ಸೆ. 24ಕ್ಕೆ ಅಂತಾರಾಷ್ಟ್ರೀಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿಗಳ ಪ್ರದಾನ

Upayuktha
0

 

ಬೆಂಗಳೂರು: ಸಾಮಾಜಿಕ ಉದ್ಯಮವಾಗಿರುವ ಸೆಲ್ಕೋ ಸಂಸ್ಥೆಯು ಕೊಡಮಾಡುವ ಪ್ರತಿಷ್ಠಿತ  ಅಂತಾರಾಷ್ಟ್ರೀಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 24ರಂದು ಬೆಂಗಳೂರಿನ ವಸಂತ ನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

 

ಸೌರಶಕ್ತಿಯ ಆದ್ಯ ಪ್ರವರ್ತಕರು, ಪ್ರಪಂಚದಾದ್ಯಂತ ಸೌರಶಕ್ತಿಯ ಉಪಯೋಗಗಳನ್ನು ಉತ್ತೇಜಿಸುತ್ತಿರುವ ಪತ್ರಕರ್ತ ಶ್ರೀ ನೇವಿಲ್ಲೆ ವಿಲಿಯಮ್ಸ್ ಅವರು 2020ನೇ ಸಾಲಿನ ಪ್ರಶಸ್ತಿಗೆ, 2021ನೇ ಸಾಲಿನ ಪ್ರಶಸ್ತಿಗೆ ಇಂಧನ ಬಳಕೆ ಕುರಿತ ಜಾಗತಿಕ ಮನ್ನಣೆ ಪಡೆದ ಪ್ರಮುಖ ತಜ್ಞರು ಹಾಗೂ ಅನೇಕ ಜಾಗತಿಕ ಸಂಸ್ಥೆಗಳ ಮಾರ್ಗದರ್ಶಕರೂ ಆದ ಶ್ರೀಮತಿ ರಿಚೆಂಡಾ ವಾನ್ ಲೀವೆನ್ ಅವರು ಹಾಗೂ 2022ನೇ ಸಾಲಿನ ಪ್ರಶಸ್ತಿಗೆ, ನವೀಕರಿಸಬಹುದಾದ ಇಂಧನ ಆಧಾರಿತ ಪರಿಹಾರಗಳ ಏಕೀಕರಣದ ಮೂಲಕ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಮೂಲ ಸೌಕರ್ಯಗಳನ್ನು ಬಲಪಡಿಸುವ ಕೆಲಸ ಮಾಡುತ್ತಿರುವ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ (ಎಸ್ ವಿ ವೈಎಂ) ಸರ್ಕಾರೇತರ ಸಂಸ್ಥೆಯು ಪಾತ್ರವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.


ಸಮಾರಂಭವು ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದ್ದು, ಉದ್ಘಾಟನೆಯನ್ನು ಇಂಧನ, ಪರಿಸರ ಮತ್ತು ನೀರಿನ ಕುರಿತ ಪರಿಷತ್ತಿನ (ಸಿಇಇಡಬ್ಲೂ) ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಅರುಣಾಭ ಘೋಷ್ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಹರ್ಯಾಣದ ರಿಷಿವುಡ್ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಕೇಂದ್ರದ ಮಾಜಿ ಸಚಿವರಾದ ಶ್ರೀ ಸುರೇಶ್ ಪ್ರಭು ಭಾಗವಹಿಸಲಿದ್ದಾರೆ.


ಸಮಾರಂಭದ ಅಧ್ಯಕ್ಷತೆಯನ್ನು ಸೆಲ್ಕೋ ಇಂಡಿಯಾದ ನಿರ್ದೇಶಕರು ಹಾಗೂ ಓಪಿಇಎಸ್ ಇಟಾಲಿಯಾದ ಸಹ ಸಂಸ್ಥಾಪಕರು, ಪಾಲುದಾರರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಎಲೆನಾ ಕ್ಯಾಸೋಲೆರಿ ವಹಿಸಲಿದ್ದಾರೆ. ಗೌರವಾನ್ವಿತ ಅಭ್ಯಾಗತರಾಗಿ, ಮ್ಯಾಗ್ಸೆಸ್ಸೆ ಪ್ರಶಸ್ತಿ ಪರಸ್ಕೃತರು ಹಾಗೂ ಸೆಲ್ಕೋ ಸಂಸ್ಥಾಪಕರಾದ ಡಾ. ಹರೀಶ್ ಹಂದೆಯವರು, ಸೆಲ್ಕೋ ನಿರ್ದೇಶಕರಾದ ಶ್ರೀ ಥಾಮಸ್ ಪುಲ್ಲೆಂಕೇವ್, ಪ್ರೊ. ಎಂ.ಎಸ್. ಶ್ರೀರಾಮ್ ಭಾಗವಹಿಸಲಿದ್ದಾರೆ. ಎಸ್ ವಿ ವೈಎಂ ಸಂಸ್ಥೆಯ ಪರವಾಗಿ ಸಂಸ್ಥಾಪಕ ಅಧ್ಯಕ್ಷರಾದ ಡಾ. ಆರ್. ಬಾಲಸುಬ್ರಮಣಿಯಮ್ ಅವರು ಭಾಗವಹಿಸುವರು ಎಂದು ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಮೋಹನ ಭಾಸ್ಕರ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

