ವಿದ್ಯಾರ್ಥಿಗಳ ಪ್ರಗತಿಯಲ್ಲಿ ಪೋಷಕರ ಸ್ಪಂದನೆ ಅತೀ ಅಗತ್ಯ : ಸುಬ್ರಮಣ್ಯ ನಟ್ಟೋಜ
ಪುತ್ತೂರು : ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಬೇಕಾದರೆ ಪೋಷಕರು ಹಾಗೂ ಉಪನ್ಯಾಸಕರ ನಡುವೆ ಉತ್ತಮ ಬಾಂಧವ್ಯವಿರಬೇಕು. ಮಕ್ಕಳ ಚಲನವಲನಗಳ ಬಗ್ಗೆ ಸದಾ ಎಚ್ಚರ ವಹಿಸಿ ತಮ್ಮ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಮೊಬೈಲ್, ಸ್ಮಾರ್ಟ್ ವಾಚ್‌ಗಳ ಬಳಕೆ ಕಡಿಮೆ ಮಾಡಿದರೆ ಕಲಿಕೆಯ ಕಡೆಗೆ ಗಮನ ಕೊಡಲು ಅನುಕೂಲವಾಗುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನೆಲ್ಲಿಕಟ್ಟೆ ಪದವಿ ಪೂರ್ವ ವಿದ್ಯಾಲಯದಲ್ಲಿ ಶನಿವಾರ ನಡೆದ ವಿದ್ಯಾಲಯದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಹೆತ್ತವರಿಂದ ಆಗಬೇಕು. ತಮ್ಮ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಅವಶ್ಯಕತೆ ಇದೆ. ಮಕ್ಕಳ ಸುರಕ್ಷತೆಯ ಬಗ್ಗೆ ಮತ್ತು ಯಾವುದೇ ದುಶ್ಚಟಗಳಿಗೆ ಬಲಿಯಾಗದಂತೆ ಪ್ರತಿಯೊಬ್ಬ ಪೋಷಕರು ಎಚ್ಚೆತ್ತುಕೊಳ್ಳಬೇಕು. ಇದಕ್ಕಾಗಿ ಪೋಷಕರ ಸ್ಪಂದನೆ ಅತೀ ಅಗತ್ಯ. ಪೋಷಕರು ಹಾಗೂ ಉಪನ್ಯಾಸಕರ ಕೊಂಡಿ ಗಟ್ಟಿಯಾಗಿದ್ದರೆ ಮಕ್ಕಳ ಯಶಸ್ಸು ಸಾಧ್ಯ ಎಂದು ಹೇಳಿದರು.
ನಮ್ಮ ದೇಶ ಈ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ದೇಶಕ್ಕಾಗಿ ಪ್ರಾಣವನ್ನು ತೆತ್ತ ಹುತಾತ್ಮರನ್ನು ಸ್ಮರಿಸಬೇಕಾಗಿದೆ. ದೇಶದ ಪ್ರಜೆಗಳಾದ ನಮ್ಮ ಪಾತ್ರವೇನು? ಈ ದೇಶದಲ್ಲಿ ಹುಟ್ಟಿ, ಸಮಾಜದಲ್ಲಿ ಬೆಳೆದು, ಸಮಾಜಕ್ಕಾಗಿ, ದೇಶಕ್ಕಾಗಿ ಏನನ್ನಾದರೂ ಸಲ್ಲಿಸುವುದು ಬೇಡವೇ? ದೇಶ ನಮಗೆಲ್ಲ ಏನನ್ನು ಕೊಟ್ಟಿದೆ ಅನ್ನುವುದಕ್ಕಿಂತ ದೇಶಕ್ಕೆ ನಾವೇನು ಕೊಡುತ್ತಿದ್ದೇವೆ ಅನ್ನುವುದು ಮುಖ್ಯವಾಗುತ್ತದೆ ಹಾಗಾಗಿ ಇಂತಹ ಸಂಭ್ರಮ ದಿನದಂದು ನಾವೆಲ್ಲರೂ ಒಟ್ಟು ಸೇರಿ ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಯಾವಾಗಲೂ ಕಾಳಜಿ ವಹಿಸಬೇಕು. ಕಲಿಕೆಗೆ ಅನುಕೂಲವಾದ ವಾತಾವರಣ ಕಲ್ಪಿಸಿಕೊಡಬೇಕು. ವಿದ್ಯಾಲಯದಲ್ಲಿ ಶಾಲಾ ಪಠ್ಯದ ಜೊತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಹೆಚ್ಚುವರಿ ತರಗತಿ ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ. ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ನುಡಿದರು.
ಸಮಾರಂಭದಲ್ಲಿ ಪೋಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವೇದಿಕೆಯಲ್ಲಿ ವಿದ್ಯಾಲಯದ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಸುಬ್ರಮಣ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.