ಕೇಳದೆ ನಿಮಗೀಗ...
ಪೆನ್ನು 'ಕಾಲು'ಗಳನ್ನಿಟ್ಟಲ್ಲೆಲ್ಲ ಅಕ್ಷರ ಸೃಷ್ಟಿ ಆಗುತ್ತಿತ್ತು!!!
ಅದು ಒಂದೇ ಹೆಜ್ಜೆ ಇಟ್ಟರೆ ಬೀಜಾಕ್ಷರಿ!!
ಲೆಕ್ಕೆ ಹೆಚ್ಚಿಸುತ್ತಾ ದಾಪುಗಾಲಿಟ್ಟರೆ 'ಚತುರಾ'ಕ್ಷರಿ, ಪಂಚಾಕ್ಷರಿ... ಪದಗಳು!! ವಾಕ್ಯಗಳ ಮೆರವಣಿಗೆ!! ಪ್ಯಾರಗಳ ಸಮಾವೇಶ!!
ಅದು ಹತ್ತಿದ ಮೆಟ್ಟಿಲುಗಳೆಲ್ಲ ಹೊತ್ತಿಗೆ!!
ದೀರ್ಘ ಪಾದಯಾತ್ರೆ ಮಾಡಿದಲ್ಲೆಲ್ಲ ಮಹಾಕಾವ್ಯವೇ 'ನೆಡೆದು' ಹೋಯ್ತು!!
ಸಹಿ ಮಾಡಿದಲ್ಲಿ ಮೌಲ್ಯವರ್ಧನೆ!! ಬಂಗಾರದ ಬೆಲೆ ಬರೆದಿದ್ದೂ ಪೆನ್ನೆ!!
"ನಹಿ ಜ್ಞಾನೇನ ಸದೃಶಂ||- ಜ್ಞಾನ ಮಹಾಪವಿತ್ರವಾದುದ್ದು. ಅದಕ್ಕೆ ಸಾಟಿಯಾದ ಇನ್ನೊಂದು ಈ ಪ್ರಪಂಚದಲ್ಲಿಲ್ಲ" ಅಂತ ಗುರು ಹೇಳಿದಾಗ, ಒಪ್ಪಿ ಶಿರಸಾವಹಿಸಿ 'ಖಾಲಿ ಜಾಗದಲ್ಲಿ' ಬರೆದಿದ್ದು ಇದೇ ಪೆನ್ನು!! ಬಿಳಿ ಖಾಲಿ ಜಾಗಕ್ಕೆ ಬಣ್ಣ ತರಿಸಿದ್ದು ಕೂಡ ಇದೇ ಅಲ್ವಾ!!?
ಕಾಲದ ಕಾಲುಗಳು ಬದಲಾಯ್ತು!!!
ಅವತ್ತು ಜೊತೆಯಲ್ಲಿ ಶಾಲೆಗೆ ಬರುತ್ತಿದ್ದ, ಪಾಠ ಮಾಡುವಾಗ ಕೈಗೆ, ತಲೆಗೆ ಶಕ್ತಿ ಕೊಡುತ್ತಿದ್ದ, ವ್ಯವಹಾರಕ್ಕೆ ಹೊರಟರೆ ಹೃದಯದ ಪಕ್ಕದ ಜೇಬೇರುತ್ತಿದ್ದ ಪೆನ್ನು 'ಎಳೆಯ' ಮೊಬೈಲ್ ಬಂದ ಮೇಲೆ ತಿರಸ್ಕೃತ ದೋಣಿಯಾಯ್ತು, ಬೇಡದ ಅಂಬಿಗನಂತಾಗಿ ಹೋಯ್ತು!!?
ಎಷ್ಟು ಜನರ 'ಜೀವನ' ಪರೀಕ್ಷೆಗಳಿಗೆ 'ಉತ್ತರ' ಬರೆದಿತ್ತು ಈ ಪೆನ್ನು!!?
ಪೆನ್ನು ತನ್ನೆಲ್ಲ ಕೆಲಸವನ್ನು "ನನಗಿನ್ನಾಗುವುದಿಲ್ಲ" ಎನ್ನುತ್ತ, ಬೆಂಬಲವಾಗಿ ನಿಂತಿದ್ದ ಮಧ್ಯಮ, ತೋರು ಮತ್ತು ಥಮ್ಸ್‌ಪ್ ಬೆರಳುಗಳಲ್ಲಿ, ಥಮ್ಸ್‌ಪ್‌ಗೇ ನೀಡಿ, ತಾನು ಸೋತಿತು!!! ಸೋತು ಶರಣಾಯ್ತು!! ಪೆನ್ನು ಬಿಟ್ಟು, ತಂತ್ರಾಂಶದ ಜೊತೆಗೂಡಿದ ಥಮ್ಸಪ್ ಗೆದ್ದ ಬಿಗುಮಾನಕ್ಕೆ ಹೋಗಿದೆ!!
ಅಕ್ಷರಶಃ ಈಗ ಪೆನ್ನು 'ಕಾಲ' ಕಸವಾಗಿದೆ!!!?
"ನನಗೆ ಇನ್ನು 'ಬರೆಯುವುವುದಕ್ಕೆ ಆಗುವುದಿಲ್ಲ" ಅಂತ ಗೋಗೆರೆದ ಪೆನ್‌ನ್ನು ಹಿಡಿದು, ಕುತ್ತಿಗೆಗೆ ನೇಣು ಹಾಕಿ ಅಲ್ಲಿ-ಇಲ್ಲಿ "ಇಲ್ಲಿ ಚಲನ್ ಬರ್ಕೊಂಡಿರು" ಅಂತ 'ನೇತು' ಹಾಕಿದ್ರು!!. ಅಲ್ಲಲ್ಲಿ ಅದೀಗ ಪಾರ್ಥಿವ ಶರೀರ ರೂಪದಲ್ಲಿದೆ.
