ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ಶ್ರೀ ವಾಗೇಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಕಾರ್ಯಕ್ರಮದ 22 ಸರಣಿಯ ಕಾರ್ಯಕ್ರಮ ಇತ್ತೀಚೆಗೆ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಜರಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊಫೆಸರ್ ಜಿ.ಕೆ. ಭಟ್ ಸೇರಾಜೆ ಮಾತನಾಡುತ್ತ, ಯಕ್ಷಗಾನ ಸಂಘಗಳ ಕೊಡುಗೆಯನ್ನು ವಿವರಿಸಿದರು. "ತಾಳಮದ್ದಳೆಯ ಸಂಘಗಳಲ್ಲಿ ಅರ್ಥವನ್ನು ಹೇಳುವಂತಹ ಅಥವಾ ಹಿಮ್ಮೇಳವನ್ನು ನುಡಿಸುವಂತಹ ಕಲಾವಿದರು ಯಕ್ಷಗಾನ ಕ್ಷೇತ್ರದಲ್ಲಿ ಸಂಪೂರ್ಣ ಯಶಸ್ಸು ಪಡೆಯುತ್ತಾರೆ. ಹಾಗಾಗಿ ಯಕ್ಷಗಾನ ತಾಳಮದ್ದಳೆಯ ಸಂಘಗಳು ಈ ಕಲೆಯ ಉಳಿಯುವಿಕೆಯಲ್ಲಿ ಅತ್ಯಂತ ಸಹಕಾರಿ ಎಂದು ಹೇಳಿದರೂ ತಪ್ಪಾಗದು ಎಂದರು.
"ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘ ಕಲೆಯನ್ನು ಬೆಳೆಸುವಂತಹ ಕೆಲಸದ ಜೊತೆ ಕಲಾವಿದರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. 22 ವಾರಗಳ ಕಾರ್ಯಕ್ರಮದಲ್ಲಿ 22 ಅರ್ಹ ಕಲಾವಿದರನ್ನು ಗುರುತಿಸಿ ಅಂತಹ ಕಲಾವಿದರಿಗೆ ಸನ್ಮಾನವನ್ನು ಮಾಡಿರುವುದು ನಿಜಕ್ಕೂ ಸ್ತುತ್ಯರ್ಹವಾದದ್ದು. ಎಲೆಯ ಮರೆಯ ಕಾಯಿಯಂತೆ ಇದ್ದ ಕಲಾವಿದರನ್ನು ಗುರುತಿಸಿ ಮಾಡಿದ ಸನ್ಮಾನ ನಿಜಕ್ಕೂ ಅದ್ಭುತ" ಎಂದರು.
ಸನ್ಮಾನಿತರಾದ ಪೆರ್ಲ ಗಣಪತಿ ಭಟ್ ಇವರ ಅಭಿನಂದನೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಮಾಡಿದರು. ಪೆರ್ಲ ಗಣಪತಿ ಭಟ್ಟರು ಎಳವೆಯಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾದವರು. ಮುಂದೆ ಶೇಣಿ ಸುಬ್ರಮಣ್ಯ ಭಟ್ಟರಲ್ಲಿ ಶಾಸ್ತ್ರೀಯವಾಗಿ ಹಿಮ್ಮೇಳ ವಾದನವನ್ನು ಕಲಿತರು ಮಂಗಳೂರಿನಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ ಸಂದರ್ಭದಲ್ಲಿ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಕೃಷ್ಣ ರಾಜ ಭಟ್, ನಂದಳಿಕೆ ಇವರಿಂದ ಹಿಮ್ಮೇಳವನ್ನು ಅಭ್ಯಸಿಸಿ ಸುತ್ತ ಮುತ್ತಲಿನ ಎಲ್ಲಾ ಸಂಘಗಳಲ್ಲಿ ತಮ್ಮ ಕಲಾಸೇವೆಯನ್ನು ಗೈದಿದ್ದಾರೆ 1990ರಲ್ಲಿ ಕೃಷ್ಣರಾಜ ಮತ್ತು ಬಳಗ ಎನ್ನುವ ಸಂಘಟನೆಯ ಮೂಲಕ ಆಕಾಶವಾಣಿಯಲ್ಲಿಯೂ ತಾಳಮದ್ದಳೆಯನ್ನು ನೀಡುತ್ತಾ ಬರುತ್ತಿದ್ದಾರೆ. ಅತ್ಯಂತ ವಿನೀತ ಸ್ವಭಾವದ ಗಣಪತಿ ಭಟ್ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದಾರೆ ಎಂದರು.
