ಬೆಂಗಳೂರು: 1990 ರ ಅವಧಿಯಲ್ಲಿ ಬೆಂಗಳೂರು ತನ್ನ ವಿಸ್ತೀರ್ಣವನ್ನು ಹಿರಿದು ಮಾಡಿಕೊಂಡ ಸಮಯ ಈ ಅವಧಿಯಲ್ಲೇ ಅನೇಕ ಹೊಸ ಬಡಾವಣೆಗಳು ಬೆಂಗಳೂರಿನಲ್ಲಿ ನಿರ್ಮಾಣಗೊಂಡವು. ಅಂತಹ ಬಡಾವಣೆಗಳಲ್ಲಿ ಕೋಣನ ಕುಂಟೆಯಲ್ಲಿ ಸಹ ಅನೇಕ ಬಡಾವಣೆಗಳ ನಿರ್ಮಾಣವಾಯಿತು. ಸರಿ ಸುಮಾರು 1996ರಲ್ಲಿ ಅನೇಕ ಮಂದಿ ಸಮಾನ ಮನಸ್ಕರು ಸೇರಿ ರಾಯರ ಆರಾಧನೆಯನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದರು. ನಂತರ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ತನ್ಮೂಲಕ ಬೃಹತ್ತಾದ ನಿವೇಶನವನ್ನು ಖರೀದಿಸಿ ರಾಯರ ಮಠದ ನಿರ್ಮಾಣಕ್ಕೆ ಪರಮ ಪೂಜ್ಯ ಶ್ರೀ ರಘುಭೂಷಣ ತೀರ್ಥರು, ಪೀಠಾಧಿಪತಿಗಳು, ಬಾಳಗಾರು ಅಕ್ಷೋಭ್ಯಾ ಮಠ ಅವರ ಅಮೃತ ಹಸ್ತದಿಂದ ಭೂಮಿ ಪೂಜೆಯನ್ನು ಮಾಡಿಸಲಾಯಿತು.
ದಿನಾಂಕ 7. 2. 2007 ಮಾಘ ಬಹುಳ ಪಂಚಮಿಯಂದು ನಡೆದಾಡುವ ರಾಯರು ಎಂದು ಬಿರುದಾಂಕಿತರಾಗಿದ್ದ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಶಮೀಂದ್ರ ತೀರ್ಥರ ಅಮೃತ ಹಸ್ತದಿಂದ ರಾಯರ ಮೂಲ ಮೃತಿಕಾ ಬೃಂದಾವನದ ಪ್ರತಿಷ್ಠಾಪನೆ ಮಾಡಿಸಲಾಯಿತು. ರಾಯರ ತತ್ವ ಜ್ಞಾನ ಪ್ರಸರಕ್ಕಾಗಿಯೆ ಮೀಸಲಿರುವ ಮಠ ಎಂಬ ಮಾತು ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ. ಅನೇಕ ಮಂದಿ ಪೀಠಾಧಿಪತಿಗಳಿಂದ ನಾಡಿನ ಹೆಸರಾಂತ ವಿದ್ವನ್ಮಣಿಗಳಿಂದ ಅನೇಕ ವಿಚಾರಗಳ ಬಗ್ಗೆ ವಿದ್ವತ್ಪೂರ್ಣವಾದ ಪ್ರವಚನಗಳನ್ನು ಆಯೋಜಿಸಿದ ಕೀರ್ತಿ ಕೋಣನಕುಂಟೆ ರಾಯರ ಮಠಕ್ಕೆ ಸಲ್ಲುತ್ತದೆ.
