ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಕೌನ್ಸೆಲಿಂಗ್ ಸೆಂಟರ್ ವತಿಯಿಂದ ಕಾಮರ್ಸ್ ಹಾಲ್‍ನಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಿಗೆ ತರಬೇತಿ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳ ಕರ್ತವ್ಯ ಹಾಗೂ ಜವಬ್ದಾರಿಗಳ ಕುರಿತು ತರಬೇತಿ ನೀಡಿದ ಮನಃಶಾಸ್ತ್ರಜ್ಞ ಅಜಿತ್ ಡಿಸೋಜಾ ಮಾತನಾಡಿ, ಹಾಸ್ಟೆಲ್‍ಗಳಲ್ಲಿ ಪ್ರತಿಯೊಂದು ವಿದ್ಯಾರ್ಥಿಯ ವಿಶ್ವಾಸವನ್ನು ಗಳಿಸಿಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ. ವಿದ್ಯಾರ್ಥಿ ನಿಲಯ ಪಾಲಕರು ವೃತ್ತಿ ಸವಾಲುಗಳನ್ನು ಎದುರಿಸುವ ಸಾಮಥ್ರ್ಯ ಹೊಂದಿರಬೇಕು. ವಿಭಿನ್ನ ಮನಸ್ಥಿತಿಯ ಮಕ್ಕಳೊಂದಿಗೆ ಬಹಳ ತಾಳ್ಮೆಯಿಂದ ನಡೆದುಕೊಂಡು ತಮ್ಮ ವೃತ್ತಿಯನ್ನು ಪ್ರೀತಿಸಬೇಕು. ಆಗ ಮಾತ್ರ ಮಾಡುವ ಕೆಲಸದಲ್ಲಿ ತೃಪ್ತಿ ಹೊಂದಲು ಸಾಧ್ಯ ಎಂದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ. ಸದಾಕತ್ ಮಾತನಾಡಿ, ವಿಭಿನ್ನ ಮನೋಭಾವದ ವಿದ್ಯಾರ್ಥಿಗಳನ್ನು ಒಂದೇ ದೃಷ್ಠಿಯಿಂದ ನಿಲಯ ಪಾಲಕರು ನೋಡಬಾರದು. ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯತೆಗಳಿಗೆ ಪಾಲಕರು ಸ್ಪಂದಿಸುವುದು ಮುಖ್ಯವಾಗಿರುತ್ತದೆ. ರಾಜ್ಯದ ಮೂಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲು ಆಳ್ವಾಸ್ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಶಿಕ್ಷಣದೊಂದಿಗೆ ಬದುಕಿನ ಹೊಂದಾಣಿಕೆಯನ್ನು ಅರಿಯಲು ವಿದ್ಯಾರ್ಥಿಗಳಿಗೆ ಆಳ್ವಾಸ್ ವಸತಿ ನಿಲಯಗಳು ವ್ಯವಸ್ಥೆ ಮಾಡಿಕೊಟ್ಟಿದೆ. ಮಕ್ಕಳ ಮನಸ್ಥಿತಿಯನ್ನು ಅರಿತುಕೊಂಡು ಅವರ ಮನಸ್ಸಿಗೆ ಘಾಸಿಯಾಗದಂತೆ ಚಾಣಕ್ಷತನದಿಂದ ಕೆಲಸ ನಿರ್ವಹಿಸಿ ಎಂದರು.
ಕೌನ್ಸೆಲಿಂಗ್ ವಿಭಾಗದ ಮುಖ್ಯಸ್ಥೆ ರೆನಿಟಾ ಡಿಸೋಜಾ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಹರಿಪ್ರಸಾದ್ ಹಾಗೂ ಆಳ್ವಾಸ್ ವಿದ್ಯಾರ್ಥಿ ನಿಲಯಗಳ ಪಾಲಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕೌನ್ಸೆಲಿಂಗ್ ಅಧಿಕಾರಿ ಸವಿತಾ ಮೋನಿಸ್ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ನಾರಾಯಣ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