ಬೆಂಗಳೂರು: ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರ 'ವಂದೇ ಗುರು ಪರಂಪರಾಂ' ಕೃತಿಯ ತೆಲುಗು ಅವತರಣಿಕೆಯನ್ನು ಶಿಕ್ಷಣ ತಜ್ಞ, ಸಾಹಿತಿ ಮತ್ತೂರು ಸುಬ್ಬಣ್ಣ ಅವರು ಬಿಡುಗಡೆಗೊಳಿಸಿದರು.
ಡಾ. ಗುರುರಾಜ ಪೋಶೆಟಿಹಳ್ಳಿರವರು ಬರೆದಿರುವ ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಮಹತ್ತ್ವದ ಬಗ್ಗೆ ಕನ್ನಡದಲ್ಲಿ ಈ ಬಗೆಯ ಪುಸ್ತಕ ಇದೇ ಮೊದಲನ್ನೆಬಹುದು. ಶ್ರೀ ಗುರುವಿನ ಮಹಿಮೆ ಅಪಾರ– ಅನಂತ. ಅವರ ಹಿರಿಮೆ- ಗರಿಮೆ ಸಾರುವ ಈ ಕೃತಿ ತಿರುಪತಿಯಲ್ಲಿ ವಾಸವಿರುವ ಶ್ರೀಮತಿ ಸಂಧ್ಯಾ ರವಿಕುಮಾರ್ ಅತಿ ಅಲ್ಪಾವಧಿಯಲ್ಲೇ ಚೆನ್ನಾಗಿ ತೆಲುಗಿಗೆ ಅನುವಾದಿಸಿದ್ದಾರೆ. ಕನ್ನಡದ ಪ್ರತಿಬಿಂಬದಂತೆ ಅನುವಾದ ಮಾಡಿರುವ ಅವರ ಭಾಷಾಶೈಲಿ- ಸೊಗಸನ್ನು ಓದಿಯೇ ಸವಿಯ ಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಹೊಸಪೇಟೆಯ ಬಳ್ಳಾರಿ ರಸ್ತೆಯ ಜೆ.ಪಿ. ಭವನದಲ್ಲಿ, ಶ್ರೀ ಅಚ್ಯುತ ಯೋಗ ವಿದ್ಯಾಪೀಠದ ವತಿಯಿಂದ ಏರ್ಪಡಿಸಲಾದ ಪ್ರಭು ಶ್ರೀ ಯೋಗಿ ಅಚ್ಯುತರ 118ನೇ ಜನ್ಮದಿನಾಚರಣೆ ಮತ್ತು ಅವರ ಶಿಷ್ರಾದ ಸ್ವಾಮಿ ಶ್ರೀ ವಿಜಯೀಂದ್ರರು ಮತ್ತು ಶ್ರೀ ಸ್ವಾಮಿ ಜಯತೀರ್ಥರ ಜನ್ಮಶತಮಾನೋತ್ಸವದ ಸಮಾರೋಪ ಸಂದರ್ಭದಲ್ಲಿ ಈ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಯ- ವಿಜಯ ಶತಮಾನೋತ್ಸವ ಗ್ರಂಥಮಾಲಾ ಅಡಿಯಲ್ಲಿ ಪ್ರಕಟಿಸಲಾದ ಒಟ್ಟು 6 ಕೃತಿಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಬಿ.ಎಸ್. ಭಾಸ್ಕರ ರಾವ್ ರವರ ‘ಶಾಂತಿ ಮಂತ್ರಗಳು ನೀಡುವ ಆದೇಶಗಳು’; ‘ನನ್ನ ಸಾಧನಾನುಭವಗಳು’, ಸುಧಾ ಭಾಸ್ಕರ ರಾವ್ ರವರ ‘ನ ಗುರೋರಧಿಕಂ’, ಡಾ.ಮೈತ್ರೇಯಿ ಆದಿತ್ಯ ಪ್ರಸಾದ್ ರವರ ‘ತೀರ್ಥ ಪ್ರಬಂಧ: ಸಾಂಸ್ಕೃತಿಕ, ಸಾಮಾಜಿಕ ಅಧ್ಯಯನ’, ದುವ್ವೂರಿ ಉದಯ ಭಾಸ್ಕರಂ ರವರ ‘ಶ್ರೀ ಅಚ್ಯುತ ಯೋಗ ವಿಜ್ಞಾನ ದೀಪಿಕಾ (ತೆಲುಗು)- ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಇತರ ಕೃತಿಗಳು.
ಯೋಗಿಗಳ ಕುರಿತು:
ಜೀವಾತ್ಮನು ಪರಮಾತ್ಮನನ್ನು ಸೇರುವ ವಿದ್ಯೆಯನ್ನೇ ‘ಯೋಗವಿದ್ಯೆ’ಯೆಂದು ಭಗವಂತನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ದುರಂತವೆಂದರೆ ಅದರ ತತ್ವದ ಆಳಕ್ಕೆ ಇಳಿದು ನೋಡಲಾರದವರಾಗಿದ್ದೇವೆ. ಯೋಗಶಾಸ್ತ್ರದ ವಿಚಾರಸರಣಿ (ಥಿಯರಿ)ಯನ್ನು ಪ್ರಾಯೋಗಿಕ (ಪ್ರಯೋಗ) ರೂಪದಲ್ಲಿ ಕಂಡುಕೊಂಡು ಜಿಜ್ಞಾಸುಗಳೆಲ್ಲ್ಲರಿಗೂ ಅದರ ಉಪದೇಶವನ್ನು ಕರುಣಿಸಿರುವ ಪ್ರಭುಯೋಗಿ ಶ್ರೀ ಅಚ್ಯುತ ಗುರುಗಳೇ ಈ ಪ್ರಾಯೋಗಿಕ ರೀತಿಯನ್ನು ಬೆಳಕಿಗೆ ತಂದು ಎಲ್ಲರಿಗೂ ನೀಡಿರುವ ಮಹನೀಯರಾಗಿದ್ದಾರೆ. ಅವರಿಂದ ಉಪದೇಶ ಪಡೆದ ಅವರ ಶಿಷ್ಯರಾದ ಸ್ವಾಮಿ ವಿಜಯೀಂದ್ರರು ಹಾಗೂ ಸ್ವಾಮಿ ಜಯತೀರ್ಥರು ಶ್ರೀ ಅಚ್ಯುತ ಯೋಗ ವಿದ್ಯಾಪೀಠದ ಮೂಲಕ ಸಾವಿರಾರು ಜನರಿಗೆ ತಲುಪಿಸಿದ್ದಾರೆ. ಪೂಜ್ಯ ಶಿಷ್ಯದ್ವಯರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಯೋಗ ವಿದ್ಯೆಗೆ ಸಂಬಂಧಿಸಿದ ಮತ್ತು ಅದಕ್ಕೆ ಪೂರಕವಾದ ಇತರ ವಿಷಯಗಳ ಕುರಿತು ಇಪ್ಪತ್ತೈದು ಪುಸ್ತಕಗಳನ್ನು ಪ್ರಕಟಿಸಲಾಗಿದೆ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದ ವಿದ್ಯಾಪೀಠದ ಕಾರ್ಯದರ್ಶಿ ಬೆಣ್ಣೆ ಭಾಸ್ಕರ ರಾವ್ ತಿಳಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