
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯ ಆಯೋಜಿಸಿರುವ “ಎನ್ಇಪಿ 2020 ಗಾಗಿ ಗ್ರಂಥಾಲಯಗಳ ಪರಿವರ್ತನೆ”ಎಂಬ ಐದು ದಿನಗಳ ಕಾರ್ಯಾಗಾರವನ್ನು ವಿಶ್ವವಿದ್ಯಾಲಯದ ಎಂಎನ್ ವಿಶ್ವನಾಥಯ್ಯ ಸಭಾಂಗಣದಲ್ಲಿ ಸೋಮವಾರ ಉದ್ಘಾಟಿಸಲಾಯಿತು.
ತಮ್ಮ ಉದ್ಘಾಟನಾ ಭಾಷಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ.ವಿ ಜಿ ತಳವಾರ ಅವರು ಎನ್ಇಪಿಯ ಪ್ರಾಮುಖ್ಯತೆ ವಿವರಿಸುತ್ತಾ, ಅಂತರಶಿಸ್ತೀಯ ಮತ್ತು ಬಹುಶಿಸ್ತೀಯ ಅಧ್ಯಯನಗಳು ಮತ್ತು ಸಂಶೋಧನೆಗಳಿಗೆ ಒತ್ತು ನೀಡಲಾಗುತ್ತದೆ, ಎಂದರು. ಸಂಶೋಧನೆ ಮತ್ತು ಶೈಕ್ಷಣಿಕ ಲೇಖನಗಳ ಪ್ರಚಾರದಲ್ಲಿ ಆನ್ಲೈನ್ ಡೇಟಾಬೇಸ್ಗಳು ಮತ್ತು ತೆರೆದ ಮೂಲಗಳ ಎಲೆಕ್ಟ್ರಾನಿಕ್ ಸಂಪನ್ಮೂಲಗಳು, ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಜ್ಞಾನದ ಕೇಂದ್ರಗಳು ಎಂದು ಗ್ರಂಥಪಾಲಕರಿಗೆ ತಿಳುವಳಿಕೆ ನೀಡಿದರು.
ಗೌರವ ಅತಿಥಿ, ಮಂಗಳೂರು ವಿಶ್ವವಿದ್ಯಾನಿಲಯ ಗ್ರಂಥಾಲಯದ ನಿವೃತ್ತ ಗ್ರಂಥಪಾಲಕ ಡಾ.ಎಂ.ಕೆ.ಭಂಡಿ, ಗ್ರಂಥಾಲಯ ಸಂಪನ್ಮೂಲಗಳನ್ನು ನಿರ್ವಹಿಸುವ ಹೊಸ ಉಪಕರಣಗಳು, ತಂತ್ರಜ್ಞಾನಗಳು ಮತ್ತು ಕೌಶಲ್ಯಗಳನ್ನು ವಿವರಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು, ಎನ್ಇಪಿ-2020ರ ಯಶಸ್ಸಿನಲ್ಲಿ ಗ್ರಂಥಪಾಲಕರ ಪಾತ್ರ ಬಹುಮುಖ್ಯವಾಗಿದ್ದು, ಮಾಹಿತಿ ಪ್ರಸಾರದಲ್ಲಿ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ, ಎಂದು ಅಭಿಪ್ರಾಯಪಟ್ಟರು. ಗ್ರಂಥಾಲಯ ಆಧುನೀಕರಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯದ ಗ್ರಂಥಪಾಲಕ ಡಾ.ಪುರುಷೋತ್ತಮ ಗೌಡ ಎಂ ಸ್ವಾಗತಿಸಿ, ಎನ್ಇಪಿಯನ್ನು ಉತ್ತೇಜಿಸುವಲ್ಲಿ ಗ್ರಂಥಾಲಯಗಳ ಪಾತ್ರವನ್ನು ವಿವರಿಸಿದರು. ಡಾ.ಪ್ರೀತಿ ಕೀರ್ತಿ ಡಿʼಸೋಜಾ ಕಾರ್ಯಕ್ರಮ ನಿರೂಪಿಸಿ, ಸುಮಂಗಲಾ ಕೆ ಎಸ್ ವಂದಿಸಿದರು. 120 ಕ್ಕೂ ಹೆಚ್ಚು ಗ್ರಂಥಾಲಯ ವೃತ್ತಿಪರರು ಕಾರ್ಯಾಗಾರದಲ್ಲಿ ಭಾಗಿಯಾದರು.