ಕೆಲವು ಸೋತ 'ನೀಲಿ' ಬಣ್ಣ ಸಾಧಾರಣ ಮೈಕಟ್ಟಿನ ಪೆನ್ನು, ಅಲ್ಲೆಲ್ಲೋ ಯಾರದ್ದೋ ಉಪಯೋಗಿಸದ ಬ್ಯಾಗಲ್ಲಿ, ಇನ್ಯಾರದ್ದೋ ಜಾಮಿಟ್ರಿ ಬಾಕ್ಸಲ್ಲಿ, ಮನೆಯ (ICU !!?) ಟೇಬಲ್‌ನಲ್ಲಿ!!!
ಅಸ್ಥಿ 'ಪಂಜರ'ದೊಂದಿಗೆ, 'ಪೂರ್ಣ ವಿರಾಮ'ದ ಹೆಜ್ಜೆ ಇಡಲೂ ಆಗದೆ 'ಕೋಮ'ದಲ್ಲಿವೆ!!
ಅದೀಗ ಕೆಲವೊಮ್ಮೆ ಹುಡುಕಿದರೂ ಸಿಗದ, ಸಿಕ್ಕರೂ 'ಹೆಜ್ಜೆ' ಇಟ್ಟು ನೆಡೆದು ಅಕ್ಷರ ರಚಿಸದ, ಒಣಗಿ ಬಾಯಾರಿದ!!, ಕೊನೆಯ ದಿನಗಳನ್ನು ಎಣಿಸುತ್ತಿರುವ ಒಂದು ಆ್ಯಂಟಿಕ್ ವಸ್ತು!!. ಸಿಮೇಸುಣ್ಣ, ಬಳಪಗಳು ಹೋದ ದಾರಿಯನ್ನು ನೋಡುತ್ತ, ಅಂತಿಮ ಯಾತ್ರೆಗೆ ಸಿದ್ದವಾಗಿ ಮಲಗಿದೆ!! ಒಳಗಿರುವ ಬಣ್ಣದ ದ್ರವ ಹೆಪ್ಪುಗಟ್ಟಿದೆ.
ಇತಿಹಾಸದಲ್ಲಿ ಕತ್ತಿಯ ಅಲುಗಿನಂತೆ 'ಶಾರ್ಪ್' ಆಗಿದ್ದ, 'ಸ್ಮಾರ್ಟ್' ಆಗಿದ್ದ ಪೆನ್ನು ಶಾರದೆಯ ಅನುಗ್ರಹ ಪಡೆದಿತ್ತು, ಬ್ರಹ್ಮನಿಗೂ ಕೆಲಸ ಕೊಟ್ಟಿತ್ತು, ಚಿತ್ರಗುಪ್ತನಿಗೆ 'ಪಿಎ' ಆಗಿತ್ತು, ಎಷ್ಟು ಜನರಿಗೆ ಜ್ಞಾನಪೀಠ ತಂದುಕೊಟ್ಟಿತ್ತು!!!
"ಇದೊಂದು ಪಂಚಮವೇದ ಬರ್ಕೊಡಬೇಕಲ್ಲ!!"? ಅಂತ ವ್ಯಾಸರು ಗಣಪತಿಗೆ ಹೇಳಿದಾಗ, "ನಾನು ಬರ್ತೀನಿ, ಒಟ್ಟಿಗೆ ಬರೆಯೋಣ" ಅಂತ ಗಣಪತಿಯ ಬಲಗೈ ಅಲಂಕರಿಸಿದ ಪೆನ್ನು ಮೊನ್ನೆ ಮೊನ್ನೆಯವರೆಗೂ ಯಾರೆಲ್ಲರ ಕೈಯಲ್ಲಿ ಬರೆಸಿದ್ದೆಷ್ಟು!! ಅದೆಷ್ಟು 'ಕೋಟಿ ಟಿಬಿ'ಗಳು!!!?
ಪೆನ್ನಿನ ಪುರಾಣ, ಇತಿಹಾಸ, ವರ್ತಮಾನ ಮತ್ತದರ ಕರಾಳ ಭವಿಷ್ಯ ಬರೆಯಲು ಹೊರಟರೆ.... ಅದು ಆರನೆ ವೇದ ಆದೀತು!!? ಆದರೆ ಬರೆಯುವುದಕ್ಕೆ ಪೆನ್ ಇಲ್ಲ!!. ಇದ್ದರೂ ಒಟ್ಟಾಗಿ ಬರೆಯುವುದಕ್ಕೆ ಮೂರು ಬೆರಳುಗಳಲ್ಲಿ ಸಹ ಮತ ಇಲ್ಲ!!
ಪೆನ್ನಿನ ಹಣೆ 'ಬರಹ' ಕಂಡು ಡಿಜಿಟಲ್ ಅಕ್ಷರಗಳು ಡಿಸ್ಕೋ ಮಾಡುತ್ತಿವೆ!!!!
ಕೇಳದೆ ನಿಮಗೀಗ......
-ಅರವಿಂದ ಸಿಗದಾಳ್, ಮೇಲುಕೊಪ್ಪ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