ವಿದ್ಯಾರ್ಥಿಗಳಿಗೆ ಸ್ವಯಂರಕ್ಷಣೆ ಕಲೆಯ ಅಗತ್ಯವಿದೆ : ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ವಿದ್ಯಾರ್ಥಿಗಳಿಗೆ ಸ್ವಯಂರಕ್ಷಣೆಯ ಕಲೆಯನ್ನು ಕಲಿಸಿಕೊಡಬೇಕಾಗಿದೆ. ತನ್ಮೂಲಕ ತಮ್ಮನ್ನು ತಾವು ಸಂಭಾವ್ಯ ಅಪಾಯಗಳಿಂದ ತಪ್ಪಿಸಿಕೊಳ್ಳುವಂತೆ ಮಕ್ಕಳನ್ನು ತಯಾರು ಮಾಡಬೇಕು. ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ಅಂತಹ ಯೋಜನೆಯಲ್ಲಿ ಜಾರಿಗೊಳಿಸುವ ಇರಾದೆಯಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ಹೆತ್ತವರ ಸಭೆಯನ್ನುದ್ದೇಶಿಸಿ ಗುರುವಾರ ಮಾತನಾಡಿದರು.
ತಮ್ಮ ಮಕ್ಕಳು ಕಾಲೇಜಿಗೆ ತೆರಳಿದ ನಂತರ ಯಾವ ಯಾವ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ, ಅವರ ಹವ್ಯಾಸಗಳೇನು ಎಂಬುದರ ಬಗೆಗೆ ಹೆತ್ತವರು ಗಮನಿಸುತ್ತಿರಬೇಕು. ಆಗಿಂದಾಗ್ಗೆ ಅಚಾನಕ್ಕಾಗಿ ಕಾಲೇಜಿಗೆ ಬಂದು ಮಕ್ಕಳ ಒಟ್ಟು ಬೆಳವಣಿಗೆಯ ಬಗೆಗೆ ಮಾಹಿತಿ ಪಡೆಯುತ್ತಿರಬೇಕು. ಹೆತ್ತವರು ತಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಭಾವನೆ ಮಕ್ಕಳಲ್ಲಿ ಒಡಮೂಡುವಂತಾಗಬೇಕಾದ್ದು ಅತ್ಯಂತ ಅಗತ್ಯ. ಒಮ್ಮೆ ಮಕ್ಕಳು ಕೈಮೀರಿ ಹೋದರೆ ನಂತರ ಸರಿದಾರಿಗೆ ತರುವುದು ಅತ್ಯಂತ ಕ್ಲಿಷ್ಟಕರ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಕಾಲೇಜಿನ ವಾತಾವರಣವನ್ನು ಮತ್ತಷ್ಟು ಅಧ್ಯಯನಪರ ಹಾಗೂ ವಿದ್ಯಾರ್ಥಿಪರವಾಗಿ ರೂಪಿಸುವಲ್ಲಿ ನಿರಂತರ ಶ್ರಮ ನಡೆಯುತ್ತಿದೆ. ಹೊಸಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಹೆತ್ತವರ ಮತ್ತು ಶಿಕ್ಷಕರ ಒಡನಾಟ ಹೆಚ್ಚಿದಷ್ಟೂ ಮಕ್ಕಳ ಶೈಕ್ಷಣಿಕ ಗುಣಮಟ್ಟ ವೃದ್ಧಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ರಾಮ ಭಟ್ ಕೆದಿಮಾರ್ ಮಾತನಾಡಿ ಶಿಕ್ಷಣ ಸಂಸ್ಥೆಗಳಲ್ಲಿ ಹೆತ್ತವರ ಸಭೆ ಆಯೋಜನೆ ಮಾಡಿದಾಗ ಪ್ರತಿಯೊಬ್ಬ ಹೆತ್ತವರೂ ಅದಕ್ಕೆ ಸ್ಪಂದಿಸಬೇಕಾದದ್ದು ಧರ್ಮ. ನಮ್ಮ ಮಕ್ಕಳ ಬಗೆಗೆ ನಾವು ನಿರಂತರ ಕಾಳಜಿ ತೋರಿಸಿದಾಗ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ನಿಕಟಪೂರ್ವ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಉಪಸ್ಥಿತರಿದ್ದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಸ್ವಾಗತಿಸಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಕಾವ್ಯಾ ಭಟ್ ವಂದಿಸಿದರು. ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಕಾರ್ಯಕ್ರಮ ಕಾರ್ಯಕ್ರಮ ನಿರ್ವಹಿಸಿದರು.