ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ 'ನೆನಪಿನ ಮಳೆಹನಿ' ಕಿರುಚಿತ್ರದ ಪ್ರೀಮಿಯರ್ ಪ್ರದರ್ಶನ

Upayuktha
0

ಉಜಿರೆ: ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸ್ನಾತಕೋತ್ತರ ಸಮೂಹ ಸಂವಹನ ವಿಭಾಗದ ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೊ - ಫಿಲಮ್ಸ್ ಬ್ಯಾನರ್‌ನಡಿಯಲ್ಲಿ ಮೂಡಿ ಬಂದಿರುವ ‘ನೆನಪಿನ ಮಳೆಹನಿ’ ಎಂಬ ಮ್ಯೂಸಿಕಲ್ ಕಿರುಚಿತ್ರದ ಪ್ರೀಮಿಯರ್ ಪ್ರದರ್ಶನವು ಕಾಲೇಜಿನ ಸಮ್ಯಕ್ ದರ್ಶನ ಹಾಲ್‌ನಲ್ಲಿ ಆಗಸ್ಟ್ 30 ರಂದು ನಡೆಯಿತು.


ಈ ಸಂದರ್ಭದಲ್ಲಿ ಕಿರುಚಿತ್ರದ ಪೋಸ್ಟರ್‌ನ್ನು ಕಾಲೇಜಿನ ಅಧೀಕ್ಷಕ ಯುವರಾಜ ಪೂವಣಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, "ಚಲನಚಿತ್ರಗಳಲ್ಲಿ ಹಾಡುಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಹಿಂದಿನ ಕಾಲದ ಚಲನಚಿತ್ರದ ಹಾಡುಗಳು ಜನರನ್ನು ರಂಜಿಸುತ್ತಿತ್ತಲ್ಲದೆ ಮನಸೂರೆಗೊಳ್ಳುವಂತೆ ಮಾಡಿ, ಸುಮಾರು ಕಾಲದವರೆಗೂ ಆ ಚಿತ್ರವನ್ನೇ ಪ್ರಚಲಿತದಲ್ಲಿರುವಂತೆ ಮಾಡುತ್ತಿತ್ತು" ಎಂದು ಹೇಳಿದರು.


"ಯುವ ತಂತ್ರಜ್ಞರ ಪ್ರಯತ್ನದಲ್ಲಿ ಈ ಮ್ಯೂಸಿಕಲ್ ಕಿರುಚಿತ್ರವು ಉತ್ತಮವಾಗಿ ಮೂಡಿ ಬಂದಿದೆ. ಹಾಡಿನ ಪ್ರತಿಯೊಂದು ಸಾಲುಗಳು ಮನಮುಟ್ಟುವಂತಿದೆ. ಭವಿಷ್ಯದಲ್ಲಿ ವಿಭಾಗದ ವತಿಯಿಂದ ಇನ್ನಷ್ಟು ಉತ್ತಮ ಕಿರುಚಿತ್ರಗಳು ಮೂಡಿ ಬರಲಿ ಎಂದು ಶುಭಹಾರೈಸಿದರು.


ಈ ಸಂದರ್ಭದಲ್ಲಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಮತ್ತು ಖ್ಯಾತ ವ್ಯಂಗ್ಯಚಿತ್ರಕಾರರಾದ ಶೈಲೇಶ್ ಕುಮಾರ್ ಮಾತನಾಡಿ, "ಈ ರೀತಿಯ ಕಿರುಚಿತ್ರಗಳು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಕ್ರಿಯಾತ್ಮಕ ಅಭಿವ್ಯಕ್ತಿಗೆ ಸಾಕ್ಷಿ" ಎಂದರು.


ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಂತನು ಪದ್ಮುಂಜ ಕಾರ್ಯಕ್ರಮ ನಿರ್ವಹಿಸಿದರು.


'ನೆನಪಿನ ಮಳೆಹನಿ'- ತೆರೆಯ ಹಿಂದೆ:

ಒಬ್ಬ ಹುಡುಗ ಮತ್ತು ಹುಡುಗಿಯ ನಡುವಿನ ಸ್ನೇಹ, ಸಂಬಂಧದ ಕುರಿತು ಮೂಡಿ ಬಂದಿರುವ ಈ ಮ್ಯೂಸಿಕಲ್ ಕಿರುಚಿತ್ರಕ್ಕೆ ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿ ರಾಮ ಮೋಹನ್ ಭಟ್ ಹೆಚ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನವಿದೆ. ಸ್ನಾತಕೊತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎನ್. ಕೆ. ಪದ್ಮನಾಭ ಅವರ ಸಾಹಿತ್ಯ ಮತ್ತು ಸಂಗೀತವಿದ್ದು, ಎಸ್.ಡಿ.ಎಂ ಕಾಲೇಜಿನ ಬಿವೋಕ್ ವಿದ್ಯಾರ್ಥಿ ಆ್ಯಂಟನಿ ಅವರ ಅದ್ಭುತ ಹಿನ್ನೆಲೆ ಸಂಗೀತ, ನಿರ್ವಹಣೆ ಇದೆ. ಸಾಯಿರೂಪ ದಾಲಿಂಬ ಅವರ ಮಧುರವಾದ ಹಿನ್ನೆಲೆ ಗಾಯನವಿದೆ. ದೀಕ್ಷಿತ್ ಧರ್ಮಸ್ಥಳ ಅವರ ಛಾಯಾಗ್ರಹಣದಲ್ಲಿ ಮೂಡಿಬಂದಿರುವ ಈ ಕಿರುಚಿತ್ರಕ್ಕೆ ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೊದ ಸಂಕಲನ ನಿರ್ದೇಶಕರಾಗಿರುವ ಎ. ಆರ್. ರಕ್ಷಿತ್ ರೈ ಅವರ ಸುಂದರ ಸಂಕಲನವಿದ್ದು, ನಿಖಿಲ್ ಕಾರ್ಯಪ್ಪ ಅವರು ಕಲರಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದಾರೆ.


ಇನ್ನು ಈ ಕಿರುಚಿತ್ರದಲ್ಲಿ ನಾಯಕ ನಟನಾಗಿ ಹರಿನಾಥ್ ಅಭಿನಯಿಸಿದ್ದು, ನಾಯಕ ನಟಿಯಾಗಿ ದೀಪ್ತಿ ಆನಂದ್ ಅವರು ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಆಗಿ ಹರ್ಷಿತಾ ಹೆಬ್ಬಾರ್, ಸಹ ನಿರ್ದೇಶನ ತಂಡದಲ್ಲಿ ಸುತನ್ ಕೇವಳ ಮತ್ತು ಅರ್ಪಿತ್, ಕ್ರಿಯೇಟಿವ್ ತಂಡದಲ್ಲಿ ರಾಮ್ ಕಿಶನ್ ಮತ್ತು ಸಂಪತ್ ಕುಮಾರ್ ರೈ ಸಹಕರಿಸಿದ್ದಾರೆ. ಈ ಕಿರುಚಿತ್ರವು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಸಹಕಾರದೊಂದಿಗೆ ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣವಾಗಿದೆ ಎನ್ನುವುದು ವಿಶೇಷ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top