌರವ ಹೆಚ್ಚಾಗುವ ಹೊತ್ತಿಗೆ ಅಪ್ಪನ ಕೂದಲೆಲ್ಲಾ ಹಣ್ಣಾಗಿ, ಹಲ್ಲುಗಳು ಅಲುಗಾಡಿ ಅಪ್ಪ ಅಜ್ಜನಾಗಿರುತ್ತಾನೆ. ನನ್ನ ವಿಚಾರವೂ ಇದಕ್ಕೆ ಹೊರತಾಗಿಲ್ಲ ಬಿಡಿ, ನಮ್ಮ ಅಪ್ಪನಿಗೆ ಈಗ 80ರ ಹರೆಯ. ಕಣ್ಣು ಮಂಜಾಗಿದೆ. ಬೆನ್ನು ಬಾಗಿದೆ. ಬಾಯಿಯಲ್ಲಿನ ನೈಸರ್ಗಿಕ ಶಾಶ್ವತ ಹಲ್ಲು ಹೋಗಿ ಕೃತಕ ಹಲ್ಲಿನ ಸೆಟ್ಟುಗಳು ಸದ್ದುಮಾಡುತ್ತಿದೆ. ಹೃದಯದೊಳಗಿನ ಎರಡೆರಡು ಸ್ಟೆಂಟುಗಳು ಸ್ಟಂಟ್ ಮಾಡುತ್ತಾ ಹೃದಯವನ್ನು ಚಾಲನೆಯಲ್ಲಿ ಇಟ್ಟಿದೆ. ಯಾವ ಅಪ್ಪನನ್ನು ಕಂಡು ನಾವು ಹೆದರುತ್ತಿದ್ದೆವೋ ಅದೇ ಅಪ್ಪ ಇವತ್ತು ಕೃಶವಾಗಿ ಧ್ವನಿ ಉದುಗಿ ಹೋಗಿದೆ. ಅಪ್ಪನನ್ನು ಕಂಡೊಡನೆ ಉಡುಗಿ ಹೋಗುತ್ತಿದ್ದ ನನ್ನ ಧ್ವನಿ ಈ ಹೊತ್ತು ಅದೇ ಅಪ್ಪನೆದುರು ಏರು ಧ್ವನಿಯಲ್ಲಿ ಮಾತನಾಡಿಸುವಷ್ಟರ ಮಟ್ಟಿಗೆ ನಾವು ಮಕ್ಕಳು ಅಪ್ಪನೆದುರು ಬೆಳೆದು ನಿಂತಿದ್ದೇವೆ. ನಾವು ಮಕ್ಕಳು ಬೆಳೆದಿದ್ದೇವೆ. ಅಪ್ಪ ಇಳಿದಿದ್ದಾರೆ. ಆದರೆ ಇದ್ಯಾವುದಕ್ಕೂ ಅಂಜದೆ ಕುಗ್ಗದೆ, ನಮ್ಮಪ್ಪ ಅಪ್ಪನಾಗಿಯೇ ಉಳಿದು ಇಹೊತ್ತಿಗೂ ತನ್ನ ಹಟಮಾರಿತನ ಮತ್ತು ತನಗಿಷ್ಟವಾದಂತೆ ಬದುಕುತ್ತಿದ್ದಾರೆ ಎನ್ನುವುದೂ ನನಗೆ ತುಂಬಾ ಸಂತಸದ ಮತ್ತು ಹೆಮ್ಮೆಯ ವಿಚಾರ.
ಸವ್ಯಸಾಚಿ ನಮ್ಮಪ್ಪ:
ನಮ್ಮಪ್ಪನಿಗೆ 80ರ ಸಂಭ್ರಮದ ಸಮಯದಲ್ಲಿ ಒಂದಿಷ್ಟು ಮಂದಿಯನ್ನು ಸಂಪರ್ಕಿಸಿ ಅಪ್ಪನ ಬಗ್ಗೆ ನರೆಯಲು ವಿನಂತಿ ಮಾಡುತ್ತಿದ್ದೆ. ಅವರೆಲ್ಲಾ ಒಂದು ಕಾಲದಲ್ಲಿ ಅಪ್ಪನ ಒಡನಾಡಿಗಳು ಬಂಧುಗಳು ಶಿಷ್ಯವರ್ಗದವರು ಮತ್ತು ಹಿತೈಷಿಗಳೇ ಆಗಿದ್ದರು. ಕೆಲವರು ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಇನ್ನು ಕೆಲವರು ನೇರವಾಗಿ ನಮಗೆ ಬರೆಯಲು ಸಾಧ್ಯವಿಲ್ಲ ಎಂದು ಹೇಳಿ ಬಿಟ್ಟಿದ್ದರು. ಇನ್ನು ಕೆಲವರು ನಿಮ್ಮಪ್ಪ ಒಬ್ಬ ಸಾಮಾನ್ಯ ಪುರೋಹಿತ ಮತ್ತು ಕೃಷಿಕ ಏನು ಸಾಧನೆ ಮಾಡಿಲ್ಲ ಎಂದಾಗ ನನಗೆ ಒಮ್ಮೆ ನೋವಾಗಿತ್ತು. ಆದರೆ ನಮ್ಮಪ್ಪನ ಬಗ್ಗೆ ಅವರಿಗೇನು ಗೊತ್ತು ಎಂದು ನಾನು ಸುಮ್ಮನಾಗಿದ್ದೆ. ಯಾಕೆಂದರೆ ನಮ್ಮಪ್ಪ ಒಬ್ಬ ಸಾಮಾನ್ಯ ತಂದೆಯಾಗಿ ಉಳಿಯಲಿಲ್ಲ. ನನಗಂತೂ ಅಸಾಮಾನ್ಯ ತಂದೆಯಾಗಿ ಹೀರೋ ಆಗಿರುವುದು ಸೂರ್ಯ ಚಂದ್ರರಷ್ಟೇ ಸತ್ಯವಾದ ವಿಚಾರ. ಒಬ್ಬ ಬಡಬ್ರಾಹ್ಮಣನಾಗಿ ಮೂರು ಹೊತ್ತು ಊಟಕ್ಕೆ ಪರದಾಡುವ ಕಾಲದಲ್ಲೂ ತನ್ನ ನಾಲ್ಕು ಮಕ್ಕಳಿಗೆ ಮತ್ತು ಸಹಧರ್ಮಿಣಿಗೆ ಯಾವತ್ತೂ ಹಸಿವಿನಿಂದ ಮಲಗುವಂತೆ ಮಾಡಿರಲಿಲ್ಲ. ನಮ್ಮಪ್ಪ ಬಹಳ ಶ್ರಮಜೀವಿ. 80ರ ದಶಕದಲ್ಲಿ ನಮ್ಮಪ್ಪನ ವೇಷ ಹೇಗಿತ್ತು ಎಂದು ನನಗಿನ್ನೂ ನೆನಪಿದೆ. ಚಪ್ಪಲಿ ಹಾಕದ ದಡ್ಡು ಕಟ್ಟಿದ ಕಾಲುಗಳು ಮೊರದಗಲದ ಹಣೆಯ ತುಂಬಾ ವಿಭೂತಿ ನಾಮ ಅಂಗಿ ಹಾಕದ ಕೃಶವಾದ ದೇಹ, ಕಿವಿಯಲ್ಲೊಂದು ಟಿಕ್ಕಿ, ಶುಭ್ರ ಬಿಳಿಯಾದ ಪಂಚೆ ಮತ್ತು ಹೆಗಲಲ್ಲೊಂದು ಬಿಳಿ ಬೈರಾಸು, ತಿಥಿ, ಪೂಜೆ, ಮದುವೆ ಮುಂಜಿ ಶ್ರಾದ್ಧ ತಂಬಿಲ ಹೀಗೆ ಎಲ್ಲ ಧಾರ್ಮಿಕ ಕಾರ್ಯಗಳಿಗೂ ಶ್ರದ್ದೆಯಿಂದ ಹತ್ತಾರು ಮೈಲು ದೂರವಿದ್ದರೂ ಬರಿಗಾಲಲ್ಲಿ ನಡೆದೇ ಹೋಗಿ ತನ್ನ ಕುಟುಂಬವನ್ನು ಸಲಹಿದ್ದರು.
