ಮಂಗಳೂರು: ನಮ್ಮ ರಾಷ್ಟ್ರದಲ್ಲಿ ಸುಮಾರು ಒಂದು ಕೋಟಿ ಜನರು ಅಂಧತ್ವದಿಂದ ಬಳಲುತ್ತಿದ್ದಾರೆ. ನಾವು ಸತ್ತ ಬಳಿಕ ನಮ್ಮ ಕಣ್ಣುಗಳನ್ನು ದಾನ ಮಾಡುವುದರಿಂದ ನಾವು ಸತ್ತ ಬಳಿಕವೂ ನಾವು ಇತರರ ಬಾಳಿಗೆ ಬೆಳಕಾಗುವ ಅವಕಾಶ ನಮಗೆ ದೊರಕುತ್ತದೆ. ಈ ನಿಟ್ಟಿನಲ್ಲಿ ನಾವು ಕಣ್ಣಿದ್ದೂ ಕುರುಡರಾಗಿ ಬದುಕುವ ಬದಲು ಸತ್ತ ಬಳಿಕ ತಕ್ಷಣವೇ ನೇತ್ರದಾನ ಮಾಡಿ ಸತ್ತ ಬಳಿಕವೂ ಸಾರ್ಥಕತೆ ಪಡೆಯುವ ದೊಡ್ಡ ಮನಸ್ಸು ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ನುಡಿದರು.
ನಮ್ಮ ಭಾರತ ದೇಶದಲ್ಲಿ ಅತೀ ಹೆಚ್ಚು ಅಂಧರು ಇದ್ದು ವಿಶ್ವದ ಅಂಧತ್ವದ ರಾಜಧಾನಿ ಎಂಬ ಕುಖ್ಯಾತಿ ಗಳಿಸಿದೆ. ಈ ಕಾರಣದಿಂದ ಈ ಅಪಖ್ಯಾತಿಯಿಂದ ಹೊರಬರಬೇಕಾದಲ್ಲಿ ಹೆಚ್ಚು ಹೆಚ್ಚು ಜನರು ನೇತ್ರದಾನಕ್ಕೆ ಮುಂದಾಗಬೇಕು ಎಂದು ಅವರು ನುಡಿದರು.
ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ‘ನೇತ್ರದಾನ ನೋಂದಾಣಿ ಅಭಿಯಾನ’ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ‍್ಯಕ್ರಮ ಇದರ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾದಳ ಇದರ ಕಛೇರಿಯಲ್ಲಿ ನೇತ್ರದಾನ ನೋಂದಾಣಿ ಕಾರ‍್ಯಕ್ರಮ ದಿನಾಂಕ 26-08-2022 ರಂದು ಜರುಗಿತು.
ಈ ಸಂದರ್ಭದಲ್ಲಿ ಡಾ|| ಸುದರ್ಶನ್, ಜಿಲ್ಲಾ ಅಂಧತ್ವ ನಿಯಂತ್ರಣಾ ಅಧಿಕಾರಿಗಳು, ಶ್ರೀಮತಿ ಲವೀನಾ, ಜಿಲ್ಲಾ ಅಂಗಾಂಗದಾನ ಸಂಯೋಜಕರು ಉಪಸ್ಥಿತರಿದ್ದರು. ಸುಮಾರು 30 ಮಂದಿ ಗೃಹರಕ್ಷಕರು ಈ ಅಭಿಯಾನದಲ್ಲಿ ನೇತ್ರದಾನಕ್ಕೆ ನೋಂದಾಣಿ ಮಾಡಿಸಿದರು.