ಅಂಬಿಕಾ ಮಹಾವಿದ್ಯಾಲಯ: ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Upayuktha
0

ದೇಶದ ಬಗೆಗಿನ ಜ್ಞಾನ ಹಾಗೂ ಹೆಮ್ಮೆ ವಿದ್ಯಾರ್ಥಿಗಳಲ್ಲಿರಬೇಕು : ಸುಬ್ರಹ್ಮಣ್ಯ ನಟ್ಟೋಜ


ಪುತ್ತೂರು: ನಮ್ಮ ದೇಶದ ಬಗೆಗೆ ಅರಿವು, ಸಂಸ್ಕೃತಿಯ ಬಗೆಗೆ ಜ್ಞಾನ ಹಾಗೂ ತಮ್ಮ ತನಗಳ ಬಗೆಗೆ ಹೆಮ್ಮೆ ಹೊಂದಿರುವ ವಿದ್ಯಾರ್ಥಿಗಳನ್ನು ತಯಾರು ಮಾಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ದೇಶದ ಬಗೆಗೆ ಅಪಾರ ಭಕ್ತಿ ಇರುವ ಯುವಸಮುದಾಯವನ್ನು ಸೃಷ್ಟಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳಿಂದ ಆಗಬೇಕಿದೆ. ರಾಷ್ಟ್ರದ ಮುಂದೆ ಉಳಿದೆಲ್ಲವೂ ಗೌಣ ಎಂಬ ಭಾವನೆಯನ್ನು ಮಕ್ಕಳಲ್ಲಿ ಮೂಡಿಸಬೇಕಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ನೂತನವಾಗಿ ಪದವಿ ತರಗತಿಗಳಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.


ದೇಶದ ರಕ್ಷಣೆ ಮುಂದಿನ ಪೀಳಿಗೆಯ ಕೈಯಲ್ಲಿದೆ. ಯುವ ಸಮುದಾಯವನ್ನು ಸರಿಯಾದ ಹಾದಿಯಲ್ಲಿ ಕರೆದೊಯ್ದರೆ ಮಾತ್ರ ದೇಶವು ಬದಲಾವಣೆ ಹೊಂದುವುದಕ್ಕೆ ಸಾಧ್ಯ. ಪ್ರತಿಯೊಂದು ಶಾಲಾ ಕಾಲೇಜುಗಳಲ್ಲೂ ದೇಶದ ಬಗೆಗಿನ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಒಡಮೂಡಿಸುವ ಕಾರ್ಯ ಆಗಬೇಕಿದೆ. ಹಾಗಾದಾಗ ಮಾತ್ರ ದೇಶದ ಭವಿಷ್ಯ ಮತ್ತಷ್ಟು ಸುಂದರವಾಗಿರಲು ಸಾಧ್ಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ, ಯಾವುದು ನಮಗೆ ತಿಳಿದಿರುವುದಿಲ್ಲವೋ ಅದನ್ನು ತಿಳಿಯುವುದೇ ಶಿಕ್ಷಣ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದಕ್ಕೂ ಶಿಕ್ಷಣದ ಅಗತ್ಯವಿದೆ. ನಮ್ಮ ತಪ್ಪುಗಳನ್ನು ನಾವು ತಿದ್ದಿಕೊಂಡಾಗ ಪಡೆದ ಶಿಕ್ಷಣಕ್ಕೆ ಅರ್ಥ ದೊರಕುವುದಕ್ಕೆ ಸಾಧ್ಯ ಎಂದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ವಂದಿಸಿ, ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಮಖರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು.


ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ತಿಲಕವನ್ನಿತ್ತು ಆಡಳಿತ ಮಂಡಳಿ ಹಾಗೂ ಗುರುವೃಂದದವರು ಸ್ವಾಗತಕೋರಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top