80ರ ದಶಕದಲ್ಲಿ ಒಂದು ಶ್ರಾದ್ಧ ಮಾಡಿಸಿದರೆ ಬರೀ 50 ರೂ. ಸಿಗುತ್ತಿತ್ತು. ಅದಕ್ಕಾಗಿ ಹತ್ತಾರು ಮೈಲು ನಡೆದೇ ಹೋಗುತ್ತಿದ್ದರು. ಮದುವೆ ಸಮಾರಂಭಗಳಲ್ಲಿ 500 ರಿಂದ ಸಾವಿರದವರೆಗೂ ಸಂಪಾದನೆ ಆಗುತ್ತಿತ್ತು. ಜೊತೆಗೆ ಅಕ್ಕಿ, ಕಾಯಿ ಮತ್ತು ಇತರ ಬಟ್ಟೆಬರೆ ದಾನ ರೂಪದಲ್ಲಿ ಸಿಗುತ್ತಿತ್ತು. ನಮ್ಮ ಮನೆಯ ನಿರ್ವಹಣೆಗೆ ಈ ಅಕ್ಕಿ ಕಾಯಿ ಸಾಕಾಗುತ್ತಿತ್ತು. ಇದ್ದುದರಲ್ಲಿಯೇ ಮನೆ ಸುಧಾರಿಸುವ ಕಲೆ ಅಮ್ಮನಿಗೆ ಚೆನ್ನಾಗಿ ಕರಗತವಾಗಿತ್ತು. ಎಷ್ಟೋ ಬಾರಿ ಅಮ್ಮನ ಬಳಿ ತಿನ್ನಲು ಏನಾದರೂ ಮಾಡಿಕೊಡು ಎಂದು ಅಮ್ಮನಲ್ಲಿ ಗೋಗರೆದಾಗ ನಮಗೆ ಯಾವತ್ತೂ ಸಿಗುತ್ತಿದ್ದ ವಸ್ತು ಅಂದು ಲೋಟ ತುಂಬಾ ‘ಸಜ್ಜಿಗೆ ಸೋಜಿ’ ಈಗಿನಂತೆ ಬರ್ಗರ್, ಪಿಜ್ಜಾ, ಪೆಪ್ಸಿಗಳು ಇರಲೇ ಇಲ್ಲ. ಸಜ್ಜಿಗೆ ಸೋಜಿ’ ನೆನೆದರೆ ಈಗಲೂ ರೋಮಾಂಚನವಾಗುತ್ತದೆ. ಯಾಕೆಂದರೆ ಆ ಸಜ್ಜಿಗೆ ಸೋಜಿಯಲ್ಲಿ ನಮ್ಮಪ್ಪನ ಬೆವರು ಮತ್ತು ರಕ್ತದ ಶ್ರಮ ಇತ್ತು. ಅಂತಹ ಕಷ್ಟ ಸನ್ನಿವೇಶದಲ್ಲೂ ತನ್ನ 4 ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದರು. ಯಾವತ್ತೂ ಶಾಲೆಗೆ, ಹೊಟ್ಟೆಗೆ, ಬಟ್ಟೆಗೆ ಕೊರತೆ ಮಾಡಿದವರಲ್ಲ. ಯಾರ ಬಳಿಯೂ ಸ್ವಾಭಿಮಾನ ಬಿಟ್ಟು ಕೈ ಚಾಚಿ ಬೇಡಿದವರಲ್ಲ. ಒಂದಿಬ್ಬರು ಮಹಾನುಭಾವರು ನಮ್ಮ ಅಪ್ಪನ ಆರ್ಥಿಕ ಸ್ಥಿತಿಯನ್ನು ಮನಗಂಡು ನಾನು ಉನ್ನತ ಶಿಕ್ಷಣ ಮಾಡುವಾಗ ನಮ್ಮ ಭಟ್ಟರಿಗೆ ಹೊರೆಯಾಗದಿರಲಿ ಎಂದು ನನಗೆ ತಿಂಗಳು ತಿಂಗಳು ಹಣ ನೇರವಾಗಿ ನನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿ ನಮ್ಮಪ್ಪನಿಗೆ ಸಹಾಯಮಾಡಿದ್ದು ನನಗಿನ್ನೂ ನೆನಪಿದೆ. ಅಂತಹ ಮನುಷ್ಯರ ಪ್ರೀತಿ ಮತ್ತು ಔದಾರ್ಯ ಮತ್ತು ಅನುಕಂಪದಿಂದಾಗಿಯೂ ಇವತ್ತು ನಮ್ಮಪ್ಪ ಸಮಾಜದಲ್ಲಿ ಒಬ್ಬ ವ್ಯಕ್ತಿಯಾಗಿ ಸುಖದ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಪೌರೋಹಿತ್ಯದ ಜೊತೆಗೆ ನಮ್ಮಪ್ಪ ಒಂದಿಷ್ಟು ಅಡಿಕೆ ಕೃಷಿಯನ್ನು ಮಾಡುತ್ತಿದ್ದರು. ಹೈನುಗಾರಿಕೆ ಕೂಡಾ ಮಾಡುತ್ತಿದ್ದರು. ನಾವೆಲ್ಲ ರಜಾ ದಿನಗಳಲ್ಲಿ ಅಪ್ಪನಿಗೆ ನೆರವಾಗುತ್ತಿದ್ದೆವು.