ಕೀರ್ತಿಶೇಷ ನಾಗೇಶ ಸಾಲಿಯಾನರ ಸಂಸ್ಮರಣೆಯನ್ನು ಸಂಜಯ ಕುಮಾರ್ ಗೈದರು. ಅನೇಕ ವಿಶಿಷ್ಟ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದ ನಾಗೇಶ್ ಸಾಲಿಯಾನರು ಒಬ್ಬ ಅದ್ಭುತ ಸಂಘಟಕರಾಗಿದ್ದರು.
ಹವ್ಯಾಸಿಗಳನ್ನು ಯಕ್ಷಗಾನದತ್ತ ಆಕರ್ಷಿಸುವಲ್ಲಿ ಅವರಿಗಿದ್ದ ಆಸಕ್ತಿ ಇಂದು ಅನೇಕ ಕಲಾವಿದರನ್ನು ಯಕ್ಷಗಾನಕ್ಕೆ ಒದಗಿಸಿಕೊಟ್ಟಿದೆ. ಮಂಗಳೂರಿನ ನೆಹರು ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಒಂದು ಭಾಗವನ್ನು ಮೀಸಲಿರಿ ಸುವಲ್ಲಿ ಅವರ ಹೋರಾಟ ಅವಿಸ್ಮರಣೀಯ ಎಂದರು.
ಇನ್ನೊಬ್ಬ ಅತಿಥಿ ಬೆಟ್ಟಂಪಾಡಿ ಸುಂದರ ಶೆಟ್ಟಿ, ಯಕ್ಷಗಾನಕ್ಕಾಗಿ ತನ್ನ ಪ್ರಯತ್ನಗಳ ನ್ನು ವಿವರಿಸಿದರು. ವಿವಿಧ ರಾಜ್ಯಗಳಲ್ಲಿ ಉದ್ಯೋಗ ನಿಮಿತ್ತ ವಾಸ್ತವ್ಯವಿದ್ದಾಗ ಅಲ್ಲಿನ ಕನ್ನಡ ಸಂಘಗಳ ಮೂಲಕ ತಾಳಮದ್ದಳೆ ಕಾರ್ಯಕ್ರಮ ಆಯೋಜಿಸುತ್ತಿದ್ದೆ. ತಂದೆ ಬೆಟ್ಟಂಪಾಡಿ ಬಾಳಪ್ಪ ಶೆಟ್ಟರ ನೆನಪಿಗಾಗಿ, ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷಗಾನ ಪ್ರತಿಷ್ಟಾನದ ಮೂಲಕ ತಾಳಮದ್ದಳೆ, ಸಂಮಾನ ಕಾರ್ಯಕ್ರಮವನ್ನು ನಡೆಸುತ್ತಾ ಕಲಾ ಸೇವೆಯನ್ನು ಮಾಡುತ್ತಿದ್ದೇನೆ. ನೂರು ವರುಷ ಪೂರೈಸಿದ ಈ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದರು.
ಅಶೋಕ ಬೊಳೂರು ಸಂಮಾನ ಪತ್ರವನ್ನು ವಾಚಿಸಿದರು. ಶಿವಪ್ರಸಾದ್ ಪ್ರಭು, ಪ್ರಫುಲ್ಲಾ ನಾಯಕ್, ಶಿವಾನಂದ ಪೆರ್ಲಗುರಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ "ಅಂಗದ ಸಂಧಾನ" ತಾಳಮದ್ದಳೆ ಸಂಘದ ಕಲಾವಿದರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಜರಗಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