|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾಗವತ ಪೊಳಲಿ ದಿವಾಕರ ಆಚಾರ್ಯರಿಗೆ ವಾಗೀಶ್ವರೀ ಶತಮಾನೋತ್ಸವ ಸಂಮಾನ

ಭಾಗವತ ಪೊಳಲಿ ದಿವಾಕರ ಆಚಾರ್ಯರಿಗೆ ವಾಗೀಶ್ವರೀ ಶತಮಾನೋತ್ಸವ ಸಂಮಾನ


ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ಶ್ರೀ ವಾಗೀಶ್ವರೀ ಯಕ್ಷಗಾನ ಸಂಘದ ಶತಮಾನೋತ್ಸವದ 21 ನೆಯ ಸರಣಿ ಕಾರ್ಯಕ್ರಮ ಶ್ರೀ ಮಹಮ್ಮಾಯಿ ದೇವಸ್ಥಾನದ ಸನ್ನಿಧಿಯಲ್ಲಿ ಜರಗಿತು. ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಅಧ್ಯಕ್ಷ ಶ್ರೀ ಶ್ರೀನಾಥ್ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ ರಾವ್ ಕೀರ್ತಿಶೇಷ ಸೀತಾರಾಮ ಕರುಣಾಕರ ಇವರ ಸಂಸ್ಮರಣೆಯನ್ನು ಮಾಡಿದರು. ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ಕೀರ್ತಿಶೇಷ ಬಾಬು ಪಂಡಿತರ ಮೊಮ್ಮಗ, ಸಂಘದ ಕಾರ್ಯದರ್ಶಿಯಾಗಿ ಹಲವು ವರುಷ ಸಂಘವನ್ನು ಮುನ್ನಡೆಸಿದವರು ಶ್ರೀ ಸೀತಾರಾಮ ಕರುಣಾಕರ. ಹಿರಿಯ ಪ್ರಸಿದ್ಧ ಅರ್ಥಧಾರಿಗಳೊಂದಿಗೆ ಕೂಟದಲ್ಲಿ ಭಾಗವಹಿಸಿದ ಪ್ರತಿಭಾವಂತರು. ಹಿಂದಿ ಅಧ್ಯಾಪಕರಾಗಿದ್ದರೂ ಯಕ್ಷಗಾನ ಕಲಾ ಸೇವೆಯನ್ನು ಅತ್ಯಂತ ನಿಷ್ಠೆಯಿಂದ ಗೈದ ಕಲಾವಿದ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.


ವೇಷಧಾರಿಯಾಗಿ ತನ್ನ 18 ನೆಯ ವಯಸ್ಸಿನಲ್ಲಿ ಯಕ್ಷಗಾನ ಕಲೆಯತ್ತ ಮುಖ ಮಾಡಿದ ಶ್ರೀ ದಿವಾಕರ ಆಚಾರ್ಯರ ಅಭಿನಂದನೆಯನ್ನು ಸಂಜಯ ಕುಮಾರ್ ಮಾಡಿದರು. ಮಾಂಬಾಡಿ ಸುಬ್ರಹ್ಮಣ್ಯ ಭಟ್ ಹಾಗೂ ಅರ್ಬಿ ದೊಡ್ಡಣ್ಣ ಶೆಟ್ಟರಲ್ಲಿ ಭಾಗವತಿಕೆ ಅಭ್ಯಾಸ ಮಾಡಿದ ಬಳಿಕ, ಇವರು ತನ್ನ ಕಂಠ ಸಿರಿಯಿಂದ ಭಾಗವತಿಕೆಯಲ್ಲಿ ಪ್ರಖ್ಯಾತಿ ಪಡೆದರು. ಪರಂಪರಾಗತ ಶೈಲಿಯಲ್ಲಿ ಹಾಡುವ ಓರ್ವ ಉತ್ತಮ ಭಾಗವತರಾಗಿ ಗುರುತಿಸಲ್ಪಟ್ಟಿದ್ದಾರೆ. ದಿವಾಕರ ಆಚಾರ್ಯ ಪೊಳಲಿ ಇವರನ್ನು ಪರಿಚಯಿಸಿದರು.