ಪೌರೋಹಿತ್ಯ ಇಲ್ಲದ ದಿನಗಳಲ್ಲಿ ನಮ್ಮಪ್ಪ ತೋಟಕ್ಕೆ ನೀರು ಹಾಯಿಸುವುದು, ಹಟ್ಟಿಗೆ ಸೊಪ್ಪು ತರುವುದು, ದನ-ಕರುಗಳಿಗೆ ಹುಲ್ಲು ತರುವುದು, ಹಟ್ಟಿಯಿಂದ ಗೊಬ್ಬರ ಹೊರುವುದು ಇವೆಲ್ಲವನ್ನು ನಮ್ಮನ್ನೂ ಸೇರಿಸಿಕೊಂಡು ಮಾಡುತ್ತಿದ್ದರು.ಆಗ ನಮಗೆಲ್ಲಾ ಸಿಟ್ಟಿ ಉಕ್ಕಿ ಬರುತ್ತಿದ್ದರೂ ಈಗ ನಮಗೆ ಸ್ವಾವಲಂಬಿ ಬದುಕಿನ ಅರ್ಥವನ್ನು ಅಪ್ಪ ಆಗಲೇ ನಮಗೆ ಕಲಿಸಿಕೊಟ್ಟಿದ್ದರು ಎನ್ನುವುದು ನಮಗೆ ಹೆಮ್ಮೆ ಎನಿಸುತ್ತದೆ. ಬಾಲ್ಯದಲ್ಲಿ ನಮ್ಮ ದಿನಚರಿ ಬೆಳಗ್ಗೆ 6ಕ್ಕೆ ಆರಂಭವಾಗುತ್ತಿತ್ತು. ನಾವು ದನಗಳಿಗೆ ಹಿಂಡಿ/ಬೂಸ ಕೊಟ್ಟು ಹಾಲು ಕರೆಯುವಾಗ ಅಪ್ಪ ಅಮ್ಮನಿಗೆ ನೆರವಾಗುತ್ತಿದ್ದರು. ಆ ಬಳಿಕ 5 ಕಿ.ಮೀ. ದೂರದ ಕೋಟೆಮುಂಡುಗಾರಿಗೆ ಹೋಗಿ ಹಾಲು ನೀಡಿ ಮನೆಗೆ ಬಂದು ಬಳಿಕ ಸ್ನಾನ ಮಾಡಿ ತಿಂಡಿ ತಿಂದು ಬೆಳ್ಳಾರೆಗೆ ಶಾಲೆಗೆ ಹೋಗುತ್ತಿದ್ದೆವು. ನಮ್ಮಪ್ಪ ನಾವು ಶ್ರಮ ಪಡುವುದರ ಜೊತೆಗೆ ನಮಗೂ ಶ್ರಮ ಮತ್ತು ಸ್ವಾವಲಂಬಿ ಜೀವನದ ಪಾಠವನ್ನು ತಾನು ಮಾಡುವುದರ ಜೊತೆಗೆ ಮಕ್ಕಳಿಗೂ ತಮ್ಮ ಕಾಲಮೇಲೆ ನಿಂತುಕೊಳ್ಳಬೇಕು ಎಂದು ಎಳವೆಯಲ್ಲಿಯೇ ಪ್ರಾಯೋಗಿಕವಾಗಿ ಮಾಡಿಸಿ ಕಲಿಸಿದ್ದರು. ಈ ಕಾರಣದಿಂದಲೇ ನನಗೆ ನಮ್ಮಪ್ಪ ಯಾವತ್ತೂ ‘ಹಿರೋ’ ಆಗಿ ಕಾಣಿಸುತ್ತಾರೆ.
ಇದೆಲ್ಲದರ ಜೊತೆಗೆ ನಮ್ಮಪ್ಪ ಬಹಳ ಉತ್ತಮ ಪಾಕಶಾಸ್ತ್ರ ತಜ್ಞರೂ ಆಗಿದ್ದರು. ನಮ್ಮಮ್ಮನಿಗೆ ಹೊರಗಿನ ಕೆಲಸದ ಜೊತೆಗೆ ಅಡುಗೆ ಕೋಣೆಯಲ್ಲಿಯೂ ಸಹಕರಿಸುತ್ತಿದ್ದರು. ಹೀಗೆ ಪೌರೋಹಿತ್ಯ ಪಾಕಶಾಸ್ತ್ರ, ಹೈನುಗಾರಿಕೆ, ಕೃಷಿ ಎಲ್ಲವನ್ನೂ ನಮ್ಮಪ್ಪ ತಾನು ಕಲಿತು ಪ್ರಾಯೋಗಿಕವಾಗಿ ಮಾಡುತ್ತಾ ನಮಗೂ ಕಲಿಸಿ ನಮ್ಮನ್ನು ಸ್ವಾವಲಂಬಿಗಳಾಗಿ ಮಾಡಿದ್ದರು. ಈ ಕಾರಣಕಾಗಿಯೇ ನಮ್ಮಪ್ಪ ಸವ್ಯಸಾಚಿ ಅಥವಾ ಆಲ್‍ರೌಂಡರ್ ಎಂದರೆ ಖಂಡಿತಾ ಅತಿಶಯೋಕ್ತಿಯಾಗದು. ಅಪ್ಪನಿಗೆ ಇದರ ಜೊತೆಗೆ ಇನ್ನೊಂದೆರಡು ವಿಪರೀತ ವ್ಯಾಮೋಹದ ಚಟಗಳಿತ್ತು. ಒಂದು ಕೃಷ್ಣ ನಶ್ಯ ಮತ್ತು ಇನ್ನೊಂದು ಕ್ರಿಕೆಟ್ ಇವೆರಡೂ ಅಪ್ಪನಿಗೆ ಪಂಚಪ್ರಾಣ. 2000 ಇಸವಿಯಲ್ಲಿ ಹೃದಯಾಘಾತ ಆಗುವವರೆಗೂ ನಮ್ಮಪ್ಪ ನಶ್ಯದ ಸಹವಾಸ ಬಿಟ್ಟಿರಲಿಲ್ಲ. ಆ ಬಳಿಕ ನಮ್ಮ ಬೆದರಿಕೆಗೆ ಜಗ್ಗಿ ಜೀವಭಯದಿಮದ ನಶ್ಯಕ್ಕೆ ತಿಲಾಂಜಲಿ ಇಟ್ಟಿದ್ದರು. ಆದರೆ ಕ್ರಿಕೆಟ್ ಹುಚ್ಚು ಇನ್ನೂ ಬಿಟ್ಟಿಲ್ಲ. ಅದು ಯಾವುದೇ ದೇಶ ಎಷ್ಟು ಹೊತ್ತಿಗೆ ಆಡುತ್ತಿದ್ದರೂ ಸೈ. ನಮ್ಮಪ್ಪ ಕ್ರಿಕೆಟ್ ನೋಡುತ್ತಾ ತಲ್ಲೀನರಾಗುತ್ತಾರೆ. ನಾನು ಹೋಗಿ ಅವರ ಜೊತೆ ಕುಳಿತು ಕ್ರಿಕೆಟ್ ನೋಡುವುದುಂಟು. ನಾನು ಮತ್ತು ನಮ್ಮಪ್ಪ ಒಟ್ಟಿಗೆ ಕುಳಿತು ಕ್ರಿಕೆಟ್ ನೋಡುವಾಗ ನನ್ನ ಸಹಧರ್ಮಿಣಿ ಮತ್ಸರದಿಂದ ಕೆಲವೊಮ್ಮೆ ‘ಇವತ್ತು ನೀವು ಕ್ರಿಕೆಟ್ ನೋಡುತ್ತಾ ನಿಮ್ಮಪ್ಪನ ಜೊತೆ ಮಲಗಿ ಎಂದು ಛೇಡಿಸುವುದು ಆಗಾಗ ನಮ್ಮ ಮನೆಯಲ್ಲಿ ನಡೆಯುತ್ತದೆ. ಇನ್ನು ಇಸ್ಪೀಟು ಆಟದ ಹುಚ್ಚು ನಮ್ಮಪ್ಪನಿಗೆ ಇದೆ. ಆದರೂ ಈಗೀಗ ಆರೋಗ್ಯ ಕೈ ಕೊಡುವ ಕಾರಣ ಹೆಚ್ಚು ಹೊತ್ತು ಕುಳಿತು ಆಡಲು ಸಾಧ್ಯವಾಗುತ್ತಿಲ್ಲ. ಹಿಂದೆಲ್ಲಾ ಅನುಪತ್ಯ ಮುಗಿದ ಬಳಿಕರಾತ್ರಿ ಇಡೀ ಇಸ್ಪೀಟು ಆಡಿ ಆ ಬಳಿಕ ವಿಶ್ಲೇಷಿಸಿದ ಉದಾಹರಣೆ ಬೇಕಾದಷ್ಟಿದೆ.