----------------


ಸೂರ್ಯಮಿತ್ರ ಪ್ರಶಸ್ತಿ ಕುರಿತು:


ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಡಾ. ಎಚ್. ಹರೀಶ್ ಹಂದೆ ಅವರು ಸಂಸ್ಥಾಪಕರಾಗಿರುವ ಸೆಲ್ಕೋ ಸಂಸ್ಥೆಯು ಪ್ರತಿಷ್ಠಿತ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿಯನ್ನು 2012ರಿಂದ ಕೊಡಮಾಡುತ್ತಾ ಬಂದಿದೆ. ಈ ಪ್ರಶಸ್ತಿಯನ್ನು, ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುವ ಹರಿಕಾರರು ಮತ್ತು ಗ್ರಾಮೀಣ ಜನತೆಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದ ಅಸಾಧಾರಣ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ. 


ಸೆಲ್ಕೋ ಫೌಂಡೇಷನ್ ಕುರಿತು: ಸೆಲ್ಕೋ ಫೌಂಡೇಶನ್ 2010ರಲ್ಲಿ ಸ್ಥಾಪಿತವಾದ ಸರ್ಕಾರೇತರ ಸಂಸ್ಥೆಯಾಗಿದ್ದು, ಸುಸ್ಥಿರ ಇಂಧನ ಬಳಕೆಗಾಗಿ, ಸಮಗ್ರ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ, ಸೆಲ್ಕೋ ಫೌಂಡೇಶನ್ ತಾಂತ್ರಿಕ, ಆರ್ಥಿಕ ಮತ್ತು ಸಾಮಾಜಿಕ ಆವಿಷ್ಕಾರಗಳು, ಉದ್ಯಮ ಅಭಿವೃದ್ಧಿ, ಕೌಶಲ್ಯ ನಿರ್ಮಾಣ ಮತ್ತು ಆರ್ಥಿಕವಾಗಿ ಎಲ್ಲರನ್ನೂ ಒಳಗೊಳ್ಳುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.


ಸಂಸ್ಥೆಯು ಕೃಷಿ, ಪಶು ಸಂಗೋಪನೆ, ಸಣ್ಣ ಉದ್ಯಮಗಳು, ಜವಳಿ ಮತ್ತು ಕರಕುಶಲ, ಆರೋಗ್ಯ ಮತ್ತು ನಿರ್ಮಿತ ಪರಿಸರ ವಲಯಗಳಲ್ಲಿ ನವೀಕರಿಸಬಹುದಾದ ಇಂಧನದ ಪಾತ್ರವನ್ನು ನೇರವಾಗಿ ನಿರೂಪಿಸುವುದು ಮತ್ತು ಬಳಕೆಯ ವೇಗವನ್ನು ವರ್ಧಿಸುವ ಕೆಲಸ ಮಾಡುತ್ತಿದೆ.


ಸೆಲ್ಕೊ ಫೌಂಡೇಶನ್ ತನ್ನ ಪಾಲುದಾರರೊಂದಿಗೆ ಭಾರತ ದೇಶದಾದ್ಯಂತ ಕೆಲಸ ಮಾಡುತ್ತದೆ. ಕರ್ನಾಟಕ, ಒಡಿಶಾ, ಜಾರ್ಖಂಡ್ ಮತ್ತು ದೇಶದ ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ ಅಸ್ಸಾಂ, ಮೇಘಾಲಯ, ಮಣಿಪುರ ಮತ್ತು ನಾಗಾಲ್ಯಾಂಡ್ ಗಳಲ್ಲಿ ತನ್ನದೇ ತಂಡಗಳನ್ನು ಹೊಂದಿದೆ. ಈ ತಂಡಗಳು, ಸುಸ್ಥಿರ ಅಭಿವೃದ್ಧಿ ಗುರಿಗಳ ವೇಗವರ್ಧನೆಗಾಗಿ ನಿರ್ದಿಷ್ಟ ಸಂದರ್ಭಕ್ಕೆ ಅನುಗುಣವಾದ ಆವಿಷ್ಕಾರಗಳು ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಯ ಅಭಿವೃದ್ಧಿ ಮತ್ತು ಸುಸ್ಥಿರ ಇಂಧನ ಪರಿಹಾರಗಳನ್ನು ಪುನರಾವರ್ತಿಸುವಲ್ಲಿ ತಮ್ಮ ಕೆಲಸವನ್ನು ಕೇಂದ್ರೀಕರಿಸಿವೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top