ಕಲಿಯುಗದ ಕಾಮಧೇನು ಕಲ್ಪವೃಕ್ಷ ಚಿಂತಾಮಣಿಗಳಾದ ಶ್ರೀಮದ್ ರಾಘವೇಂದ್ರ ಸ್ವಾಮಿಗಳ 351 ನೇ ಆರಾಧನಾ ಮಹೋತ್ಸವವು ದಿನಾಂಕ 12.8.22, 13.8.22, 14.8.22 ಶುಕ್ರವಾರ ಶನಿವಾರ ಹಾಗು ಭಾನುವಾರ ಗಳಂದು ದೇಶಾದ್ಯಂತ ಅತ್ಯಂತ ಸಂಭ್ರಮ ಮತ್ತು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು. ಬೆಂಗಳೂರಿನ ಕೋಣನಕುಂಟೆಯಲ್ಲಿ ಈ ಬಾರಿ ಶ್ರೀ ಮದ್ ರಾಘವೇಂದ್ರ ಗುರುರಾಜರ 25ನೇ ವರ್ಷದ ಆರಾಧನಾ ಮಹೋತ್ಸವ ಸಮಾರಂಭ ನಡೆಯಲಿದೆ ತತ್ ಸಂಬಂಧವಾಗಿ ಅನೇಕ ಧಾರ್ಮಿಕ, ಸಾಂಸ್ಕೃತಿಕ, ಜ್ಞಾನ ಯಜ್ಞ ವನ್ನೂ ಹಮ್ಮಿಕೊಳಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷರಾದ ಡಾ|| ಅನಂತ ಪದ್ಮನಾಭ ರಾವ್ ಅವರು ತಿಳಿಸಿದ್ದಾರೆ.
ದಿನಾಂಕ 11. 8.22 ಗುರುವಾರದಂದು ಸಂಜೆ 6.30ಕ್ಕೆ ಬೆಂಗಳೂರಿನ ಗಿರಿನಗರದ ಭಾಗವತ ಆಶ್ರಮದ ಸಂಸ್ಥಾಪಕರು, ಭಂಡಾರಿಕೇರಿ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ 1008 ಶ್ರೀ ವಿದ್ಯೇಶ ತೀರ್ಥ ಶ್ರೀಪಾದಂಗಳವರು ಕೋಣನ ಕುಂಟೆಯ ಕ್ಷೇತ್ರ ಸ್ವಾಮಿಯಾದ ಶ್ರೀ ಶ್ರೀನಿಧಿ ಶ್ರೀನಿವಾಸ ದೇವರ ಶೇಷ ವಸ್ತ್ರವನ್ನ ಉತ್ಸವರಾಯರಿಗೆ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಟಿಸಲಿದ್ದಾರೆ ಎಂದು ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀಯುತ ಪಿ. ಎನ್. ಫಣಿ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಆರಾಧನಾ ದಿನಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಜ್ಞಾನಕಾರ್ಯ, ವಿಶೇಷ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಭಜನೆ, ಶ್ರೀ ರಾಘವೇಂದ್ರರ ಸ್ವಾಮಿಗಳ ಮೂಲ ಮೃತ್ತಿಕಾ ಬೃಂದಾವನಕ್ಕೆ ವಿಶೇಷ ಅಲಂಕಾರವಿರುತ್ತದೆ ಹಾಗು ಸಂಜೆ 6.30ಕ್ಕೆ ಉತ್ಸವ ರಾಯರಿಗೆ ವಿಶೇಷ ಅಲಂಕಾರ, ಗಜವಾಹನ, ರಜತ ಪಲ್ಲಕ್ಕಿ, ರಜತ ರಥೋತ್ಸವ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ನಾಡಿನ ಹೆಸರಾಂತ ಯುವ ಕಲಾವಿದರು ನಡೆಸಿ ಕೊಡಲಿದ್ದಾರೆ 12.8.22 ರಂದು ಕುಮಾರಿ ಹೇಮಾ ಎಸ್. ಕೆ. ಅವರ ನೃತ್ಯ ಸೇವೆ, 13.8.22ರಂದು ಪ್ರವೀಣ್ ಪ್ರದೀಪ್ ಸಹೋದರರ ಸಂಗೀತ ಸೇವೆ ಹಾಗು 14.8.22ರಂದು ಶ್ರೀಯುತ ಶ್ರೀವತ್ಸ ಅವರು ವೀಣಾ ವಾದನ ಸೇವೆಯನ್ನು ಸಲ್ಲಿಸುವರು ಎಂದು ಖಜಾಂಚಿಗಳಾದ ಶ್ರೀಯುತ ವಿ. ಆರ್. ಹರಿ ಅವರು ತಿಳಿಸಿದ್ದಾರೆ . ಈ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಘವೇಂದ್ರ ಸ್ವಾಮಿಗಳ ಭಕ್ತರು ಭಾಗವಹಿಸಿ ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.