ಈಗಿನ ಅಪ್ಪಂದಿರಂತೆ ನಮ್ಮಪ್ಪ ನಮ್ಮ ಮೇಲೆ ಯಾವತ್ತೂ ಪ್ರೀತಿ ತೋರಿದವರಲ್ಲ. ಹಾಗೆಂದ ಮಾತ್ರಕ್ಕೆ ಅವರಿಗೆ ನಮ್ಮ ಮೇಲೆ ಪ್ರೀತಿ ಇಲ್ಲ ಎಂದರ್ಥವಲ್ಲ. ಹಿಂದಿನ ಕಾಲದ ತಂದೆಯವರಂತೆ ನನ್ನ ತಂದೆಯೂ ಅಂತರ್ಮುಖಿ, ಮಾತು ಕಡಿಮೆ, ಸಿಡುಕುತನ ಜಾಸ್ತಿ. ಅತಿಯಾದ ಸ್ವಾಭಿಮಾನಿ. ಹಟಮಾರಿ, ಹೊರಗೆ ಕಠೋರ. ಆದರೆ ಮೃದು ಹೃದಯ. ನಾವು ಶಾಲೆಗೆ ಹೋಗುವಾಗ ಯಾವತ್ತು ಶಾಲೆಗೆ ಬಂದವರಲ್ಲ. ಇಂತದ್ದೇ ಓದು, ಇಂತದ್ದೇ ಕಲಿ, ಮಾಡು ಎಂದು ಹಠ ಹಿಡಿದವರೂ ಅಲ್ಲ. ನನ್ನ ಮಕ್ಕಳು ಕಲಿತು ಮುಂದೆ ಬರಲಿ ಎಂದು ಯಾವತ್ತು ನಮಗೆ ಒತ್ತಡ ಹಾಕಿದ ಸನ್ನಿವೇಶವೇ ಇಲ್ಲ. ನನ್ನ ಮಕ್ಕಳು ಓದಿ ಮುಂದೆ ಬರುತ್ತಾರೆ ಎಂಬ ಅಚಲ ವಿಶ್ವಾಸ ಅವರಿಗೆ ಇತ್ತು. ಯಾವತ್ತು ತನ್ನ ಮಕ್ಕಳ ಸಾಮಥ್ರ್ಯದ ಬಗ್ಗೆ ಸಂಶಯ ಪಟ್ಟವರೇ ಅಲ್ಲ. ಈ ಕಾರಣಕ್ಕೇ ನಾನು ನಮ್ಮಿಷ್ಟವನ್ನು ಇಷ್ಟ ಪಡುವುದು. ಇಡೀ ಜಗತ್ತೇ ನಮ್ಮಪ್ಪ ಏನೂ ಸಾಧಿಸಿಲ್ಲ ಎಂದರೂ ನಾನು ಒಪ್ಪಲು ಸಾಧ್ಯವೇ ಇಲ್ಲ. ತಾನು ಸಾಧಿಸಲು ಸಾಧ್ಯವಾಗದ್ದನ್ನು ತನ್ನ ಮಕ್ಕಳ ಮುಖಾಂತರ ಸಾಧಿಸಿದ ಒಬ್ಬ ವ್ಯಕ್ತಿ ಇದ್ದರೆ ಅದು ನಮ್ಮಪ್ಪ. ಅದಕ್ಕೆ ಅವರೇ ನನ್ನ ಮೊದಲ ಮತ್ತು ಕೊನೆಯ ‘ಹಿರೋ’.
ಸೈಕಲ್ ಸವಾರಿ ಮತ್ತು ಪೋಲಿಯೋ ಡ್ರಾಪ್ಸ್:
1980ರ ಕಾಲಘಟ್ಟ. ನಾನಾಗ ಎರಡನೇ ತರಗತಿಯಲ್ಲಿ ಓದುತ್ತಿದ್ದ. 1973ರಲ್ಲಿ ಹುಟ್ಟಿದ ನನಗೆ ಆಗ 7 ವರ್ಷವಾಗಿತ್ತು. ನಮ್ಮೂರು ಚೂಂತಾರು ಸಮೀಪದ, ಶೇಣಿಯ ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ಸಮಯವದು. ಆ ಸಂದರ್ಭದಲ್ಲಿ ಪೊಲಿಯೋ ಡ್ರಾಪ್ಸ್ ಹಾಕುವುದು ಈಗಿನಂತೆ ಎಲ್ಲೆಡೆ ಭರದಿಂದ ನಡೆಯುತ್ತಿತ್ತು. ನಮ್ಮಪ್ಪನಿಗೆ ನಾನು ಸೇರಿ ನಾಲ್ಕು ಮಕ್ಕಳು ಬೆನ್ನು ಬೆನ್ನಿಗೆ ಹುಟ್ಟಿದ ಕಾರಣದಿಂದ ನಮಗೆಲ್ಲರಿಗೂ ವರ್ಷದಷ್ಟೆ ಅಂತರ ಇತ್ತು. ತಮ್ಮ, ಅಣ್ಣ, ಅಕ್ಕ ಮತ್ತು ನನಗೆ ಹೀಗೆ ನಾಲ್ವರಿಗೂ ಪೊಲಿಯೋ ಡ್ರಾಪ್ಸ್ ಹಾಕಿಸಬೇಕಿತ್ತು. ನಮ್ಮಪ್ಪ ವೃತ್ತಿಯಲ್ಲಿ ಪುರೋಹಿತರು ಮೂರು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕಾಲಘಟ್ಟ ಅದಾಗಿತ್ತು. ತಂದೆ ಪುರೋಹಿತರಾದ ಕಾರಣದಿಂದ ಭಟ್ಟರ ಮಕ್ಕಳು ಎಂಬ ಸಲುಗೆಯಿಂದ ಊರಲ್ಲಿ ನಡೆಯುತ್ತಿದ್ದ ಎಲ್ಲ ಮದುವೆ, ಮುಂಜಿ, ಶ್ರಾದ್ಧ, ಪೂಜೆ ಹೀಗೆ ಎಲ್ಲದಕ್ಕೂ ನಾವು ತಂದೆಯವರ ಜೊತೆ ಹೋಗಿ ಹೊಟ್ಟೆ ತುಂಬಾ ತಿನ್ನುತ್ತಿದ್ದ ಕಾಲ ಅದಾಗಿತ್ತು. ಮನೆಯಲ್ಲಿ ಕಡು ಬಡತನವಿದ್ದರೂ ಹೊಟ್ಟೆ ಮತ್ತು ಬಟ್ಟೆಗೆ ನಮ್ಮ ತಂದೆ ಎಂದೂ ಕಡಿಮೆ ಮಾಡಿದವರಲ್ಲ. ಪೊಲಿಯೋ ಡ್ರಾಪ್ಸ್ ಹಾಕುವ ದಿನ ನಮ್ಮಪ್ಪನಿಗೆ ಬೇರೆ ಧಾರ್ಮಿಕ ಕ್ರಿಯೆಗೆ ಹೋಗಬೇಕಿದ್ದ ಕಾರಣ ಬೆಳಿಗ್ಗೆಯೇ ನಮಗೆಲ್ಲರಿಗೂ ಪೊಲಿಯೋ ಡ್ರಾಪ್ಸ್ ಹಾಕಿಸಬೇಕು ಎಂದು ತಂದೆ ನಿಶ್ಚಯಿಸಿದ್ದರು. ನಮ್ಮ ತಂದೆಯ ಬಳಿಯಲ್ಲಿ ಇದ್ದಿದ್ದು ಒಂದು ಹಳೆಯ ಸೈಕಲ್, ನಾಲ್ಕು ಮಕ್ಕಳನ್ನು ಏಕಕಾಲಕ್ಕೆ ನಮ್ಮ ಮನೆಯಿಂದ 5 ಕಿ.