ಮಂಜೇಶ್ವರ: ಸುಮಾರು 6 ದಶಕಗಳ ಕಾಲ ಮಂಜೇಶ್ವರದ ಜನರ ಆರೋಗ್ಯವನ್ನು ಸುಧಾರಿಸಲು ಪ್ರಾಮಾಣಿಕವಾಗಿ ದುಡಿದಿದ್ದೇನೆ. ವೈದ್ಯ ವೃತ್ತಿಯ ರಾಜಧರ್ಮವನ್ನು ಪಾಲಿಸಲು ನಿರಂತರ ಪ್ರಯತ್ನ ಮಾಡಿದ್ದೇನೆ. ಎಲ್ಲಾ ಧರ್ಮದ, ಜಾತಿಯ ಮತ್ತು ಪಂಗಡದ ಜನರ ವಿಶ್ವಾಸ ಮತ್ತು ಗೌರವ ಪಡೆದಿರುವುದು ನನ್ನ ಭಾಗ್ಯವೇ ಸರಿ. ನನ್ನನ್ನು ಹರಸಿ, ಬೆಳೆಸಿ ಪೋಷಿಸಿದ ಮಂಜೇಶ್ವರದ ಜನತೆಗೆ ಆಭಾರಿಯಾಗಿದ್ದೇನೆ ಎಂದು ಖ್ಯಾತ ಕುಟುಂಬ ವೈದ್ಯ, ಯಕ್ಷಗಾನ ಕಲಾವಿದ, ವೈದ್ಯ ಸಾಹಿತಿ ಡಾ|| ರಮಾನಂದ ಬನಾರಿ ಅಭಿಪ್ರಾಯಪಟ್ಟರು.
ಸೋಮವಾರ (ಆ.1) ಮಂಜೇಶ್ವರದ ರಾಜಕೀಯ ಧಾರ್ಮಿಕ, ಸಾಮಾಜಿಕ ಮತ್ತು ವೈದ್ಯಕೀಯ ಮುಖಂಡರ ತಂಡ ಡಾ|| ಬನಾರಿ ಅವರ ಮನೆಗೆ ತೆರಳಿ ಅವರಿಗೆ ಫಲ ಪುಷ್ಪ ನೀಡಿ ಹಾರ ಹಾಕಿ ಶಾಲು ಹೊದಿಸಿ ಸನ್ಮಾನ ಮಾಡಿ ಬನಾರಿ ದಂಪತಿಗಳ ಆಶೀರ್ವಾದ ಪಡೆದರು. ರಾಜಕೀಯ ನೇತಾರ ಹಾಗೂ ಪತ್ರಕರ್ತ ಹರ್ಷದ್ ವರ್ಕಾಡಿ, ಧಾರ್ಮಿಕ ಮುಂದಾಳು ಹಾಗೂ ಯಕ್ಷಗಾನ ಸಂಘಟಕ ಸತೀಶ್ ಅಡಪ, ರಾಜಕೀಯ ಧುರೀಣ ಜಯಾನಂದ, ಹಿರಿಯ ಕುಟುಂಬ ವೈದ್ಯ ಡಾ|| ಶಿವರಾಮ, ಖ್ಯಾತ ದಂತ ವೈದ್ಯೆ ಡಾ|| ರಾಜಶ್ರೀ ಮೋಹನ್, ವೈದ್ಯ ಸಾಹಿತಿ ಹಾಗೂ ಬಾಯಿ, ಮುಖ, ದವಡೆ ಶಸ್ತ್ರ ಚಿಕಿತ್ಸಕ ಡಾ|| ಮುರಲೀ ಮೋಹನ್ ಚೂಂತಾರು, ಛಾಯಾ ಗ್ರಾಹಕ ಪ್ರಭಾಕರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸತೀಶ್ ಅಡಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಾನಂದ ಮತ್ತು ಡಾ|| ಶಿವರಾಮ ಶುಭ ಹಾರೈಸಿದರು. ಹರ್ಷದ್ ವರ್ಕಾಡಿ ವಂದಿಸಿದರು. ಡಾ|| ಮುರಲೀ ಮೋಹನ್ ಚೂಂತಾರು ಮತ್ತು ಡಾ|| ರಾಜಶ್ರೀ ಮೋಹನ್ ಚೂಂತಾರು ದಂಪತಿಗಳು ಬನಾರಿ ದಂಪತಿಗೆ ಸನ್ಮಾನ ಮಾಡಿ ಶುಭಹಾರೈಸಿದರು.