ಸಂಮಾನಕ್ಕೆ ಉತ್ತರಿಸಿದ ಶ್ರೀ ದಿವಾಕರ ಆಚಾರ್ಯರು, ನನಗೊಂದು ಇಲ್ಲಿ ಸಂಮಾನ ದೊರೆಯಬಹುದೆಂಬ ಕಲ್ಪನೆಯೇ ಇರಲಿಲ್ಲ.ನನ್ನಲ್ಲಿರುವ ಕಲೆಯಿಂದ ನನಗೆ ಈ ಸಂಮಾನ ದೊರೆತಿರುವುದು ಸಂತೋಷ ಎಂದರು. ಅತಿಥಿಯಾಗಿ  ನರೇಶ್ ಸಸಿಹಿತ್ಲು ಆಗಮಿಸಿದ್ದರು.


ರಂಗಭೂಮಿಯ, ಸಿನೆಮಾ ಕಲಾವಿದನಾದ ನಾನು ಯಕ್ಷಗಾನದ ದೊಡ್ಡ ಅಭಿಮಾನಿ. ಮನೆಯ ಶುಭ ಕಾರ್ಯಗಳಲ್ಲಿ ಯಕ್ಷಗಾನವನ್ನು ಆಯೋಜಿಸುತ್ತೇವೆ. 100 ವರ್ಷ ತುಂಬಿದ ಈ ಸಂಘ ಇನ್ನೂ ಹಲವು ವರ್ಷ ಕಲಾ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿ ಉಮೇಶ್ ಆಚಾರ್ಯ ಗೇರುಕಟ್ಟೆ, ಸಂಘದಲ್ಲಿ ಅರ್ಥ ಹೇಳಿದ ತನ್ನ ಹಿಂದಿನ ದಿನಗಳನ್ನ್ನು ಸ್ಮರಿಸಿಕೊಂಡರು.


ಸುಮಾರು 40 ವರ್ಷಗಳ ಹಿಂದೆ ಸಂಘದಲ್ಲಿ ಸಕ್ರಿಯರಾಗಿದ್ದ ಈಗ ಕೀರ್ತೀಶೇಷರಾಗಿರುವ ಶ್ರೀ ಗೋವಿಂದನವರು, ಮಂದಾರ ಕೇಶವ ಭಟ್ಟರು, ಎನ್. ಮಾಧವ ಆಚಾರ್ಯರು, ಸೀತಾರಾಮ ಕರುಣಾಕರ, ನರಸಿಂಹ ಪ್ರಭು ಮೊದಲಾದವರನ್ನು ಸ್ಮರಿಸಿಕೊಂಡರು.


ಅವರ ಕಲಾ ಪ್ರೇಮ, ಕಲೆಯ ಉಳಿವಿಗಾಗಿ ಅವರ ಪ್ರಾಮಾಣಿಕ ಪ್ರಯತ್ನ ಸದಾ ನೆನಪಿನಲ್ಲಿರಿಸಬೇಕು. ಬೇರೆ ಬೇರೆ ಕಡೆಗಳಲ್ಲಿ ಕಾರ್ಯಕ್ರಮ ನೀಡುವ ಮೂಲಕ ನಮ್ಮ ಸಂಘದ ಹೆಸರು ಮುನ್ನೆಲೆಗೆ ಬಂದಿತ್ತು. ಸುತ್ತ ಹಲವು ದೇವಸ್ಥಾನಗಳುಳ್ಳ ಮಹಾಮಾಯಿ ದೇವಸ್ಥಾನದ ಸಂಘ ಹತ್ತಿರದಲ್ಲಿದ್ದ ಎಲ್ಲಾ ಸಂಘಗಳಿಗಿಂತ ಎತ್ತರದ ಸ್ಥಾನ ಪಡೆದಿತ್ತು ಎಂದರು.


ಸಂಘದ ಕೋಶಾಧಿಕಾರಿ ಶಿವಪ್ರಸಾದ್ ಪ್ರಭು ಸಂಮಾನ ಪತ್ರವನ್ನು ವಾಚಿಸಿದರು. ಶ್ರೀಮತಿ ಪ್ರಫುಲ್ಲಾ ನಾಯಕ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೆ ಮುನ್ನ "ಅಂಗದ ಸಂಧಾನ" ತಾಳಮದ್ದಳೆ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಜರಗಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post