ಮೀ. ದೂರದ ಕುಕ್ಕುಜಡ್ಕ ಎಂಬಲ್ಲಿಗೆ ಕರೆದೊಯ್ಯಬೇಕಾಗಿತ್ತು. ಹಾಗೆಂದು ಮಕ್ಕಳಿಗೆ ಹಾಕಬೇಕಾದ ಪೊಲಿಯೋ ಡ್ರಾಪ್ಸ್ ಹಾಕಲೇ ಬೇಕಾಗಿತ್ತು. ನಮ್ಮ ಅಪ್ಪಯ್ಯನ ‘ಪಿತೃಪ್ರಜ್ಞೆ’ ಜಾಗೃತವಾಗಿತ್ತು. ಏನಾದರೂ ಮಾಡಿ ಡ್ರಾಪ್ಸ್ ಹಾಕಿಸಲೇ ಬೇಕೆನ್ನುವ ದೃಢ ನಿರ್ಧಾರಕ್ಕೆ ಅವರು ಬಂದಿದ್ದರು. ಸೈಕಲ್‍ನ ಮುಂಭಾಗದ ರಿಮ್‍ನ ಮೇಲೆ ದಿಂಬು ಇಟ್ಟು ನಾನು ಮತ್ತು ತಮ್ಮನನ್ನು ಕುಳ್ಳಿರಿಸಿದ್ದರು. ಹಿಂಭಾಗದಲ್ಲಿನ ಕ್ಯಾರಿಯರ್ ಜಾಗದಲ್ಲಿ ಅಕ್ಕ ಮತ್ತು ಅಣ್ಣನನ್ನು ಕೂರಿಸಿದ್ದರು. ಒಂದು ದೊಡ್ಡ ಬೈರಾಸಿನಿಂದ ತನ್ನ ನಾಲ್ಕು ಮಕ್ಕಳನ್ನು ತನ್ನ ಸುತ್ತ ಕಟ್ಟಿದ್ದರು. ಮಕ್ಕಳು ಬೀಳಬಾರದು ಎಂಬ ದೃಷ್ಟಿಯಿಂದ ತನ್ನ ಮಕ್ಕಳನ್ನು ತಮ್ಮ ಹೊಟ್ಟೆಯ ಭಾಗದ ಸುತ್ತ ಕಟ್ಟಿಕೊಂಡು ಎಲ್ಲಿಯೂ ನಿಲ್ಲಿಸದೆ 5 ಕಿ.ಮೀ. ಪ್ರಯಾಣ ಮಾಡಿದ್ದರು.
ಶ್ರಮಜೀವಿಯಾದ ಅಪ್ಪನ ಬೆವರಿನ ಹನಿಗಳು ನಮ್ಮ ಮೈಮೇಲೆ ಬಿದ್ದು ಅಂಗಿ ಒದ್ದೆಯಾದ ದಿನಗಳು ಇನ್ನು ಮಾಸಿಲ್ಲ. ಅಪ್ಪನ ಆ ಬೆವರಿನ ವಾಸನೆಯನ್ನು ನೆನೆದರೆ ಈಗಲೂ ನನಗೆ ರೋಮಾಂಚನವಾಗುತ್ತದೆ. ಎಷ್ಟೇ ಕಷ್ಟವಿದ್ದರೂ ಯಾರೊಂದಿಗೂ ಹೇಳದೆ ತನ್ನ ಪಿತೃತ್ವದ ಜವಾಬ್ದಾರಿಯನ್ನು ನೆರವೇರಿಸಿದ ನನ್ನ ಅಪ್ಪನನ್ನು ನೆನೆದಾಗ ನನಗೆ ಈಗಲೂ ಹೆಮ್ಮೆ ಅನಿಸುತ್ತದೆ. ಈಗ 80ರ ಹರೆಯದ ನನ್ನ ಅಪ್ಪ ನನ್ನ ಐಷಾರಾಮಿ ಮರ್ಸಿಡಿಸ್ ಬೆನ್ಜ್ ಕಾರಿನ ಮುಂದಿನ ಸೀಟಿನಲ್ಲಿ ನಿರ್ಲಿಪ್ತ ಭಾವದಿಂದ ಕುಳಿತು ಸೀಟು ಬೆಲ್ಟ್ ಹಾಕಲು ಪರದಾಡುವಾಗ ನನ್ನ ಕಣ್ಣುಗಳೆರಡು ಒದ್ದೆಯಾಗಿರುವುದಂತೂ ನಿಜವಾದ ಮಾತು. ನನ್ನ ಮಗಳು ಅಜ್ಜನಿಗೆ ಸೀಟು ಬೆಲ್ಟ್ ಹಾಕಲು ಬರುವುದಿಲ್ಲ ಎಂದು ನಗುವಾಗ ನನ್ನ ಅಪ್ಪ ಹೇಳುತ್ತಿದ್ದ ”ಹಣ್ಣೆಲೆ ಬೀಳುವಾಗ ಚಿಗುರೆಲೆ ನಕ್ಕಿತಂತೆ” ಎಂಬ ಮಾತು ನೆನೆದ ನಾನು ಮೌನಿಯಾಗುತ್ತೇನೆ. ನನ್ನಪ್ಪ ಇದಾವುದೇ ಪರಿವೇ ಇಲ್ಲದೆ ಎಲ್ಲಿಗೆ ಹೋಪದು ಮಗ ಎಂದು ಕೇಳುವಾಗ ತನ್ನ ಜೀವನದ ಪಯಣದ ಬಗ್ಗೆ ನನಗೆ ಒಂದು ಕ್ಷಣ ಅವಾಕ್ಕಾಗಿ ನಾನು ತೆರೆದ ಬಾಯಿ ಮುಚ್ಚುವುದನ್ನೇ ಮರೆಯುತ್ತೇನೆ. ಈಗಿನ ಐಷಾರಾಮಿ ಕಾರಿನ ಪ್ರಯಾಣದಲ್ಲಿ ನಾನಾಗಲೀ, ನನ್ನಪ್ಪನಾಗಲಿ ಬೆವರುವ ಪ್ರಮೇಯವಂತೂ ಇಲ್ಲವೇ ಇಲ್ಲ. ಆದರೆ ನನಗಂತೂ 80ರ ದಶಕದ ಆ ಅಪ್ಪನ ಜೊತೆಗಿನ ಸೈಕಲ್ ಸವಾರಿಯ ಮುಂದೆ ಇಂದಿನ ಸುಗಂಧಭರಿತ ಗಾಳಿಯಿರುವ ಕಾರಿನ ಪ್ರಯಾಣ ಉಸಿರುಗಟ್ಟಿಸುವುದಂತೂ ಸತ್ಯವಾದ ವಿಚಾರ. ಶ್ರಮಜೀವಿ ಅಪ್ಪನ ಬೆವರಿನ ವಾಸನೆ ಮತ್ತು ನಿಷ್ಕಲ್ಮಶ ಪ್ರೀತಿಯ ಮುಂದೆ ಇವೆಲ್ಲವೂ ನಗಣ್ಯ ಎಂಬುದು ನನ್ನ ಮನದಾಳದ ಮಾತು. ವ್ಯಾವಹಾರಿತ ಮತ್ತು ವ್ಯಾಪಾರಿ ಮನೋಭಾವದ ಈ ಜಗತ್ತಿನಲ್ಲಿ ಅಪ್ಪ ಮಕ್ಕಳ ಸಂಬಂಧವು ಹಳಸಿ, ಸಂಬಂಧವೂ ಮೌಲ್ಯಾಧಾರಿತವಾಗಿರುವುದು ಇಂದಿನ ಯುವಜನರ ಮನೋಸ್ಥಿತಿಗೆ ಹಿಡಿದ ಕೈಗನ್ನಡಿ ಎನ್ನುವುದು ಅರಗಿಸಿಕೊಳ್ಳಲೇಬೇಕಾದ ಕಟು ವಾಸ್ತವ ಆಗಿರುತ್ತದೆ.
ನಿರ್ಲಿಪ್ತ ಭಾವದ ನಮ್ಮಪ್ಪ:
ಅಪ್ಪ ಹಳ್ಳಿಯವರಾದರೂ, ಆಧುನಿಕತೆಗೆ ತಕ್ಕಂತೆ ಜೀವಿಸಿದವರು. ಮಡಿವಂತಿಕೆಯಿಂದ ಎಂದಿಗೂ ದೂರವೇ ಇದ್ದರು. ನಮಗೂ ಸ್ವತಂತ್ರವಾಗಿ ಜೀವಿಸಲು ಅವಕಾಶ ಮಾಡಿಕೊಟ್ಟರು. ತಪ್ಪು ಮಾಡಲು ಅವಕಾಶ ನೀಡಲೇ ಇಲ್ಲ. ಅಪ್ಪ ಎಂದರೆ ಜವಾಬ್ದಾರಿಯ ಇನ್ನೊಂದು ಹೆಸರು. ಮಕ್ಕಳು ಹುಟ್ಟಿಸಿದವರೆಲ್ಲ ಒಳ್ಳೆ ಅಪ್ಪಂದಿರಾಗುವುದಿಲ್ಲ. ಮಕ್ಕಳಿಗೆ ಒಳ್ಳೆ ವಿದ್ಯೆ ಬುದ್ಧಿ, ಸಂಸ್ಕಾರ ಮತ್ತು ಗುಣ ನೀಡಿದವನೇ ನಿಜವಾದ ಅಪ್ಪ. ಈ ವಿಷಯದಲ್ಲಿ ನಮ್ಮಪ್ಪನಿಗೆ ನೂರಕ್ಕೆ ನೂರು ಅಂಕ ನೀಡಿದರೂ ಕಡಿಮೆಯಾದೀತು. ನಮ್ಮಪ್ಪ ನಮಗಾಗಿ ಕಾರು, ಮನೆ, ಬಂಗ್ಲೆ, ಸೈಟ್ ಮಾಡಿಲ್ಲ. ಆದರೆ ಮಾಡಬೇಕಾದದ್ದನ್ನು ಮಾಡಿದ್ದಾರೆ. ಶಿಕ್ಷಣ ಮತ್ತು ಸಂಸ್ಕಾರ ಎರಡೇ ತಂದೆಯಾದವನು ಮಕ್ಕಳಿಗಾಗಿ ಮಾಡಿಡಬೇಕಾದ ಆಸ್ತಿ ಎನ್ನುವ ಧೋರಣೆ ನಮ್ಮಪ್ಪನದ್ದು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಬಲಪ್ರತಿಪಾದಿಸಿ ಸಾಧಿಸಿ ತೋರಿಸಿದ ಲಕ್ಷಾಂತರ ಅಪ್ಪಂದಿರು ನಮ್ಮಲ್ಲಿದ್ದಾರೆ. ಆ ಸಾಲಿಗೆ ನಿಸ್ಸಂಶಯವಾಗಿ ನಮ್ಮಪ್ಪ ಸೇರೇ ಸೇರುತ್ತಾರೆ. ನನಗೆ ಒಳ್ಳೆ ಮಾರ್ಕ್ ಬಂದಾಗ, ಇಂಜಿನಿಯರಿಂಗ್ ಸೀಟು ಸಿಕ್ಕಿದಾಗ, ಆ ಬಳಿಕ ಭಗೀರಥ ಪ್ರಯತ್ನದ ಬಳಿಕ ದಂತ ವೈದ್ಯಕೀಯ ಸೀಟು ದೊರೆತಾಗ ನಮ್ಮಪ್ಪ ಒಂದೇ ಒಂದು ಮಾತು ಆಡಲಿಲ್ಲ. ಯಾವುದಕ್ಕೂ ನನ್ನ ಜೊತೆ ಬೆಂಗಳೂರಿಗಾಗಲೀ, ಮೈಸೂರಿಗಾಗಲೀ ಬಂದವರೇ ಅಲ್ಲ. ಸ್ನಾತಕೋತ್ತರ ಪದವಿಗೆ ರ್ಯಾಂಕ್ ಬಂದಾಗಲೂ ಏನೂ ಅನ್ನಲಿಲ್ಲ. ಗೆದ್ದಾಗ ಬೀಗದೆ ಸೋತಾಗ ಕುಗ್ಗದೆ, ಆರಕ್ಕೇಳದ ಮೂರಕ್ಕೆ ಇಳಿಯದ ಸ್ಥಿತ ಪ್ರಜ್ಞ ನಮ್ಮಪ್ಪ. ತನ್ನ ಎಲ್ಲಾ ಮಕ್ಕಳ ಸಾಮರ್ಥ್ಯ ಮತ್ತು ಶಕ್ತಿಯ ಬಗ್ಗೆ ಅವರಿಗೆ ಅಚಲವಾದ ನಂಬಿಕೆ ಇತ್ತು. ಎಂದೂ ನಮ್ಮನ್ನಾರನ್ನೂ ಪ್ರಶ್ನಿಸಲೇ ಇಲ್ಲ. ಅಷ್ಡೊಂದು ಗಾಢವಾದ ವಿಶ್ವಾಸ ಮತ್ತು ಧೈರ್ಯ ತನ್ನ ಮಕ್ಕಳ ಮೇಲೆ ಅವರು ಹೊಂದಿದ್ದರು.
ಇಂದಿನ ಮೋಡರ್ನ್ ಅಪ್ಪಂದಿರು ತಮ್ಮ ಮಕ್ಕಳ ಜೊತೆ ಹರಟುವ, ಲಾಂಗ್ ಡೈವ್‍ಗೆ ಬರುವ, ಪಾನಿಪೂರಿ ತಿನ್ನುವ, ಜೋಕ್ಸ್ ಮಾಡಿ ನಗುವ ಸನ್ನಿವೇಶ ಕಂಡಾಗ ನಮ್ಮಪ್ಪ ಇದನ್ನೆಲ್ಲಾ ನಮಗೆ ಮಾಡಿಲ್ಲ ಎಂದು ಅನಿಸುವುದೇ ಇಲ್ಲ. ಯಾಕೆಂದರೆ ಆಕಾಲದಲ್ಲಿ ಅಪ್ಪ-ಮಕ್ಕಳ ಸಂಬಂಧಕ್ಕೆ ಬೇರೆಯೇ ಅರ್ಥ ಮತ್ತು ಕಲ್ಪನೆ ಇದ್ದಿತು. ಕಾಲ ಬದಲಾದಂತೆ ತಂದೆ ಮಕ್ಕಳ ಬಾಂಧವ್ಯವೂ ಬದಲಾಗುತ್ತಲೇ ಇದೆ. ಈಗ ತಂದೆ ಮಕ್ಕಳ ಒಟ್ಟಿಗೆ ಬಾರಿಗೆ ಹೋಗಿ ಲೈವ್ ಡಾನ್ಸ್ ನೋಡುವವರೆಗೆ ನಮ್ಮ ಸಂಸ್ಕøತಿಯ ಅಧೋಪತನ ಆಗಿದೆ ಎಂದರೂ ತಪ್ಪಾಗಲಾರದು. ನಾನು ಚಿಕ್ಕವನಾಗಿದ್ದಾಗ ಯಾವತ್ತೂ ಅಪ್ಪನ ಹೆಗಲೇರಿ ಕುಣಿದವನಲ್ಲ. ಅಪ್ಪನ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತವನೂ ಅಲ್ಲ. ಅಪ್ಪನೆದುರು ನಿಲ್ಲಲೂ ಒಂದು ರೀತಿಯ ಅವ್ಯಕ್ತ ಭಯ ಭಕ್ತಿ ಇರುತ್ತಿತ್ತು. ಆದರೆ ಈಗಿನ ಮಕ್ಕಳು ತಂದೆಯ ತಲೆ ಮೇಲೆ ಕುಳಿತು ತಬಲಾ ಬಾರಿಸುವಷ್ಟರ ಮಟ್ಟಿಗೆ ಕಾಲ ಬದಲಾಗಿದೆ. ಅಪ್ಪ ಎದುರುಗಿದ್ದರೂ, ಅಪ್ಪ ಟಿವಿ ನೋಡುತ್ತಿದ್ದರೂ ಸೌಜನ್ಯಕ್ಕಾದರೂ ಚಾನೆಲ್ ಚೇಂಜ್ ಮಾಡುವ ಮೊದಲು ಕೇಳುವುದೇ ಇಲ್ಲ. ಟಿವಿ ಇರುವುದೇ ನಮಗೆ ನೋಡಲು ಎಂಬಂತೆ ತಮಗಿಷ್ಟವಾದ ಚಾನೆಲ್ ನೋಡುತ್ತಾ ಮಕ್ಕಳು ಮೈಮರೆಯುವ ಕಾಲ ಬಂದಿದೆ. ನಮ್ಮಪ್ಪವ ಕಾಲದಲ್ಲಿ ಟೀವಿಯೂ ಇರಲಿಲ್ಲ. ಠೀವಿಯೂ ಇರಲಿಲ್ಲ. ಇದ್ದದ್ದು ಕೇವಲ ಹಳೇ ರೇಡಿಯೋ ಮಾತ್ರ. ಅದೇ ನಮಗೆ ಸರ್ವಸ್ವ ಆಗಿತ್ತು. ಇಡೀ ಜಗತ್ತಿನ ಆಗುಹೋಗುಗಳನ್ನು ರೇಡಿಯೋ ಮುಖಾಂತರ ಕೇಳಿ ತಿಳಿದು ಸಂಭ್ರಮಿಸುತ್ತಿದ್ದೆವು ನಮ್ಮಪ್ಪನ ಜೊತೆಗೆ.
ಒಂದು ಕಾಲದಲ್ಲಿ ಹಿಟ್ಲರನಂತೆ ಗಾಂಭೀರ್ಯವದನದಾರಿಯಾಗಿ ಬಿಗುಮಾನದಿಂದ ಕುಳಿತ ನಮ್ಮಪ್ಪ ಇಂದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನಿರುವುದು ಕಂಡಾಗ ನನಗೆ ಕೆಲವೊಮ್ಮೆ ಇವರೇ ನನ್ನಪ್ಪನೇ ಎಂದು ಸಂಶಯ ಬರುತ್ತದೆ. ತನ್ನ ಚಿಕ್ಕ–ಚಿಕ್ಕ ಕಣ್ಣುಗಳನ್ನು ಮಿಣುಕಿಸುತ್ತಾ ನನ್ನನ್ನೇ ನೋಡುವಾಗ ನಮ್ಮಪ್ಪ ಹೇಗಿದ್ದ ಹೇಗಾದ ಎಂದು ತಾನೇ ಕೆಲವೊಮ್ಮೆ ವಿಸ್ಮಯಗೊಳ್ಳುತ್ತೇನೆ. ಹೆದರಿಸುವುದು ತನ್ನ ಪರಮ ಕರ್ತವ್ಯ ಎಂದು ಬದುಕಿದ್ದ ನಮ್ಮಪ್ಪ ಈ ಹೊತ್ತು ಮನೆಯೊಳಗೆ ಇದ್ದರೂ ಇಲ್ಲದವರಂತೆ ಇರುವಾಗ ನನಗೆ ನಮ್ಮಪ್ಪನ ಮೇಲೆ ಮತ್ತಷ್ಟು ಕರುಣೆ ಉಕ್ಕಿ ಬರುತ್ತದೆ.
ಸ್ಮಿತಪ್ರಜ್ಞ, ವ್ಯಕ್ತಿತ್ವ ನಮ್ಮಪ್ಪ:
2004ರಲ್ಲಿ ಅಕಾಲಿಕವಾಗಿ ನಮ್ಮಮ್ಮ ಮೆದುಳಿನ ಕ್ಯಾನ್ಸರ್‍ನಿಂದಾಗಿ ತೀರಿಕೊಂಡಾಗ ನಾವು ಮಕ್ಕಳೆಲ್ಲ ಬಹಳ ಧೃತಿಗೆಟ್ಟಿದ್ದೆವು. ನೊಂದುಕೊಂಡಿದ್ದೆವು. ಆದರೆ ನಮ್ಮಪ್ಪ ಕಲ್ಲುಗುಂಡಿಗೆ ಮಾಡಿಕೊಂಡು ನಾಲ್ಕು ಹನಿ ಕಣ್ಣೀರು ಸುರಿಸಿ ನೋವನ್ನು ನುಂಗಿ ವಿಷಕಂಠನಂತೆ ನಿರ್ಲಿಪ್ತರಾಗಿದ್ದರು. 35 ವರ್ಷಗಳ ಕಾಲ ಸಹಧರ್ಮಿಣಿಯಾಗಿ ಕಷ್ಟಗಳಿಗೆಲ್ಲಾ ಜೊತೆಯಾಗಿ ಸಾಥ್ ನೀಡಿದ ಧರ್ಮಪತ್ನಿ ಇಹಲೋಕ ತ್ಯಜಿಸಿದಾಗ ನಮ್ಮಪ್ಪ ಮನಸ್ಸಿನಲ್ಲಿಯೇ ಕೊರಗಿದರೆ ವಿನ: ನಮ್ಮೊಂದಿಗೆ ಏನೂ ಆಗದವರಂತೆ ಇದ್ದರು. ಅಂದಿನಿಂದ ಅವರು ನಮಗೆಲ್ಲಾ ಬರೀ ಅಪ್ಪನಾಗಿರದೇ ಅಮ್ಮನ ಪ್ರೀತಿಯನ್ನು ಧಾರೆ ಎರೆದು ಬಿಟ್ಟರು. ನಾನು ಅಪರಾತ್ರಿ ಸರ್ಜರಿ ಮುಗಿಸಿ ಅಥವಾ ಪಾರ್ಟಿ ಅಥವಾ ಮೀಟಿಂಗ್ ಮುಗಿಸಿ ಬಂದಾಗ, ಸುಮ್ಮನೆ ಬಾಗಿಲು ತೆರೆದು “ಊಟವಾಯಿತೇ ಮಗ” ಎಂದು ಕೇಳಿ ಅಮ್ಮನ ಜವಾಬ್ದಾರಿಯನ್ನು ನಿಭಾಯಿಸಿದರೆ ನಾನೆಷ್ಟೇ ಸಿಡುಕಿದರೂ, ಉತ್ತರ ನೀಡದಿದ್ದರೂ ಊಟ ಆಗಿದೆ ಎಂಬ ಉತ್ತರ ಬರುವವರೆಗೆ ಪ್ರಶ್ನೆ ಕೇಳಿ ಊಟ ಆಗಿದೆ ಎಂಬ ಉತ್ತರ ಬರುವವರೆಗೆ ಪ್ರಶ್ನೆ ಕೇಳಿ ಊಟ ಆಗಿದೆ ಎಂದು ದೃಢೀಕರಿಸಿಯೇ ನಮ್ಮಪ್ಪ ಮಲಗುತ್ತಿದ್ದರು. ಇದು ನಮ್ಮಪ್ಪನಲ್ಲಿನ ಮಾತೃ ಹೃದಯಕ್ಕೆ ಜೀವಂತ ಸಾಕ್ಷಿ. ಬದುಕಿನ ಪ್ರತಿ ಕ್ಷಣದಲ್ಲಂತೂ ಬಾಲ್ಯದಿಂದ ಇಂದಿನವರೆಗೂ ಅವರು ನಮ್ಮನ್ನು ಭವಿಷ್ಯಕ್ಕೆ ಸಜ್ಜುಗೊಳಿಸುತ್ತಿದ್ದ. ಅಪ್ಪನ ಪ್ರತಿ ಮಾತಲ್ಲೂ ಮುಂದೆ ಯಾವತ್ತೂ ಉಪಯೋಗಕ್ಕೆ ಬರುವಂಥಾ ಪಾಠವೇ ಇರುತ್ತಿತ್ತು. ಎಷ್ಟೆಲ್ಲಾ ಅಪಮಾನ, ಅಸಡ್ಡೆ, ತಾತ್ಸಾರ, ತಿರಸ್ಕಾರ ಬಂದರೂ ಎಲ್ಲವನ್ನೂ ಸಹಿಸಿಕೊಂಡು ಸ್ಮಿತಪ್ರಜ್ಞನಾಗಿ ನಿಲ್ಲುವ ನನ್ನಪ್ಪನ ನಿಲುವಿಗೆ ಹೋಲಿಕೆ ಖಂಡಿತಾ ಇಲ್ಲ. ತನ್ನ ಮಕ್ಕಳಿಗಾಗಿ ಆಸ್ತಿ, ಹಣ, ಒಡವೆ ಮಾಡುವುದಕ್ಕಿಂತ ಹೆಚ್ಚಾಗಿ, ಈ ಎಲ್ಲವನ್ನೂ ಅವರೇ ಸಂಪಾದಿಸಿಕೊಳ್ಳಬಲ್ಲಂತಹ ಸ್ವಾವಲಂಬನೆ, ಈ ಎಲ್ಲವನ್ನೂ ಪ್ರಾಮಾಣಿಕವಾದ ಹಾದಿಯಲ್ಲಿ ನಡೆಯುವ ನಿಷ್ಠೆ, ಎಂಥ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸುವ ಧೈರ್ಯ, ಜಾಣ್ಮೆ, ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಸ್ಮಿತಪ್ರಜ್ಞ ಮನಸ್ಥಿತಿಯನ್ನು ನೆಲೆಗೊಳಿಸುವುದೇ ತಂದೆಯ ಕರ್ತವ್ಯ ಎಂಬುದನ್ನು ತೋರಿಸಿಕೊಟ್ಟಿರುವ ಕಾರಣದಿಂದಲೇ ನಮ್ಮಪ್ಪ ಇತರರಿಗಿಂತ ಬಹಳ ಭಿನ್ನವಾಗಿ ಕಾಣಿಸುತ್ತಾರೆ. ಈ ಕಾರಣಕ್ಕಾಗಿಯೇ ನಾನು “ಎಲ್ಲರಂಥವರಲ್ಲ ನಮ್ಮಪ್ಪ” ಎಂದು ಎದೆತಟ್ಟಿ ಹೇಳುತ್ತೇನೆ ಮತ್ತು ಇನ್ನು ಎಷ್ಟು ಜನ್ಮವಿದ್ದರೂ ಇದೇ ಅಪ್ಪನ ಮಗನಾಗಿ ಹುಟ್ಟುವಂತಾಗಲೀ ಎಂದು ಆ ಕಾಣದ ದೇವರಲ್ಲಿ ಅತ್ಯಂತ ವಿನೀತನಾಗಿ ಬೇಡಿಕೊಳ್ಳುತ್ತೇನೆ ಮತ್ತು ನಮ್ಮಪ್ಪ ನೂರು ಕಾಲ ಬದುಕಿ ನಮ್ಮೆಲ್ಲರನ್ನು ಹರಸಲಿ ಎಂದು ಆಶಿಸುತ್ತೇನೆ.
-ಡಾ|| ಮುರಲೀ ಮೋಹನ್ ಚೂಂತಾರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